ಮನುಷ್ಯ ಸೃಷ್ಟಿಸಿದ ಅದ್ಭುತ ವಾಹನ ಬೈಸಿಕಲ್ (ಸೈಕಲ್ ಅನ್ನೋಣ). ಎಲ್ಲರೂ ಕೊಳ್ಳಬಹುದಾದ ಈ ವಾಹನವನ್ನು ಯಾರು ಬೇಕಾದರೂ ಯಾವ ಪರಿಸರದಲ್ಲಾದರೂ ಚಲಾಯಿಸಬಹುದು. ಚೀನಾ, ನೆದರ್ಲ್ಯಾಂಡ್ಸ್ ಗಳಲ್ಲಿ ಸೈಕಲ್ ಪ್ರಮುಖ ವಾಹನಗಳಲ್ಲೊಂದು.
ಸೈಕಲ್ ಹೊಡೆಯುವುದು ದೇಹಕ್ಕೆ ವ್ಯಾಯಾಮ, ಮನಸ್ಸಿಗೆ ಉಲ್ಲಾಸ ನೀಡುವ ಕ್ರಿಯೆ. ಸೈಕಲ್ ಕುರಿತ ಕೆಲವು ಕುತೂಹಲಕಾರಿ ಸಂಗತಿಗಳು ನಿಮಗೆ ಗೊತ್ತೆ?
19ನೇ ಶತಮಾನದ ಯೂರೋಪಿನಲ್ಲಿ ಸೈಕಲ್ ಜನನವಾಯಿತು. ಜರ್ಮನ್ ಬೇರೊನ್ ಕಾರ್ಲ್ ವಾನ್ ಡ್ರಾಯಿಸ್ 1818ರಲ್ಲಿ ಪ್ಯಾರಿಸ್ಸಿನಲ್ಲಿ ಅದನ್ನು ಮೊದಲಬಾರಿಗೆ ಸಾರ್ವಜನಿಕವಾಗಿ ಪ್ರದರ್ಶಿಸಿದ. ಅದಕ್ಕೆ ಪೆಡಲುಗಳೇ ಇರಲಿಲ್ಲ! ಮರದ ಸೀಟಿನ ಕುಳಿತು ಕಾಲನ್ನು ನೆಲಕ್ಕೆ ಒತ್ತಿ ತಳ್ಳಬೇಕಾಗಿತ್ತು! 500 ವರ್ಷಗಳ ಹಿಂದೆಯೇ ಪ್ರಸಿದ್ಧ ವಿಜ್ಞಾನಿ-ಕಲಾವಿದ ಲಿಯೋನಾರ್ಡೋ ಡ ವಿಂಚಿ ಸೈಕಲ್ ಹೇಗಿರಬೇಕೆಂಬ ಸ್ಕೆಚ್ ಹಾಕಿಟ್ಟಿದ್ದಾನೆ ಎನ್ನಲಾಗುತ್ತದೆ. ಈ ಕುರಿತು ವಾದವಿವಾದಗಳಿವೆ.
ಈಗ ಎಷ್ಟು ಸೈಕಲ್ಗಳಿವೆ? 80 ರಿಂದ 100 ಕೋಟಿ ಸೈಕಲ್ಗಳಿವೆ ಎಂದು ಅಂದಾಜಿಸಲಾಗಿದೆ. ಪ್ರಪಂಚದಲ್ಲಿ ಕಾರುಗಳಿಗಿಂತಲೂ ಎರಡು ಪಟ್ಟು ಸೈಕಲ್ಲುಗಳು ಮಾರಾಟವಾಗಿವೆ.
ಡಿಡಿ ಸೆಂಫ್ಟ್ ಎನ್ನುವವನು ಸುಮಾರು 100 ರೀತಿಯ ವಿಚಿತ್ರ ಸೈಕಲ್ಲುಗಳನ್ನು ತಯಾರಿಸಿ ದಾಖಲೆ ಮಾಡಿದ್ದಾನೆ. ಅವನು ತಯಾರಿಸಿದ 7.8 ಮೀಟರ್ ಉದ್ದ, 3.7 ಮೀಟರ್ ಎತ್ತರದ ಸೈಕಲ್ ಅತಿ ದೊಡ್ಡದೆಂಬ ದಾಖಲೆ ನಿರ್ಮಿಸಿದೆ. ಅತಿ ಎತ್ತರದ ಯೂನಿಸೈಕಲ್ (ಒಂದೇ ಚಕ್ರದ ಸೈಕಲ್) ಸವಾರಿ ಮಾಡಿದವ ಅಮೆರಿಕದ ಸೆಮ್ ಅಬ್ರಹ್ಯಾಂ. ಅವನ ಯೂನಿಸೈಕಲ್ 114.8 ಅಡಿ ಎತ್ತರ ಇತ್ತು. ಅದನ್ನು ಆತ 28 ಅಡಿ ಚಲಾಯಿಸಿದ! 18 ಅಡಿ, 2.5 ಇಂಚು ಎತ್ತರದ ಬೈಸಿಕಲ್ ಚಲಾಯಿಸಿ ಟೆರ್ರಿ ಗೋರ್ಟಜೆನ್ ಎನ್ನುವ ಪಾದ್ರಿ ಗಿನ್ನೆಸ್ ದಾಖಲೆ ಮಾಡಿದ್ದಾನೆ. ಪೋಲೆಂಡಿನ ಬಿಗ್ನ್ಯೂ ರೋಜಾನೆಕ್ ಎನ್ನುವವ 1998ರಲ್ಲಿ 13 ಮೀ.ಮೀ (1.3 ಸೆಂ.ಮೀ) ಎತ್ತರದ ಸೈಕಲ್ ತಯಾರಿಸಿದ್ದ. ಅದರ ಚಕ್ರದ ವ್ಯಾಸ (ಡಯಾಮೀಟರ್) ಕೇವಲ 11 ಮೀ.ಮೀ!
ಅತಿ ಕಷ್ಟದ ಹಾಗೂ ಪ್ರತಿಷ್ಠಿತ ಸೈಕಲ್ ರೇಸ್ ಎಂದರೆ `ಟೂರ್ ಡಿ ಪ್ರಾನ್ಸ್'. ಪ್ರತಿ ವರ್ಷ ಅದರ ಮಾರ್ಗ ಬದಲಾಗುತ್ತಿರುತ್ತದೆ. ಬೆಟ್ಟಗುಡ್ಡ ಹಾದುಹೋಗುವ ಈ ಮಾರ್ಗ ಕೆಲವೊಮ್ಮೆ ಪ್ರಾನ್ಸ್ ದಟಿ ಅಕ್ಕಪಕ್ಕದ ದೇಶಗಳಿಗೂ ವ್ಯಾಪಿಸುತ್ತದೆ!
ಸೈಕಲ್ ಎಷ್ಟು ವೇಗ ಸಾಧಿಸಬಹುದು? 1995ರಲ್ಲಿ ಫ್ರೆಡ್ ರಾಂಪೆಲ್ಬರ್ಗ್ ಗಂಟೆಗೆ 268 ಕಿ.ಮೀ ವೇಗದಲ್ಲಿ ಸೈಕಲ್ ಚಲಾಯಿಸಿ ದಾಖಲೆ ಮಾಡಿದ್ದಾನೆ. ಎದುರು ಗಾಳಿ ಹೊಡೆಯದಿರಲಿ ಎಂದು ಆತ ಬೇರೆ ದೊಡ್ಡ ವಾಹನವೊಂದರ ಹಿಂದೆ ಮರೆಯಾಗಿ ಸೈಕಲ್ ಹೊಡೆದುಕೊಂಡು ಹೋಗಿ ಈ ವೇಗ ಸಾಧಿಸಿದ!
No comments:
Post a Comment