Wednesday, 19 January 2011

ಜೂಲಿಯನ್ ಅಸ್ಸೆಂಜ್ ಹಾಗೂ ವಿಕಿಲೀಕ್ಸ್

ಸರಕಾರಗಳ ಆಡಳಿತ ವ್ಯವಸ್ಥೆಗೆ (ಹಾಗೂ ಪ್ರಜಾತಂತ್ರ ವ್ಯವಸ್ಥೆಗೆ) ಹೊಸ ಸ್ವರೂಪ ನೀಡುವ ಕ್ರಾಂತಿಯೊಂದು ಆರಂಭವಾಗಿದೆ. ಅದನ್ನು ಆರಂಭಿಸಿರುವ ವ್ಯಕ್ತಿಯ ಹೆಸರು ಜೂಲಿಯನ್ ಅಸ್ಸೆಂಜ್.

ಒಂದು ವೆಬ್ ಸೈಟ್ ಮೂಲಕ ಅವರು ಜಗತ್ತನ್ನೇ ಅಲ್ಲಾಡಿಸುತ್ತಿದ್ದಾರೆ. ಅವರ ಈ ವೆಬ್ ಸೇವೆಯ ಹೆಸರು `ವಿಕಿಲೀಕ್ಸ್'.

ಸರಕಾರಗಳು ಜನರಿಂದ ಮುಚ್ಚಿಟ್ಟಿರುವ ರಹಸ್ಯ ದಾಖಲೆಗಳನ್ನು ಹೇಗೋ ಸಂಪಾದಿಸಿ ಅವುಗಳನ್ನು ಇಂಟರ್ನೆಟ್ಟಿನಲ್ಲಿ ಇಡೀ ಜಗತ್ತಿಗೇ ತಿಳಿಯುವಂತೆ ಪ್ರಕಟಿಸುವುದು ವಿಕಿಲೀಕ್ಸ್ನ ಉದ್ದೇಶ. ಈಗಾಗಲೇ ಅಸ್ಸೆಂಜ್ ಸಾವಿರಾರು ದಾಖಲೆಗಳನ್ನು ಪ್ರಕಟಿಸಿದ್ದಾರೆ. ಅದರ ಪರಿಣಾಮವಾಗಿ ವಿವಿಧ ಸರಕಾರಗಳ ದ್ವೇಷವನ್ನೂ ಕಟ್ಟಿಕೊಂಡಿದ್ದಾರೆ.

39 ವರ್ಷದ ಅಸ್ಸೆಂಜ್ ಹುಟ್ಟಿದ್ದು (1971) ಆಸ್ಟ್ರೇಲಿಯಾದಲ್ಲಿ. ಬದುಕಿನ ಒಂದು ಹಂತದಲ್ಲಿ ಅವರು ಕಂಪ್ಯೂಟರ್ ಹ್ಯಾಕಿಂಗ್ ಕಲಿತರು. ಅಪರಾಧಿ ಜಗತ್ತಿನ ಅಂಚಿಗೂ ಹೋಗಿ ಬಂದರು. ನಾನಾ ಹುದ್ದೆಗಳನ್ನು ಮಾಡಿದರು. ನಂತರ 2006ರಲ್ಲಿ ಅವರು ತಮ್ಮ ಗೆಳೆಯರ ಜೊತೆ ಸೇರಿ ವಿಕಿಲೀಕ್ಸ್ ಅನ್ನು ಸ್ಥಾಪಿಸಿದರು. ಅದರ ಪ್ರಧಾನ ಸಂಪಾದಕ ಹಾಗೂ ಮುಖ್ಯ ವಕ್ತಾರರಾದರು.

 ಈಗಾಗಲೇ `ಉತ್ತಮ ಪತ್ರಕರ್ತ' ಎಂಬಿತ್ಯಾದಿ ಪ್ರಶಸ್ತಿಗಳನ್ನು ಪಡೆದಿರುವ ಜೂಲಿಯನ್ ಅಸ್ಸೆಂಜ್ ಸರಕಾರಗಳ ಜೊತೆ ಕೆಲಸ ಮಾಡುವ ಅನೇಕ ಜನರ ಸಂಪರ್ಕಗಳನ್ನು ಹೊಂದಿದ್ದಾರೆ. ಅವರ ಮೂಲಕ ರಹಸ್ಯ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.

ಜೂಲಿಯನ್ ಅಸ್ಸೆಂಜ್ ಕೆಲಸ ಮಾಡುತ್ತಿರುವ ರೀತಿ ಸರಿಯೇ, ತಪ್ಪೇ ಎಂಬ ಚರ್ಚೆ ವಿಶ್ವಾದ್ಯಂತ ನಡೆದಿದೆ. ಸರಿ ಅಥವಾ ತಪ್ಪು ಎಂದು ವಾದಿಸುವ ಎರಡು ವಿಭಾಗಗಳಾಗಿ ಇಡೀ ವಿಶ್ವವೇ ಒಡೆದಿದೆ.

`ರಾಜಕಾರಣಿಗಳು ಅನಗತ್ಯ ಗೌಪ್ಯತೆ ಮಾಡಿ ನಿಜವಾದ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದ್ದಾರೆ. ಜನರನ್ನು ವಂಚಿಸುತ್ತಿದ್ದಾರೆ. ಜನರಿಗೆ ಎಲ್ಲ ಮಾಹಿತಿಯೂ ತಿಳಿಯಬೇಕು; ಅದನ್ನು ಅಸ್ಸೆಂಜ್ ಮಾಡುತ್ತಿದ್ದಾರೆ ಅಷ್ಟೇ. ಅವರಿಂದಾಗಿ ಮುಂದೆ ಪ್ರಜಾಪ್ರಭುತ್ವ ವ್ಯವಸ್ಥೆ ಹೊಸ, ಪಾರದರ್ಶಕ ಸ್ವರೂಪವನ್ನು ಪಡೆದುಕೊಳ್ಳುತ್ತದೆ' - ಇದು ಅವರ ಪರವಾದ ವಾದ.

`ಅಸ್ಸೆಂಜ್ ನಿಂದಾಗಿ ದೇಶಗಳ ಸುರಕ್ಷಾ ರಹಸ್ಯಗಳೆಲ್ಲ ಬಯಲಾಗುತ್ತವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಮಾತುಕತೆಗಳನ್ನು, ವ್ಯವಹಾರಗಳನ್ನು ಬಯಲಿನಲ್ಲಿ ನಡೆಸುವುದು ಅಸಾಧ್ಯ. ರಹಸ್ಯ ಮಾಹಿತಿ ಹೊರಬಿದ್ದರೆ ದೇಶದೇಶಗಳ ನಡುವಣ ಸಂಬಂಧಗಳು ಹಾಳಾಗುತ್ತವೆ. ಅಶಾಂತಿ ಉಂಟಾಗುತ್ತದೆ. ಅಸ್ಸೆಂಜ್ನ ಒಳ ಉದ್ದೇಶ ತಿಳಿಯದು. ಆತ ಹೊಸ ಸ್ವರೂಪದ ಭಯೋತ್ಪಾದಕ' - ಇದು ಅವರ ವಿರೋಧಿಗಳ ವಾದ.

ಈ ಎರಡು ವಾದಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಪೂರ್ಣವಾಗಿ ನಿರ್ಧರಿಸುವುದು ಕಷ್ಟ. ಪ್ರಜಾತಂತ್ರದಲ್ಲಿ ಸರಕಾರಗಳು ಹೆಚ್ಚಿನ ಗೌಪ್ಯತೆ ಇಟ್ಟುಕೊಳ್ಳದೇ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ವರ್ತಿಸಬೇಕು ಎಂಬುದು ಸರಿ. ಹಾಗೆಯೇ ಎಲ್ಲ ಮಾಹಿತಿಯೂ ಪಾರದರ್ಶಕವಾಗಿರುವಂತಿಲ್ಲ. ಕೆಲವೊಂದು ಸುರಕ್ಷಾ ಸಂಬಂಧಿ ವಿಷಯಗಳಂತೂ ರಹಸ್ಯವಾಗಿಯೇ ಇದ್ದರೆ ಒಳ್ಳೆಯದು. ಆದರೆ ರಹಸ್ಯ ಕಾಪಾಡುವ ನೆಪದಲ್ಲಿ ಜನರಿಂದ ಅನಗತ್ಯವಾಗಿ ಮಾಹಿತಿಯನ್ನು ಮುಚ್ಚಿಟ್ಟು ಅಪ್ರಾಮಾಣಿಕವಾಗಿ ನಡೆದುಕೊಳ್ಳುವ ಪ್ರವೃತ್ತಿ ಆಡಳಿತಗಾರರಲ್ಲಿ ಉಂಟಾದಾಗ ಏನು ಮಾಡುವುದು?

ಈ ವಿಷಯಗಳೆಲ್ಲ ಈಗ ಸಾರ್ವಜನಿಕವಾಗಿ ಚರ್ಚೆಯಾಗುತ್ತಿವೆ. ಇದಕ್ಕೆಲ್ಲ ಕಾರಣ ಜೂಲಿಯನ್ ಅಸ್ಸೆಂಜ್ ಹಾಗೂ ಅವರ ಗೆಳೆಯರು.

ಸ್ವತಃ ಅಸ್ಸೆಂಜ್ ಅಪ್ರಾಮಾಣಿಕರಾದರೆ ಏನು ಮಾಡುವುದು? ವಿಕಿಲೀಕ್ಸ್ ತರಹ ಕೆಲಸ ಮಾಡುವವರು ತಮಗೆ ಬೇಕಾದ ಕೆಲವು ದಾಖಲೆಗಳನ್ನು ಮಾತ್ರ ಪ್ರಕಟಿಸಿ ಉಳಿದಿದ್ದನ್ನು ತಾವೇ ಮುಚ್ಚಿಟ್ಟು ತಮ್ಮ ಮನ ಬಂದಂತೆ ಆಟ ಆಡಿದರೆ? ಅಥವಾ ಯಾರದೋ ಪರವಾಗಿ ಇನ್ಯಾರದೋ ವಿರುದ್ಧವಾಗಿ ಕೆಲಸ ಮಾಡಿದರೆ ಏನು ಮಾಡುವುದು? - ಈ ಪ್ರಶ್ನೆಗಳೂ ಬಹಳ ಮುಖ್ಯವಾಗುತ್ತವೆ. ಇಂತಹ ಸಾಧ್ಯತೆಗಳೂ ಇರಬಹುದು.

ಒಟ್ಟಿನಲ್ಲಿ ಜೂಲಿಯನ್ ಅಸ್ಸೆಂಜ್ ಈಗ ವಿಶ್ವದಲ್ಲಿ ಮನೆ ಮಾತಾಗಿದ್ದಾರೆ. ಜನಸಾಮಾನ್ಯರಾರೂ ಈವರೆಗೆ ಅವರನ್ನು ವಿರೋಧಿಸಿಲ್ಲ. ಆದರೆ ಅವರನ್ನು ಕಂಡು ಶಕ್ತಿಶಾಲಿ ದೇಶಗಳ ಸರಕಾರಗಳೆಲ್ಲ ನಡುಗುತ್ತಿವೆ. ಸರಕಾರಿ ಅಧಿಕಾರಿಗಳು, ರಾಜಕಾರಣಿಗಳು, ರಾಜತಾಂತ್ರಿಕರು ತಮ್ಮ ರಹಸ್ಯ ಪತ್ರ ವ್ಯವಹಾರಗಳು, ಮಾತುಕತೆಗಳು ನಿಜವಾಗಿಯೂ ರಹಸ್ಯವಾಗಿ ಉಳಿಯುತ್ತವೆಯೇ ಎಂಬ ಸಂಶಯದಿಂದಲೇ ಕೆಲಸ ಮಾಡುತ್ತಿದ್ದಾರೆ.

ಅಸ್ಸೆಂಜ್ ಅವರ ವಿಕಿಲೀಕ್ಸ್ ಮಾದರಿಯ ಹೊಸ ಕ್ರಾಂತಿ `ಹೊರಗೊಂದು ನೀತಿ, ಒಳಗೊಂದು ರೀತಿ' ಅನುಸರಿಸಿ ಜನರನ್ನು ವಂಚಿಸುವ ಆಡಳಿತಗಾರರಲ್ಲಿ ಭಯ ಉಂಟುಮಾಡಿದೆ.

No comments:

Post a Comment