Wednesday, 4 May 2011

ಜೀವರಕ್ಷಕ ಸೂರ್ಯ

ಕೆಂಪಗೆ ದೊಡ್ಡದಾಗಿ ಕಾಣುವ ಸೂರ್ಯನನ್ನು ನೋಡಿದಾಗ ನಮ್ಮ `ಮೂಡ್' ಉತ್ಸಾಹಭರಿತವಾಗುತ್ತದೆ! ನಮಗೆ ಕಾಣುತ್ತಿರುವ ಹಾಗೆ, ಈ ವಿಶ್ವದಲ್ಲಿ ಸೂರ್ಯನಷ್ಟು ಪಕಾಶಮಾನವಾದ ವಸ್ತು ಇನ್ಯಾವುದೂ ಇಲ್ಲ. ಹೀಗಾಗಿ ಸೂರ್ಯನ ಬಗ್ಗೆ ನಮಗೆ ಬಹಳ ಕುತೂಹಲ.

1. ಸೂರ್ಯ ಒಂದು ನಕ್ಷತ್ರ. ಭೂಮಿಯಲ್ಲಿರುವ ಎಲ್ಲ ಜೀವರಾಶಿಗಳಿಗೆ ಸೂರ್ಯನ ಶಕ್ತಿಯೇ ಆಧಾರ. ಸೂರ್ಯ ನಮಗೆ ಶಾಖ, ಶಕ್ತಿ, ಆರೋಗ್ಯ ನೀಡುತ್ತಾನೆ. ಈ ಭೂಮಿಯಲ್ಲಿ ಜೀವಿಗಳು ಇರುವುದೇ ಸೂರ್ಯನಿಂದ ಜೀವಶಕ್ತಿಯನ್ನು ಪಡೆದುಕೊಂಡು.

2. ವಿವಿಧ ತಾಪಮಾನಗಳು, ಬೇಸಿಗೆ, ಮಳೆ, ಚಳಿಗಾಲಗಳು, ವಿವಿಧ ಬೆಳೆಗಳು, ನಾವು ತಿನ್ನುವ ಅನ್ನ, ಆಹಾರ, ನಿದ್ರೆ - ಎಲ್ಲಕ್ಕೂ ಸೌರಶಕ್ತಿ (ಹಾಗೂ ಭೂಮಿಯ ಪರಿಭ್ರಮಣೆ) ಕಾರಣ. ನೆನಪಿರಲಿ! ನಮ್ಮ ಭೂಮಿ ಸೂರ್ಯನ ಸುತ್ತ ಸುತ್ತುತ್ತಿದೆ! ಸೂರ್ಯ ಇಲ್ಲದಿದ್ದರೆ ಭೂಮಿ ತಣ್ಣಗೆ ಕೊರೆಯುವ ವಸ್ತುವಾಗಿರುತ್ತಿತ್ತು. ಇಲ್ಲಿ ಯಾವುದೇ ಜೀವಿಗಳು ಇರುತ್ತಿರಲಿಲ್ಲ. ಭೂಮಿ `ಸುಂಯ್' ಎಂದು ಬ್ರಹ್ಮಾಂಡದಲ್ಲಿ ಎಲ್ಲೆಲ್ಲೋ ಗಿರಕಿ ಹೊಡೆಯುತ್ತಿತ್ತು!

3. ಸ್ವಯಂ ಪ್ರಭೆ ಇರುವ (ತನಗೆ ತಾನೇ ಬೆಳಗುತ್ತಿರುವ) ಆಕಾಶಕಾಯಗಳೇ ನಕ್ಷತ್ರಗಳು. ಈ ಬ್ರಹ್ಮಾಂಡದಲ್ಲಿ (ಯೂನಿವಸರ್್) ಸೂರ್ಯನಿಗಿಂತಲೂ ದೊಡ್ಡ ಹಾಗೂ ಪ್ರಕಾಶಮಾನವಾದ ನಕ್ಷತ್ರಗಳಿವೆ. ಆದರೆ ಅವು ಬಹಳ ಬಹಳ ದೂರ ಇರುವುದರಿಂದ ಸೂರ್ಯನಷ್ಟು ಪ್ರಕಾಶಮಾನವಾಗಿ ಕಾಣುವುದಿಲ್ಲ. ನಿಮ್ಮ ಪಕ್ಕದಲ್ಲೇ ಇರುವ ಚಿಕ್ಕ ಟಾಚರ್್ಲೈಟ್ ಬಹಳ ದೂರದಲ್ಲಿ ಬರುತ್ತಿರುವ ವಾಹನದ ಹೆಡ್ಲೈಟ್ಗಿಂತಲೂ ಪ್ರಕಾಶಮಾನವಾಗಿ ಇರುವಂತೆ ಕಣುವುದಿಲ್ಲವೆ? ಇದೂ ಹಾಗೇ. ಸೂರ್ಯ ಭೂಮಿಗೆ ಅತ್ಯಂತ ಸಮೀಪ ಇರುವ ನಕ್ಷತ್ರ.

4. ಸೂರ್ಯನೇನೂ ಸಣ್ಣವನಲ್ಲ. ಭೂಮಿಗಿಂತಲೂ 109 ಪಟ್ಟು ದೊಡ್ಡ ಗಾತ್ರ ಅವನದು! ಭೂಮಿಯ ತ್ರಿಜ್ಯ (ರೇಡಿಯಸ್) 6,376 ಕಿ.ಮೀ ಆದರೆ ಸೂರ್ಯನ ತ್ರಿಜ್ಯ 6,96,000 ಕಿ.ಮೀ.

5. ನೀವು ಸೂರ್ಯನನ್ನು ಮುಟ್ಟುವಂತಿಲ್ಲ! ಅವನು ಸುಟ್ಟುಬಿಡುತ್ತಾನೆ. ಸೂರ್ಯ ಭೂಮಿಗೆ ಹತ್ತಿರದಲ್ಲಿದ್ದಾನೆ ನಿಜ. ಆದರೆ ಇಲ್ಲಿನ ಜೀವಿಗಳನ್ನು ಸುಟ್ಟುಹಾಕದಿರುವಷ್ಟು, ಅಂದರೆ ಸುಮಾರು 15 ಕೋಟಿ ಕಿ.ಮೀ. ದೂರದಲ್ಲಿದ್ದಾನೆ! ಎಲ್ಲರೂ ಸೇಫ್!

6. ಸೂರ್ಯನ ಹತ್ತಿರ ಹೊದಂತೆ ಬಿಸಿ ಜಾಸ್ತಿಯಾಗುತ್ತಾ ಹೋಗುತ್ತದೆ. ಸೂರ್ಯನ ಬಳಿಗೆ ನೀವೊಂದು ರಾಕೆಟ್ ಕಳುಹಿಸಿದರೆ ಅದು ಅವನನ್ನು ಮುಟ್ಟುವ ಮೊದಲೇ ಕರಗಿಹೋಗುತ್ತದೆ! ಸೂರ್ಯನ ಶಾಖ ಎಷ್ಟು? ಅವನ ಮೇಲ್ಮೈ ತಾಪಮಾನ 5700 ಡಿಗ್ರಿ ಸೆಲ್ಸಿಯಸ್! ಭೂಮಿಯಲ್ಲಿ ಸುಮಾರು 20-30 ಡಿಗ್ರಿ ಇರುತ್ತದೆ ಅಷ್ಟೆ.

7. ಸೂರ್ಯನ ವಯಸ್ಸೆಷ್ಟು ಊಹಿಸಬಲ್ಲಿರಾ? ಹೆಚ್ಚೇನಿಲ್ಲ, 450 ಕೋಟಿ ವರ್ಷಗಳು!! ಭೂಮಿ ತನ್ನ ಅಕ್ಷದ ಮೇಲೆ 24 ಗಂಟೆಗಳಿಗೆ ಒಂದು ಸುತ್ತು ಸುತ್ತುತ್ತದೆ. ಸೂರ್ಯ ಸುಮಾರು 26 ದಿನಗಳಿಗೊಮ್ಮೆ (ಭೂಮಿಯ ದಿನಗಳು) ಸುತ್ತುತ್ತಾನೆ.

8. ಭೂಮಿ ಘನವಸ್ತು (ಸಾಲಿಡ್) ಎಂಬುದು ನಮಗೆ ಗೊತ್ತು. ಭೂಮಿ ವಿವಿಧ ಪದರಗಳಿಂದ (ಲೇಯರ್ಸ್) ಮಾಡಲ್ಪಟ್ಟಿದೆ. ಆದರೆ ಸೂರ್ಯ ಭೂಮಿಯಂತೆ ಸಾಲಿಡ್ ಅಲ್ಲ. ಸೂರ್ಯನ ಶಾಖ ತಡೆದುಕೊಳ್ಳುವ ಶಕ್ತಿ ನಿಮಗೆ ಇದ್ದರೂ ನೀವು ಸೂರ್ಯನ ಮೇಲೆ ನಿಂತುಕೊಳ್ಳುವುದು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ನೆಲವೇ ಇಲ್ಲ! ವಾಸ್ತವವಾಗಿ ಸೂರ್ಯ ಬಿಸಿ ಗಾಳಿಗಳ ಉಂಡೆ. ಜ್ವಾಲೆಗಳನ್ನು ಉಗುಳುತ್ತಿರುವ ಬೆಂಕಿಯ ಚೆಂಡು!! ಆದರೆ ಅವನಿಗೂ ಪದರಗಳಿವೆ.

9. ಒಂದು ವಿಸ್ಮಯ ಸಂಗತಿ ಗೊತ್ತೆ? ಸೂರ್ಯನ ಮೇಲ್ಮೈ ಬಹಳ ಬಿಸಿ. ಆದರೆ ಅವನ ವಾತವರಣ ಇನ್ನೂ ಬಿಸಿ. ಭೂಮಿಯ ವಾತಾವರಣದಲ್ಲಿ 30 ಡಿಗ್ರಿ ಇದ್ದರೆ ಭೂಮಿಯನ್ನು ಕರೆದುಕೊಂಡು ಒಳಗೆ ಕೇಂದ್ರಭಾಗಕ್ಕೆ ಹೋದರೆ ಅಲ್ಲಿ ಬಹಳ ಬಿಸಿ! ಭುಮಿಯ ಒಳಹೊಕ್ಕಷ್ಟೂ ಬಿಸಿ ಜಾಸ್ತಿ. ಸೂರ್ಯ ಭೂಮಿಗೆ ತದ್ವಿರುದ್ಧ. ಅವನಿಂದ ನೀವು ದೂರಬಂದಷ್ಟೂ ಬಿಸಿ ಜಾಸ್ತಿಯಾಗುತ್ತದೆ. ಸೂರ್ಯನ ವಾತಾವರಣ ಅವನ ಮೇಲ್ಮೈಗಿಂತಲೂ ಶಾಖ. ಅದು ಲಕ್ಷಾಂತರ ಡಿಗ್ರಿ ಶಾಖವನ್ನು ಹೊಂದಿದೆ. ಇದೇಕೆ ಹೀಗೆ? ವಿಜ್ಞಾನಿಗಳಿಗೂ ಸರಿಯಾದ ಕಾರಣ ಗೊತ್ತಿಲ್ಲ!

ಎಚ್ಚರಿಕೆ: ಸೂರ್ಯನ ಬಗ್ಗೆ ಎಷ್ಟೂ ಕುತೂಹಲ ಇದ್ದರೂ ಸೂರ್ಯನತ್ತ ನೇರವಾಗಿ ನೋಡಬೇಡಿ. ಬೈನಾಕ್ಯುಲರ್ಸ್, ಟೆಲಿಸ್ಕೋಪ್ ಹಾಕಿಕೊಂಡಂತೂ ನೋಡಲೇಬೇಡಿ. ಸೂರ್ಯನ ಶಾಖಕ್ಕೆ ನಿಮ್ಮ ಕಣ್ಣು ಸುಟ್ಟುಹೋಗುತ್ತದೆ. ನೀವು ಕುರುಡರಾಗಲೂಬಹುದು.

No comments:

Post a Comment