Thursday, 22 July 2010

ಏಕೆ ದಿನವೂ ಹಣ್ಣುಗಳನ್ನು ತಿನ್ನಬೇಕು?

ನಿಮ್ಮ ಜ್ಞಾಪಕಶಕ್ತಿ ಚುರುಕಾಗಿರಬೇಕೆ? ಬುದ್ಧಿ ಮೊನಚಾಗಿರಬೇಕೆ? ಪರೀಕ್ಷೆಗಳಲ್ಲಿ ಒಳ್ಳೆಯ ಮಾರ್ಕ್ಸ್ ಪಡೆಯಬೇಕು ಎಂದುಕೊಂಡಿದ್ದೀರಾ? ಸದಾ ಲವಲವಿಕೆಯಿಂದ ಚೂಟಿಯಾಗಿದ್ದು ಎಲ್ಲರ ಕೈಲೂ `ಭೇಷ್' ಎನಿಸಿಕೊಳ್ಳಬೇಕೆ? ಆರೋಗ್ಯ `ಫಸ್ಟ್ಕ್ಲಾಸ್' ಆಗಿರಬೇಕೆ? ನೀವು ಎಲ್ಲರಿಗಿಂತಲೂ ನಿಧಾನವಾಗಿ ಮುದುಕರಾಗಲು ಇಚ್ಛಿಸುತ್ತೀರಾ? ಇಲ್ಲಿದೆ `ರುಚಿಕರ' ಉಪಾಯ!!

ದಿನವೂ ತಾಜಾ ಹಣ್ಣುಗಳನ್ನು ತಿನ್ನಿ. ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯ ಆಹಾರ ಎಂಬುದು ಹಿಂದಿನ ಕಾಲದಿಂದಲೂ ಜನರಿಗೆ ಗೊತ್ತು. ಆದರೆ ಆಧುನಿಕ ಮನುಷ್ಯನ ಆಹಾರದಲ್ಲಿ ಹಣ್ಣಿಗೆ ಸ್ಥಾನವೇ ಇಲ್ಲವಾಗಿದೆ. ಅಥವಾ `ಊಟ ಮಾಡಿದ ನಂತರ ತಿನ್ನುವ' ಕೊನೆಯ ಸ್ಥಾನ ಹಣ್ಣುಗಳಿಗೆ ನೀಡಲಾಗಿದೆ! ಹಣ್ಣುಗಳು ಆರೋಗ್ಯ, ಆಯುಷ್ಯ ಹೆಚ್ಚಿಸುತ್ತವೆ ಎಂಬ ಅಂಶ ಈಗ ವೈಜ್ಞಾನಿಕವಾಗಿ ಸಾಬೀತಾಗಿದೆ. ಹಣ್ಣುಗಳು ನಿಮ್ಮ ಆಹಾರದ ಪ್ರಮುಖ ಭಾಗವಾಗಲೇಬೇಕು.

ಈ ಭೂಮಿಯಲ್ಲಿ ಶೇ. 70 ಭಾಗ ನೀರು. ಮನುಷ್ಯ ಶರೀರದಲ್ಲೂ ಶೇ. 80ರಷ್ಟು ನೀರು! ಹಣ್ಣುಗಳ ಶೇ. 80ರಷ್ಟು ಪಾಲೂ ನೀರೇ. ನಿಮಗೆ ಬೇಕಾದ ಪೌಷ್ಟಿಕಾಂಶಗಳೆಲ್ಲವೂ ಇದ್ದು ನಿಮ್ಮ ಶರೀರ ಪ್ರಕೃತಿಗೆ ಹಣ್ಣು ಎಷ್ಟು ಹೊಂದಿಕೊಂಡಿದೆ ನೋಡಿದಿರಾ?

`ಬ್ಯಾಡ್ ಕೊಲೆಸ್ಟೆರಾಲ್' (ರಕ್ತದಲ್ಲಿನ ಒಂದು ರೀತಿಯ ಕೊಬ್ಬಿನಂಶ) ಬಗ್ಗೆ ಕೇಳಿದ್ದೀರಾ? ಅದರಿಂದ ಹೃದಯ ರೋಗಗಳು ಬರುತ್ತವೆ. ಹಣ್ಣಿನಲ್ಲಿ ಅದು ಇಲ್ಲವೇ ಇಲ್ಲ!!

ವ್ಹಾ! ಇದು ಬುದ್ಧಿಶಕ್ತಿ ಹೆಚ್ಚಿಸುವ ಮ್ಯಾಜಿಕ್ ಆಹಾರ! ಹಣ್ಣುಗಳು ಕೇವಲ ಹೊಟ್ಟೆಗೆ ಮಾತ್ರವಲ್ಲ, ಮೆದುಳಿಗೂ ಅತ್ಯುತ್ತಮ ಆಹಾರ!! ತಾಜಾ ಹಣ್ಣು ತಿನ್ನುವವರ ಮೆದುಳೂ `ತಾಜಾ' ಆಗಿರುತ್ತದೆ. ಅವರ ನೆನಪಿನ ಶಕ್ತಿ ಚುರುಕಾಗಿರುತ್ತದೆ. ಅವರಿಗೆ ಓದಿದ್ದು, ಕೇಳಿದ್ದು ಸುಲಭವಾಗಿ ಅರ್ಥವಾಗುತ್ತದೆ. ವಿಷಯಗಳು ಬೇಕೆಂದಾಗ ಚಕ್ಕನೆ, ವೇಗವಾಗಿ ನೆನಪಿಗೆ ಬರುತ್ತವೆ. ``ನಾಲಿಗೆ ತುದೀಲಿದೆ. ಹೇಳ್ತೀನಿ, ಒಂದ್ನಿಮಿಷ ಇರು'' ಎನುವ ಗೋಜೇ ಇಲ್ಲ!

ದಿನವೂ ಹಣ್ಣು ತಿನ್ನುವವರಿಗೆ ಮಾನಸಿಕ ಸಮಸ್ಯೆಯೂ ಕಡಿಮೆಯಂತೆ, ಆತ್ಮವಿಶ್ವಾಸ ಹೆಚ್ಚಂತೆ. ನಾವು ಚೆನ್ನಾಗಿರುವುದಷ್ಟೇ ಮುಖ್ಯವಲ್ಲ. `ನಾವು ಚೆನ್ನಾಗಿದ್ದೇವೆ' ಎಂಬ ಭಾವನೆ ಇಟ್ಟುಕೊಂಡು ನಾವು ನೆಮ್ಮದಿಯಾಗಿರುವುದೂ ಬಹಳ ಮುಖ್ಯ. ಹಣ್ಣುಗಳು ಇಂತಹ ಭಾವನೆಯನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ ತಜ್ಞರು.

ತಮ್ಮ ಎಷ್ಟೋ ಕಾಯಿಲೆಗಳು ತುಂಬಾ ಹಣ್ಣು ತಿನ್ನುವುದರಿಂದ ವಾಸಿಯಾಯಿತು ಎನ್ನುವವರು ಇದ್ದಾರೆ. ಈ ಕುರಿತು ಇನ್ನೂ ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಿವೆ.

ಹಣ್ಣು ತಿನ್ನುವವರು ಯಾವ ಪ್ರ್ರಾಣಿಗಳನ್ನೂ ಕೊಲ್ಲಬೇಕಿಲ್ಲ. ಪಾಪ, ಎಲ್ಲ ಪ್ರಾಣಿಗಳಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ, ಅಲ್ಲವೆ? ಮಾಂಸ ಹೆಚ್ಚು ತಿನ್ನುವುದು ಹೃದಯಕ್ಕೆ ಒಳ್ಳೆಯಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಹಣ್ಣು ಅಪಾಯವಿಲ್ಲದ ಅಹಿಂಸಾ ಆಹಾರ. ಸಾತ್ವಿಕ ಆಹಾರ. ಅದು ದೇವರಿಗೂ ಇಷ್ಟ!

ಹಣ್ಣುಗಳು ದುಬಾರಿ, ನಮ್ಮ ಮಕ್ಕಳಿಗೆ ಕೊಡಿಸುವುದು ಕಷ್ಟ ಎಂಬುದು ಹಲವಾರು ತಾಯಿತಂದೆಯರ ಭಾವನೆ. ಆದರೆ ಅಂತಹ ಅನೇಕರು ತಮ್ಮ ಮಕ್ಕಳಿಗೆ ಕೊಡಿಸುವ `ಕುರ್ ಕುರೇ', `ಮಹಾ ಮಂಚ್', `ಡೈರಿ ಮಿಲ್ಕ್ ಚಾಕೊಲೇಟ್', `ಪೆಪ್ಸಿ, ಕೋಕ್' ಗಳ ಬೆಲೆ ಹಣ್ಣುಗಳಿಗಿಂತಲೂ ದುಬಾರಿ! ಒಂದು ಬಾಳೆಹಣ್ಣಿನ ಬೆಲೆ ಈಗಲೂ ಬರೀ ಎರಡೇ ರೂಪಾಯಿ!!

ಹಣ್ಣುಗಳಲ್ಲಿ ವಿಟಮಿನ್ಗಳು, ಖನಿಜಾಂಶಗಳು ಅಪಾರವಾಗಿವೆ. ಅವು `ಕೆಮಿಕಲ್' ಆಹಾರದಂತಲ್ಲ. ಅವೆಷ್ಟು `ಫ್ರೆಶ್', ಎಷ್ಟೊಂದು ರುಚಿ! ಸಿಹಿ ಸಿಹಿ, ಹುಳಿ ಸಿಹಿ..ವ್ಹಾಹ್!!

No comments:

Post a Comment