Wednesday, 21 July 2010

ನೀವು `ಫಿಟ್' ಆಗಿರಲು ಹೀಗೆಮಾಡಿ ಸಾಕು


ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲ ವಯಸ್ಸಿನವರಿಗೂ ಅತ್ಯಗತ್ಯ. ಪರೀಕ್ಷೆ ಹತ್ತಿರ ಬಂದೊಡನೇ `ಅಯ್ಯೋ! ಹೊಟ್ಟೆನೋವು' ಎನ್ನುವಂತಾಗಬಾರದಲ್ಲವೆ? ಅದಕ್ಕೇನು ಮಾಡಬೇಕು? ಮೊದಲಿಗೆ ನಿಮ್ಮ ಆಹಾರ ಪೌಷ್ಟಿಕವಾಗಿರಬೇಕು. ಅದರ ಜೊತೆಗೇ ನಿಮ್ಮ ಆಟ-ಪಾಠಗಳು ಚೆನ್ನಾಗಿ ನಡೆಯಬೇಕು. ಒಂದಿಷ್ಟು ವ್ಯಾಯಾಮ ಮಾಡುವುದು ತುಂಬಾ ಒಳ್ಳೆಯದು. ಶಾಲೆಯ ಯೋಗ ಕ್ಲಾಸ್, ಫಿಸಿಕಲ್ ಎಜುಕೇಷನ್ ತಪ್ಪಿಸಿಕೊಳ್ಳಬೇಡಿ.

ಆಹಾರ, ವ್ಯಾಯಾಮಗಳಿಂದ ಬುದ್ಧಿ ಚುರುಕಾಗುತ್ತದೆ. ಓದಿದ್ದು ಸುಲಭವಾಗಿ ಅರ್ಥವಾಗುತ್ತದೆ. ಮನಸ್ಸಿಗೆ ಖುಷಿಯಾಗುತ್ತದೆ. ದೇಹಕ್ಕೆ ಲವಲವಿಕೆ ಬರುತ್ತದೆ. ಆಮೇಲೆ ನಿಮ್ಮ ಆರೋಗ್ಯ ಫಸ್ಟ್-ಕ್ಲಾಸ್! ಜೊತೆಗೆ ನೀವು ಪರೀಕ್ಷೇಲೂ ಫಸ್ಟ್-ಕ್ಲಾಸ್!

ನಿಮಗೆ ಪೌಷ್ಟಿಕ ಆಹಾರ ಒದಗಿಸುವುದು ನಿಮ್ಮ ಪೋಷಕರ ಕೆಲಸ. ಆದರೆ ಈ ಕೆಳಗೆ ಹೇಳುವ ಸಂಗತಿಗಳನ್ನು ಮರೆಯದೇ ಅನುಸರಿಸುವುದು ನಿಮ್ಮ ಕೆಲಸ.

1. ಸದಾ ಒಂದೇ ಬಗೆಯ ಊಟಮಾಡಬೇಡಿ. `ಅನ್ನ, ತಿಳಿಸಾರು ಬಿಟ್ಟರೆ ಏನೂ ತಿನ್ನುವುದೇ ಇಲ್ಲ' ಎಂದು ಅಮ್ಮ ರೇಗುವಂತೆ ಮಾಡಬೇಡಿ. ಬಗೆಬಗೆಯ ಖಾದ್ಯಗಳನ್ನು ತಿನ್ನುವುದರಿಂದ ನಿಮಗೆ ವಿವಿಧ ರುಚಿಗಳು ಲಭಿಸುವ ಜೊತೆಗೆ ವಿವಿಧ ಪೌಷ್ಟಿಕಾಂಶಗಳು ದೊರಕುತ್ತವೆ.

2. ನಿಮ್ಮ ಆಹಾರದಲ್ಲಿ ಹಣ್ಣುಗಳು, ಸೊಪ್ಪುಗಳು, ಹಸಿರು ತರಕಾರಿಗಳು ಮತ್ತು ಕಾಳುಗಳು ಧಾರಾಳವಾಗಿರಬೇಕು. ಇವುಗಳಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅನೇಕ ರೋಗಗಳು ನಿಮ್ಮ ಹತ್ತಿರ ಬರುವುದೇ ಇಲ್ಲ.

3. ದಿನಕ್ಕೆ ಏನಿಲ್ಲವೆಂದರೂ 8-9 ದೊಡ್ಡ ಲೋಟ ನೀರು ಕುಡಿಯಬೇಕು. ಹಾಲೂ ಅಷ್ಟೇ. ದಿನಕ್ಕೆ ಕನಿಷ್ಠ ಒಂದು (ಅಥವಾ ಎರಡು) ದೊಡ್ಡ ಲೋಟದಷ್ಟು ಹಾಲು ಕುಡಿಯಬೇಕು. `ಹಾಲು ಕುಡಿ' ಎಂದು ಅಮ್ಮ ಕರೆದರೆ `ಈಗ ಬೇಡ' ಎನ್ನಕೂಡದು.

4. ಎಷ್ಟು ತಿನ್ನುತ್ತಿದ್ದೇವೆ ಎನ್ನುವ ಅರಿವೂ ಇರಬೇಕು. ಊಟಕ್ಕೆ ಕೂತಾಗ ತಿನಿಸುಗಳು ರುಚಿಯಾಗಿವೆ ಎಂದು ಹೊಟ್ಟೆಬಾಕರ ಹಾಗೆ ತಿನ್ನಬಾರದು.

5. ರಜೆ ಸಿಕಿದಾಗಲೆಲ್ಲಾ, ಬಿಡುವು ದೊರೆತಾಗಲೆಲ್ಲಾ, ಟಿವಿ, ಡಿವಿಡಿ, ವೀಡಿಯೋ ಗೇಮ್ಸ್ ಅಂತ ಹೆಚ್ಚು ಕೂರಬಾರದು. ಹೊರಗೆ ಮೈದಾನದಲ್ಲಿ, ಸ್ನೇಹಿತರೊಡನೆ ಚೆನ್ನಾಗಿ ಆಡಬೇಕು. ಚಿತ್ರ ಬರೆಯುವುದು, ಒಳ್ಳೆಯ ಪುಸ್ತಕಗಳನ್ನು ಓದುವುದು, ಸಂಗೀತ ಕೇಳುವುದು ಮೊದಲಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ವೇಳಾಪಟ್ಟಿ ಹಾಕಿಕೊಂಡು ಟಿವಿ, ಕಂಪ್ಯೂಟರ್ಗಳಿಗೂ ಒಂದಿಷ್ಟು ಸಮಯ ನೀಡಬೇಕು.

6. ಒಂದು ವಿಷಯ ಮರೆಯಬಾರದು. ಸದಾ ಚಟುವಟಕೆಯಿಂದ ಇರಬೇಕು. ಸದಾ `ಅಯ್ಯೋ! ಬೋರು.. ಥೂ! ಬೇಜಾರು...' ಎನ್ನುತ್ತಿರಬಾರದು.

No comments:

Post a Comment