Tuesday 7 June 2011

`ಗೂಗಲ್' ಎಂದರೆ ಏನು?

ಇಂಟರ್ನೆಟ್ ಬಳಸುವವರಿಗೆಲ್ಲ ತುಂಬ ಪರಿಚಿತವಾದ ಹೆಸರು 'ಗೂಗಲ್''.

ಈ ಹೆಸರಿನ ಸರ್ಚ್ ಎಂಜಿನ್ ವಿಶ್ವದಲ್ಲೇ ಅಗ್ರಸ್ಥಾನ ಪಡೆದಿದೆ. ಸರ್ಚ್ ಎಂಜಿನ್ ಮೂಲಕ ನೀವು ಇಂಟರ್ನೆಟ್ ಎಂಬ ಅಪಾರವಾದ ಮಾಹಿತಿ ರಾಶಿಯಲ್ಲಿರುವ ಸೇರಿರುವ ವೆಬ್ ಸೈಟ್ ಗಳನ್ನು ಹುಡುಕಿ ನೋಡಬಹುದು. ಒಟ್ಟಿನಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಇಂಟರ್ನೆಟ್ ನಲ್ಲಿ ಹುಡುಕಿಕೊಡುವ ವ್ಯವಸ್ಥೆ ಇದು.

ಆದರೆ `ಗೂಗಲ್' ಎಂದರೇನು?

ಇದೊಂದು ವಿಚಿತ್ರ ಪ್ರಾಣಿಯ ಹೆಸರಿನಂತೆ, ಯಾವುದೋ ಲೋಕದವರ ಹೆಸರಿನಂತೆ ತೋರುತ್ತದೆ. ಆದರೆ ಇದೊಂದು ಸಂಖ್ಯೆಯ ಹೆಸರು. `1' ರ ನಂತರ`0' ಬರೆದರೆ ಯಾವ ಸಂಖ್ಯೆಯಾಗುತ್ತದೆ? `10', ಹತ್ತು ಅಥವಾ ಟೆನ್ ಎನ್ನುತ್ತೀರಿ. `1' ರ ನಂತರ `00' ಬರೆದರೆ ನೂರು. `000' ಬರೆದರೆ ಸಾವಿರ. `0000000' ಬರೆದರೆ ಒಂದು ಕೋಟಿ.

ಸರಿ, `1' ರ ನಂತರ `100 ಸೊನ್ನೆ' ಹಾಕಿದರೆ ಯಾವ ಸಂಖ್ಯೆ ಸಿಗುತ್ತದೆ? ಇಷ್ಟು ದೊಡ್ಡ ಸಂಖ್ಯೆಗೆ ಹೆಸರಿದೆಯೆ ಎನ್ನುತ್ತೀರಾ? ಇದೆ. ಅದೇ `ಗೂಗಲ್'!

'ಬಹಳ ಬಹಳ ಬಹಳ ಸಂಖ್ಯೆಯಷ್ಟು ವೆಬ್ಸೈಟುಗಳನ್ನು ನಮ್ಮ ಸರ್ಚ್ ಎಂಜಿನ್ ಹುಡುಕಿ ದಾಖಲಿಸಿ ಇಟ್ಟುಕೊಂಡಿದೆ' ಎಂದು ಹೇಳಿಕೊಳ್ಳುವ ಸಲುವಾಗಿ ಗೂಗಲ್ ಸಂಸ್ಥೆ `ಗೂಗಲ್' ಎಂಬ ದೊಡ್ಡ ಸಂಖ್ಯೆಯ ಹೆಸರನ್ನು ತನಗೆ ಇಟ್ಟುಕೊಂಡಿದೆ.

ಬಹುಶಃ ಇನ್ನುಮುಂದೆ ನೀವು `ಕೋಟ್ಯಂತರ' ಎನ್ನುವ ಪದಕ್ಕೆ ಬದಲಾಗಿ `ಗೂಗಲಾಂತರ' ಎಂಬ ಪದವನ್ನು ಬಳಸಬಹುದೇನೋ!

ಕನ್ನಡದ `ಕೋಟಿ' ಹಿಂದಿಯ `ಕರೋಡ್' ಎಂಬುದು ಭಾರತೀಯರು ಕಲ್ಪಿಸಿಕೊಂಡ ದೊಡ್ಡ ಸಂಖ್ಯೆಯಲ್ಲ. 1 ರ ನಂತರ 7 ಸೊನ್ನೆ ಹಾಕಿದರೆ ಒಂದು ಕೋಟಿಯಾಗುತ್ತದೆ (1,00,00,000). ಆದರೆ ಪ್ರಾಚೀನ ಭಾರತೀಯ ಗಣಿತಜ್ಞರು ಇನ್ನೂ ದೊಡ್ಡ ಸಂಖ್ಯೆಗಳಿಗೂ ಹೆಸರು ಕೊಟ್ಟಿದ್ದಾರೆ.

ನಿಮಗೆ ಗೊತ್ತಿರಲಿ. ಜಗತ್ತಿಗೆ ಈ ಸಂಖ್ಯೆಗಳನ್ನು ಪರಿಚಯಿಸಿದವರೇ ಭಾರತೀಯ ಗಣಿತಜ್ಞರು. ಈಗ ನಾವು ಬಳಸುವ ಸಂಖ್ಯಾ ಪದ್ಧತಿ ಯಾವುದು? `ದಶಮಾನ' ಅಥವಾ `ಡೆಸಿಮಲ್' ಪದ್ಧತಿ. ದಶ ಎಂದರೆ ಹತ್ತು. ದಶಮಾನ ಎಂದರೆ ಹತ್ತುಗಳ ಲೆಕ್ಕದಲ್ಲಿ ಮಾಡುವ ಎಣಿಕೆ. ಅಂದರೆ ನಾವು ಸಂಖ್ಯೆಗಳನ್ನು 10ರ ಲೆಕ್ಕದಲ್ಲಿ ಬಳಸುತ್ತೇವೆ. ಅಂದರೆ 0,1,2,3,4,5,6,7,8,9 ಎಂದು 9ರ ತನಕ ಎಣಿಸಿದ ನಂತರ 10 ಬರುತ್ತದೆ. ಅಲ್ಲಿಗೆ ನಮ್ಮ ಎಣಿಕೆ ಮುಗಿಯಿತು. ಎಲ್ಲಿ ಮುಗಿಯಿತು? ದೊಡ್ಡ ದೊಡ್ಡ ಸಂಖ್ಯೆಗಳಿಲ್ಲವೆ? ಇವೆ. ಆದರೆ ಅವೆಲ್ಲ ಹತ್ತರ ವ್ಯವಸ್ಥೆಯ ಅಡಿಗೇ ಬರುವ ಸಂಖ್ಯೆಗಳು. ಅಂದರೆ `ಹತ್ತು' ಆದ ನಂತರ ಬರುವ `ಹನ್ನೊಂದು' ಸ್ವತಂತ್ರ ಸಂಖ್ಯೆ ಅಲ್ಲ. ಹತ್ತಕ್ಕೆ ಒಂದನ್ನು ಸೇರಿಸಿದರೆ ಬರುವ ಸಂಖ್ಯೆ ಅದು. `ನೂರು' ಎಂಬುದು ಹತ್ತನ್ನು ಹತ್ತು ಬಾರಿ ಹಾಕಿದರೆ ಬರುವ ಸಂಖ್ಯೆ. ಅಂದರೆ 0, 1-9 - ಇಷ್ಟನ್ನು ಆಧರಿಸಿ ನಮ್ಮ ಸಂಖ್ಯಾ ಮೌಲ್ಯಗಳು ಏರುತ್ತವೆ ಅಥವಾ ಇಳಿಯುತ್ತವೆ.

ಹೀಗೆ ಹತ್ತನ್ನು ಅಧರಿಸಿರುವ ಈ ಪದ್ಧತಿಗೆ ದಶಮಾನ' ಪದ್ಧತಿ ಎಂದು ಹೆಸರು. ಇದನ್ನೇ ಇಡೀ ಜಗತ್ತಿನ ಸಮಸ್ತ ವ್ಯವಹಾರದಲ್ಲಿ ಬಳಸುವುದು. ಈ ಸಂಖ್ಯೆಯೇ ಇತಿಹಾಸದ ಎಲ್ಲ ಗಣಿತ ಕ್ರಮಗಳಿಗೆ, ಸಾಧನೆಗಳಿಗೆ ಮೂಲ ಆಧಾರ. ಈ ಪದ್ಧತಿಯನ್ನು ರೂಪಿಸಿ ಜಗತ್ತಿಗೆ ನೀಡಿದವರು ಪ್ರಾಚೀನ ಭಾರತೀಯರು. ಅಷ್ಟು ಮಾತ್ರವಲ್ಲ. ಗಣಿತದಲ್ಲಿ ಸೊನ್ನೆ (`0') ಮಹತ್ವದ ಸ್ಥಾನ, ಮೌಲ್ಯ, ಪಾತ್ರಗಳನ್ನು ಹೊಂದಿದೆ. ಸೊನ್ನೆಯನ್ನು ಕೈಬಿಟ್ಟರೆ ಗಣಿತವೇ ಇಲ್ಲ! ಈ ಸೊನ್ನೆಯ (ಶೂನ್ಯ) ಪರಿಕಲ್ಪನೆಯನ್ನು ಸೃಷ್ಟಿಸಿದವರೂ ಭಾರತೀಯರೇ. ಒಟ್ಟಿನಲ್ಲಿ ಭಾರತೀಯರು ಗಣಿತದ ಜನಕರು ಎಂದು ಹೇಳಬಹುದು.

ಇನ್ನೂ ಕೆಲವು ಸಂಖ್ಯಾಪದ್ಧತಿಗಳನ್ನು 20ನೇ ಶತಮಾನದಲ್ಲಿ ಸೃಷ್ಟಿಸಲಾಗಿದೆ. ಆದರೆ ಅವು ಮಾನವರ ದೈನಂದಿನ ಬಳಕೆಯ ಪದ್ಧತಿಗಳಲ್ಲ. ಕಂಪ್ಯೂಟರುಗಳಲ್ಲಿ `ಬೈನರಿ' (ದ್ವಿಮಾನ -2ನ್ನು ಆಧರಿಸಿದ) ) ಮತ್ತು `ಹೆಕ್ಸಾಡೆಸಿಮಲ್' (16ರ ಆಧಾರ ಇರುವ) ಸಂಖ್ಯಾಪದ್ಧತಿಗಳು ಬಳಸಲ್ಪಡುತ್ತವೆ. ಬೈನರಿಯಲ್ಲಿ ಎರಡೇ ಅಂಕಿಗಳು. `0' ಮತ್ತು `1'ನಿವು ಕಂಪ್ಯೂಟರ್ ಸಂಕೇತ ಭಾಷೆಗೆ ಇದು ಸರಿಯಾಗುತ್ತವೆ. ಆದರೆ ಬೈನರಿಯನ್ನು ನಾವು ಅರ್ಥಮಾಡಿಕೊಳ್ಳಲು ದಶಮಾನಕ್ಕೆ ಪರಿವತರ್ಿಸಿಕೊಳ್ಳುವುದು ಅನಿವಾರ್ಯ. ಹೆಕ್ಸಾದೆಸಿಮಲ್ನಲ್ಲಿ 1-9, 10 ಆದನಂತರ ಎ,ಬಿ,ಸಿ,ಡಿ,ಇ,ಎಫ್, ಅಕ್ಷರಗಳನ್ನು ಸಂಖ್ಯೆಗಳಾಗಿ ಬಳಸುತ್ತಾರೆ.

ಇಷ್ಟೆಲ್ಲ ಪೀಠಿಕೆಯ ನಂತರ ಈಗ ಹಿಂದಿನ ಕಾಲದ ಭಾರತೀಯರು ರೂಢಿಗೆ ತಂದಿದ್ದ ಕೆಲವು ದೊಡ್ಡ ಸಂಖ್ಯೆಗಳತ್ತ ನೋಡೋಣ.

1 -ಏಕ
10 -ದಶ
100 -ಶತ
1,000 -ಸಹಸ್ರ
1,00,000 -ಲಕ್ಷ
1,00,00,000 -ಕೋಟಿ
1,00,00,00,00,00,000 -ನೀಲ
1,00,00,00,00,00,00,000 -ಪದ್ಮಾ
1,00,00,00,00,00,00,00,000 -ಶಂಖ
1,00,00,00,00,00,00,00,00,000 -ಮಹಾಶಂಖ

ಎಷ್ಟು ದೊಡ್ಡ ಸಂಖ್ಯೆಗೂ ಹೆಸರಿಡಬಹುದು. ಆದರೆ ಭಾರಿ ದೊಡ್ಡ ಸಂಖ್ಯೆಗಳು ದೈನಂದಿನ ಲೆಕ್ಕಾಚಾರದಲ್ಲಿ  ಬರುವುದಿಲ್ಲ.ಸುಮ್ಮನೆ ಹೆಸರಿಟ್ಟುಕೊಂಡು ಏನು ಮಾಡುತ್ತೀರಿ?

ಈಗ `ಗೂಗಲ್' ಎಂಬುದು ಕೇವಲ ಒಂದು ಹೆಸರಾಗಿ ಉಳಿದಿದೆಯೆ ಹೊರತು ಅದನ್ನು ಒಂದು ಸಂಖ್ಯಾಗಿ ಯಾರು ಬಳಸುತ್ತಾರೆ? `ನನ್ನ ಬಿ ಒಂದು ಕೋಟಿ ರೂಪಾಯಿ ಇದೆ' ಎನ್ನಬಹುದು. ಆದರೆ `ನನ್ನ ಬಳಿ ಒಂದು ಗೂಗಲ್ ರೂಪಾಯಿ ಇದೆ' ಎನ್ನಲಾದೀತೆ? ನಮಗೆ ತಿಳಿದಿರುವಷ್ಟು ವ್ಯಾಪ್ತಿಯ ಬ್ರಹ್ಮಾಂಡದಲ್ಲಿನ ಎಲ್ಲ ಪರಮಾಣುಗಳ ಒಟ್ಟು ಮೊತ್ತಕ್ಕಿಂತಲೂ ಈ ಸಂಖ್ಯೆಯೇ ದೊಡ್ಡದು! ಹೀಗಿರುವಾಗ ಇದನ್ನು ಎಲ್ಲಿ ಬಳಸಲು ಸಾಧ್ಯ?

ಅಷ್ಟು ದೊಡ್ಡ ಸಂಖ್ಯೆಯಲ್ಲಿ ನಮ್ಮ ಜಗತ್ತಿನ ವ್ಯವಹಾರಗಳು ನಡೆಯುವುದಿಲ್ಲ. ಹೆಚ್ಚೆಂದರೆ `ಟ್ರಿಲಿಯನ್'ಗಳಲ್ಲಿ (ಲಕ್ಷ ಕೋಟಿ - ಅಂದರೆ ಒಂದು ಕೋಟಿಯನ್ನು ಒಂದು ಲಕ್ಷ ಸಾರಿ ಹಾಕಿದರೆ ಬರುವ ಮೊತ್ತ) ನಮ್ಮ ವ್ಯವಹಾರವೆಲ್ಲ ನಡೆದುಹೋಗುತ್ತದೆ. 10 ಟ್ರಿಲಿಯನ್ ನಮ್ಮ ಪ್ರಾಚೀನರ `ಒಂದು ನೀಲ'ಕ್ಕೆ ಸಮ. ಅಂದರೆ 1 + 13 ಸೊನ್ನೆಗಳು.

ಆಧುನಿಕ ಪಶ್ಚಿಮ ಹಾಗೂ ಅಮೆರಿಕನ್ ಕ್ರಮದಲ್ಲಿ 10 ಲಕ್ಷಕ್ಕೆ ಒಂದು ಮಿಲಿಯನ್. ನೂರು ಕೋಟಿಗೆ ಒಂದು ಬಿಲಿಯನ್. ಲಕ್ಷಕೋಟಿಗೆ ಒಂದು ಟ್ರಿಲಿಯನ್. 1000 ಟ್ರಿಲಿಯನ್ಗಳಿಗೆ ಒಂದು ಕ್ವಾಡ್ರಿಲಿಯನ್ (1+18 ಸೊನ್ನೆಗಳು). ಸಾವಿರ ಕ್ವಾಡ್ರಿಲಿಯನ್ನಿಗೆ ಕ್ವಿಂಟಿಲಿಯನ್ ಎನ್ನುತ್ತಾರೆ. 10 ಕ್ವಿಂಟಿಲಿಯನ್ನುಗಳಿಗೆ ಭಾರತೀಯರ `ಒಂದು ಮಹಾಶಂಖ' ಸಮವಾಗುತ್ತದೆ (1+19 ಸೊನ್ನೆಗಳು).

ಇನ್ನೂ ದೊಡ್ಡ ಸಂಖ್ಯೆಗಳಿಗೆ ಹೆಸರಿಡಲಾಗಿದೆ. 1000 ಕ್ವಿಟಿಲಿಯನ್ನಿಗೆ ಒಂದು ಸೆಕ್ಸ್ಟಿಲಿಯನ್. ಸಾವಿರ ಸೆಕ್ಸ್ಟಿಲಿಯನ್ನಿಗೆ ಒಂದು ಸೆಪ್ಟಿಲಿಯನ್. ಸಾವಿರ ಸೆಪ್ಟಿಲಿಯನ್ನಿಗೆ ಒಂದು ಅಕ್ಟಿಲಿಯನ್. ಸಾವಿರ ಆಕ್ಟಿಲಿಯನ್ನಿಗೆ ಒಂದು ನಾನಿಲಿಯನ್ - ಹೀಗೆ. ಒಂದು ನಾನಿಲಿಯನ್ ಎಂದರೆ 1 ರ ನಂತರ 30 ಸೊನ್ನೆಗಳು (1,000,000,000,000,000,000,000,000,000,000)!!
ಒಂದು ಗೂಗಲ್ ಎಂದರೆ ಮೊದಲೇ ಹೇಳಿದಂತೆ 1+100 ಸೊನ್ನೆಗಳು!

ಈ ಹೆಸರು ಬಂದ ಪ್ರಸಂಗ ಕುತೂಹಲಕಾರಿ. 1920ರಲ್ಲಿ ಈ ಸಂಖ್ಯೆಯ ಬಗ್ಗೆ ಯೋಚಿಸುತ್ತಿದ್ದ ಅಮೆರಿಕದ ಗಣಿತಜ್ಞ ಎಡ್ವರ್ಡ್ ಕಸ್ನರ್ (1878-1955) ಇದಕ್ಕೆ ಏನು ಹೆಸರಿಟ್ಟರೆ ಚೆಂದ ಎಂದು ತನ್ನ 9 ವರ್ಷದ ಸೋದರ ಸಂಬಂಧಿಯನ್ನು (ಅಣ್ಣನ ಅಥವಾ ಅಕ್ಕನ ಮಗ) ಕೇಳಿದನಂತೆ. ಮಿಲ್ಟನ್ ಸಿರೋಟಾ (1911-1981) ಎಂಬ ಈ ಬಾಲಕ ಅಂದು ಚೇಷ್ಟೆ ಮಾಡುತ್ತ ತನ್ನ ಬಾಯಿಗೆ ತೋಚಿದ ಹೆಸರು `ಗೂಗಲ್' (googol) ಎಂದ. ಸರಿ ಅದನ್ನೇ ಈ ತಜ್ಞ ದೊಡ್ಡ ಸಂಖ್ಯೆಗೆ ಹೆಸರಾಗಿ ಇಟ್ಟ! ತಾನು ಬರೆದ ಪುಸ್ತಕ ಮ್ಯಾಥಮ್ಯಾಟಿಕ್ಸ್ ಅಂಡ್ ದಿ ಇಮ್ಯಾಜಿನೇಷನ್' (1940) ಮೂಲಕ ಈ ಹೆಸರಿಗೆ ಬಹಳ ಪ್ರಚಾರ ಕೊಟ್ಟ. ಮುಂದೆ ಗೂಗಲ್ ಸಂಸ್ಥೆ ಈ ಹೆಸರನ್ನು (ಸ್ವಲ್ಪ ಸ್ಪೆಲ್ಲಿಂಗ್ ಬದಲಿಸಿ - google) ತನಗೆ ಆಯ್ಕೆ ಮಾಡಿಕೊಂಡಿತು. ಈ ಸಂಸ್ಥೆಯ ಕೀರುತಿ ಬೆಳೆಯುತ್ತಿದ್ದ ಹಾಗೆಲ್ಲ `ಗೂಗಲ್' ಎಂಬ ಹೆಸರೂ ವಿಶ್ವದಲ್ಲಿ ಮನೆಮಾತಾಗಿ ಬಹಳ ಪ್ರಸಿದ್ಧಿ ಪಡೆಯಿತು. ಜಗತ್ತು 9 ವರ್ಷದ ಬಾಲಕನ ತೊದಲು ನುಡಿಯನ್ನು ಈಗ ಒಪ್ಪಿಕೊಂಡುಬಿಡ್ಡಿದೆ!

ಅದನ್ನು 1 ಗೊಗಲ್. ಎಂದು ಬರೆಯಬಹುದು. ಅಥವಾ 10ರ ಘಾತ 100 (10 100) ಎಂದು ಬರೆಯಬಹುದು. ಅಥವಾ ಅಂಕಿಗಳಲ್ಲಿ ಬರೆದರೆ ಗೂಗಲ್ ಹೀಗಿರುತ್ತದೆ:

10,000,000,000,000,000,000,000,000,000,000,000,000,000,000,000,000,000,000,000,000,000,000,000,000,000,000,000,000,000,000,000,000,000

ಈಗ ಇನ್ನೂ ದೊಡ್ಡ ಸಂಖ್ಯೆಗಳಿಗೆ ಹೆಸರಿಡಲಾಗಿದೆ. ಅವುಗಳ ಹೆಸರು `ಸೆಂಟಿಲಿಯನ್' ಹಾಗೂ `ಗೂಗಲ್ ಪ್ಲೆಕ್ಸ್'.

ಒಂದು ಸೆಂಟಿಲಿಯನ್ ಎಂದರೆ ಅಮೆರಿಕದಲ್ಲಿ 1+303 ಸೊನ್ನೆಗಳು. ಯೂರೋಫಿನಲ್ಲಿ ಅದೇ ಹೆಸರನ್ನು 1+600 ಸೊನ್ನೆಗಳ ಸಂಖ್ಯೆಗೆ ಇಡಲಾಗಿದೆ. ಒಂದು ಗೂಗಲ್ ಪ್ಲೆಕ್ಸ್ ಎಂದರೆ 1+10ರ ಘಾತ ಗೂಗಲ್. ಅಂದರೆ 1ರ ನಂತರ ಒಂದು ಗೂಗಲ್ನಷ್ಟು ಸೊನ್ನೆಗಳು! ಅದನ್ನು ಕಲ್ಪಿಸಿಕೊಳ್ಳುವುದೂ ಕಷ್ಟ!!

ಈ ಸಂಖ್ಯೆಯನ್ನು ಯಾವ ಸೂಪರ್ ಕಂಪ್ಯೂಟರ್ಗಳೂ ಸಂಗ್ರಹಿಸಲಾರವು. ಈ ಇಡೀ ಬ್ರಹ್ಮಾಂಡದಲ್ಲಿರುವ ಎಲ್ಲ ಪದಾರ್ಥಗಳನ್ನೂ ಕಾಗದವಾಗಿ ಪರಿವರ್ತಿಸಿ, ಎಂದಿಗೂ ಮುಗಿಯದೇ ಅಕ್ಷಯವಾಗುವಂತಹ ಇಂಕನ್ನು ನಿಮಗೆ ಕೊಟ್ಟು ನಿಮಗೆ ಅಪರಿಮಿತ ಶಕ್ತಿ, ಆಯುಷ್ಯಗಳ ವರವನ್ನು ಕೊಟ್ಟರೂ ಈ ಸಂಖ್ಯೆ ಬರೆದು ಮುಗಿಸಲು ನೂರು ಬ್ರಹ್ಮಾಂಡಗಳಾದರೂ ಬೇಕಾಗುತ್ತವೆ ಮತ್ತು ಅಷ್ಟು ಬರೆಯಲು ಬೇಕಾಗುವ ಕಾಲ ನಮ್ಮ ಬ್ರಹ್ಮಾಂಡ ಹುಟ್ಟಿ ಎಷ್ಟು ಕಾಲವಾಯಿತೋ ಅದರ ಒಂದು ಗೂಗಲ್ ಪಟ್ಟು ಹೆಚ್ಚು ಎಂಬುದು ವಿಜ್ಞಾನಿಗಳ ಅಂದಾಜು!

ಅಂದರೆ ಇಷ್ಟುಕಾಲದಲ್ಲಿ ಒಂದು ಗೂಗಲ್ ಬ್ರಹ್ಮಾಂಡಗಳು ಸೃಷ್ಟಿಯಾಗಿ ಅಳಿದಿರುತ್ತವೆ!!!!!!!!!!!!!!!!!!!!!!!


Wednesday 4 May 2011

ಭೂಗೋಳ ಶಿಕ್ಷಣಕ್ಕೆ ಬೇಕು, `ಗೂಗಲ್ ಅರ್ಥ್`

ದೊಡ್ಡವರು, ಮಕ್ಕಳು, ಎಲ್ಲರೂ `ಗೂಗಲ್ ಅರ್ಥ್' ಬಳಸುತ್ತಾರೆ. ಒಬ್ಬೊಬ್ಬರೂ ಬೇರೆಬೇರೆ ಉದ್ದೇಶಗಳಿಗಾಗಿ, ಅನುಕೂಲತೆಗಳಿಗಾಗಿ ಇದನ್ನು ಬಳಸುತ್ತಾರೆ. ಇದು ದೊಡ್ಡ ಶಿಕ್ಷಣ ಸಾಧನವಾಗುತ್ತದೆ. ಕಲಿಕಾ ವಿಧಾನಕ್ಕೆ ಮಜಾ ತರುತ್ತದೆ!

* ಗೋಡೆಗೆ ಭೂಪಟ (ಮ್ಯಾಪ್) ತಗುಲಿಹಾಕಿ, ಟೇಬಲ್ ಮೇಲೆ ಗುಂಡಗಿರುವ `ಗ್ಲೋಬ್' ಇಟ್ಟುಕೊಂಡು ದೇಶದೇಶಗಳನ್ನು ತೋರಿಸುತ್ತಾ ಪಾಠ ಮಾಡುವ ಕಾಲ ಹಳೆಯದಯಿತು. ಈಗ ಜಗತ್ತಿನಾದ್ಯಂತ ಶಾಲೆಗಳು `ಗೂಗಲ್ ಅರ್ಥ್' ಬಳಸುತ್ತಿವೆ!

* ಏನಿದು ಗೂಗಲ್ ಅರ್ಥ್? ಇಂಟರ್ನೆಟ್ ಬಳಸುವ ಎಲ್ಲರಿಗೂ `ಗೂಗಲ್' ಸಚರ್್ ಎಂಜಿನ್ ಗೊತ್ತು. ಅದೇ ಗೂಗಲ್ ಕಂಪೆನಿಯ ವಿಶಿಷ್ಟ ಸಾಫ್ಟ್ವೇರ್ `ಗೂಗಲ್ ಅರ್ಥ್'.

* ಇಂಟರ್ನೆಟ್ ಮೂಲಕ ಅದನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು (ಹಣ ಕೊಟ್ಟು ಕೊಳ್ಳುವ ಇತರ ಆವೃತ್ತಿಗಳೂ ಇವೆ. ಆದರೆ ಶಿಕ್ಷಣದ ಉದ್ದೇಶಕ್ಕೆ ಉಚಿತ ಆವೃತ್ತಿ ಸಾಕು). ಅದರ ಬಳಕೆ ಬಹು ಸುಲಭ. ಅದನ್ನು ಸರಿಯಾಗಿ ಬಳಸಲು ಇಂಟರ್ನೆಟ್ ಸಂಪರ್ಕ ಇರಬೇಕಾಗುತ್ತದೆ. ಅದರ ಮೂಲಕ ಗೂಗಲ್ ಸರ್ವರ್ಗಳಿಂದ ಇಡೀ ಭೂಗೋಳವೇ ನಿಮ್ಮ ಕಂಪ್ಯೂಟರ್ ಪರದೆ ಮೇಲೆ ಮೂಡಿಬರುತ್ತದೆ!

* ಈ ಭೂಗೋಳವನ್ನು ನೀವು ಬೇಕಾದ ದಿಕ್ಕಿಗೆ ತಿರುಗಿಸಬಹುದು! ಯಾವ ಖಂಡ, ದೇಶಗಳನ್ನು ಬೇಕಾದರೂ ನೋಡಬಹುದು. ಪರಿಚಯ ಮಾಡಿಕೊಳ್ಳಬಹುದು. ಒಮ್ಮೆ ತಿರುಗಿಸಿ ಬಿಟ್ಟುಬಿಟ್ಟರೆ ಭೂಗೋಳ ತಾನೇ ತಿರುಗಲು ಶುರುಮಾಡುತ್ತದೆ! ಅದನ್ನು ಚಕ್ಕೆಂದು ನಿಲ್ಲಿಸಲೂಬಹುದು!

* ನಿಮಗೆ ಬೇಕಾದ ದೇಶವನ್ನು `ಜೂಮ್' ಮಾಡಿ ಹತ್ತಿರಕ್ಕೆ ಹೋಗಿ ನೋಡಬಹುದು! ನೀವು ಆಕಾಶದಲ್ಲಿ ನಿಂತು ಭೂವೀಕ್ಷಣೆ ಮಾಡುತ್ತಿರುವ ವಿಶಿಷ್ಟ ಅನುಭವ ಇದು! ಎರಡು-ಮೂರು ವರ್ಷಗಳ ಹಿಂದೆ ಉಪಗ್ರಹ ಹಗೂ ವಿಮಾನಗಳಿಂದ ತೆಗೆದಿರುವ ಚಿತ್ರಗಳನ್ನು ಒಂದಕ್ಕೊಂದು ಜೋಡಿಸಿ ಈ ಸೌಲಭ್ಯವನ್ನು ಗೂಗಲ್ ಸಂಸ್ಥೆ ಒದಗಿಸಿದೆ (ಇನ್ನೂ ಅನೇಕ ಕಂಪೆನಿಗಳು ಇದೇ ರೀತಿಯ ಸೌಲಭ್ಯ ನೀಡುತ್ತಿವೆ. ಅದರೆ ಗೂಗಲ್ ಅರ್ಥ್ ಬಹು ಪ್ರಸಿದ್ದಿ ಪಡೆದಿದೆ).

* ನಿಮಗೆ ಬೇಕಾದ ದೇಶವನ್ನು ಜೂಮ್ ಮಾಡಿದ ನಂತರ ಇನ್ನೂ ಒಳಕ್ಕೆ ಹಾರಿಕೊಂಡು ಹೋಗಿ ನಿಮಗೆ ಬೇಕಾದ ಪಟ್ಟಣ, ನಗರಗಳನ್ನೂ ನೋಡಬಹುದು. ಅಲ್ಲಿಯ ರಸ್ತೆ, ಮನೆಗಳು, ಎಲ್ಲ ಕಟ್ಟಡಗಳೂ ನಿಮಗೆ ಕಾಣಿಸುತ್ತವೆ. ನಿಮಗೆ ಬೇಕಾದ ದಿಕ್ಕಿಗೆ ಅವುಗಳನ್ನು ತಿರುಗಿಸಿಕೊಂಡು, ತೀರಾ ಹತ್ತಿರಕ್ಕೆ ಜೂಮ್ ಮಾಡಿ ನೋಡಬಹುದು. ಐತಿಹಾಸಿಕ ಸ್ಮಾರಕಗಳನ್ನು, ಪ್ರಸಿದ್ಧ ಕಟ್ಟಡಗಳನ್ನು ಗುರುತಿಸಬಹುದು. ರಸ್ತೆ, ಸೇತುವೆ, ನದಿ, ಅಂಗಡಿ, ಬೆಟ್ಟ, ಕಡು ಹೀಗೆ ಎಲ್ಲವನ್ನೂ ನೋಡಬಹುದು!

* ಭೂಗೋಳ ಪಾಠ ಮಾಡಲು, ಕಲಿಯಲು ಗೂಗಲ್ ಅರ್ಥ್ ಒಳ್ಳೆಯ ಮಜಾ ಕೊಟುವ ಸಾಧನ. ಶಾಲೆಗಳು ಈ ವಿಶಿಷ್ಟ ಸೌಲಭ್ಯ ಬಳಸಿಕೊಳ್ಳಬಹುದು. ಇಂಟರ್ನೆಟ್ ಸಂಪರ್ಕ ಹೊಂದಿರುವ ವಿದ್ಯಾಥರ್ಿಗಳು ಮನೆಯಲ್ಲೇ ಈ ಸಾಫ್ಟ್ವೇರ್ ಡೌನ್ಲೋಡ್ ಮಾಡಿಕೊಂಡು ಉಪಯೋಗಿಸಬಹುದು.


ಹಾರುವ ತಟ್ಟೆಗಳು ನಿಜವಾಗಿಯೂ ಇವೆಯೆ?

ಅನ್ಯಗ್ರಹಗಳಿಂದ ಭೂಮಿಗೆ ಹಾರಿಬರುತ್ತಿರುತ್ತವೆ ಎನ್ನಲಾಗುವ `ಹಾರುವ ತಟ್ಟೆಗಳು' (ಯುಎಫ್ಓ - ಅನ್ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್ಸ್) ನಿಜವಾಗಿಯೂ ಇವೆಯೆ?

ಈ ಪ್ರಶ್ನೆಗೆ ಖಚಿತ ಉತ್ತರ ಯಾರಿಗೂ ಗೊತ್ತಿಲ್ಲ. ಆದರೆ ಅವುಗಳನ್ನು ಕಂಡೆವು ಎಂದು  ಸಾವಿರಾರು ಜನರು ನೂರಾರು ವರ್ಷಗಳಿಂದ ಹೇಳಿದ್ದಾರೆ. ಅವುಗಳ ಫೋಟೋಗಳಿವೆ. ವೀಡಿಯೋಗಳಿವೆ. ಆದರೂ ಸಕರ್ಾರಗಳು ಅಧೀಕೃತವಾಗಿ ಅವುಗಳ ಅಸ್ತಿತ್ವವನ್ನು ಖಚಿತಪಡಿಸಿಲ್ಲ.

ಕೆಲವರು ಸುಳ್ಳು ಹೇಳಬಹುದು. ಕಂಪ್ಯೂಟರ್ ಚಮತ್ಕಾರಿ ಚಿತ್ರಗಳನ್ನು ತಮ್ಮ ಸುಳ್ಳಿಗೆ ಆಧಾರವಾಗಿ ನೀಡಬಹುದು. ಆದರೆ ಬಹಳ ಹಿಂದಿನಿಂದಲೂ ಹಾರುವ ತಟ್ಟೆಗಳ ಬಗ್ಗೆ ವರದಿಗಳಿವೆ. ಅನೇಕ ಚಿತ್ರಗಳು ಚಮತ್ಕಾರಿ ಚಿತ್ರಗಳಲ್ಲ ಎಂಬುದು ಸಾಬೀತಾಗಿದೆ.

ಕೆಲವು ವರ್ಷಗಳ ಹಿಂದಷ್ಟೇ ನ್ಯೂಜಿಲ್ಯಾಂಡಿನಲ್ಲಿ ಒಂದು ಹಾರುವ ತಟ್ಟೆ ಕಾಣಿಸಿಕೊಂಡಿದೆ ಎಂದು ದೊಡ್ಡದಾಗಿ ವರದಿಯಾಗಿತ್ತು. ಅದರ ಫೋಟೋ ಸಹ ಪ್ರಕಟವಾಗಿತ್ತು. ಅದಾದ ನಂತರ ಬ್ರಿಟನ್ನ ಹಳ್ಳಿಗಾಡಿನಲ್ಲಿ ರಾತ್ರಿ ಆಕಾಶದಲ್ಲಿ ಐದು ಬೆಳಕಿನ ಚುಕ್ಕೆಗಳು ಒಂದೇ ಸಮನೆ ಹಾರಾಟ ನಡೆಸಿದ್ದನ್ನು ನೂರಾರು ಜನರು ನೋಡಿದ್ದಾಗಿ `ದಿ ಡೈಲಿ ಮೇಲ್' ವರದಿ ಮಾಡಿತ್ತು. ಈ ಬೆಳಕಿನ ಚುಕ್ಕಿಗಳು ಮಾನವ ನಿಮರ್ಿತ ವಸ್ತುಗಳೋ ಅಲ್ಲವೋ ಗೊತ್ತಿರಲಿಲ್ಲ. ಈ ಬಗ್ಗೆ `ಏರ್ ಟ್ರಾಫಿಕ್ ಕಂಟ್ರೋಲ್ ಸೆಂಟರ್' ಬಳಿ ಯಾವುದೇ ಮಾಹಿತಿ ಇರಲಿಲ್ಲ.

ಜನರು ನಿಜವಾಗಿಯೂ ಹಾರುವ ತಟ್ಟೆಗಳನ್ನು ನೋಡಿದ್ದಾರೆಯೆ ಎಂಬ ಬಗ್ಗೆ ಬ್ರಿಟಿಷ್ ರಕ್ಷಣಾ ಸಚಿವಾಲಯ ಹಿಂದಿನಿಂದಲೂ ವಿಚಾರಣೆ ನಡೆಸಿಕೊಂಡು ಬರುತ್ತಿದೆ. ಸಚಿವಾಲಯ ಹಾಗೂ ಜನರ ಸಂವಾದವಿರುವ ಫೈಲುಗಳನ್ನು (`ಎಕ್ಸ್-ಫೈಲ್ಸ್') ಅದು ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ. ಹಾರುವ ತಟ್ಟೆಗಳ ಬಗ್ಗೆ ಪ್ರತಿವರ್ಷ ಸಚಿವಾಲಯಕ್ಕೆ ಕನಿಷ್ಠ ನೂರು ವರದಿಗಳು ಬರುತ್ತವಂತೆ. ಅವುಗಳ ಸತ್ಯಾಂಶ ಎಷ್ಟು ಎಂದು ಸಚಿವಾಲಯ ಖಚಿತಪಡಿಸಿಲ್ಲ.

ಹಿಂದೆ ಅಮೆರಿಕದ ಸೇನೆ ಸಹ ಈ ರೀತಿ ವಿಚಾರಣೆ (`ಪ್ರಾಜೆಕ್ಟ್ ಬ್ಲ್ಯೂಬುಕ್') ನಡೆಸಿತ್ತು. `ಹಾರುವ ತಟ್ಟೆಗಳೆಲ್ಲ ಕೇವಲ ಕಲ್ಪನೆ' ಎಂದು ವರದಿ ನೀಡಿತ್ತು. ಆದರೆ ಅದು ರಹಸ್ಯವಾಗಿ ತನ್ನ ತನಿಖೆ ಮುಂದುವರಿಸಿದೆ ಎನ್ನುವವರೂ ಇದ್ದಾರೆ.

ಹಾರುವ ತಟ್ಟೆಗಳು ನಿಜವೋ ಸುಳ್ಳೋ ಗೊತ್ತಿಲ್ಲ. ಈ ಬಗ್ಗೆ ಯಾವುದನ್ನೂ ಖಚಿತವಾಗಿ ಸಾಬೀತು ಮಾಡಲಾಗಿಲ್ಲ. ಅದನ್ನು ನೋಡಿರುವುದಾಗಿ ಹೇಳುವ ಜನರಂತೂ ತಮ್ಮ ಮಾತು ನಿಜ ಎಂದು ವಾದಿಸುತ್ತಾರೆ.