Tuesday 10 August 2010

ಸಣಕಲು ಕಡ್ಡಿಗಳಲ್ಲೂ ಇದೆ ಬೊಜ್ಜು!

ನೋಡಲು ತೆಳ್ಳಗೆ ಸಣಕಲು ಕಡ್ಡಿ ಹಾಗೆ ಇದ್ದರೆ `ಹೋ ಇವರ ಶರೀರದಲ್ಲಿ ಕೊಬ್ಬಿನಂಶವೇ ಇಲ್ಲ' ಎನ್ನುತ್ತಾರಲ್ಲವೆ? ಅದು ಸುಳ್ಳು!

ಶರೀರದಲ್ಲಿ ಕೊಬ್ಬು ಜಾಸ್ತಿಯಾದರೆ ಏನಾಗುತ್ತದೆ? `ಬೊಜ್ಜು' ಬೆಳೆಯುತ್ತದೆ. ಡುಮ್ಮಗಾಗುತ್ತಾರೆ. ಡೊಳ್ಳು ಹೊಟ್ಟೆ ಬೆಳೆಯುತ್ತದೆ. ತೂಕ ತುಂಬಾ ಹೆಚ್ಚಾಗುತ್ತದೆ. ಹೆಚ್ಚು ತೂಕವಿದ್ದರೆ ಆರೋಗ್ಯ ಹಾಳಾಗುತ್ತದೆ. ಹೃದಯ ರೋಗಗಳು, ಹೆಚ್ಚು ರಕ್ತದೊತ್ತಡ, ಮಧುಮೇಹ ರೋಗ ಬರಬಹುದು. ಜೀವಕ್ಕೂ ಅಪಾಯ.

ಹಾಗಾದರೆ ಸಣ್ಣಗೆ ಇದ್ದರೆ ಈ ರೋಗಗಳು ಬರುವುದಿಲ್ಲವೆ? ಸಣ್ಣಗಿರುವವರಲ್ಲಿ ಕೊಬ್ಬಿನಂಶ ಕಡಿಮೆ. ಹೀಗಾಗಿ ಅವರಿಗೆ ಅಪಾಯವೂ ಕಡಿಮೆ ಎನ್ನುವುದು ಸಾಮಾನ್ಯವಾಗಿ ತಜ್ಞರ ಅಭಿಪ್ರಾಯ (ಆದರೆ ತೀರಾ  ಸಣ್ಣಗಿದ್ದು ಶಕ್ತಿಯೇ ಇಲ್ಲದೆ ದುರ್ಬಲವಾಗಿರಬಾರದು).

ಆದರೆ ಸಣ್ಣಗಿರುವುದು ಎಂದರೇನು? ಸಾಮಾನ್ಯವಾಗಿ ನೋಡಲು ಸಣ್ಣಗೆ ಕಾಣುವವರನ್ನು ನಾವು `ಸಣ್ಣಗಿದ್ದಾರೆ' ಎನ್ನುತ್ತೇವೆ ಅಲ್ಲವೆ? ಅವರು ಸಣ್ಣಗೆ ಕಾಣಲು ಕಾರಣ ಅವರ ಚರ್ಮದ ಕೆಳಗೆ ಕೊಬ್ಬಿನಂಶ ಅಷ್ಟಾಗಿ ಶೇಖರಣೆ ಆಗದಿರುವುದು. ಚರ್ಮದ ಕೆಳಗೆ ಹೆಚ್ಚು ಕೊಬ್ಬು ತುಂಬಿಕೊಂಡಿರುವವರಿಗೆ `ಬೊಜ್ಜು ಇದೆ' ಎನ್ನುತ್ತೇವೆ.

ಸಣ್ಣಗಿರುವವರಲ್ಲಿ ಕೊಬ್ಬು ಕಡಿಮೆ. ಬೊಜ್ಜು ವ್ಯಕ್ತಿಗಳಿಗೆ ಕೊಬ್ಬು ಜಾಸ್ತಿ ಎಂಬುದು ಇದರರ್ಥ. ಈ ಮಾತು ಸರಿಯೋ? ತಪ್ಪೋ?

ತಪ್ಪು! ಈಗ ವಿಜ್ಞಾನಿಗಳು ಹೇಳುತ್ತಿರುವ ಹಾಗೆ ಸಣ್ಣಗೆ ಕಾಣುವವರಲ್ಲಿ ಕೊಬ್ಬು ಕಡಿಮೆ ಶೇಖರಣೆಯಾಗಿದೆ ಎನ್ನಲು ಸಾಧ್ಯವಿಲ್ಲ!

ಏನಪ್ಪ ಇದು ಎನ್ನಬೇಡಿ. ಸಣ್ಣಗೆ ಕಾಣುವವರ ಚರ್ಮದ ಅಡಿಯಲ್ಲಿ ಕೊಬ್ಬು ಶೇಖರಣೆ ಆಗದೇ ಇರಬಹುದು. ಆದರೆ ನಮಗೆ ಕಾಣದ ಹಾಗೆ ಅವರ ಶರೀರದ ತೀರಾ ಒಳಗಡೆ ಕೊಬ್ಬು ಶೇಖರಣೆ ಆಗಿರಬಹುದು. ಅದು ಅವರಿಗೂ ಅಪಾಯ ಉಂಟುಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

`ಎಂಆರ್ಐ ಸ್ಕ್ಯಾನ್' ಎಂಬ ಒಂದು ವಿಧಾನ ಇದೆ. ಅದರ ಮೂಲಕ ಶರೀರದ ಒಳಗಿನ ಚಿತ್ರಗಳನ್ನು ತೆಗೆಯಬಹುದು. ಬ್ರಿಟನ್ನಿನ ಡಾ. ಜಿಮ್ಮಿ ಬೆಲ್ ಮತ್ತು ಅವರ ತಂಡ 1994ರಿಂದ 2007ರವರೆಗೆ ಸುಮಾರು 800 ಜನರನ್ನು ಎಂಆರ್ಐ ಮೆಶಿನ್ ಮೂಲಕ ಸ್ಕ್ಯಾನ್ ಮಾಡಿ ನೋಡಿದಾಗ ತಿಳಿದು ಬಂದಿರುವ ವಿಷಯಗಳು ಆಶ್ಚರ್ಯ ಹಾಗೂ ಗಾಬರಿ ಹುಟ್ಟಿಸುತ್ತವೆ.

ಇಲ್ಲಿ ಕೊಟ್ಟಿರುವ ಮನುಷ್ಯನ ಶರೀರದ ಒಳಗಿನ ಸ್ಕ್ಯಾನ್ ಚಿತ್ರ ನೋಡಿ. 190 ಸೆಂ.ಮೀ. ಎತ್ತರದ (6 ಅಡಿ 4 ಇಂಚು) ಈ ವ್ಯಕ್ತಿಯ ತೂಕ ಕೇವಲ 79 ಕೆ.ಜಿ. ಅಷ್ಟೇ. `ಇಷ್ಟು ಎತ್ತರಕ್ಕೆ ಇಷ್ಟು ತೂಕ ಇದ್ದರೆ ಓಕೆ' ಎನ್ನುತ್ತಾರೆ ಅಲ್ಲವೆ? ಆ ಪ್ರಕಾರ ಈತನ ತೂಕ `ಓಕೆ'. ಆದರೆ ಎಂಆರ್ಐ ಸ್ಕ್ಯಾನ್ ಮಾಡಿರುವ ಚಿತ್ರ ತೋರಿಸುವ ವಿಷಯವೇ ಬೇರೆ. ಈ ಚಿತ್ರದಲ್ಲಿ ಹಳದಿ ಬಣ್ಣ ಇರುವುದೆಲ್ಲ ಶರೀರದ ಒಳಭಾಗದಲ್ಲಿ ಸಂಗ್ರಹವಾಗಿರುವ ಕೊಬ್ಬು. ಚರ್ಮದ ಕೆಳಗಿನ ಕೊಬ್ಬು ಹಸಿರು ಬಣ್ಣದ್ದು. ಅದು ಹೆಚ್ಚಲ್ಲ. ಆದರೆ ಹೃದಯ, ಪಿತ್ತ ಜನಕಾಂಗ ಅಥವಾ ಮೇದೋಜೀರಕದ ಸುತ್ತ ಎಷ್ಟು ಒಳಕೊಬ್ಬು ಸಂಗ್ರಹವಾಗಿದೆ ನೋಡಿದಿರಾ? ಹೊರಗಿನ ಬೊಜ್ಜಿನಷ್ಟೇ ಈ ಕೊಬ್ಬು ಅಪಾಯಕಾರಿ ಎನ್ನುತ್ತಾರೆ ತಜ್ಞರು.

ಸಣ್ಣಗೆ ಕಾಣುವವರು ತಾವು ಚೆನ್ನಾಗಿದ್ದೇವೆ ಎಂದುಕೊಳ್ಳುತ್ತಾರೆ. ಆದರೆ ತಮ್ಮ `ಒಳಗೆ' ಕೊಬ್ಬು ಎಷ್ಟಿದೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ.

ವ್ಯಾಯಾಮ ಮಾಡುವವರಿಗೆ ಹೊರಕೊಬ್ಬೂ ಕಡಿಮೆ, ಒಳಕೊಬ್ಬೂ ಕಡಿಮೆ. ಆದರೆ ವ್ಯಾಯಾಮ ಮಾಡದೇ ಬರೀ ಕಡಿಮೆ ತಿನ್ನುವುದರಿಂದ ಹೊರಕೊಬ್ಬು ಕರಗಿದರೂ ಒಳಕೊಬ್ಬು ಕರಗುವುದಿಲ್ಲ. ಈಚೆಗೆ ಮಕ್ಕಳಲ್ಲೂ ಬೊಜ್ಜು ಜಾಸ್ತಿಯಾಗುತ್ತಿದೆ.

ಆದ್ದರಿಂದ ಕೊಬ್ಬಿನ (ಎಣ್ಣೆ, ತುಪ್ಪ, ಬೆಣ್ಣೆ, ಚೀಸ್) ಆಹಾರ ಕಡಿಮೆ ಮಾಡುವುದಷ್ಟೇ ಅಲ್ಲ, ವ್ಯಾಯಾಮವನ್ನೂ ಮಾಡಬೇಕು. ಮೈದಾನದಲ್ಲಿ ಚೆನ್ನಾಗಿ ಆಟವಾಡಬೇಕು.

Wednesday 4 August 2010

ರಾಷ್ಟ್ರಪತಿ ಭವನಕ್ಕೊಂದು ಭೇಟಿ

ಮೇ 17, 2010.

ಅಂದು ನನ್ನ ಪುಟ್ಟ ಮಗಳು ಅನಿಶಾ ಗೌರಿ ದೆಹಲಿಯ `ರಾಷ್ಟ್ರಪತಿ ಭವನ'ಕ್ಕೆ ಭೇಟಿ ನೀಡಿ ಕುಣಿದಾಡಿದಳು.

ನಿಮಗೆ ಗೊತ್ತೆ? ಜಗತ್ತಿನ ದೊಡ್ಡ `ಅಧಿಕೃತ' ನಿವಾಸ, ಅಂದರೆ ಪ್ರಧಾನ ಮಂತ್ರಿಗಳು - ರಾಷ್ಟ್ರಾಧ್ಯಕ್ಷರುಗಳು ವಾಸಿಸುವ ಸ್ಥಳ, ನಮ್ಮ ಭಾರತದ `ರಾಷ್ಟ್ರಪತಿ ಭವನ'!

`ರಾಷ್ಟ್ರಪತಿ ಭವನ' ಭಾರತದ ರಾಷ್ಟ್ರಾಧ್ಯಕ್ಷರು ವಾಸಿಸುವ ಅಧಿಕೃತ ಮನೆ. ಅದು ನವದೆಹಲಿಯಲ್ಲಿದೆ. ಅದರಲ್ಲೀಗ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದಾರೆ.

1950 ರವರೆಗೂ ಅದನ್ನು `ವೈಸ್ರಾಯ್ ಹೌಸ್' ಎನ್ನಲಾಗುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಭಾರತದಲ್ಲಿರುವ ಬ್ರಿಟಿಷ್ ಗವರ್ನರ್ ಜನರಲ್ಗಳು (ಬ್ರಿಟಿಷ್ ಸಕರ್ಾರದ ಪರವಾಗಿ ಭಾರತದಲ್ಲಿ ಆಡಳಿತ ನಡೆಸುತ್ತಿದ್ದ ಮುಖ್ಯಸ್ಥರು) ವಾಸಿಸಲು ಈ `ವೈಸ್ರಾಯ್ ಹೌಸ್' ಅರಮನೆಯನ್ನು ಬ್ರಿಟಿಷ್ ಸಕರ್ಾರ ಕಟ್ಟಿಸಿತು.

1911ರಲ್ಲಿ ಬ್ರಿಟಿಷ್ ಭಾರತದ ರಾಜಧಾನಿಯನ್ನು ಕೋಲ್ಕತಾದಿಂದ ದೆಹಲಿಗೆ ಬದಲಿಸಲು ನಿರ್ಧರಿಸಲಾಯಿತು. ನವದೆಹಲಿಯ ನೀಲನಕ್ಷೆ ನಿಮರ್ಿಸುವ ಸಮಯದಲ್ಲಿ ಗವರ್ನರ್ ಜನರಲ್ಗಳಿಗೆ ಭವ್ಯವಾದ ನಿವಾಸ ನಿಮರ್ಿಸಿಕೊಡಲು ಯೋಜನೆ ರೂಪಿಸಲಾಯಿತು. ಅದರ ವಿನ್ಯಾಸದ ಹೊಣೆಯನ್ನು ಬ್ರಿಟಿಷ್ ವಾಸ್ತುವಿನ್ಯಾಸಗಾರ ಎಡ್ವಿನ್ ಲಟ್ಯನ್ಸ್ಗೆ ವಹಿಸಲಾಯಿತು.
ಬಹು ಚಚರ್ೆಯ ನಂತರ ಈ ಕಟ್ಟಡದ ವಿನ್ಯಾಸ ಐರೋಪ್ಯ ಕ್ಲಾಸಿಕಲ್ ಮಾದರಿಯಲ್ಲಿರಬೇಕು ಎಂದು ನಿರ್ಧರಿಸಲಾಯಿತು. ಅನಂತರ ಕ್ರಮೇಣ ಅದಕ್ಕೆ ಭಾರತೀಯ, ಮುಘಲ್ ಮತ್ತು ಇತರ ಶೈಲಿಗಳೂ ಒಂದಿಷ್ಟು ಸೇರಿಕೊಂಡವು.


ಕಟ್ಟಡದ ಮಧ್ಯಭಾಗದಲ್ಲಿರುವ ದೊಡ್ಡ ಗುಮ್ಮಟ ಪ್ರಮುಖ ಆಕರ್ಷಣೆ. ಅದನ್ನು ರೋಮ್ನ ಪ್ಯಾಂಥಿಯನ್ನಿಂದ ಸ್ಫೂತರ್ಿ ಪಡೆದು ನಿಮರ್ಿಸಿದ್ದಾಗಿ ಲಟ್ಯನ್ ಹೇಳಿಕೊಂಡಿದ್ದರೂ ಅದರಲ್ಲಿ ಮೌರ್ಯರ ಕಾಲದ ಸಾಂಚಿಯ ಬೌದ್ಧ ಸ್ತೂಪಗಳ ವಿನ್ಯಾಸದ ಪ್ರಭಾವ ಕಾಣುತ್ತದೆ.

1947ರಲ್ಲಿ ಭಾರತ ಸ್ವತಂತ್ರವಾದಾಗ ಕಡೆಯ ತಾತ್ಕಾಲಿಕ ಗವರ್ನರ್ ಜನರಲ್ ಇದರಲ್ಲಿ ವಾಸವಾಗಿದ್ದರು. 1950ರಲ್ಲಿ ಭಾರತ ಗಣರಾಜ್ಯವಾದಾಗ ಈ ಕಟ್ಟಡಕ್ಕೆ `ರಾಷ್ಟ್ರಪತಿ ಭವನ' ಎಂದು ನಾಮಕರಣ ಮಾಡಿ, ಭಾರತದ ರಾಷ್ಟ್ರಪತಿಗಳ ಅಧಿಕೃತ ನಿವಾಸವಾಗಿ ಘೋಷಿಸಲಾಯಿತು.

ರಾಷ್ಟ್ರಪತಿ ಭವನದಲ್ಲಿ 340 ಸಾಲಂಕೃತ ಕೊಠಡಿಗಳಿವೆ. ಕಟ್ಟಡದ ವಿನ್ಯಾಸ ಚೌಕಾಕಾರವಾಗಿದೆ. ಇದರ ವಿಸ್ತೀರ್ಣ ಸುಮಾರು 2,00,000 ಚದರ ಅಡಿ! ಪ್ರಪಂಚದ ಎಲ್ಲ ಅಧ್ಯಕ್ಷರ ಅಧಿಕೃತ ನಿವಾಸಗಳ ಪೈಕಿ ಇದೇ ದೊಡ್ಡದು!

ಇದನ್ನು ಕಟ್ಟಲು 70 ಕೋಟಿ ಇಟ್ಟಿಗೆಗಳು, 30 ಲಕ್ಷ ಘನ ಅಡಿಯಷ್ಟು ಕಲ್ಲುಗಳು ಬಳಸಲ್ಪಟ್ಟಿವೆ. ಉಕ್ಕು, ಕಬ್ಬಿಣ ಹೆಚ್ಚಾಗಿ ಬಳಸದೇ ಇರುವುದು ಇದರ ವಿಶೇಷತೆ.

ವೈಸ್ರಾಯ್ಗೆ (ರಾಷ್ಟ್ರಪತಿಗೆ) ಮತ್ತು ಅತಿಥಿಗಳಿಗೆ ಪ್ರತ್ಯೇಕ ವಿಭಾಗಗಳಿವೆ. ವೈಸ್ರಾಯ್ ವಿಭಾಗ ನಾಲ್ಕು ಅಂತಸ್ತಿನ ಬೃಹತ್ ಅರಮನೆ. ಅದರಲ್ಲಿ ಅನೇಕ ಹಾಲ್ಗಳಿವೆ. ಈ ವಿಭಾಗ ಎಷ್ಟು ದೊಡ್ಡದೆಂದರೆ ದೇಶದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅದರಲ್ಲಿ ವಾಸಿಸಲು ಒಪ್ಪದೇ ಅತಿಥಿ ವಿಭಾಗದಲ್ಲಿ ವಾಸವಾಗಿದ್ದರು! ಇದೇ ಸಂಪ್ರದಾಯವನ್ನು ಮುಂದಿನ ಹಲವು ರಾಷ್ಟ್ರಪತಿಗಳು ಅನುಸರಿಸಿದರು. ಡಾ. ಅಬ್ದುಲ್ ಕಲಾಂ ರಾಷ್ಟ್ರಪತಿ ಭವನಕ್ಕೆ ಆಡಿಯೋ-ವಿಶುಯಲ್ ಸ್ಟೂಡಿಯೋವನ್ನು ಸೇರಿಸಿದರೂ ತಾವು ಮಾತ್ರ ಕೇವಲ ಎರಡು ಕೋಣೆಗಳನ್ನು ಬಳಸುತ್ತಿದ್ದರು!


ರಾಷ್ಟ್ರಪತಿ ಭವನದ ದೊಡ್ಡ ಗುಮ್ಮಟದ ಕೆಳಗೆ ಸರಿಯಾಗಿ `ದಬರ್ಾರ್ ಹಾಲ್' ಇದೆ. ಬ್ರಿಟಿಷ್ ಕಾಲದಲ್ಲಿ ಅದನ್ನು ಸಿಂಹಾಸನ ಹಾಲ್ ಎನ್ನುತ್ತಿದ್ದರು. ಈ ಹಾಲ್ನಲ್ಲಿ 2 ಟನ್ ತೂಕದ ಭಾರಿ ಶಾಂಡಲಿಯರ್ (ತೂಗು-ದೀಪಗುಚ್ಛ) ಇದೆ. 33 ಅಡಿ ಎತ್ತರದಿಂದ ಅದನ್ನು ತೂಗುಹಾಕಲಾಗಿದೆ. ಈ ಹಾಲ್ನ ಎಲ್ಲ ಮೂಲೆಗಳಲ್ಲೂ ಕೋಣೆಗಳಿವೆ. ಎರಡು ಅಧಿಕೃತ ದಿವಾನ ಕೋಣೆಗಳು, ಒಂದು ಅಧಿಕೃತ ಭೋಜನಕೂಟದ ಕೋಣೆ, ಇನ್ನೊಂದು ಅಧಿಕೃತ ಗ್ರಂಥಾಲಯ. ಇನ್ನೂ ಅನೇಕ ಕೋಣೆಗಳಿವೆ. ದೊಡ್ಡ ಭೋಜನಾಲಯವಿದೆ. ಅದರಲ್ಲಿ ಅತಿ ದೊಡ್ಡ ಟೇಬಲ್ ಇದೆ. ಕುಳಿತುಕೊಳ್ಳುವ ಕೊಠಡಿಗಳಿವೆ. ಬಿಲಿಯಡ್ಸರ್್ ಆಟದ ಕೊಠಡಿಯಿದೆ. ನರ್ತನ ಕೋಣೆಯಿದೆ.

`ಅಶೋಕಾ ರೂಮ್' ಎಂಬುದು ಈ ಭವನದ ವೈಭವೋಪೇತ, ಅಧಿಕೃತ, ಮಲಗುವ ಕೋಣೆ. ಅದರಲ್ಲಿ ವೈಸ್ರಾಯ್ಗಳು ಮಲಗಿದ್ದರು. ಆದರೆ ಈವರೆಗೆ ಯಾವ ರಾಷ್ಟ್ರಪತಿಯೂ ಅದನ್ನು ಬಳಸಿಲ್ಲ. ಬದಲಾಗಿ ಅತಿಥಿಗಳ ಬೆಡ್ರೂಮ್ಗಳ ಪೈಕಿ ಯಾವುದಾರೊಂದನ್ನು ಬಳಸುತ್ತ ಬಂದಿದ್ದಾರೆ!

ರಾಷ್ಟ್ರಪತಿ ಭವನದ ಮುಘಲ್ ಶೈಲಿಯ ಗುಲಾಬಿ ಉದ್ಯಾನದಲ್ಲಿ ಅನೇಕ ರೀತಿಯ ಗುಲಾಬಿಗಳಿವೆ. ಅದನ್ನು ಪ್ರತಿ ಫೆಬ್ರವರಿಯಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ತೆರೆಯಲಾಗುವುದು.

`ಫéನಾ' ಹಿಂದಿ ಚಿತ್ರದ `ದೇಶ್ ರಂಗೀಲಾ' ಹಾಡನ್ನು ರಾಷ್ಟ್ರಪತಿ ಭವನದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ.

ಇಷ್ಟೆಲ್ಲ ವಿವರಗಳನ್ನು ನಾನು ಅನಿಶಾಳಿಗೆ ಹೇಳುವುದು ಕಷ್ಟ. ಅವಳಿನ್ನೂ ಚಿಕ್ಕವಳು. ಅವಳಿಗೆ ತಿಳಿಯುವಷ್ಟನ್ನು ಹೇಳಿದ್ದೇನೆ. ದೇಶದ ಪ್ರಮುಖ ವ್ಯಕ್ತಿಗಳನ್ನು ಅವಳು ಗುರುತಿಸುತ್ತಾಳೆ. ಟಿವಿಯಲ್ಲಿ ಹಾಗೂ ಫೋಟೋಗಳಲ್ಲಿ ಮಾತ್ರ `ರಾಷ್ಟ್ರಪತಿ ಭವನ' ಹಾಗೂ `ಪ್ರತಿಭಾ ಪಾಟೀಲ್' ಎಂದು ಗುರುತಿಸುತ್ತಿದ್ದ ಆ ಎಳೆಯ ಮನಸ್ಸು ನಿಜವಾದ ರಾಷ್ಟ್ರಪತಿ ಭವನವನ್ನು ಕಂಡಾಗ ಬಹಳ ಹರುಷಪಟ್ಟಿತು.