Wednesday 8 September 2010

ಗಣೇಶ ಚೌತಿ ಮತ್ತು ಸ್ವಾತಂತ್ರ್ಯ ಹೋರಾಟ


ಗಣೇಶ ಚೌತಿ ಹಿಂದುಗಳ ಪವಿತ್ರ ಹಬ್ಬ. ಶ್ರೀ ವರಸಿದ್ಧಿ ವಿನಾಯಕ ವ್ರತವನ್ನು ಆಚರಿಸುವ ದಿನ. ಭಾದ್ರಪದ ಮಾಸದ ಶುಕ್ಲ ಚತುಥರ್ಿಯು ಶ್ರೀ ಗಣೇಶನ ಜನ್ಮ (ಅವತಾರ) ದಿವಸ ಎನ್ನಲಾಗುತ್ತದೆ. ಹೀಗಾಗಿ ಇದು ಧಾಮರ್ಿಕ ಮಹತ್ವವಿರುವ ವಿಶೇಷ ಪೂಜಾ ಸಂದರ್ಭ.

ಅದೆಲ್ಲ ಗೊತ್ತಿರುವ ವಿಷಯವೇ.

ಆದರೆ, ರಾಷ್ಟ್ರದ ಸ್ವಾತಂತ್ರ್ಯ ಹೋರಾಟದ ಹಿಂದೆಯೂ ಈ ಹಬ್ಬ ಪ್ರಮುಖ ಪಾತ್ರವನ್ನು ಹೊಂದಿತ್ತು ಎಂಬ ವಿಷಯ ನಿಮಗೆ ಗೊತ್ತೆ?

1893ಕ್ಕೂ ಹಿಂದೆ ಗಣೇಶ ಚೌತಿಯನ್ನು ಮನೆಗಳಲ್ಲಿ ಆಚರಿಸುತ್ತಿದ್ದರು. ಶ್ರೀ ವರಸಿದ್ಧಿ ವಿನಾಯಕನ ವ್ರತ-ಪೂಜೆಗಳನ್ನು ನಡೆಸುತ್ತಿದ್ದರು. ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಜರುಗುತ್ತಿದ್ದವು. ಆದರೆ ಸಾರ್ವಜನಿಕವಾಗಿ ಗಣೇಶನನ್ನು ಕೂರಿಸಿ, ಸಾವಿರಾರು ಜನರು ಒಟ್ಟಿಗೇ ಸೇರಿ 10 ದಿನಗಳ ಕಾಲ ಪೂಜಿಸಿ, ನಂತರ ಲಕ್ಷಾಂತರ ಜನರು ಒಟ್ಟಾಗಿ ಗಣೇಶನ ಮೂತರ್ಿಗಳನ್ನು ಹಳ್ಳ, ನದಿ, ಸಮುದ್ರಗಳಲ್ಲಿ ವಿಸಜರ್ಿಸುವ ಕಾರ್ಯಕ್ರಮಗಳು ಇರಲಿಲ್ಲ. ಅದೆಲ್ಲ ಆರಂಭವಾಗಿದ್ದು 1893ರಲ್ಲಿ.

1893ರಲ್ಲಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಲೋಕಮಾನ್ಯ ಬಾಲ ಗಂಗಾಧರ ತಿಲಕರು ಗಣೇಶ ಚತುಥರ್ಿಯ ಆಚರಣೆಗೆ ಒಂದು ಹೊಸ ರೂಪವನ್ನು ಕೊಟ್ಟರು. ಈ ಹಬ್ಬವನ್ನು ಸುಸಂಘಟಿತವಾದ ಸಾರ್ವಜನಿಕ ಕಾರ್ಯಕ್ರಮವನ್ನಾಗಿ ಪರಿವತರ್ಿಸಿದರು. ಮನೆಗಳ ಒಳಗಿನ ಹಬ್ಬವನ್ನು ರಾಷ್ಟ್ರೀಯ ಮಹೋತ್ಸವವನ್ನಾಗಿಸಿದರು.


ಅಲ್ಲಿಂದ ಮುಂದಕ್ಕೆ ಪ್ರತಿವರ್ಷ ಇದೇ ಕ್ರಮ ಮುಂದುವರಿಯಿತು. `ದೇವರು ಸರ್ವರಿಗೂ ಸೇರಿದವನು' ಎಂಬ ತಿಲಕರ ಕರೆಗೆ ಓಗೊಟ್ಟು ಎಲ್ಲ ಜಾತಿ, ಪಂಥಗಳ ಜನರೂ ಒಂದಾದರು. ಒಟ್ಟಿಗೇ ಸೇರಿದರು. ಪೂಜೆ ಮಾಡಿದರು. ದೇಶಕ್ಕೆ ಒದಗಿಬಂದಿರುವ ದಾಸ್ಯವನ್ನು ತೊಲಗಿಸಲು ಸಂಕಲ್ಪ ಮಾಡತೊಡಗಿದರು. ತಮ್ಮ ತಮ್ಮ ಊರು, ಪ್ರದೇಶಗಳಿಗೂ ಮೀರಿದ ರಾಷ್ಟ್ರೀಯ ದೃಷ್ಟಿಯನ್ನು ಸಾಮಾನ್ಯ ಜನರೂ ಪಡೆಯತೊಡಗಿದರು.

ಭಾರತೀಯ ಜನರು ಒಂದೆಡೆ ಸೇರುವುದನ್ನು ತಡೆಯಲು ಬ್ರಿಟಿಷ್ ಸಕರ್ಾರ ಯತ್ನಿಸುತ್ತಿದ್ದ ಕಾಲ ಅದು. ಆ ಸಮಯದಲ್ಲಿ ಊರೂರುಗಳಿಗೂ ಸಾರ್ವಜನಿಕ ಗಣೇಶೋತ್ಸವ ಪ್ರವೇಶಿಸಿತು. ಹಬ್ಬದ ಸಮಯದಲ್ಲಿ ಸಾರ್ವಜನಿಕವಾಗಿ ಸಂಗೀತ, ನೃತ್ಯ, ನಾಟಕ, ಕವಿಗೋಷ್ಠಿ, ಕಥಾಶ್ರವಣ, ಭಾಷಣ - ಹೀಗೆ ಹಲವಾರು ಕಾರ್ಯಕ್ರಮಗಳು ನಡೆಯುವಂತೆ ತಿಲಕರು ಪ್ರೋತ್ಸಾಹಿಸಿದರು. ವಿವಿಧ ಭಾಷೆ ಹಾಗೂ ಪ್ರಾಂತ್ಯಗಳ, ಆದರೆ ಒಂದೇ ದೇಶದ, ಮಕ್ಕಳನ್ನು ಒಂದಾಗಿ ಬೆಸೆಯಿತು ಗಣೇಶ ಚೌತಿ!

ಹೀಗೆ ಭಾರತದ ಸಾಂಸ್ಕೃತಿಕ ಪುನರುಜ್ಜೀವನದ ಮೂಲಕ ತಿಲಕರು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಗೆ ಕಷ್ಟಕರವಾದ ಪರಿಸ್ಥಿತಿಯನ್ನು ನಿಮರ್ಿಸಿದರು. ಭಾರತೀಯರ ಸಂಸ್ಕೃತಿಯನ್ನು ನಾಶ ಮಾಡಲು ಸಾಧ್ಯವಾದದೇ ಇದ್ದೂದೂ ಬ್ರಿಟಷರ ನಿರ್ಗಮನಕ್ಕೆ ಒಂದು ಕಾರಣ.

ಜನರು ಮಾನಸಿಕವಾಗಿ ಬ್ರಿಟಿಷರೊಡನೆ ಒಂದಾಗದೇ ಇದ್ದುದು, ಅವರ ಮೇಲ್ಮೆಯನ್ನು ಸ್ವೀಕರಿಸದೇ ಇದ್ದುದು, ಅವರ ಆಳ್ವಿಕೆಗೆ ದೊಡ್ಡ ಪೆಟ್ಟು ಕೊಟ್ಟಿತು. ಹೀಗೆ ಸ್ವಾತಂತ್ರ್ಯ ಹೋರಾಟಕ್ಕೆ ಗಣೇಶ ಚತುಥರ್ಿ ಬಹಳ ಸಹಕಾರಿಯಾಯಿತು.

ವಿಶ್ವದ ದೊಡ್ಡ ಸಸ್ತನಿಗಳು


1) ಭೂಮಿಯ ದೈತ್ಯ, ನೀಲಿ ತಿಮಿಂಗಿಲ

ಭೂಮಿಯ ಅತಿ ದೊಡ್ಡ ಪ್ರಾಣಿ ಸಮುದ್ರದಲ್ಲಿದೆ. ಅದೇ ನೀಲಿ ತಿಮಿಂಗಿಲ. ಅದು 33 ಮೀಟರ್ (110 ಅಡಿ) ಉದ್ದ 181 ಮೆಟ್ರಿಕ್ ಟನ್ (1,80,000 ಕೆ.ಜಿ.!) ತೂಕವಿರುವ ಬೃಹತ್ ಸಸ್ತನಿ. ಅಂದರೆ 8-10 ಅಂತಸ್ತಿನ ಭಾರಿ ಕಟ್ಟಡದಷ್ಟು ಗಾತ್ರ!
ನೀಲಿ ತಿಮಿಂಗಿಲದ ತಲೆ ಎಷ್ಟು ದೊಡ್ಡದೆಂದರೆ ಅದರ ನಾಲಿಗೆಯ ಮೇಲೆ 50 ಜನರು ನಿಂತುಕೊಳ್ಳಬಹುದು! ಅದರ ಹೃದಯ ಒಂದು ಚಿಕ್ಕ ಕಾರ್ನಷ್ಟು ಗಾತ್ರವಿರುತ್ತದೆ. ನೀಲಿ ತಿಮಿಂಗಿಲದ ಮರಿಯೇ ಒಂದು ದೊಡ್ಡ ಆನೆಯಷ್ಟು ತೂಕವಿದ್ದು 25 ಅಡಿ ಉದ್ದವಿರುತ್ತದೆ. ಅದು ತಾನು ಹುಟ್ಟಿದ ಪ್ರಥಮ 7 ತಿಂಗಳಲ್ಲಿ ಪ್ರತಿದಿನವೂ 400 ಲೀಟರ್ ಹಾಲು ಕುಡಿಯುತ್ತದೆ! ಈ ಜೀವಿ 50-80 ವರ್ಷ ಬದುಕಬಲ್ಲುದು. ಆದರೆ ಕ್ರೂರಿ ಮನುಷ್ಯನ ಬೇಟೆಯಿಂದಾಗಿ ನೀಲಿ ತಿಮಿಂಗಿಲದ ಸಂತತಿ ಕಡಿಮೆಯಾಗಿ ಈಗ ಬರೀ 10,000ಕ್ಕೆ ಇಳಿದಿದೆ.

2) ಬೃಹತ್ ಕಾಯದ ಬೃಹತ್ಕಾಯೋಸಾರಸ್

ನೀಲಿ ತಿಮಿಂಗಿಲ ಈಗ ಬದುಕಿರುವ ಎಲ್ಲ ಪ್ರಾಣಿಗಿಂತಲೂ ಬೃಹತ್ ಕಾಯದ ಪ್ರಾಣಿ. ಈ ಭೂಮಿಯ ಇತಿಹಾಸದಲ್ಲೂ ಅದೇ ಬೃಹತ್ ಪ್ರಾಣಿ ಎನ್ನಲಾಗುತ್ತದೆ. ಈಗ ತಿಳಿದಿರುವ ಅನೇಕ ಜಾತಿಯ ಡೈನೋಸಾರ್ಗಳೂ ನೀಲಿ ತಿಮಿಂಗಿಲಕ್ಕಿಂತ ಚಿಕ್ಕ ಗಾತ್ರದವು.
ಆದರೆ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯಲ್ಲಿ ಬೃಹತ್ ಡೈನೋಸಾರ್ನ ಫನೀಕೃತತ ಪಳೆಯುಳಿಕೆ (ಫಾಸಿಲ್) ಸಿಕ್ಕಿದ್ದು ಈ ಜಾತಿಯ ಡೈನೋಸಾರ್ಗಳಿಗೆ `ಬೃಹತ್ ಕಾಯೋಸಾರಸ್' ಎನ್ನಲಾಗಿದೆ.
ಅದರ ಬಗ್ಗೆ ಖಚಿತ ಸಂಶೋಧನೆ ಇನ್ನೂ ಬಾಕಿಯಿದೆ. ಅದೇ ವಿಶ್ವದ ಅತಿ ಬೃಹತ್ ಪ್ರಾಣಿ ಎಂದೂ ಕೆಲವರು ಹೇಳುತ್ತಾರೆ. ಅದು ಸಾಮಾನ್ಯವಾಗಿ ಸುಮಾರು 40 ಮೀಟರ್ (130 ಅಡಿ) ಉದ್ದವಿದ್ದು 14 ಮೀಟರ್ (46 ಅಡಿ) ಎತ್ತರವಿತ್ತು ಎನ್ನಲಾಗಿದೆ. ಅದು 220 ಟನ್ ತೂಕವಿರುತ್ತಿತ್ತು ಎಂದು ಕೆಲವು ತಜ್ಞರ ಅನಿಸಿಕೆ. ಈ ಕುರಿತು ಹೆಚ್ಚಿನ ಅಧ್ಯಯನ ಇನ್ನೂ ನಡೆಯಬೇಕಿದೆ.


3) ದೊಡ್ಡ ಪ್ರಾಣಿ ಆಫ್ರಿಕಾ ಆನೆ



ನೆಲದ ಮೇಲೆ ನಡೆಯುವ ಪ್ರಾಣಿಗಳ ಪೈಕಿ ದೊಡ್ಡ ಪ್ರಾಣಿ ಎಂದರೆ ಆನೆ. ಅದರಲ್ಲೂ ಆಫ್ರಿಕಾದ `ಸವಾನಾ' ಆನೆ ಜಗತ್ತಿನ ಇತರ ಎಲ್ಲ ಪ್ರದೇಶಗಳ ಆನೆಗಳ ಪೈಕಿ ಅತಿ ದೊಡ್ಡದು. ಚೆನ್ನಾಗಿ ಬೆಳೆದ ಸವಾನಾ ಗಂಡು ಆನೆ 7500 ಕೆ.ಜಿ. ತೂಕವಿರುತ್ತದೆ. ಅಂದರೆ 75 ಕೆ.ಜಿ. ತೂಕವಿರುವ 100 ಜನರ ಒಟ್ಟು ತೂಕಕ್ಕೆ ಸಮ! ಆನೆಗಳು ದಿನಕ್ಕೆ 300 ಕೆಜಿಯಷ್ಟು ಆಹಾರ (ಎಲೆ, ಹಣ್ಣು ಇತ್ಯಾದಿ) ಸೇವಿಸುತ್ತವೆ.

4) ಎತ್ತರದ ಪ್ರಾಣಿ - ಜಿರಾಫೆ!!

ಜಗತ್ತಿನ ಅತಿ ಎತ್ತರದ ಸಸ್ತನಿ (ಮ್ಯಾಮಲ್) ಎಂದರೆ ಜಿರಾಫೆ (`ಜಿ-ರಾಫ್' ಶಬ್ದ ಕನ್ನಡದಲ್ಲಿ `ಜಿರಾಫೆ' ಆಗಿದೆ).
ಗಂಡು ಜಿರಾಫೆ ಸುಮಾರು 5.5 ಮೀಟರ್ ಎತ್ತರ ಬೆಳೆಯುತ್ತದೆ. ಅಂದರೆ ಮೂರು ನಾಲ್ಕು ಜನರು ಒಬ್ಬರ ಮೇಲೊಬ್ಬರು ನಿಂತುಕೊಂಡರೆ ಆಗುವ ಎತ್ತರದಷ್ಟು! ಆಫ್ರಿಕಾದ ಸಹಾರಾ ಮರುಭೂಮಿಯ ದಕ್ಷಿಣಕ್ಕೆ ಜಿರಾಫೆಗಳು ವಾಸಿಸುತ್ತವೆ.

5) ಕ್ಯಾಪಿಬಾರಾ -ಹಂದಿಗಾತ್ರದ ಹೆಗ್ಗಣ!

ಮೂಷಿಕಗಳ (ಇಲಿ-ಹೆಗ್ಗಣ) ಪೈಕಿ `ಕ್ಯಾಪಿಬಾರಾ' ಅತಿ ದೊಡ್ಡದು. ಇದು 1.3 ಮೀಟರ್ ಉದ್ದವಿರುವ ಭಾರಿ ಹೆಗ್ಗಣ! ದಕ್ಷಿಣ ಅಮೆರಿಕದ ಹಳ್ಳ-ಕೊಳ್ಳ, ಸರೋವರ ಹಾಗೂ ನದಿಗಳ ಸುತ್ತಮುತ್ತ ವಾಸಿಸುತ್ತದೆ.

ಭೂಮಿಯನ್ನೇ ಸುಡಬಲ್ಲ ಪರಮಾಣು ಬಾಂಬ್

 
ಪರಮಾಣು ಬಾಂಬ್ (ನ್ಯೂಕ್ಲಿಯರ್ ಬಾಂಬ್) ಪರಮಾಣು ವಿದಳನ ಹಾಗೂ ಸಂಶ್ಲೇಷಣಾ ಕ್ರಿಯೆ ಮೂಲಕ ವಿಧ್ವಂಸ ಮಾಡುವ ಮಾರಕ ಅಸ್ತ್ರ. ಅದು ಸಮೂಹ ನಾಶಕ ಅಸ್ತ್ರದ ಗುಂಪಿಗೆ ಸೇರಿದೆ.

ಸಾಮಾನ್ಯವಾಗಿ ಬಳಸುವ ಭಾರಿ ಸಾಂಪ್ರದಾಯಿಕ ಬಾಂಬ್ಗಳಿಗಿಂತಲೂ ಒಂದು ಚಿಕ ಪರಮಾಣು ಬಾಂಬ್ ಹೆಚ್ಚು ನಾಶ ಮಾಡುವ ಶಕ್ತಿ ಹೊಂದಿದೆ. ಒಂದೇ ಪರಮಾಣು ಬಾಂಬ್ ಮೂಲಕ ಒಂದು ಇಡೀ ನಗರವನ್ನೇ ಧ್ವಂಸ ಮಾಡಬಹುದು!

ಇತಿಹಾಸದಲ್ಲಿ ಈವರೆಗೆ ಎರಡು ಬಾರಿ ಮಾತ್ರ ಪರಮಾಣು ಬಾಂಬ್ಗಳನ್ನು ಬಳಸಲಾಗಿದೆ. ಎರಡನೇ ಜಾಗತಿಕ ಸಮರದ ವೇಳೆ 1945ರಲ್ಲಿ ಅಮೆರಿಕ ಜಪಾನ್ ದೇಶದ ಹಿರೋಶಿಮಾ ಹಾಗೂ ನಾಗಾಸಕಿ ಪಟ್ಟಣಗಳ ಮೇಲೆ ಪರಮಾಣು ಬಾಂಬ್ಗಳನ್ನು ಪ್ರಯೋಗಿಸಿತ್ತು. ಅದರಿಂದಾಗಿ ಸತ್ತವರು ಲಕ್ಷಾಂತರ ಮಂದಿ. ಅಂಗವಿಕಲರಾದವರು ಅಸಂಖ್ಯಾತ. ಪರಮಾಣು ವಿಕಿರಣದಿಂದ ಆ ಇಡೀ ಪ್ರದೇಶ ರೋಗರುಜಿನಗಳ ತವರಾಗಿ ಜನರು ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಯಿತು.

ಅದಾದ ನಂತರ ಈವರೆಗೆ ಸುಮಾರು 2000 ಬಾರಿ `ಪರೀಕ್ಷೆಗಾಗಿ' ಪರಮಾಣು ಬಾಂಬ್ಗಳನ್ನು ಅನೇಕ ದೇಶಗಳು ಸ್ಫೋಟಿಸಿವೆ. ಅಮೆರಿಕ, ಸೋವಿಯತ್ ಒಕ್ಕೂಟ, ಬ್ರಿಟನ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ ಹಾಗೂ ಉತ್ತರ ಕೊರಿಯಾ ಈವರೆಗೆ ಪರಮಾಣು ಸ್ಫೋಟ ಪರೀಕ್ಷೆ ನಡೆಸಿರುವ ದೇಶಗಳು. ಇತರ ಕೆಲವು ದೇಶಗಳ ಬಳಿ ಪರಮಾಣು ಬಾಂಬ್ ಇದ್ದರೂ ಈ ವಿಷಯವನ್ನು ಅವು ರಹಸ್ಯವಾಗಿ ಇಟ್ಟಿವೆ.

Tuesday 7 September 2010

ಕೋಲಾ ಪ್ರಿಸರ್ವೇಟಿವ್ ಸಹ ವಿಷ!


ಕೋಕ ಕೋಲಾ, ಪೆಪ್ಸಿ ಮ್ಯಾಕ್ಸ್, ಡಯಟ್ ಪೆಪ್ಸಿ, ಫಾಂಟಾ - ಇವುಗಳನ್ನು ಮಕ್ಕಳು ಕುಡಿಯಬಾರದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಕೋಲಾಗಳು ವಿಷಕಾರಿ ಪರಿಣಾಮ ಬೀರುತ್ತವೆ ಎನ್ನುವುದು ಅವರ ಆತಂಕ.

ವಿಜ್ಞಾನಿಗಳ ಪ್ರಕಾರ, `ಸಾಫ್ಟ್ ಡ್ರಿಂಕ್ಸ್'ಗಳು ಜೀವಕೋಶಗಳಿಗೆ (ಸೆಲ್ಸ್) ಹಾನಿ ಮಾಡುತ್ತವೆ. ಅವು ಬರೀ ಮಕ್ಕಳಿಗಷ್ಟೇ ಅಲ್ಲ, ಎಲ್ಲರಿಗೂ ಅಪಾಯಕಾರಿ. ಅವುಗಳಿಂದ ಪಿತ್ತಕೋಶದ (ಲಿವರ್) ಕಾಯಿಲೆ ಮತ್ತು ಪಾರ್ಕಿನ್ಸನ್  ಕಾಯಿಲೆ ಸಹ ಬರಬಹುದು ಎನ್ನಲಾಗಿದೆ.

ಕೋಲಾಗಳಲ್ಲಿರುವ ಕಾರ್ಬನ್, ಕೀಟನಾಶಕ ವಿಷಗಳು (ಪೆಸ್ಟಿಸೈಡ್ಸ್), ಅತಿಯಾದ ಸಕ್ಕರೆಯ ಅಂಶ ಅನಾರೋಗ್ಯಕಾರಿ. ಆದರೆ ಕೋಲಾಗಳು ಕೆಡದಂತೆ ಬಳಸುವ `ಪ್ರಿಸರ್ವೇಟಿವ್ ' ಆದ ಸೋಡಿಯಂ ಬೆಂಜೋನೇಟ್ ರಾಸಾಯನಿಕ ಇನ್ನೂ ದೊಡ್ಡ ಅಪರಾಧಿ. 

ಮಾಲಿಕ್ಯುಲರ್ ಬಯೋಲಜಿ ತಜ್ಞರು ಸೋಡಿಯಂ ಬೆಂಜೋನೈಟ್ ಅನ್ನು ತಮ್ಮ ಪ್ರಯೋಗಾಲಯದಲ್ಲಿ ಜೀವಂತ ಯೀಸ್ಟ್ ಜೀವಕೋಶಗಳ ಮೇಲೆ ಪ್ರಯೋಗಿಸಿ ನೋಡಿದಾಗ ಗಾಬರಿ ಹುಟ್ಟಿಸುವ ಸಂಗತಿ ಬಯಲಾಯಿತು. ಜೀವಕೋಶಗಳ ಮುಖ್ಯವಾದ ಭಾಗವಾದ ಮೈಟೋಕಾಂಡ್ರಿಯಾದ ಡಿಎನ್ಎ ಸ್ವರೂಪವನ್ನೇ ಈ ರಾಸಾಯನಿಕ ಮಾರ್ಪಡಿಸಿಬಿಡುತ್ತದೆ ಎಂಬ ಅಂಶ ತಿಳಿದುಬಂತು. ಮೈಟೋಕಾಂಡ್ರಿಯಾದ ಡಿಎನ್ಎಯನ್ನು ಈ ರಾಸಾಯನಿಕ ಎಷ್ಟು ಬದಲಿಸುತ್ತದೆ ಎಂದರೆ, ಡಿಎನ್ಎಯನ್ನೇ ಅದು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿಬಿಡುತ್ತದೆ. ಸಂಪೂರ್ಣ ಹಾಳು ಮಾಡಿಬಿಡುತ್ತದೆ.

ಮೈಟೋಕಾಂಡ್ರಿಯಾ ಎಂದರೇನು? ಅದು ಆಮ್ಲಜನಕವನ್ನು (ಆಕ್ಸಿಜನ್) ಹೀರುವ ಜೀವಕೋಶದ ಭಾಗ. ಅದರಿಂದಲೇ ಶರೀರಕ್ಕೆ ಶಕ್ತಿ ಬರುವುದು. ಅದೇ ಹಾಳಾದರೆ ಏನು ಗತಿ?

`ಅದರಿಂದ ಪಾರ್ಕಿನ್ಸನ್ ಹಾಗೂ ಇತರ ನರರೋಗಗಳು ಬರಬಹುದು. ಬೇಗ ವೃದ್ಧಾಪ್ಯ ಆವರಿಸಬಹುದು' ಎನ್ನುತ್ತಾರೆ ತಜ್ಞರು.

Monday 6 September 2010

ಪೆನ್ಸಿಲ್ ಪುರಾಣ


ಪೆನ್ಸಿಲ್ ಬಗ್ಗೆ ನಿಮಗೆಷ್ಟು ಗೊತ್ತು? ಒಂದಿಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ!

ಅಂದಹಾಗೆ, `ಪೆನ್ಸಿಲ್' ಪದದ ಮೂಲ ಗೊತ್ತೆ? ಅದರ ಮೂಲ ಲ್ಯಾಟಿನ್ ಭಾಷೆಯ `ಪೆನಿಸಿಲಸ್'. ಹಾಗೆಂದರೆ `ಚಿಕ್ಕ ಬಾಲ' ಎಂದರ್ಥ!!

1564ರಲ್ಲಿ ಇಂಗ್ಲೆಂಡಿನಲ್ಲಿ ಗ್ರಾಫೈಟ್ ಪತ್ತೆಯಾಯಿತು. 1565ನಲ್ಲಿ ಪೆನ್ಸಿಲ್ ರೂಪಿಸಲಾಯಿತು. 1662ರಲ್ಲಿ ಜರ್ಮನಿಯ ಫ್ಯಾಕ್ಟರಿಯಲ್ಲಿ ಪೆನ್ಸಿಲ್ ಉತ್ಪಾದನೆ ಆರಂಭವಾಯಿತು. 1795ರಲ್ಲಿ ನಿಕೋಲಸ್ ಜಾಕ್ ಕಾಂಟೆ ಜೇಡಿಮಣ್ಣು ಹಾಗೂ ಗ್ರಾಫೈಟ್ ಮಿಶ್ರಮಾಡಿದ ಪೆನ್ಸಿಲ್ ತಯಾರಿಕೆಯ ಪೇಟೆಂಟ್ ಪಡೆದ.

ಹಿಂದೆ ಬರೆಯಲು ಲೆಡ್ (ಸೀಸ) ಕಡ್ಡಿ ಬಳಸುತ್ತಿದ್ದರು. ಪೆನ್ಸಿಲ್ ತುದಿಯನ್ನು ನಾವು ಈಗಲೂ `ಲೆಡ್' ಎನ್ನುತ್ತೇವಾದರೂ ಅದು ಲೆಡ್ ಅಲ್ಲ, ಗ್ರಾಫೈಟ್. ಹೀಗಾಗಿ ಪೆನ್ಸಿಲ್ ಚುಚ್ಚಿಕೊಂಡು ಗಾಯವಾದರೂ ಸೀಸದ ವಿಷ ಸೋಂಕುವ ಭಯವಿಲ್ಲ.

1828ರಲ್ಲಿ ಪೆನ್ಸಿಲ್ ಶಾರ್ಪನರ್ ರೂಪಿಸಿದವನ ಹೆಸರು ಬರ್ನಾಡ ಲಾಸಸಿಮೋನ್. 1847ರಲ್ಲಿ ಥೆರಿ ಡಿಸ್ ಎಸ್ಟ್ವಾಕ್ಸ್ ಉತ್ತಮ  ಶಾರ್ಪನರ್ ಗಳನ್ನು ಅಭಿವೃದ್ಧಿಪಡಿಸಿದ. ಇವರಿಬ್ಬರೂ ಪ್ರಾನ್ಸ್ ನವರು. ಅದೇ ದೇಶದ ಸಂಶೋಧಕರು ಪೆನ್ಸಿಲ್ ಗುರುತು ಅಳಿಸುವ `ರಬ್ಬರ್' ರೂಪಿಸಿದರು.

ಆರಂಭದಲ್ಲಿ ಪೆನ್ಸಿಲ್ಲಿಗೆ ಬಣ್ಣ ಹಾಕುತ್ತಿರಲಿಲ್ಲ. ಕಾರಣ ಅದರಲ್ಲಿ ಬಳಕೆಯಾಗಿರುವ ಉತ್ತಮ ಗುಣಮಟ್ಟದ ಮರದ ಕವಚದ ಪ್ರದರ್ಶನ! ಆದರೆ 1890ರ ಹೊತ್ತಿಗೆ ಪೆನ್ಸಿಲ್ ಗಳ ಮೇಲೆ ಬಣ್ಣದ ವಿನ್ಯಾಸ ಮಾಡಿ ಬ್ರಾಂಡ್ ನೇಮ್ ಬಳಸುವ ರೂಢಿಯನ್ನು ತಯಾರಿಕಾ ಕಂಪೆನಿಗಳು ಆರಂಭಿಸಿದವು.

18ನೇ ಶತಮಾನದಲ್ಲಿ ಉತ್ತಮ ಗ್ರಾಫೈಟ್ ಚೀನಾದಿಂದ ಸರಬರಾಜಾಗುತ್ತಿತ್ತು. ತಮ್ಮ ಪೆನ್ಸಿಲ್ ನಲ್ಲಿ ಚೀನಾ ಗಾಫೈಟ್ ಇದೆ ಎಂದು ಹೇಳಿಕೊಳ್ಳಲು ಕೆಲವು ಕಂಪೆನಿಗಳು ಪೆನ್ಸಿಲ್ ಮೇಲೆ ಹಳದಿ ಗೆರೆ ಹಾಕುತ್ತಿದ್ದವು (ಚೀನಾದಲ್ಲಿ ಹಳದಿ ವರ್ಣಕ್ಕೆ ವಿಶೇಷ ಗೌರವ ಇತ್ತು). ಈಗಲೂ ಬಹುತೇಕ ಪೆನ್ಸಿಲ್ ಗಳ ಮೇಲೆ ಹಳದಿ ಗೆರೆಗಳಿವೆ!!

ಪೆನ್ಸಿಲ್ ಗಳಿಂದ ಗುರುತ್ವಾಕರ್ಷಣೆ ಇಲ್ಲದ ಬಾಹ್ಯಾಕಾಶದಲ್ಲೂ ಬರೆಯಬಹುದು! ಇಂಕ್ ಪೆನ್ನುಗಳಿಂದ ಸಾಧ್ಯವಿಲ್ಲ.

ಜಗತ್ತಿನ ಅತಿ ದೊಡ್ಡ ಪೆನ್ಸಿಲ್ `ಕ್ಯಾಸ್ಟೆಲ್ 9000' ಮಲೇಷಿಯಾದ ಕ್ವಾಲಾಲಂಪುರ್ ಬಳಿ ಪ್ರದರ್ಶನಕ್ಕಿದೆ. ಅದರ ಎತ್ತರ 85 ಅಡಿ!!

ರಜೆಯಲ್ಲಿ ಮಾಡಲು ಯಾವ ಕೆಲಸವೂ ಇಲ್ಲವೆ? ಒಂದು ಹೊಸ ಪೆನ್ಸಿಲ್ ತೆಗೆದುಕೊಳ್ಳಿ. ಅದು ಮುಗಿಯುವವರೆಗೂ ಬರೆಯಲು ಆರಂಭಿಸಿ. ಅದರಲ್ಲಿ 45,000 ಪದಗಳನ್ನು ಬರೆಯಬಹುದು. ಅಥವಾ ಗೆರೆ ಎಳೆದುಕೊಂಡು ಹೊರಡಿ. 56 ಕಿಲೋಮೀಟರ್ ಗೆರೆ ಎಳೆಯಬಹುದು! ಯಾರೂ ಇನ್ನೂ ಈ ದಾಖಲೆ ನಿರ್ಮಿಸಿಲ್ಲ!!

ಈಗ ಜಗತ್ತಿನಲ್ಲಿ ಉತ್ಪಾದಿಸುವ ಪೆನ್ಸಿಲ್ ಗಳಲ್ಲಿ ಅರ್ಧಭಾಗವನ್ನು ಬರೀ ಚೀನಾ ಒಂದೇ ಉತ್ಪಾದಿಸುತ್ತದೆ. 2004ರಲ್ಲಿ ಚೀನಾ ಫ್ಯಾಕ್ಟರಿಗಳು ತಯಾರಿಸಿದ ಪೆನ್ಸಿಲ್ ಗಳ ಸಂಖ್ಯೆ 1000 ಕೋಟಿ! ಇಷ್ಟು ಪೆನ್ಸಿಲ್ ಗಳಿಂದ ಇಡೀ ಭೂಗೋಳದ ಸುತ್ತ 40 ಬಾರಿ ಗೆರೆ ಎಳೆಯಬಹುದು!!