Tuesday, 10 August 2010

ಸಣಕಲು ಕಡ್ಡಿಗಳಲ್ಲೂ ಇದೆ ಬೊಜ್ಜು!

ನೋಡಲು ತೆಳ್ಳಗೆ ಸಣಕಲು ಕಡ್ಡಿ ಹಾಗೆ ಇದ್ದರೆ `ಹೋ ಇವರ ಶರೀರದಲ್ಲಿ ಕೊಬ್ಬಿನಂಶವೇ ಇಲ್ಲ' ಎನ್ನುತ್ತಾರಲ್ಲವೆ? ಅದು ಸುಳ್ಳು!

ಶರೀರದಲ್ಲಿ ಕೊಬ್ಬು ಜಾಸ್ತಿಯಾದರೆ ಏನಾಗುತ್ತದೆ? `ಬೊಜ್ಜು' ಬೆಳೆಯುತ್ತದೆ. ಡುಮ್ಮಗಾಗುತ್ತಾರೆ. ಡೊಳ್ಳು ಹೊಟ್ಟೆ ಬೆಳೆಯುತ್ತದೆ. ತೂಕ ತುಂಬಾ ಹೆಚ್ಚಾಗುತ್ತದೆ. ಹೆಚ್ಚು ತೂಕವಿದ್ದರೆ ಆರೋಗ್ಯ ಹಾಳಾಗುತ್ತದೆ. ಹೃದಯ ರೋಗಗಳು, ಹೆಚ್ಚು ರಕ್ತದೊತ್ತಡ, ಮಧುಮೇಹ ರೋಗ ಬರಬಹುದು. ಜೀವಕ್ಕೂ ಅಪಾಯ.

ಹಾಗಾದರೆ ಸಣ್ಣಗೆ ಇದ್ದರೆ ಈ ರೋಗಗಳು ಬರುವುದಿಲ್ಲವೆ? ಸಣ್ಣಗಿರುವವರಲ್ಲಿ ಕೊಬ್ಬಿನಂಶ ಕಡಿಮೆ. ಹೀಗಾಗಿ ಅವರಿಗೆ ಅಪಾಯವೂ ಕಡಿಮೆ ಎನ್ನುವುದು ಸಾಮಾನ್ಯವಾಗಿ ತಜ್ಞರ ಅಭಿಪ್ರಾಯ (ಆದರೆ ತೀರಾ  ಸಣ್ಣಗಿದ್ದು ಶಕ್ತಿಯೇ ಇಲ್ಲದೆ ದುರ್ಬಲವಾಗಿರಬಾರದು).

ಆದರೆ ಸಣ್ಣಗಿರುವುದು ಎಂದರೇನು? ಸಾಮಾನ್ಯವಾಗಿ ನೋಡಲು ಸಣ್ಣಗೆ ಕಾಣುವವರನ್ನು ನಾವು `ಸಣ್ಣಗಿದ್ದಾರೆ' ಎನ್ನುತ್ತೇವೆ ಅಲ್ಲವೆ? ಅವರು ಸಣ್ಣಗೆ ಕಾಣಲು ಕಾರಣ ಅವರ ಚರ್ಮದ ಕೆಳಗೆ ಕೊಬ್ಬಿನಂಶ ಅಷ್ಟಾಗಿ ಶೇಖರಣೆ ಆಗದಿರುವುದು. ಚರ್ಮದ ಕೆಳಗೆ ಹೆಚ್ಚು ಕೊಬ್ಬು ತುಂಬಿಕೊಂಡಿರುವವರಿಗೆ `ಬೊಜ್ಜು ಇದೆ' ಎನ್ನುತ್ತೇವೆ.

ಸಣ್ಣಗಿರುವವರಲ್ಲಿ ಕೊಬ್ಬು ಕಡಿಮೆ. ಬೊಜ್ಜು ವ್ಯಕ್ತಿಗಳಿಗೆ ಕೊಬ್ಬು ಜಾಸ್ತಿ ಎಂಬುದು ಇದರರ್ಥ. ಈ ಮಾತು ಸರಿಯೋ? ತಪ್ಪೋ?

ತಪ್ಪು! ಈಗ ವಿಜ್ಞಾನಿಗಳು ಹೇಳುತ್ತಿರುವ ಹಾಗೆ ಸಣ್ಣಗೆ ಕಾಣುವವರಲ್ಲಿ ಕೊಬ್ಬು ಕಡಿಮೆ ಶೇಖರಣೆಯಾಗಿದೆ ಎನ್ನಲು ಸಾಧ್ಯವಿಲ್ಲ!

ಏನಪ್ಪ ಇದು ಎನ್ನಬೇಡಿ. ಸಣ್ಣಗೆ ಕಾಣುವವರ ಚರ್ಮದ ಅಡಿಯಲ್ಲಿ ಕೊಬ್ಬು ಶೇಖರಣೆ ಆಗದೇ ಇರಬಹುದು. ಆದರೆ ನಮಗೆ ಕಾಣದ ಹಾಗೆ ಅವರ ಶರೀರದ ತೀರಾ ಒಳಗಡೆ ಕೊಬ್ಬು ಶೇಖರಣೆ ಆಗಿರಬಹುದು. ಅದು ಅವರಿಗೂ ಅಪಾಯ ಉಂಟುಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

`ಎಂಆರ್ಐ ಸ್ಕ್ಯಾನ್' ಎಂಬ ಒಂದು ವಿಧಾನ ಇದೆ. ಅದರ ಮೂಲಕ ಶರೀರದ ಒಳಗಿನ ಚಿತ್ರಗಳನ್ನು ತೆಗೆಯಬಹುದು. ಬ್ರಿಟನ್ನಿನ ಡಾ. ಜಿಮ್ಮಿ ಬೆಲ್ ಮತ್ತು ಅವರ ತಂಡ 1994ರಿಂದ 2007ರವರೆಗೆ ಸುಮಾರು 800 ಜನರನ್ನು ಎಂಆರ್ಐ ಮೆಶಿನ್ ಮೂಲಕ ಸ್ಕ್ಯಾನ್ ಮಾಡಿ ನೋಡಿದಾಗ ತಿಳಿದು ಬಂದಿರುವ ವಿಷಯಗಳು ಆಶ್ಚರ್ಯ ಹಾಗೂ ಗಾಬರಿ ಹುಟ್ಟಿಸುತ್ತವೆ.

ಇಲ್ಲಿ ಕೊಟ್ಟಿರುವ ಮನುಷ್ಯನ ಶರೀರದ ಒಳಗಿನ ಸ್ಕ್ಯಾನ್ ಚಿತ್ರ ನೋಡಿ. 190 ಸೆಂ.ಮೀ. ಎತ್ತರದ (6 ಅಡಿ 4 ಇಂಚು) ಈ ವ್ಯಕ್ತಿಯ ತೂಕ ಕೇವಲ 79 ಕೆ.ಜಿ. ಅಷ್ಟೇ. `ಇಷ್ಟು ಎತ್ತರಕ್ಕೆ ಇಷ್ಟು ತೂಕ ಇದ್ದರೆ ಓಕೆ' ಎನ್ನುತ್ತಾರೆ ಅಲ್ಲವೆ? ಆ ಪ್ರಕಾರ ಈತನ ತೂಕ `ಓಕೆ'. ಆದರೆ ಎಂಆರ್ಐ ಸ್ಕ್ಯಾನ್ ಮಾಡಿರುವ ಚಿತ್ರ ತೋರಿಸುವ ವಿಷಯವೇ ಬೇರೆ. ಈ ಚಿತ್ರದಲ್ಲಿ ಹಳದಿ ಬಣ್ಣ ಇರುವುದೆಲ್ಲ ಶರೀರದ ಒಳಭಾಗದಲ್ಲಿ ಸಂಗ್ರಹವಾಗಿರುವ ಕೊಬ್ಬು. ಚರ್ಮದ ಕೆಳಗಿನ ಕೊಬ್ಬು ಹಸಿರು ಬಣ್ಣದ್ದು. ಅದು ಹೆಚ್ಚಲ್ಲ. ಆದರೆ ಹೃದಯ, ಪಿತ್ತ ಜನಕಾಂಗ ಅಥವಾ ಮೇದೋಜೀರಕದ ಸುತ್ತ ಎಷ್ಟು ಒಳಕೊಬ್ಬು ಸಂಗ್ರಹವಾಗಿದೆ ನೋಡಿದಿರಾ? ಹೊರಗಿನ ಬೊಜ್ಜಿನಷ್ಟೇ ಈ ಕೊಬ್ಬು ಅಪಾಯಕಾರಿ ಎನ್ನುತ್ತಾರೆ ತಜ್ಞರು.

ಸಣ್ಣಗೆ ಕಾಣುವವರು ತಾವು ಚೆನ್ನಾಗಿದ್ದೇವೆ ಎಂದುಕೊಳ್ಳುತ್ತಾರೆ. ಆದರೆ ತಮ್ಮ `ಒಳಗೆ' ಕೊಬ್ಬು ಎಷ್ಟಿದೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ.

ವ್ಯಾಯಾಮ ಮಾಡುವವರಿಗೆ ಹೊರಕೊಬ್ಬೂ ಕಡಿಮೆ, ಒಳಕೊಬ್ಬೂ ಕಡಿಮೆ. ಆದರೆ ವ್ಯಾಯಾಮ ಮಾಡದೇ ಬರೀ ಕಡಿಮೆ ತಿನ್ನುವುದರಿಂದ ಹೊರಕೊಬ್ಬು ಕರಗಿದರೂ ಒಳಕೊಬ್ಬು ಕರಗುವುದಿಲ್ಲ. ಈಚೆಗೆ ಮಕ್ಕಳಲ್ಲೂ ಬೊಜ್ಜು ಜಾಸ್ತಿಯಾಗುತ್ತಿದೆ.

ಆದ್ದರಿಂದ ಕೊಬ್ಬಿನ (ಎಣ್ಣೆ, ತುಪ್ಪ, ಬೆಣ್ಣೆ, ಚೀಸ್) ಆಹಾರ ಕಡಿಮೆ ಮಾಡುವುದಷ್ಟೇ ಅಲ್ಲ, ವ್ಯಾಯಾಮವನ್ನೂ ಮಾಡಬೇಕು. ಮೈದಾನದಲ್ಲಿ ಚೆನ್ನಾಗಿ ಆಟವಾಡಬೇಕು.

No comments:

Post a Comment