Friday 18 March 2011

ಹೊಟ್ಟೆಯೊಳಗೆ ತುತ್ತಿನ ಪಯಣ

ಬಾಯಿಯೊಳಗೆ ನಾವು ಆಹಾರ ಹಾಕಿಕೊಂಡು ಅಗಿಯುತ್ತೇವೆ. ನಂತರ ರುಚಿಯನ್ನು ಸವಿಯುತ್ತೇವೆ. ನಂತರ ಏನು ಮಾಡುತ್ತೇವೆ?

ಹೌದು, ನುಂಗುತ್ತೇವೆ. ಅನಂತರ ನಾವು ತಿಂದ ಆಹಾರ ಏನಾಗುತ್ತದೆ?

ಇದು ಬಹಳ ಕುತೂಹಲಕಾರಿ ವಿಷಯ!


ನಾವು ಆಹಾರವನ್ನು ಸೇವಿಸಿ, ಅದನ್ನು ಜೀಣರ್ಿಸಿಕೊಂಡು, ಅದರ ಪೌಷ್ಟಿಕಾಂಶ, ಶಕ್ತಿಯನ್ನು ಪಡೆದುಕೊಂಡು, ತ್ಯಾಜ್ಯವನ್ನು ಹೊರಹಾಕುವ ಮಲವಿಸರ್ಜನೆಯವರೆಗೆ - ನಾವು ತಿನ್ನುವ ಆಹಾರ ಎಷ್ಟು ದೂರ ಪ್ರಯಣ ಮಾಡಿರುತ್ತದೆ ಗೊತ್ತೆ? ಅದು ತನ್ನ ಪ್ರಯಣದ ಅವಧಿಯಲ್ಲಿ ಎಷ್ಟು ರೀತಿಯ `ಅನುಭವ'ಗಳಿಗೆ ತುತ್ತಾಗುತ್ತದೆ ಗೊತ್ತೆ?

ಆಹಾರವನ್ನು ಬಾಯಿಯೊಳಗಿಟ್ಟುಕೊಂಡು ಅಗಿಯುವುದು, ಮತ್ತು ನುಂಗುವುದರಿಂದ ಶುರುವಾಗುವ ಇದು ಏನಿಲ್ಲವೆಂದರೂ 18-30 ಗಂಟೆಗಳ ಅವಧಿಯ ಪ್ರಯಾಣ! ಬಾಯಿಯಿಂದ ಆರಂಭವಾಗುವ ಶರೀರದ ಆಹಾರ ಪಚನ ವ್ಯವಸ್ಥೆ ಒಂದು ದೊಡ್ಡ ಸುರಂಗದ ಹಾಗೆ. ಶರೀರದ ಒಳಗೆ ವ್ಯಾಪಿಸಿರುವ ಅದರ ಒಟ್ಟು ಉದ್ದ ಸುಮಾರು 9 ಮೀಟರ್ಗಳು!!

ಘಮಘಮ ಆಹಾರ ನಿಮ್ಮ ಬಾಯೊಳಗೆ ಪ್ರವೇಶಿಸಲು ಆರಂಭಿಸಿದ ತಕ್ಷಣ ಏನಾಗುತ್ತದೆ? ತಕ್ಷಣ ನಿಮ್ಮ ನಾಲಿಗೆ ಅದರ `ರುಚಿ' ಆಸ್ವಾದಿಸಿಬಿಡುತ್ತದೆ! ನೀವು ಅದನ್ನು ಅಗಿಯಲು ಆರಂಭಿಸುತ್ತೀರಿ. ಪಾಪ, ಆಹಾರ ನಿಮ್ಮ ಚೂಪಾದ ಹಲ್ಲುಗಳಿಗೆ ಸಿಕ್ಕಿ ಸಣ್ಣ ಚೂರುಗಳಾಗಿ ಒಡೆದು, ಹರಿದು, ನಜ್ಜುಗುಜ್ಜಾಗುತ್ತದೆ! ಜೊತೆಗೆ ನಿಮ್ಮ ಬಾಯಿ ಉತ್ಪಾದಿಸುವ ಲಾಲಾ ರಸದ ಸ್ನಾನವೂ ಆಗುತ್ತದೆ! ಆಹಾರದ ರುಚಿ ನಾಲಿಗೆಗೆ ಎಷ್ಟು ಹೆಚ್ಚು ಇಷ್ಟವಾಗುತ್ತದೋ ಅಷ್ಟೂ ಲಾಲಾರಸ ಹೆಚ್ಚು ಉತ್ಪತ್ತಿಯಾಗುತ್ತದೆ. ನೆನಪಿರಲಿ, ಲಾಲಾರಸ ಜೀರ್ಣಕ್ರಿಯೆಯ ಮೊದಲ ಮುಖ್ಯ ಪದಾರ್ಥ. ಅದರ ನೆರವಿದ್ದರೆ ಮುಂದಿನ ಕೆಲಸ ಸುಗಮ.

ಆಮೇಲೆ ಏನು ನಡೆಯುತ್ತದೆ? ಲಾಲಾರಸದ ಸ್ನಾನ ಮಾಡಿದ ಆಹಾರವನ್ನು ನೀವು ಗುಳುಂ ಎಂದು ನುಂಗಿಬಿಡುತ್ತೀರಿ. ಲಾಲಾರಸ ಆಹಾರವನ್ನು ನುಂಗಲು ಹಿತವಾಗುವಂತೆಚ ಮೆತ್ತಗೆ ಮಾಡಿರುತ್ತದೆ. ಹೀಗಾಗಿ ನಿಮಗೆ ಕಷ್ಟವೇನೂ ಆಗುವುದಿಲ್ಲ.

ಅಲ್ಲಿಂದ ನಿಮ್ಮ ಆಹಾರ ಅನ್ನನಾಳಕ್ಕೆ ಹೋಗುತ್ತದೆ. ಅಲ್ಲಿ ಅದಕ್ಕೆ ಗುಹೆಯನ್ನು ಹೊಕ್ಕ ಅನುಭವ! ಈ ಅನ್ನನಾಳ ಸಾಮಾನ್ಯವಾದುದಲ್ಲ. ಉಬ್ಬುತಗ್ಗುಗಳಿಂದ ಕೂಡಿರುವ ಅದರ ಮಾಂಸಖಂಡಗಳು ಹಿಗ್ಗುತ್ತಾ, ಕುಗ್ಗುತ್ತಾ ಆಹಾರವನ್ನು ನಿಧಾನವಾಗಿ, ಎಚ್ಚರಿಕೆಯಿಂದ, ಚೂರುಚೂರೇ ಹೊಟ್ಟೆಯೊಳಗೆ ತಳ್ಳುತ್ತವೆ. ಈ ಹಂತದಲದ್ಲೂ ರಸ ಆಹಾರದ ಪ್ರಯಾಣವನ್ನು ಸರಾಗವಾಗಿ, ನೋವಿಲ್ಲದೇ ನಡೆಯುವಂತೆ (ನಿಮಗೆ ನೋವಾಗದಂತೆ) ಮಾಡುತ್ತದೆ. ಇವೆಲ್ಲ ಹೀಗಿಲ್ಲದಿದ್ದರೆ ನೀವು ನುಂಗಿದ ಆಹಾರ `ದಪ್' ಎಂದು ಹೊಟ್ಟೆಯೊಳಗೆ ನೇರವಾಗಿ ಹೋಗಿ ಬಿದ್ದು ನಿಮಗೆ ಎಷ್ಟು ನೋವಾಗುತ್ತಿತ್ತು ಅಲ್ಲವೆ!!?

ಈ ಹೊಟ್ಟೆಯೋ (ಅಥವಾ ಜಠರ ಎನ್ನಿ), ಅದೊಂದು ಮಾಂಸಖಂಡಗಳಿಂದ ಮಾಡಿರುವ ಒಂದು ದೊಡ್ಡ ಬ್ಯಾಗು! ಆಹಾರ ತುಂಬಿದಂತೆಲ್ಲ ಅದು ಬೆಲೂನಿನ ಹಾಗೆ ಉಬ್ಬುತ್ತದೆ. ಆದರೆ ಅದು ಬರೀ ಆಹಾರ ತುಂಬಿಕಮಡು ಸುಮ್ಮನೆ ಕುಳಿತಿರುವ ಮೂಟೆಯಲ್ಲ. ಅದರಲ್ಲಿ ಆಹಾರವನ್ನು ಅರಗಿಸುವ ಅನೇಕ ರೀತಿಯ ಆಮ್ಲಗಳು, ರಸಗಳು ಉತ್ಪತ್ತಿಯಾಗುತ್ತವೆ. ಅವುಗಳನ್ನು ಎನ್ಜೈಮ್ಗಳು ಎನ್ನುತ್ತಾರೆ. ಈ ಎನ್ಜೈಮ್ಗಳು ನೀವು ತಿಂದ ಆಹಾರದ ಮೇಲೆ ದಾಳಿ ಆರಂಭಿಸುತ್ತವೆ. ಮೊದಲೇ ನಿಮ್ಮ ಹಲ್ಲುಗಳಿಗೆ ಸುಇಕ್ಕಿ ನಜ್ಜುಗುಜ್ಜಾಗಿದ್ದ ಆಹಾರ ಅನಂತರ ಅನ್ನನಾಳವೆಂ ಗುಹೆ ಹೊಕ್ಕು ಉಸಿರುಗಟ್ಟಿ ಹೊಟ್ಟೆಯೆಂಬ ಚೀಳಕ್ಕೆ ಬಿದ್ದಿರುತ್ತದೆ. ಇಲ್ಲಿ ಎನ್ಜೈಮ್ಗಳ ಸ್ನಾನವೆಂದರೆ ಹುಡುಗಾಟವೆ? ಆಹಾರದ ಸ್ವರೂಪವೇ ಈ ಹಂತದಲ್ಲಿ ಬದಲಾಗುತ್ತದೆ. ಹೊಟ್ಟೆಯ ಆಮ್ಲಗಳು ಬಹಳ ಪ್ರಬಲ. ಅವುಗಳಿಗೆ ಸಿಕ್ಕಮೇಲೆ ಆಹಾರ ಶರಣಾಗಲೇಬೇಕು!

ಹೊಟ್ಟೆಯಲ್ಲಿ ಆಹಾರವನ್ನು ತಿರುಗಿಸಿ, ಮುರುಗಿಸಿ ಹಾಕುವ ಮಾಂಸಖಂಡಗಳಿವೆ. ಈ ಮಂಸಖಂಡಗಳ ಹಾಗೂ ಎನ್ಜೈಮ್ಗಳ ದಾಳಿಗೆ ಹೆದರಿದ ಆಹಾರ ತನ್ನೊಳಗಿರುವ ಪೌಷ್ಟಿಕಾಂಶ ಹಾಗೂ ಶಕ್ತಿಯನ್ನು ಕಪ್ಪಕಾಣಿಕೆಯಾಗಿ ಒಪ್ಪಿಸಲೇ ಬೇಕು! ಅದಕ್ಕೆ ಬೇರೆ ದಾರಿಯೇ ಇಲ್ಲ! ಜಠರ ಒಂದಿಷ್ಟು ಪೌಷ್ಟಿಕಾಂಶವನ್ನು ಹೀರಿಕೊಳ್ಳುತ್ತದೆ. ಇಷ್ಟು ಹೊತ್ತಿಗೆ ಆಹಾರ ದ್ರವರೂಪ ತಾಳಿರುತ್ತದೆ. ಅದನ್ನು ಇಂಗ್ಲಿಷ್ನಲ್ಲಿ `ಕಿಮೆ' ಎನ್ನುತ್ತಾರೆ.

ಆಹಾರದ ಅವಸ್ಥೆ ಇಷ್ಟಕ್ಕೇ ಮುಗಿಯಲಿಲ್ಲ. ಈಗ ಕಿಮೆ ಎಂಬ ದ್ರವವಾಗಿ ಮಾರ್ಪಟ್ಟಿರುವ ಆಹಾರವನ್ನು ಸಣ್ಣ ಕರುಳಿನನೊಳಗೆ ಜಠರ ತೊಟ್ಟಿಕ್ಕಿಸುತ್ತದೆ. ಅಲ್ಲಿ ಇನ್ನಷ್ಟು ಎನ್ಜೈಮ್ಗಳು ಅದನ್ನು ಸಂತೋಷದಿಂದ ಸ್ವಾಗತಿಸುತ್ತವೆ!

ಸಣ್ಣ ಕರುಳು ಸುಮಾರು 4 ಸೆಂಟಿಮೀಟರ್ ಅಗಲವಿರುತ್ತದೆ. ಆದರೆ ಅದರ ಉದ್ದ 25 ಅಡಿಗೂ ಹೆಚ್ಚು! ನಲ್ಲಿಗೆ ಸಿಕ್ಕಿಸುವ ಪೈಪಿನಂತೆ ಸುತ್ತಿಕೊಂಡು, ಮುದುರಿಕೊಂಡು ಶರೀರದೊಳಗೆ ಕೂತಿರುತ್ತದೆ. ಆಹಾರಕ್ಕೆ ಇದರೊಳಗೂ ಗುಹೆಯ ಅನುಭವ! ಅರೆ ಹೊರಬರುವುದು ಹೇಗಹೇ ಎಂಬ ಚಡಪಡಿಕೆ. ಇಲ್ಲಿರುವ ಎನ್ಜೈಮ್ಗಳು ಆಹಾರದ ಅಳಿದುಳಿದ ಎಲ್ಲ ಸತ್ವವನ್ನೂ ಹೀರಿಬಿಡುತ್ತವೆ. ಸತ್ವಹೀನವಾದ ಕಿಮೆಯನ್ನು `ನೀನು ತೆಗೆದುಕೊ' ಎಂದು ಹೇಳಿ ದೊಡ್ಡ ಕರುಳೀಗೆ ಕಳುಹಿಸಿಬಿಡುತ್ತವೆ!

ದೊಡ್ಡ ಕರುಳು ಅಗಲವಾಗಿರುತ್ತದೆ. ಸುಮಾರು 6 ಸೆಂ.ಮೀ ಅಗಲ. ಆದರೆ ಅದು ಹೆಚ್ಚು ಉದ್ದವಿರುವುದಿಲ್ಲ. ಸುಮಾರು 1.5 (5 ಅಡಿ) ಮೀಟರ್ ಉದ್ದವಿರುತ್ತದೆ. ಇಲ್ಲಿ ಆಹಾರಕ್ಕೆ ಏನು ಗತಿ ಕಾದಿರುತ್ತದೆ? ಹ್ಞಾಂ.. ತಡೆಯಿರಿ, ಇಲ್ಲಿ ಅದಕ್ಕೆ ಬೇರೆ ನಾಮಕರಣ ಮಾಡೋಣ. ಏಕೆಂದರೆ ಎಲ್ಲ ಸತ್ವವನ್ನೂ ನಿಮ್ಮ ಶರೀರಕ್ಕೆ ಒಪ್ಪಿಸಿದ ನಂತರ ಅದನ್ನೂ ಈಗಲೂ `ಆಹಾರ' ಎನ್ನಲಾದೀತೆ? ಈಗ ಕಿಮೆಯಲ್ಲಿ ಏನಿರುತ್ತದೆ? ಶರೀರ ಅರಗಿಸಿಕೊಳ್ಳಲಾರದ ನೀರು, ಬ್ಯಾಕ್ಟೀರಿಯಾ, ನಾರು, ಸತ್ತ ಕೋಶಗಳು -ಇತ್ಯಾದಿ. ಇವೆಲ್ಲ ದೊಡ್ಡ ಕರುಳಿನ ಮುಂದೆ ಒಳಗೆ ಸಾಗುತ್ತವೆ. ದೊಡ್ಡ ಕರುಳು ನೀರಿನಂಶವನ್ನೆಲ್ಲ ಹೀರಿಕೊಂಡು, ಪೌಷ್ಟಿಕಾಂಶವನ್ನೂ ಹೀರಿಕೊಂಡು ಉಳಿದ ಬೇಡದ ಅಂಶಗಳನ್ನು ಒಟ್ಟುಮಾಡಿ ಹೊರಕ್ಕೆ ದೂಡಲು ಸಿದ್ಧತೆ ನಡೆಸುತ್ತದೆ.

ಈಗ ಬೇಕಾದರೆ `ಆಹಾರ'ಕ್ಕೆ `ಮಲ' ಎಂದು ಹೊಸ ನಾಮಕರಣ ಮಾಡಬಹುದು! ಮಲವಿರ್ಸನೆಯಿಂದ ಶರೀರಕ್ಕೆ ಬೇಡವಾದ ವಸ್ತುಗಳು ಹೊರಬಂದು ಶರೀರ ಶುದ್ಧವಾಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.

ಪಿತ್ತಜನಕಾಂಗ ಹಾಗೂ ಮೇದೋಜೀರಕ ಅಂಗಗಳೂ ಸಹ ಪಚನ ವ್ಯವಸ್ಥೆಯ ಭಾಗಗಳೇ. ಆಹಾರದಿಂದ ಪಡೆದುಕೊಂಡ ಪೌಷ್ಟಿಕಾಂಶಗಳನ್ನು ವಿಂಗಡಿಸಿ, ಕೆಲವನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಕೆಲಸವನ್ನು ಪಿತ್ತಜನಕಾಂಗ ಮಾಡುತ್ತದೆ. ಅದರ ಸಂಗ್ರಹದಲ್ಲಿರುವ ಪೌಷ್ಟಿಕಾಂಶಗಳನ್ನು ಶರೀರದ ಅಗತ್ಯಕ್ಕೆ ಅನುಗುಣವಾಗಿ ಬೇಕಾದಾಗ, ಬೇಕಾದ ಪ್ರಮಾಣದಲ್ಲಿ ಶರೀರಕ್ಕೆ ಸರಬರಾಜು ಮಾಡುತ್ತದೆ. ಸಣ್ಣ ಕರುಳಿನಲ್ಲಿರುವ ಆಹಾರವನ್ನು ಅರಗಿಸಲು ಬೇಕಾಗುವ ಕೆಲವು ಜೀರ್ಣರಸಗಳನ್ನು ಉತ್ಪಾದಿಸಿ ಸಣ್ಣಕರುಳಿಗೆ ನೀಡುವ ಕೆಲಸವನ್ನು ಮೇಧೋಜೀರಾಕಾಂಗ ಮಾಡುತ್ತದೆ.

ಆಹಾರದ ಈ ದೀರ್ಘ ಪ್ರಯಾಣದಲ್ಲಿ ಎಷ್ಟೊಂದು ಪಚನಾಂಗಗಳು ಒಂದಕ್ಕೊಂದು ಹೊಂದಿಕೊಂಡು, ಒಗ್ಗಟ್ಟಿನಿಂದ ಹೇಗೆ ದುಡಿಯುತ್ತವೆ ನೋಡಿದಿರಾ? ಜೀರ್ಣಕ್ರಿಯೆ ಒಂದು ದೊಡ್ಡ ಕಾಖರ್ಾನೆಯಿದ್ದಂತೆ. ಅಲ್ಲಿ ಹಲವು ಯಂತ್ರಗಳು, ಹಲವು ವಿಭಾಗಗಳು ಹೊಂದಿಕೊಂಡು ಕೆಲಸ ಮಾಡುತ್ತವೆ.