Monday, 21 February 2011

ಪಿ-ಬುಕ್ ಎದುರು ಇ-ಬುಕ್ ಮೇಲುಗೈ!

ಭವಿಷ್ಯದಲ್ಲಿ ಕಾಗದದ ಪುಸ್ತಕಗಳು ಕ್ರಮೇಣ ಮರೆಯಾಗಲಿವೆ!

ಈಗ ಮೊಬೈಲ್ ಫೋನುಗಳಲ್ಲೂ ಸಾವಿರಾರು ಹಾಡುಗಳನ್ನು ಸಂಗ್ರಹಿಸಿ ಇಟ್ಟುಕೊಂಡು ಕೇಳಬಹುದು. ಹಳೆಯ ಗ್ರಾಮೋಫೋನ್ ಅನ್ನು ಯಾರಾದರೂ ಕೇಳುತ್ತಾರಾ?

ಹಾಗೆಯೇ, ಇದು ಇ-ಬುಕ್ ಕಾಲ. ಎಲೆಕ್ಟ್ರಾನಿಕ್ ರೂಪದ ಪುಸ್ತಕಗಳು ಈಗ ಹೆಚ್ಚು ಜನಪ್ರಿಯವಾಗುತ್ತಿವೆ. ಒಂದು ಪುಟ್ಟ ಇ-ಬುಕ್ ರೀಡರ್ ಸಾಧನದಲ್ಲಿ ಸಾವಿರಾರು ಇ-ಪುಸ್ತಕಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬಹುದು. ನೀವು ಹೋದ ಕಡೆಯೆಲ್ಲ ನಿಮ್ಮ ಜೇಬಿನಲ್ಲಿ, ಅಥವಾ, ಚೀಲದಲ್ಲಿ ಒಂದು ಇಡೀ ಲೈಬ್ರರಿಯನ್ನೇ ತೆಗೆದುಕೊಂಡು ಹೋಗಬಹುದು! ಶಾಲಾ ಪಠ್ಯಪುಸ್ತಕಗಳನ್ನೂ ಇ-ಪುಸ್ತಕದ ರೂಪದಲ್ಲಿ ನೀಡಲು ಹಲವು ದೇಶಗಳಲ್ಲಿ ಚಿಂತನೆ ನಡೆಯುತ್ತಿದೆ. ಇದೀಗ ಇ-ಪುಸ್ತಕದ ಮಾರಾಟ ಕಾಗದದ ಪುಸ್ತಕಗಳಿಗಿಂತಲೂ ಹೆಚ್ಚಾಗಿರುವ ಸುದ್ದಿ ಬಂದಿದೆ!

ಇಂಟರ್ನೆಟ್ ಮೂಲಕ ಪುಸ್ತಕಗಳನ್ನು ಮಾರುವ ಜಗತ್ತಿನ ಅತಿ ದೊಡ್ಡ ಸಂಸ್ಥೆ ಎಂದರೆ, ಅಮೆರಿಕದ `ಅಮೇಜಾನ್ ಡಾಟ್ ಕಾಮ್'. ಈ ಸಂಸ್ಥೆ ಇ-ಬುಕ್ಗಳನ್ನೂ ಮಾರುತ್ತದೆ. ತನ್ನದೇ ಆದ ಇ-ಬುಕ್ ರೀಡರ್ಗಳನ್ನೂ ತಯಾರಿಸಿದೆ. ಅದರ ಜನಪ್ರಿಯ ರೀಡರ್ ಸಾಧನದ ಹೆಸರು `ಕಿಂಡಲ್'.

ಅಮೇಜಾನ್ ಕಿಂಡಲ್ ಮಾರಾಟ ಈಗ ತೀವ್ರವಾಗಿದೆ (ಇತರ ಕಂಪೆನಿಗಳ ಈ-ಬುಕ್ ರೀಡರ್ಗಳ ಮಾರಾಟವೂ ಹೆಚ್ಚಾಗುತ್ತಿದೆ). ಇದೀಗ ಮೊದಲಬಾರಿಗೆ ಕಿಂಡಲ್ ಇ-ಬುಕ್ಗಳ ಮಾರಾಟ ಕಾಗದದ ಪುಸ್ತಕಗಳ ಮಾರಾಟವನ್ನೂ ಮೀರಿಸಿದೆ.

ಜುಲೈ 2010ರಲ್ಲಿ ಕಿಂಡಲ್ ಬುಕ್ಗಳು ಪೇಪರ್ ಬುಕ್ಗಳನ್ನು ಹಿಂದಕ್ಕೆ ಹಾಕಿದವು. ಇದೀಗ ಅಮೇಜಾನ್ 1000 ಕೋಟಿ ಡಾಲರ್ಗಳಷ್ಟು ಮೌಲ್ಯದ ಇ-ಬುಕ್ ವ್ಯಾಪಾರ ಪೂರೈಸಿದೆ. ಸುಮಾರು 9 ಲಕ್ಷ ಕಿಂಡಲ್ ಇ-ಬುಕ್ಗಳ ಶೀಷರ್ಿಕೆಗಳನ್ನು (ಒಂದೊಂದು ಶೀಷರ್ಿಕೆಯ ಅನೇಕ ಪ್ರತಿಗಳು ಮಾರಾಟವಾಗುತ್ತವೆ) ಮಾರಿದೆ.

ವಿಶ್ವದ ಇತಿಹಾಸದಲ್ಲಿ ಇದು ದಾಖಲಿಸಬೇಕಾದ ಬೆಳಗಣಿಗೆ. ಎಲೆಕ್ಟ್ರಾನಿಕ್-ಕಂಪ್ಯೂಟರ್ ತಂತ್ರಜ್ಞಾನದಿಂದಾಗಿ ಜಗತ್ತಿನ ಭವಿಷ್ಯ ಹೇಗಿರುತ್ತದೆ ಎಂಬುದರ ಸೂಚನೆ ಇದು.

Wednesday, 9 February 2011

ಇರುವೆಗಳ ವಿಸ್ಮಯ ಲೋಕ!

ಇರುವೆ ಎಷ್ಟು ಚಿಕ್ಕದು, ಅಲ್ಲವೆ? `ಅಯ್ಯೋ! ಇರುವೇನಾ? ಅದ್ಯಾವ ಮಹಾ?!' ಎನ್ನುವುದು ಸಾಮಾನ್ಯ. ಆದರೆ ಅದರ ಗಾತ್ರಕ್ಕೆ ಹೋಲಿಸಿದರೆ ಇರುವೆ ಶಕ್ತಿ ಅಗಾಧವಾದದ್ದು.

ಇರುವೆಯಿಂದ ಕಚ್ಚಿಸಿಕೊಂಡು `ಹ್ಹಾ' ಎನ್ನದವರಾರು? ವಿಸ್ಮಯದಿಂದ ಇರುವೆ ಸಾಲನ್ನು, ಇರುವೆ ಗೂಡನ್ನು ನೋಡುತ್ತ್ತಾ ನಿಲ್ಲದವರಾರು? ಎಲ್ಲ ವಯಸ್ಸಿನವರಿಗೂ ಇರುವೆಯನ್ನು ಕಂಡರೆ ಪ್ರೀತಿ! ನಮ್ಮ ನಡುವೆ ಇದ್ದರೂ ಅವುಗಳದೇ ಒಂದು ವಿಶಿಷ್ಟ ಜಗತ್ತು!

ಅಂದಹಾಗೆ, ಈ ಜಗತ್ತಿನಲ್ಲಿ ಎಷ್ಟು ಇರುವೆಗಳಿವೆ? ಕಾಡಿನಲ್ಲಿ ಹುಲಿ, ಆನೆಗಳನ್ನು ಎಣಿಕೆ ಮಾಡಿದ ಹಾಗೆ ಇರುವೆಗಳನ್ನು ಯಾರೂ ಎಣಿಸಲಾರರು! ನಾಲ್ಕು ಜನ ವಾಸವಾಗಿರುವ ಮನೆಯ ಸುತ್ತಮುತ್ತ ನೂರಾರು ಕೋಟಿ ಇರುವೆಗಳಿರುತ್ತವೆ. ಇನ್ನು ಇಡೀ ಭೂಮಿಯ ತುಂಬಾ ಎಷ್ಟು ಇರುವೆಗಳಿವೆ ಎಂಬುದನ್ನು ಅಂದಾಜು ಮಾಡುವುದೂ ಕಷ್ಟ.

ಎಲ್ಲ ಇರುವೆಗಳೂ ಒಂದೇ ಜಾತಿಯವಲ್ಲ. ಅವುಗಳಲ್ಲಿ ಸುಮಾರು 12,000 ವಿವಿಧ ಜಾತಿಗಳಿವೆ ಎಂದು ಅಂದಾಜು ಮಾಡಲಾಗಿದೆ. ಸುಮಾರು 9000 ಜಾತಿಗಳನ್ನು ಗುರುತಿಸಲಾಗಿದೆ. ಈ ವಿಜ್ಞಾನಿಗಳೂ ಪರವಾಗಿಲ್ಲ ನೋಡಿ! ಇಷ್ಟೊಂದು ಬಗೆಬಗೆ ಇರುವೆಗಳನ್ನು ಗುರುತಿಸುವ ಕೆಲಸವೇನು ಸಾಮಾನ್ಯವೆ?

ಪ್ರತಿ ದೇಶ, ಪ್ರದೇಶಗಳಲ್ಲೂ ನಾನಾ ಜಾತಿ `ಸ್ವದೇಶಿ' ಇರುವೆಗಳಿವೆ. ಆದರೆ ಸ್ವದೇಶಿ ಇರುವೆಗಳು ಇಲ್ಲದ ಕೆಲವು ಜಾಗಗಳೂ ಇವೆ! ಅಂಟಾಕರ್್ಟಿಕಾ ಗ್ರೀನ್ಲ್ಯಾಂಡ್, ಐಸ್ಲ್ಯಾಂಡ್, ಹಾಗೂ ಪಾಲಿನೇಷಿಯಾ, ಹವಾಯ್ ದ್ವೀಪಗಳ ಭಾಗಗಳಲ್ಲಿ ಸ್ವದೇಶಿ ಇರುವೆಗಳಿಲ್ಲ. ಬಿಳಿ ಗೆದ್ದಲು ಹುಳು ಇರುವೆಯಂತಹುದೇ ಆದರೂ ಪಕ್ಕಾ ಇರುವೆಯಲ್ಲ.

ಇರುವೆಗಳು ಬೀದಿ ನಾಯಿಯಂತೆ ಒಂಟಿಯಾಗಿ ವಾಸಿಸಲಾರವು. ಒಂಟಿಯಾಗಿ ಮಲಗಲಾರವು. ಒಂಟಿಯಾಗಿ ತಿನ್ನಲಾರವು. ಅವುಗಳದು ದೊಡ್ಡ ಕುಟುಂಬ. ಒಂದೇ ಗೂಡಿನಲ್ಲಿರುವ ಒಂದು ಕುಟುಂಬದಲ್ಲಿ ಏನಿಲ್ಲವೆಂದರೂ 10,000 ಇರುವೆಗಳು ಇರುತ್ತವೆ! ಸಾಮಾನ್ಯವಾಗಿ ದೊಡ್ಡ ಗೂಡುಗಳಲ್ಲಿ ಲಕ್ಷಾಂತರ ಇರುವೆಗಳಿರುತ್ತವೆ. ಅವುಗಳ ಪೈಕಿ ಒಂದು ದೊಡ್ಡ ತಾಯಿ ಇರುವೆ ಇರುತ್ತದೆ. ಉಳಿದವು ಅಕ್ಕ, ತಂಗಿ, ಅಣ್ಣ, ತಮ್ಮ ಇರುವೆಗಳು! ಇವೆಲ್ಲ ಆಹಾರವನ್ನು ಹಂಚಿಕೊಂಡು ತಿನ್ನುತ್ತವೆ.

`ರಾಣಿ' (ದೊಡ್ಡ ಗಾತ್ರದ ಹೆಣ್ಣು ಇರುವೆ), `ಕೆಲಸಗಾರ' (ಇದೂ ಹೆಣ್ಣು) ಹಾಗೂ ಗಂಡು ಎಂದು ಮೂರು ರೀತಿ ಇರುವೆಗಳಿವೆ. ರಾಣಿ ಇರುವೆ 30 ವರ್ಷದವರೆಗೂ ಬದುಕುತ್ತದೆ! ಕೆಲಸಗಾತರ್ಿ ಇರುವೆಗಳು 1-3 ವರ್ಷ ಬದುಕುತ್ತವೆ. ಆದರೆ ಗಂಡು ಇರುವೆಗಳು ಕೆಲವು ವಾರಗಳು ಮಾತ್ರ ಜೀವಿಸುತ್ತವೆ.

ಆಫ್ರಿಕಾದ `ಡೋರಿಲಸ್' ಜಾತಿಯ ಹೆಣ್ಣು ಇರುವೆ ಜಗತ್ತಿನ ಅತಿ ದಪ್ಪ ಇರುವೆ. ಅದರ ಉದ್ದ ಸುಮಾರು 4 ಸೆಂಟಿ ಮೀಟರ್ಗಳು!

ಅತಿ ಚಿಕ್ಕ ಇರುವೆಗಳನ್ನು ನೀವು ಕಣ್ಣು ಕಿರಿದಾಗಿಸಿ ಹುಡುಕಿದರೂ ನೋಡುವುದು ಕಷ್ಟ. ಕೆಲವು ಜಾತಿ ಚಿಕ್ಕ ಇರುವೆಗಳು ಚಲಿಸದೇ ಒಂದು ಕಡೆ ನಿಂತಿದ್ದರೆ ಗೊತ್ತೇ ಆಗುವುದಿಲ್ಲ. ಇಂತಹ 1 ಲಕ್ಷ ಇರುವೆಗಳ ಒಟ್ಟು ತೂಕ 1 ಗ್ರಾಂ ಸಹ ಆಗುವುದಿಲ್ಲ.

ಆದರೆ ಅವಕ್ಕೆ ಎಷ್ಟು ಬುದ್ಧಿ ಇದೆ ನೋಡಿ. ಅವು ಎಂತಹ ಅದ್ಭುತವಾದ ಗೂಡುಗಳನ್ನು ಕೊರೆಯುತ್ತವೆ ಗೊತ್ತೆ? ಈ ಗೂಡುಗಳಲ್ಲಿ ಬೇರೆ ಬೇರೆ ರೂಮ್ಗಳಿರುತ್ತವೆ! ಬೇರೆಬೇರೆ ಚೇಂಬರ್ಗಳಿರುತ್ತವೆ. ಸಂತಾನೋತ್ಪತ್ತಿ ವಿಭಾಗ, ಆಹಾರ ಶೇಖರಣೆ ವಿಭಾಗ, ಕಸಕಡ್ಡಿ ತುಂಬುವ ವಿಭಾಗ, ತಾಯಿ ಇರುವೆಗಳಿರಲು ಪ್ರತ್ಯೇಕ ಕೋಣೆಗಳು -ಹೀಗೆ. `ಮೇಸರ್ ಆಸಿಕ್ಯುಲೇಟಸ್' ಎನ್ನುವ ಜಾತಿಗೆ ಸೇಋಇದ ಇರುವೆಗಳು 4 ಮೀಟರ್ ಆಳದ ಗೂಡುಗಳನ್ನು ಕೊರೆಯುತ್ತವಂತೆ!

ಪ್ರತಿ ದಿನ ಒಂದು ಸಾಮಾನ್ಯ ಇರುವೆ ಗೂಡಿಗೆ ಬೇಕಾಗುವ ಆಹಾರ ಎಷ್ಟು?

ಇರುವೆಗಳಿಗೆ ಸಿಹಿ ಎಂದರೆ ಬಹಳ ಇಷ್ಟ. ಹೀಗಾಗಿ ಎಲ್ಲೆಲ್ಲಿಂದಲೋ ಕೇಜಿಗಟ್ಟಲೆ ಸಿಹಿ ತಂದು ತುಂಬಿಕೊಳ್ಳುತ್ತವೆ. ಕೀಟಗಳನ್ನೂ ಅವು ಇಷ್ಟಪಟ್ಟು ತಿನ್ನುತ್ತವೆ. ದೊಡ್ಡ ಜಿರಲೆಯನ್ನು ಇರುವೆಗಳು ಕಚ್ಚಿಕೊಂಡು ಹೋಗುವುದನ್ನು ನೋಡಿದ್ದೀರಾ? ಒಂದು ಚಿಕ್ಕ ಗೂಡಿನಲ್ಲಿರುವ ಇರುವೆಗಳು ಪ್ರತಿದಿನವೂ ಸುಮಾರು 2,400 ಕೀಟಗಳನ್ನು ಗೂಡಿಗೆ ತಂದು ತಿನ್ನುತ್ತವೆ!

ಫೈರ್ ಆ್ಯಂಟ್ಸ್ ಅಥವಾ ಕೆಂಪು ಇರುವೆಗಳು ಎಲ್ಲರ ಮೇಲೂ ದಾಳಿ ಮಾಡಿ ಕಚ್ಚಿ ನೋಯಿಸುತ್ತವೆ. ಅವುಗಳಲ್ಲಿ ವಿಷವಿದ್ದರೂ ಅದು ಅತ್ಯಲ್ಪ ಪ್ರಮಾಣವಾದ್ದರಿಂದ ನಮಗೇನೂ ಆಗುವುದಿಲ್ಲ. ಆದರೆ ಲಕ್ಷಾಂತರ ಇರುವೆಗಳು ಯಾರನ್ನಾದರೂ ಕಚ್ಚಿದರೆ ಕಷ್ಟ. ಒಂದು ಬಗೆಯ ಕಿಲ್ಲರ್ ಆ್ಯಂಟ್ಸ್ (ಹಂತಕ ಇರುವೆಗಳು) ಆಫ್ರಿಕಾದ ಕಾಡುಪ್ರದೇಶದಲ್ಲಿವೆ. ಅವು ಕೋಟಿಗಟ್ಟಲೆ ಸಂಖ್ಯೆಯಲ್ಲಿ ಗುಂಪಾಗಿ ದಾಳಿಯಿಡುತ್ತವೆ. ಹಳ್ಳಿಗಳಿಗೆ ನುಗ್ಗಿ ಗೋವುಗಳನ್ನು ಹಾಗೂ ಇತರೆ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತವೆ. ಅವು ಬಂತೆಂದರೆ ಜನರೆಲ್ಲ ಗಾಬರಿಯಿಂದ `ಅಯ್ಯೋ! ಇರುವೆಗಳು ಬಂದವು, ಓಡಿ!' ಎಂದು ಚೀರಿಕೊಂಡು ಓಡುತ್ತಾರೆ!

ಫ್ಯಾಂಟಮ್ - 75 ವರ್ಷ!

ಕಳೆದ 75 ವರ್ಷಗಳಿಂದ ಜಗತ್ತಿನ ಕೋಟ್ಯಂತರ ಮಕ್ಕಳನ್ನು. (ಮತ್ತು ಹಿರಿಯರನ್ನೂ ಸಹ) ರಂಜಿಸುತ್ತಿರುವ ಸೂಪರ್ ಕಾಮಿಕ್ ಹೀರೋ ಎಂದರೆ `ಫ್ಯಾಂಟಮ್'. ಈ ಅದ್ಭುತ ಪಾತ್ರದ ಬಗ್ಗೆ ಒಂದಿಷ್ಟು ಕುತೂಹಲಕಾರಿ ಮಾಹಿತಿ....

ಫ್ಯಾಂಟಮ್ ಅಮೆರಿಕದ ಸಾಹಸಮಯ ಕಾಮಿಕ್ ಪಾತ್ರ. ಅದರ ಸೃಷ್ಟಿಕರ್ತನ ಹೆಸರು ಲೀ ಫಾಕ್. ಫ್ಯಾಂಟಮ್ ಕಾಮಿಕ್ಸ್ಗಳು ಜಗತ್ತಿನಾದ್ಯಂತ ಬಹಳ ಜನಪ್ರಿಯ. ಫ್ಯಾಂಟಮ್ ಸಾಹಸಗಳ ಅನಿಮೇಷನ್ ಟಿವಿ ಧಾರಾವಾಹಿ ಬಂದಿದೆ. ವೀಡಿಯೊ ಗೇಮ್ಗಳು ಜನಪ್ರಿಯವಾಗಿವೆ. ಚಲನಚಿತ್ರವನ್ನೂ ನಿಮರ್ಿಸಲಾಗಿದೆ.

ಫ್ಯಾಂಟಮ್ ಕಾಮಿಕ್ ಪಟ್ಟಿ 1936ರ ಫೆಬ್ರವರಿ 17ರಿಂದ  ದಿನಪತ್ರಿಕೆಗಳಲ್ಲಿ ಬರಲು ಶುರುವಾಯಿತು. 1939ರ ಮೇ ತಿಂಗಳಿನಿಂದ ಭಾನುವಾರದ ಪತ್ರಿಕೆಗಳಲ್ಲಿ ತಪ್ಪದೇ ಪ್ರಕಟವಾಗತೊಡಗಿತು. ಈ ಅಭ್ಯಾಸ ಈಗಲೂ ಮುಂದುವರಿದಿದೆ. ಅಂದಿನಿಂದ ಇಂದಿನವರೆಗೆ ನೂರಾರು ಕೋಟಿ ಜನರು ಫ್ಯಾಂಟಮ್ ಕಥೆಗಳನ್ನು ಓದಿ ಆನಂದಿಸಿದ್ದಾರೆ.

ಫ್ಯಾಂಟಮ್ ಎಂಬ ಪಾತ್ರ ಸೃಷ್ಟಿಸಿ, ಫ್ಯಾಂಟಮನ ಸಾಹಸಮಯ ಕಥೆಗಳನ್ನು ಬರೆದು, ಅದಕ್ಕೆ ಕಾಮಿಕ್ ಚಿತ್ರಗಳನ್ನೂ ಬರೆದು, ಇತರ ಅನೇಕ ಕಲಾವಿದರಿಂದ ಬರೆಸಿ ಪ್ರಚುರ ಮಾಡಿದಾತನ ಹೆಸರು ಲಿಯಾನ್ ಹ್ಯಾರಿಸನ್ ಗ್ರಾಸ್. ಅವನ ಜನಪ್ರಿಯ ಹೆಸರು ಲೀ ಫಾಕ್.

ಆತ ಹುಟ್ಟಿದ್ದು 1911ರಲ್ಲಿ. ಫ್ಯಾಂಟಮ್ಗಿಂತಲೂ ಮೊದಲು ಆತ `ಮಾಂಡ್ರೇಕ್ ದಿ ಮ್ಯಾಜೀಸಿಯನ್' ಎಂಬ ಕಾಮಿಕ್ ಪಾತ್ರ ಸೃಷ್ಟಿಸಿದ್ದ. ಮಾಂಡ್ರೇಕ್ ಯಶಸ್ಸು ಫ್ಯಾಂಟಮ್ ಸೃಷ್ಟಿಗೆ ಕಾರಣವಾಯಿತು. ಈ ಎರಡು ಪಾತ್ರಗಳು ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಪ್ರತಿದಿನವೂ ಏನಿಲ್ಲವೆಂದರೂ 10 ಕೋಟಿ ಓದುಗರನ್ನು ಪಡೆದಿದ್ದವು!! ಲೀ ಫಾಕ್ ಫ್ಯಾಂಟಮ್ ಬಗ್ಗೆ ಕಾದಂಬರಿಯನ್ನೂ ಬರೆದಿದ್ದಾನೆ. ಇತರ ಕೆಲವು ನಾಟಕಗಳನ್ನೂ ಬರೆದಿದ್ದಾನೆ. ರಂಗದ ಮೇಲೆ ನಾಟಕಗಳನ್ನು ನಿದರ್ೇಶಿಸಿದ್ದಾನೆ.

ಲೀ ಫಾಕ್ ಸತ್ತಿದ್ದು 1999ರಲ್ಲಿ. ಅನಂತರ ಟೋನಿ ಡಿಪಾಲ್ ಎಂಬ ಲೇಖಕ ಹಾಗೂ ಪಾಲ್ ರ್ಯಾನ್ ಎಂಬ ಚಿತ್ರಕಲಾವಿದ ಫ್ಯಾಂಟಮ್ ಕಥಾಸರಣಿ ಮುಂದುವರಿಸಿದ್ದಾರೆ.

`ಫ್ಯಾಂಟಮ್' ಎಂದರೆ ಗಾಳಿಯಲ್ಲಿ ತೇಲುವ ಭೂತ ಎಂದರ್ಥ. ಅವನು `ನಡೆದಾಡುವ ಭೂತ' ಎಂದೇ ಪ್ರಸಿದ್ಧ. ಜಗತ್ತನ್ನು ದುಷ್ಟರಿಂದ ರಕ್ಷಿಸುವುದು ಅವನ ಕೆಲಸ. ಹೀಗಾಗಿ ಅವನಿಗೆ ಅನೇಕ ಶತ್ರುಗಳು. ಅವರೊಡನೆ ನಿರಂತರ ಹೋರಾಟ ಮಾಡುತ್ತಲೇ ಇರುವುದು ಫ್ಯಾಂಟಮ್ ಕಥೆಯ ಸಾರ.

`ಬಂಗಾಲಾ' ಎಂಬುದು ಆಪ್ರಿಕಾದ ಒಂದು ಕಾಲ್ಪನಿಕ ದೇಶ. ಕಥೆಗಾಗಿ ಲೀ ಫಾಕ್ ಮಾಡಿಕೊಂಡಿರುವ ಕಲ್ಪನೆ ಅದು. ಮೊದಮೊದಲು ಲೀ ಫಾಕ್ ಆಫ್ರಿಕಾಕ್ಕೆ ಬದಲಾಗಿ ಫ್ಯಾಂಟಮ್ ಏಷ್ಯಾದಲ್ಲಿರುವುದಾಗಿ ಕಥೆ ಬರೆದಿದ್ದ. ಬಂಗಾಲಾ ಭಾರತದ ಬಂಗಾಳಿ ಪ್ರದೇಶವಾಗಿತ್ತು! 1960ರ ದಶಕದಲ್ಲಿ ಈ ಸ್ಥಳವನ್ನು ಆಫ್ರಿಕಾಕ್ಕೆ ಸ್ಥಳಾಂತರಿಸಿದ!

ಅಲ್ಲಿನ ದಟ್ಟವಾದ ಕಾಡೊಂದರ ಮಧ್ಯೆ ಮನುಷ್ಯನ ತಲೆಬುರುಡೆ ಆಕಾರದ ಗುಹೆ. ದೊಡ್ಡ ತಲೆಬುರುಡೆ ಬಾಯಿ ತೆರೆದುಕೊಂಡಿರುತ್ತದೆ. ಅದೇ ಗುಹೆಯ ದ್ವಾರ. ಅದೇ ಫ್ಯಾಂಟಮ್ ಮನೆ. ಅವನು ಕಾಡಿನ ಜನರ ಮಿತ್ರ. ಅವರೆಲ್ಲರೂ ಅವನನ್ನು `ನಡೆದಾಡುವ ಭೂತ' ಎನ್ನುತ್ತಾರೆ. `ಸಾವೇ ಇಲ್ಲದವನು' ಎನ್ನುತ್ತಾರೆ.

ಆದರೆ ಫ್ಯಾಂಟಮ್ ಎಲ್ಲರಂತೆ ಒಬ್ಬ ಮನುಷ್ಯ. ಆದರೆ ಭಾರೀ ಶೂರ, ಚುರುಕು ಬುದ್ಧಿಯವನು, ಧೈರ್ಯಶಾಲಿ. ಇತರ ಕಾಮಿಕ್ ಹೀರೋಗಳಂತೆ (ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್) ಫ್ಯಾಂಟಮನಿಗೆ ವಿಶೆಷ ಅತಿಮಾನುಷ ಶಕ್ತಿಗಳು ಇಲ್ಲ. ಅವನು ದೈಹಿಕ ಶಕ್ತಿ, ಬುದ್ಧಿಬಲದಿಂದಲೇ ಶತ್ರುಗಳನ್ನು ಎದುರಿಸುತ್ತಾನೆ.

ಫ್ಯಾಂಟಮ್ ಎನ್ನುವವನು ಒಬ್ಬನಲ್ಲ. ಅದೊಂದು ಪರಂಪರೆ. ಮೊದಲ ಫ್ಯಾಂಟಮ್ ಹೆಸರು ಕ್ರಿಸ್ಟೋಫರ್ ವಾಕರ್. ಅವನು 1516ರಲ್ಲಿ ಹುಟ್ಟಿದವನು. ಪ್ರತಿ ಫ್ಯಾಂಟಮ್ ಸಾಯುವಾಗಲೂ ಅವನ ಮಗ ಮುಂದಿನ ಫ್ಯಾಂಟಮ್ ಆಗಿ ನಿಯುಕ್ತಬಾಗುತ್ತಾನೆ. ತಲೆಬುರುಡೆ ಹಿಡಿದು ಜಗತ್ತನ್ನು ರಕ್ಷಿಸುವ ಪ್ರಮಾಣವಚನ ತೆಗದುಕೊಳ್ಳುತ್ತಾನೆ.

ಈಗಿನ ಫ್ಯಾಂಟಮ್ (ಇವೆಲ್ಲ ಕೇವಲ ಕಲ್ಪನೆ ಎಂಬುದನ್ನು ಮರೆಯಬೇಡಿ) 21ನೆಯವನು. ಅವನ ಹೆಸರು ಕಿಟ್ ವಾಕರ್. ಅವನನ್ನು ನಿಜರೂಪದಲ್ಲಿ ಕಂಡಿರುವವರು ಕಡಿಮೆ. ಅವನು ಯಾವಾಗಲೂ ಭೂತದಂತೆ ಮುಸುಕು ಧರಿಸಿಯೇ ಹೊರಗೆ ಬರುವುದು!

ಪ್ರತಿ ಫ್ಯಾಂಮ್ನ ಮಗನ ಹೆಸರೂ ಕಿಟ್ ಎಂದೇ ಇರುತ್ತದೆ. ಪ್ರತಿ ಕಿಟ್ ಮುಂದಿನ ಫ್ಯಾಂಟಮ್ ಆಗುತ್ತಾನೆ. ಫ್ಯಾಂಟಮ್ ಬಳಿ ಎರಡು ಉಂಗುರಗಳಿರುತ್ತವೆ. ಒಂದರಲ್ಲಿ ರಕ್ಷಣೆಯ ಗುರುತು ಇರುತ್ತದೆ. ಇನ್ನೊಂದರ ಮೇಲೆ ತಲೆ ಬುರುಡೆ ಗುರುತು ಇರುತ್ತದೆ. ಅವನ ಕೈಲಿ ಏಟು ತಿನ್ನುವ ದುಷ್ಟರ ಮೇಲೆ ಈ ಉಂಗುರುದ ತಲೆಬುರುಡೆ ಗುರುತು ಮೂಡುತ್ತದೆ. ಅಲ್ಲದೇ ಫ್ಯಾಂಟಮ್ ಬಳಿ ಎರಡು .45 ಪಿಸ್ತೂಲುಗಳಿರುತ್ತವೆ. ಅವನ ಬಳಿ ಒಂದು ಬಿಳಿ ಕುದುರೆ `ಹೀರೋ', ಹಾಗೂ `ಡೆವಿಲ್' ಎಂಬ ನಾಯಿ ಇರುತ್ತದೆ. ಅವು ಅವನ ಕೆಲಸಗಳಲ್ಲಿ ಸಹಕರಿಸುತ್ತವೆ. 21ನೇ ಫ್ಯಾಂಟಮನ ಪತ್ನಿ ಡಯಾನಾ ಪಾಮರ್. ಅವರಿಹೆ ಕಿಟ್ ಹಾಗೂ ಹೆಲೋಯಿಸ್ ಎಂಬ ಅವಳಿ ಮಕ್ಕಳು (ಗಂಡು, ಹೆಣ್ಣು).

1996ರಲ್ಲಿ ಫ್ಯಾಂಟಮ್ ಚಲನಚಿತ್ರ ಬಿಡುಗಡೆಯಾಗಿದೆ. `ಫ್ಯಾಂಟಮ್ 2040' ಹಾಗೂ `ಡಿಫೆಂಡರ್ ಆಫ್ ದಿ ಅಥರ್್' ಶೀಷರ್ಿಕೆಯ ಟಿವಿ ಅನಿಮೇಷನ್ ಸರಣಿಗಳಿವೆ. ಅದೇ ಹೆಸರಿನ ವೀಡಿಯೋ ಗೇಮ್ಗಳಿವೆ. ಸ್ವೀಡಿಷ್ ಝೂ ನಲ್ಲಿ `ಫ್ಯಾಂಟಮ್ಲ್ಯಾಂಡ್' ಎಂ ಅಮ್ಯೂಸ್ಮೆಂಟ್ ಪಾಕರ್್ ಇದೆ! ಅಲ್ಲಿ ಬಂಗಾಲಾ ಕಾಡಿನ ಪರಿಸರ ಸೃಷ್ಟಿಸಲಾಗಿದೆ. ಫ್ಯಾಂಟಮ್ ಹಾಗೂ ಅವನ ಕುಟುಂಬದ ವೇಷಧಾರಿಗಳಿದ್ದಾರೆ!!