Tuesday 7 June 2011

`ಗೂಗಲ್' ಎಂದರೆ ಏನು?

ಇಂಟರ್ನೆಟ್ ಬಳಸುವವರಿಗೆಲ್ಲ ತುಂಬ ಪರಿಚಿತವಾದ ಹೆಸರು 'ಗೂಗಲ್''.

ಈ ಹೆಸರಿನ ಸರ್ಚ್ ಎಂಜಿನ್ ವಿಶ್ವದಲ್ಲೇ ಅಗ್ರಸ್ಥಾನ ಪಡೆದಿದೆ. ಸರ್ಚ್ ಎಂಜಿನ್ ಮೂಲಕ ನೀವು ಇಂಟರ್ನೆಟ್ ಎಂಬ ಅಪಾರವಾದ ಮಾಹಿತಿ ರಾಶಿಯಲ್ಲಿರುವ ಸೇರಿರುವ ವೆಬ್ ಸೈಟ್ ಗಳನ್ನು ಹುಡುಕಿ ನೋಡಬಹುದು. ಒಟ್ಟಿನಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಇಂಟರ್ನೆಟ್ ನಲ್ಲಿ ಹುಡುಕಿಕೊಡುವ ವ್ಯವಸ್ಥೆ ಇದು.

ಆದರೆ `ಗೂಗಲ್' ಎಂದರೇನು?

ಇದೊಂದು ವಿಚಿತ್ರ ಪ್ರಾಣಿಯ ಹೆಸರಿನಂತೆ, ಯಾವುದೋ ಲೋಕದವರ ಹೆಸರಿನಂತೆ ತೋರುತ್ತದೆ. ಆದರೆ ಇದೊಂದು ಸಂಖ್ಯೆಯ ಹೆಸರು. `1' ರ ನಂತರ`0' ಬರೆದರೆ ಯಾವ ಸಂಖ್ಯೆಯಾಗುತ್ತದೆ? `10', ಹತ್ತು ಅಥವಾ ಟೆನ್ ಎನ್ನುತ್ತೀರಿ. `1' ರ ನಂತರ `00' ಬರೆದರೆ ನೂರು. `000' ಬರೆದರೆ ಸಾವಿರ. `0000000' ಬರೆದರೆ ಒಂದು ಕೋಟಿ.

ಸರಿ, `1' ರ ನಂತರ `100 ಸೊನ್ನೆ' ಹಾಕಿದರೆ ಯಾವ ಸಂಖ್ಯೆ ಸಿಗುತ್ತದೆ? ಇಷ್ಟು ದೊಡ್ಡ ಸಂಖ್ಯೆಗೆ ಹೆಸರಿದೆಯೆ ಎನ್ನುತ್ತೀರಾ? ಇದೆ. ಅದೇ `ಗೂಗಲ್'!

'ಬಹಳ ಬಹಳ ಬಹಳ ಸಂಖ್ಯೆಯಷ್ಟು ವೆಬ್ಸೈಟುಗಳನ್ನು ನಮ್ಮ ಸರ್ಚ್ ಎಂಜಿನ್ ಹುಡುಕಿ ದಾಖಲಿಸಿ ಇಟ್ಟುಕೊಂಡಿದೆ' ಎಂದು ಹೇಳಿಕೊಳ್ಳುವ ಸಲುವಾಗಿ ಗೂಗಲ್ ಸಂಸ್ಥೆ `ಗೂಗಲ್' ಎಂಬ ದೊಡ್ಡ ಸಂಖ್ಯೆಯ ಹೆಸರನ್ನು ತನಗೆ ಇಟ್ಟುಕೊಂಡಿದೆ.

ಬಹುಶಃ ಇನ್ನುಮುಂದೆ ನೀವು `ಕೋಟ್ಯಂತರ' ಎನ್ನುವ ಪದಕ್ಕೆ ಬದಲಾಗಿ `ಗೂಗಲಾಂತರ' ಎಂಬ ಪದವನ್ನು ಬಳಸಬಹುದೇನೋ!

ಕನ್ನಡದ `ಕೋಟಿ' ಹಿಂದಿಯ `ಕರೋಡ್' ಎಂಬುದು ಭಾರತೀಯರು ಕಲ್ಪಿಸಿಕೊಂಡ ದೊಡ್ಡ ಸಂಖ್ಯೆಯಲ್ಲ. 1 ರ ನಂತರ 7 ಸೊನ್ನೆ ಹಾಕಿದರೆ ಒಂದು ಕೋಟಿಯಾಗುತ್ತದೆ (1,00,00,000). ಆದರೆ ಪ್ರಾಚೀನ ಭಾರತೀಯ ಗಣಿತಜ್ಞರು ಇನ್ನೂ ದೊಡ್ಡ ಸಂಖ್ಯೆಗಳಿಗೂ ಹೆಸರು ಕೊಟ್ಟಿದ್ದಾರೆ.

ನಿಮಗೆ ಗೊತ್ತಿರಲಿ. ಜಗತ್ತಿಗೆ ಈ ಸಂಖ್ಯೆಗಳನ್ನು ಪರಿಚಯಿಸಿದವರೇ ಭಾರತೀಯ ಗಣಿತಜ್ಞರು. ಈಗ ನಾವು ಬಳಸುವ ಸಂಖ್ಯಾ ಪದ್ಧತಿ ಯಾವುದು? `ದಶಮಾನ' ಅಥವಾ `ಡೆಸಿಮಲ್' ಪದ್ಧತಿ. ದಶ ಎಂದರೆ ಹತ್ತು. ದಶಮಾನ ಎಂದರೆ ಹತ್ತುಗಳ ಲೆಕ್ಕದಲ್ಲಿ ಮಾಡುವ ಎಣಿಕೆ. ಅಂದರೆ ನಾವು ಸಂಖ್ಯೆಗಳನ್ನು 10ರ ಲೆಕ್ಕದಲ್ಲಿ ಬಳಸುತ್ತೇವೆ. ಅಂದರೆ 0,1,2,3,4,5,6,7,8,9 ಎಂದು 9ರ ತನಕ ಎಣಿಸಿದ ನಂತರ 10 ಬರುತ್ತದೆ. ಅಲ್ಲಿಗೆ ನಮ್ಮ ಎಣಿಕೆ ಮುಗಿಯಿತು. ಎಲ್ಲಿ ಮುಗಿಯಿತು? ದೊಡ್ಡ ದೊಡ್ಡ ಸಂಖ್ಯೆಗಳಿಲ್ಲವೆ? ಇವೆ. ಆದರೆ ಅವೆಲ್ಲ ಹತ್ತರ ವ್ಯವಸ್ಥೆಯ ಅಡಿಗೇ ಬರುವ ಸಂಖ್ಯೆಗಳು. ಅಂದರೆ `ಹತ್ತು' ಆದ ನಂತರ ಬರುವ `ಹನ್ನೊಂದು' ಸ್ವತಂತ್ರ ಸಂಖ್ಯೆ ಅಲ್ಲ. ಹತ್ತಕ್ಕೆ ಒಂದನ್ನು ಸೇರಿಸಿದರೆ ಬರುವ ಸಂಖ್ಯೆ ಅದು. `ನೂರು' ಎಂಬುದು ಹತ್ತನ್ನು ಹತ್ತು ಬಾರಿ ಹಾಕಿದರೆ ಬರುವ ಸಂಖ್ಯೆ. ಅಂದರೆ 0, 1-9 - ಇಷ್ಟನ್ನು ಆಧರಿಸಿ ನಮ್ಮ ಸಂಖ್ಯಾ ಮೌಲ್ಯಗಳು ಏರುತ್ತವೆ ಅಥವಾ ಇಳಿಯುತ್ತವೆ.

ಹೀಗೆ ಹತ್ತನ್ನು ಅಧರಿಸಿರುವ ಈ ಪದ್ಧತಿಗೆ ದಶಮಾನ' ಪದ್ಧತಿ ಎಂದು ಹೆಸರು. ಇದನ್ನೇ ಇಡೀ ಜಗತ್ತಿನ ಸಮಸ್ತ ವ್ಯವಹಾರದಲ್ಲಿ ಬಳಸುವುದು. ಈ ಸಂಖ್ಯೆಯೇ ಇತಿಹಾಸದ ಎಲ್ಲ ಗಣಿತ ಕ್ರಮಗಳಿಗೆ, ಸಾಧನೆಗಳಿಗೆ ಮೂಲ ಆಧಾರ. ಈ ಪದ್ಧತಿಯನ್ನು ರೂಪಿಸಿ ಜಗತ್ತಿಗೆ ನೀಡಿದವರು ಪ್ರಾಚೀನ ಭಾರತೀಯರು. ಅಷ್ಟು ಮಾತ್ರವಲ್ಲ. ಗಣಿತದಲ್ಲಿ ಸೊನ್ನೆ (`0') ಮಹತ್ವದ ಸ್ಥಾನ, ಮೌಲ್ಯ, ಪಾತ್ರಗಳನ್ನು ಹೊಂದಿದೆ. ಸೊನ್ನೆಯನ್ನು ಕೈಬಿಟ್ಟರೆ ಗಣಿತವೇ ಇಲ್ಲ! ಈ ಸೊನ್ನೆಯ (ಶೂನ್ಯ) ಪರಿಕಲ್ಪನೆಯನ್ನು ಸೃಷ್ಟಿಸಿದವರೂ ಭಾರತೀಯರೇ. ಒಟ್ಟಿನಲ್ಲಿ ಭಾರತೀಯರು ಗಣಿತದ ಜನಕರು ಎಂದು ಹೇಳಬಹುದು.

ಇನ್ನೂ ಕೆಲವು ಸಂಖ್ಯಾಪದ್ಧತಿಗಳನ್ನು 20ನೇ ಶತಮಾನದಲ್ಲಿ ಸೃಷ್ಟಿಸಲಾಗಿದೆ. ಆದರೆ ಅವು ಮಾನವರ ದೈನಂದಿನ ಬಳಕೆಯ ಪದ್ಧತಿಗಳಲ್ಲ. ಕಂಪ್ಯೂಟರುಗಳಲ್ಲಿ `ಬೈನರಿ' (ದ್ವಿಮಾನ -2ನ್ನು ಆಧರಿಸಿದ) ) ಮತ್ತು `ಹೆಕ್ಸಾಡೆಸಿಮಲ್' (16ರ ಆಧಾರ ಇರುವ) ಸಂಖ್ಯಾಪದ್ಧತಿಗಳು ಬಳಸಲ್ಪಡುತ್ತವೆ. ಬೈನರಿಯಲ್ಲಿ ಎರಡೇ ಅಂಕಿಗಳು. `0' ಮತ್ತು `1'ನಿವು ಕಂಪ್ಯೂಟರ್ ಸಂಕೇತ ಭಾಷೆಗೆ ಇದು ಸರಿಯಾಗುತ್ತವೆ. ಆದರೆ ಬೈನರಿಯನ್ನು ನಾವು ಅರ್ಥಮಾಡಿಕೊಳ್ಳಲು ದಶಮಾನಕ್ಕೆ ಪರಿವತರ್ಿಸಿಕೊಳ್ಳುವುದು ಅನಿವಾರ್ಯ. ಹೆಕ್ಸಾದೆಸಿಮಲ್ನಲ್ಲಿ 1-9, 10 ಆದನಂತರ ಎ,ಬಿ,ಸಿ,ಡಿ,ಇ,ಎಫ್, ಅಕ್ಷರಗಳನ್ನು ಸಂಖ್ಯೆಗಳಾಗಿ ಬಳಸುತ್ತಾರೆ.

ಇಷ್ಟೆಲ್ಲ ಪೀಠಿಕೆಯ ನಂತರ ಈಗ ಹಿಂದಿನ ಕಾಲದ ಭಾರತೀಯರು ರೂಢಿಗೆ ತಂದಿದ್ದ ಕೆಲವು ದೊಡ್ಡ ಸಂಖ್ಯೆಗಳತ್ತ ನೋಡೋಣ.

1 -ಏಕ
10 -ದಶ
100 -ಶತ
1,000 -ಸಹಸ್ರ
1,00,000 -ಲಕ್ಷ
1,00,00,000 -ಕೋಟಿ
1,00,00,00,00,00,000 -ನೀಲ
1,00,00,00,00,00,00,000 -ಪದ್ಮಾ
1,00,00,00,00,00,00,00,000 -ಶಂಖ
1,00,00,00,00,00,00,00,00,000 -ಮಹಾಶಂಖ

ಎಷ್ಟು ದೊಡ್ಡ ಸಂಖ್ಯೆಗೂ ಹೆಸರಿಡಬಹುದು. ಆದರೆ ಭಾರಿ ದೊಡ್ಡ ಸಂಖ್ಯೆಗಳು ದೈನಂದಿನ ಲೆಕ್ಕಾಚಾರದಲ್ಲಿ  ಬರುವುದಿಲ್ಲ.ಸುಮ್ಮನೆ ಹೆಸರಿಟ್ಟುಕೊಂಡು ಏನು ಮಾಡುತ್ತೀರಿ?

ಈಗ `ಗೂಗಲ್' ಎಂಬುದು ಕೇವಲ ಒಂದು ಹೆಸರಾಗಿ ಉಳಿದಿದೆಯೆ ಹೊರತು ಅದನ್ನು ಒಂದು ಸಂಖ್ಯಾಗಿ ಯಾರು ಬಳಸುತ್ತಾರೆ? `ನನ್ನ ಬಿ ಒಂದು ಕೋಟಿ ರೂಪಾಯಿ ಇದೆ' ಎನ್ನಬಹುದು. ಆದರೆ `ನನ್ನ ಬಳಿ ಒಂದು ಗೂಗಲ್ ರೂಪಾಯಿ ಇದೆ' ಎನ್ನಲಾದೀತೆ? ನಮಗೆ ತಿಳಿದಿರುವಷ್ಟು ವ್ಯಾಪ್ತಿಯ ಬ್ರಹ್ಮಾಂಡದಲ್ಲಿನ ಎಲ್ಲ ಪರಮಾಣುಗಳ ಒಟ್ಟು ಮೊತ್ತಕ್ಕಿಂತಲೂ ಈ ಸಂಖ್ಯೆಯೇ ದೊಡ್ಡದು! ಹೀಗಿರುವಾಗ ಇದನ್ನು ಎಲ್ಲಿ ಬಳಸಲು ಸಾಧ್ಯ?

ಅಷ್ಟು ದೊಡ್ಡ ಸಂಖ್ಯೆಯಲ್ಲಿ ನಮ್ಮ ಜಗತ್ತಿನ ವ್ಯವಹಾರಗಳು ನಡೆಯುವುದಿಲ್ಲ. ಹೆಚ್ಚೆಂದರೆ `ಟ್ರಿಲಿಯನ್'ಗಳಲ್ಲಿ (ಲಕ್ಷ ಕೋಟಿ - ಅಂದರೆ ಒಂದು ಕೋಟಿಯನ್ನು ಒಂದು ಲಕ್ಷ ಸಾರಿ ಹಾಕಿದರೆ ಬರುವ ಮೊತ್ತ) ನಮ್ಮ ವ್ಯವಹಾರವೆಲ್ಲ ನಡೆದುಹೋಗುತ್ತದೆ. 10 ಟ್ರಿಲಿಯನ್ ನಮ್ಮ ಪ್ರಾಚೀನರ `ಒಂದು ನೀಲ'ಕ್ಕೆ ಸಮ. ಅಂದರೆ 1 + 13 ಸೊನ್ನೆಗಳು.

ಆಧುನಿಕ ಪಶ್ಚಿಮ ಹಾಗೂ ಅಮೆರಿಕನ್ ಕ್ರಮದಲ್ಲಿ 10 ಲಕ್ಷಕ್ಕೆ ಒಂದು ಮಿಲಿಯನ್. ನೂರು ಕೋಟಿಗೆ ಒಂದು ಬಿಲಿಯನ್. ಲಕ್ಷಕೋಟಿಗೆ ಒಂದು ಟ್ರಿಲಿಯನ್. 1000 ಟ್ರಿಲಿಯನ್ಗಳಿಗೆ ಒಂದು ಕ್ವಾಡ್ರಿಲಿಯನ್ (1+18 ಸೊನ್ನೆಗಳು). ಸಾವಿರ ಕ್ವಾಡ್ರಿಲಿಯನ್ನಿಗೆ ಕ್ವಿಂಟಿಲಿಯನ್ ಎನ್ನುತ್ತಾರೆ. 10 ಕ್ವಿಂಟಿಲಿಯನ್ನುಗಳಿಗೆ ಭಾರತೀಯರ `ಒಂದು ಮಹಾಶಂಖ' ಸಮವಾಗುತ್ತದೆ (1+19 ಸೊನ್ನೆಗಳು).

ಇನ್ನೂ ದೊಡ್ಡ ಸಂಖ್ಯೆಗಳಿಗೆ ಹೆಸರಿಡಲಾಗಿದೆ. 1000 ಕ್ವಿಟಿಲಿಯನ್ನಿಗೆ ಒಂದು ಸೆಕ್ಸ್ಟಿಲಿಯನ್. ಸಾವಿರ ಸೆಕ್ಸ್ಟಿಲಿಯನ್ನಿಗೆ ಒಂದು ಸೆಪ್ಟಿಲಿಯನ್. ಸಾವಿರ ಸೆಪ್ಟಿಲಿಯನ್ನಿಗೆ ಒಂದು ಅಕ್ಟಿಲಿಯನ್. ಸಾವಿರ ಆಕ್ಟಿಲಿಯನ್ನಿಗೆ ಒಂದು ನಾನಿಲಿಯನ್ - ಹೀಗೆ. ಒಂದು ನಾನಿಲಿಯನ್ ಎಂದರೆ 1 ರ ನಂತರ 30 ಸೊನ್ನೆಗಳು (1,000,000,000,000,000,000,000,000,000,000)!!
ಒಂದು ಗೂಗಲ್ ಎಂದರೆ ಮೊದಲೇ ಹೇಳಿದಂತೆ 1+100 ಸೊನ್ನೆಗಳು!

ಈ ಹೆಸರು ಬಂದ ಪ್ರಸಂಗ ಕುತೂಹಲಕಾರಿ. 1920ರಲ್ಲಿ ಈ ಸಂಖ್ಯೆಯ ಬಗ್ಗೆ ಯೋಚಿಸುತ್ತಿದ್ದ ಅಮೆರಿಕದ ಗಣಿತಜ್ಞ ಎಡ್ವರ್ಡ್ ಕಸ್ನರ್ (1878-1955) ಇದಕ್ಕೆ ಏನು ಹೆಸರಿಟ್ಟರೆ ಚೆಂದ ಎಂದು ತನ್ನ 9 ವರ್ಷದ ಸೋದರ ಸಂಬಂಧಿಯನ್ನು (ಅಣ್ಣನ ಅಥವಾ ಅಕ್ಕನ ಮಗ) ಕೇಳಿದನಂತೆ. ಮಿಲ್ಟನ್ ಸಿರೋಟಾ (1911-1981) ಎಂಬ ಈ ಬಾಲಕ ಅಂದು ಚೇಷ್ಟೆ ಮಾಡುತ್ತ ತನ್ನ ಬಾಯಿಗೆ ತೋಚಿದ ಹೆಸರು `ಗೂಗಲ್' (googol) ಎಂದ. ಸರಿ ಅದನ್ನೇ ಈ ತಜ್ಞ ದೊಡ್ಡ ಸಂಖ್ಯೆಗೆ ಹೆಸರಾಗಿ ಇಟ್ಟ! ತಾನು ಬರೆದ ಪುಸ್ತಕ ಮ್ಯಾಥಮ್ಯಾಟಿಕ್ಸ್ ಅಂಡ್ ದಿ ಇಮ್ಯಾಜಿನೇಷನ್' (1940) ಮೂಲಕ ಈ ಹೆಸರಿಗೆ ಬಹಳ ಪ್ರಚಾರ ಕೊಟ್ಟ. ಮುಂದೆ ಗೂಗಲ್ ಸಂಸ್ಥೆ ಈ ಹೆಸರನ್ನು (ಸ್ವಲ್ಪ ಸ್ಪೆಲ್ಲಿಂಗ್ ಬದಲಿಸಿ - google) ತನಗೆ ಆಯ್ಕೆ ಮಾಡಿಕೊಂಡಿತು. ಈ ಸಂಸ್ಥೆಯ ಕೀರುತಿ ಬೆಳೆಯುತ್ತಿದ್ದ ಹಾಗೆಲ್ಲ `ಗೂಗಲ್' ಎಂಬ ಹೆಸರೂ ವಿಶ್ವದಲ್ಲಿ ಮನೆಮಾತಾಗಿ ಬಹಳ ಪ್ರಸಿದ್ಧಿ ಪಡೆಯಿತು. ಜಗತ್ತು 9 ವರ್ಷದ ಬಾಲಕನ ತೊದಲು ನುಡಿಯನ್ನು ಈಗ ಒಪ್ಪಿಕೊಂಡುಬಿಡ್ಡಿದೆ!

ಅದನ್ನು 1 ಗೊಗಲ್. ಎಂದು ಬರೆಯಬಹುದು. ಅಥವಾ 10ರ ಘಾತ 100 (10 100) ಎಂದು ಬರೆಯಬಹುದು. ಅಥವಾ ಅಂಕಿಗಳಲ್ಲಿ ಬರೆದರೆ ಗೂಗಲ್ ಹೀಗಿರುತ್ತದೆ:

10,000,000,000,000,000,000,000,000,000,000,000,000,000,000,000,000,000,000,000,000,000,000,000,000,000,000,000,000,000,000,000,000,000

ಈಗ ಇನ್ನೂ ದೊಡ್ಡ ಸಂಖ್ಯೆಗಳಿಗೆ ಹೆಸರಿಡಲಾಗಿದೆ. ಅವುಗಳ ಹೆಸರು `ಸೆಂಟಿಲಿಯನ್' ಹಾಗೂ `ಗೂಗಲ್ ಪ್ಲೆಕ್ಸ್'.

ಒಂದು ಸೆಂಟಿಲಿಯನ್ ಎಂದರೆ ಅಮೆರಿಕದಲ್ಲಿ 1+303 ಸೊನ್ನೆಗಳು. ಯೂರೋಫಿನಲ್ಲಿ ಅದೇ ಹೆಸರನ್ನು 1+600 ಸೊನ್ನೆಗಳ ಸಂಖ್ಯೆಗೆ ಇಡಲಾಗಿದೆ. ಒಂದು ಗೂಗಲ್ ಪ್ಲೆಕ್ಸ್ ಎಂದರೆ 1+10ರ ಘಾತ ಗೂಗಲ್. ಅಂದರೆ 1ರ ನಂತರ ಒಂದು ಗೂಗಲ್ನಷ್ಟು ಸೊನ್ನೆಗಳು! ಅದನ್ನು ಕಲ್ಪಿಸಿಕೊಳ್ಳುವುದೂ ಕಷ್ಟ!!

ಈ ಸಂಖ್ಯೆಯನ್ನು ಯಾವ ಸೂಪರ್ ಕಂಪ್ಯೂಟರ್ಗಳೂ ಸಂಗ್ರಹಿಸಲಾರವು. ಈ ಇಡೀ ಬ್ರಹ್ಮಾಂಡದಲ್ಲಿರುವ ಎಲ್ಲ ಪದಾರ್ಥಗಳನ್ನೂ ಕಾಗದವಾಗಿ ಪರಿವರ್ತಿಸಿ, ಎಂದಿಗೂ ಮುಗಿಯದೇ ಅಕ್ಷಯವಾಗುವಂತಹ ಇಂಕನ್ನು ನಿಮಗೆ ಕೊಟ್ಟು ನಿಮಗೆ ಅಪರಿಮಿತ ಶಕ್ತಿ, ಆಯುಷ್ಯಗಳ ವರವನ್ನು ಕೊಟ್ಟರೂ ಈ ಸಂಖ್ಯೆ ಬರೆದು ಮುಗಿಸಲು ನೂರು ಬ್ರಹ್ಮಾಂಡಗಳಾದರೂ ಬೇಕಾಗುತ್ತವೆ ಮತ್ತು ಅಷ್ಟು ಬರೆಯಲು ಬೇಕಾಗುವ ಕಾಲ ನಮ್ಮ ಬ್ರಹ್ಮಾಂಡ ಹುಟ್ಟಿ ಎಷ್ಟು ಕಾಲವಾಯಿತೋ ಅದರ ಒಂದು ಗೂಗಲ್ ಪಟ್ಟು ಹೆಚ್ಚು ಎಂಬುದು ವಿಜ್ಞಾನಿಗಳ ಅಂದಾಜು!

ಅಂದರೆ ಇಷ್ಟುಕಾಲದಲ್ಲಿ ಒಂದು ಗೂಗಲ್ ಬ್ರಹ್ಮಾಂಡಗಳು ಸೃಷ್ಟಿಯಾಗಿ ಅಳಿದಿರುತ್ತವೆ!!!!!!!!!!!!!!!!!!!!!!!


Wednesday 4 May 2011

ಭೂಗೋಳ ಶಿಕ್ಷಣಕ್ಕೆ ಬೇಕು, `ಗೂಗಲ್ ಅರ್ಥ್`

ದೊಡ್ಡವರು, ಮಕ್ಕಳು, ಎಲ್ಲರೂ `ಗೂಗಲ್ ಅರ್ಥ್' ಬಳಸುತ್ತಾರೆ. ಒಬ್ಬೊಬ್ಬರೂ ಬೇರೆಬೇರೆ ಉದ್ದೇಶಗಳಿಗಾಗಿ, ಅನುಕೂಲತೆಗಳಿಗಾಗಿ ಇದನ್ನು ಬಳಸುತ್ತಾರೆ. ಇದು ದೊಡ್ಡ ಶಿಕ್ಷಣ ಸಾಧನವಾಗುತ್ತದೆ. ಕಲಿಕಾ ವಿಧಾನಕ್ಕೆ ಮಜಾ ತರುತ್ತದೆ!

* ಗೋಡೆಗೆ ಭೂಪಟ (ಮ್ಯಾಪ್) ತಗುಲಿಹಾಕಿ, ಟೇಬಲ್ ಮೇಲೆ ಗುಂಡಗಿರುವ `ಗ್ಲೋಬ್' ಇಟ್ಟುಕೊಂಡು ದೇಶದೇಶಗಳನ್ನು ತೋರಿಸುತ್ತಾ ಪಾಠ ಮಾಡುವ ಕಾಲ ಹಳೆಯದಯಿತು. ಈಗ ಜಗತ್ತಿನಾದ್ಯಂತ ಶಾಲೆಗಳು `ಗೂಗಲ್ ಅರ್ಥ್' ಬಳಸುತ್ತಿವೆ!

* ಏನಿದು ಗೂಗಲ್ ಅರ್ಥ್? ಇಂಟರ್ನೆಟ್ ಬಳಸುವ ಎಲ್ಲರಿಗೂ `ಗೂಗಲ್' ಸಚರ್್ ಎಂಜಿನ್ ಗೊತ್ತು. ಅದೇ ಗೂಗಲ್ ಕಂಪೆನಿಯ ವಿಶಿಷ್ಟ ಸಾಫ್ಟ್ವೇರ್ `ಗೂಗಲ್ ಅರ್ಥ್'.

* ಇಂಟರ್ನೆಟ್ ಮೂಲಕ ಅದನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು (ಹಣ ಕೊಟ್ಟು ಕೊಳ್ಳುವ ಇತರ ಆವೃತ್ತಿಗಳೂ ಇವೆ. ಆದರೆ ಶಿಕ್ಷಣದ ಉದ್ದೇಶಕ್ಕೆ ಉಚಿತ ಆವೃತ್ತಿ ಸಾಕು). ಅದರ ಬಳಕೆ ಬಹು ಸುಲಭ. ಅದನ್ನು ಸರಿಯಾಗಿ ಬಳಸಲು ಇಂಟರ್ನೆಟ್ ಸಂಪರ್ಕ ಇರಬೇಕಾಗುತ್ತದೆ. ಅದರ ಮೂಲಕ ಗೂಗಲ್ ಸರ್ವರ್ಗಳಿಂದ ಇಡೀ ಭೂಗೋಳವೇ ನಿಮ್ಮ ಕಂಪ್ಯೂಟರ್ ಪರದೆ ಮೇಲೆ ಮೂಡಿಬರುತ್ತದೆ!

* ಈ ಭೂಗೋಳವನ್ನು ನೀವು ಬೇಕಾದ ದಿಕ್ಕಿಗೆ ತಿರುಗಿಸಬಹುದು! ಯಾವ ಖಂಡ, ದೇಶಗಳನ್ನು ಬೇಕಾದರೂ ನೋಡಬಹುದು. ಪರಿಚಯ ಮಾಡಿಕೊಳ್ಳಬಹುದು. ಒಮ್ಮೆ ತಿರುಗಿಸಿ ಬಿಟ್ಟುಬಿಟ್ಟರೆ ಭೂಗೋಳ ತಾನೇ ತಿರುಗಲು ಶುರುಮಾಡುತ್ತದೆ! ಅದನ್ನು ಚಕ್ಕೆಂದು ನಿಲ್ಲಿಸಲೂಬಹುದು!

* ನಿಮಗೆ ಬೇಕಾದ ದೇಶವನ್ನು `ಜೂಮ್' ಮಾಡಿ ಹತ್ತಿರಕ್ಕೆ ಹೋಗಿ ನೋಡಬಹುದು! ನೀವು ಆಕಾಶದಲ್ಲಿ ನಿಂತು ಭೂವೀಕ್ಷಣೆ ಮಾಡುತ್ತಿರುವ ವಿಶಿಷ್ಟ ಅನುಭವ ಇದು! ಎರಡು-ಮೂರು ವರ್ಷಗಳ ಹಿಂದೆ ಉಪಗ್ರಹ ಹಗೂ ವಿಮಾನಗಳಿಂದ ತೆಗೆದಿರುವ ಚಿತ್ರಗಳನ್ನು ಒಂದಕ್ಕೊಂದು ಜೋಡಿಸಿ ಈ ಸೌಲಭ್ಯವನ್ನು ಗೂಗಲ್ ಸಂಸ್ಥೆ ಒದಗಿಸಿದೆ (ಇನ್ನೂ ಅನೇಕ ಕಂಪೆನಿಗಳು ಇದೇ ರೀತಿಯ ಸೌಲಭ್ಯ ನೀಡುತ್ತಿವೆ. ಅದರೆ ಗೂಗಲ್ ಅರ್ಥ್ ಬಹು ಪ್ರಸಿದ್ದಿ ಪಡೆದಿದೆ).

* ನಿಮಗೆ ಬೇಕಾದ ದೇಶವನ್ನು ಜೂಮ್ ಮಾಡಿದ ನಂತರ ಇನ್ನೂ ಒಳಕ್ಕೆ ಹಾರಿಕೊಂಡು ಹೋಗಿ ನಿಮಗೆ ಬೇಕಾದ ಪಟ್ಟಣ, ನಗರಗಳನ್ನೂ ನೋಡಬಹುದು. ಅಲ್ಲಿಯ ರಸ್ತೆ, ಮನೆಗಳು, ಎಲ್ಲ ಕಟ್ಟಡಗಳೂ ನಿಮಗೆ ಕಾಣಿಸುತ್ತವೆ. ನಿಮಗೆ ಬೇಕಾದ ದಿಕ್ಕಿಗೆ ಅವುಗಳನ್ನು ತಿರುಗಿಸಿಕೊಂಡು, ತೀರಾ ಹತ್ತಿರಕ್ಕೆ ಜೂಮ್ ಮಾಡಿ ನೋಡಬಹುದು. ಐತಿಹಾಸಿಕ ಸ್ಮಾರಕಗಳನ್ನು, ಪ್ರಸಿದ್ಧ ಕಟ್ಟಡಗಳನ್ನು ಗುರುತಿಸಬಹುದು. ರಸ್ತೆ, ಸೇತುವೆ, ನದಿ, ಅಂಗಡಿ, ಬೆಟ್ಟ, ಕಡು ಹೀಗೆ ಎಲ್ಲವನ್ನೂ ನೋಡಬಹುದು!

* ಭೂಗೋಳ ಪಾಠ ಮಾಡಲು, ಕಲಿಯಲು ಗೂಗಲ್ ಅರ್ಥ್ ಒಳ್ಳೆಯ ಮಜಾ ಕೊಟುವ ಸಾಧನ. ಶಾಲೆಗಳು ಈ ವಿಶಿಷ್ಟ ಸೌಲಭ್ಯ ಬಳಸಿಕೊಳ್ಳಬಹುದು. ಇಂಟರ್ನೆಟ್ ಸಂಪರ್ಕ ಹೊಂದಿರುವ ವಿದ್ಯಾಥರ್ಿಗಳು ಮನೆಯಲ್ಲೇ ಈ ಸಾಫ್ಟ್ವೇರ್ ಡೌನ್ಲೋಡ್ ಮಾಡಿಕೊಂಡು ಉಪಯೋಗಿಸಬಹುದು.


ಹಾರುವ ತಟ್ಟೆಗಳು ನಿಜವಾಗಿಯೂ ಇವೆಯೆ?

ಅನ್ಯಗ್ರಹಗಳಿಂದ ಭೂಮಿಗೆ ಹಾರಿಬರುತ್ತಿರುತ್ತವೆ ಎನ್ನಲಾಗುವ `ಹಾರುವ ತಟ್ಟೆಗಳು' (ಯುಎಫ್ಓ - ಅನ್ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್ಸ್) ನಿಜವಾಗಿಯೂ ಇವೆಯೆ?

ಈ ಪ್ರಶ್ನೆಗೆ ಖಚಿತ ಉತ್ತರ ಯಾರಿಗೂ ಗೊತ್ತಿಲ್ಲ. ಆದರೆ ಅವುಗಳನ್ನು ಕಂಡೆವು ಎಂದು  ಸಾವಿರಾರು ಜನರು ನೂರಾರು ವರ್ಷಗಳಿಂದ ಹೇಳಿದ್ದಾರೆ. ಅವುಗಳ ಫೋಟೋಗಳಿವೆ. ವೀಡಿಯೋಗಳಿವೆ. ಆದರೂ ಸಕರ್ಾರಗಳು ಅಧೀಕೃತವಾಗಿ ಅವುಗಳ ಅಸ್ತಿತ್ವವನ್ನು ಖಚಿತಪಡಿಸಿಲ್ಲ.

ಕೆಲವರು ಸುಳ್ಳು ಹೇಳಬಹುದು. ಕಂಪ್ಯೂಟರ್ ಚಮತ್ಕಾರಿ ಚಿತ್ರಗಳನ್ನು ತಮ್ಮ ಸುಳ್ಳಿಗೆ ಆಧಾರವಾಗಿ ನೀಡಬಹುದು. ಆದರೆ ಬಹಳ ಹಿಂದಿನಿಂದಲೂ ಹಾರುವ ತಟ್ಟೆಗಳ ಬಗ್ಗೆ ವರದಿಗಳಿವೆ. ಅನೇಕ ಚಿತ್ರಗಳು ಚಮತ್ಕಾರಿ ಚಿತ್ರಗಳಲ್ಲ ಎಂಬುದು ಸಾಬೀತಾಗಿದೆ.

ಕೆಲವು ವರ್ಷಗಳ ಹಿಂದಷ್ಟೇ ನ್ಯೂಜಿಲ್ಯಾಂಡಿನಲ್ಲಿ ಒಂದು ಹಾರುವ ತಟ್ಟೆ ಕಾಣಿಸಿಕೊಂಡಿದೆ ಎಂದು ದೊಡ್ಡದಾಗಿ ವರದಿಯಾಗಿತ್ತು. ಅದರ ಫೋಟೋ ಸಹ ಪ್ರಕಟವಾಗಿತ್ತು. ಅದಾದ ನಂತರ ಬ್ರಿಟನ್ನ ಹಳ್ಳಿಗಾಡಿನಲ್ಲಿ ರಾತ್ರಿ ಆಕಾಶದಲ್ಲಿ ಐದು ಬೆಳಕಿನ ಚುಕ್ಕೆಗಳು ಒಂದೇ ಸಮನೆ ಹಾರಾಟ ನಡೆಸಿದ್ದನ್ನು ನೂರಾರು ಜನರು ನೋಡಿದ್ದಾಗಿ `ದಿ ಡೈಲಿ ಮೇಲ್' ವರದಿ ಮಾಡಿತ್ತು. ಈ ಬೆಳಕಿನ ಚುಕ್ಕಿಗಳು ಮಾನವ ನಿಮರ್ಿತ ವಸ್ತುಗಳೋ ಅಲ್ಲವೋ ಗೊತ್ತಿರಲಿಲ್ಲ. ಈ ಬಗ್ಗೆ `ಏರ್ ಟ್ರಾಫಿಕ್ ಕಂಟ್ರೋಲ್ ಸೆಂಟರ್' ಬಳಿ ಯಾವುದೇ ಮಾಹಿತಿ ಇರಲಿಲ್ಲ.

ಜನರು ನಿಜವಾಗಿಯೂ ಹಾರುವ ತಟ್ಟೆಗಳನ್ನು ನೋಡಿದ್ದಾರೆಯೆ ಎಂಬ ಬಗ್ಗೆ ಬ್ರಿಟಿಷ್ ರಕ್ಷಣಾ ಸಚಿವಾಲಯ ಹಿಂದಿನಿಂದಲೂ ವಿಚಾರಣೆ ನಡೆಸಿಕೊಂಡು ಬರುತ್ತಿದೆ. ಸಚಿವಾಲಯ ಹಾಗೂ ಜನರ ಸಂವಾದವಿರುವ ಫೈಲುಗಳನ್ನು (`ಎಕ್ಸ್-ಫೈಲ್ಸ್') ಅದು ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ. ಹಾರುವ ತಟ್ಟೆಗಳ ಬಗ್ಗೆ ಪ್ರತಿವರ್ಷ ಸಚಿವಾಲಯಕ್ಕೆ ಕನಿಷ್ಠ ನೂರು ವರದಿಗಳು ಬರುತ್ತವಂತೆ. ಅವುಗಳ ಸತ್ಯಾಂಶ ಎಷ್ಟು ಎಂದು ಸಚಿವಾಲಯ ಖಚಿತಪಡಿಸಿಲ್ಲ.

ಹಿಂದೆ ಅಮೆರಿಕದ ಸೇನೆ ಸಹ ಈ ರೀತಿ ವಿಚಾರಣೆ (`ಪ್ರಾಜೆಕ್ಟ್ ಬ್ಲ್ಯೂಬುಕ್') ನಡೆಸಿತ್ತು. `ಹಾರುವ ತಟ್ಟೆಗಳೆಲ್ಲ ಕೇವಲ ಕಲ್ಪನೆ' ಎಂದು ವರದಿ ನೀಡಿತ್ತು. ಆದರೆ ಅದು ರಹಸ್ಯವಾಗಿ ತನ್ನ ತನಿಖೆ ಮುಂದುವರಿಸಿದೆ ಎನ್ನುವವರೂ ಇದ್ದಾರೆ.

ಹಾರುವ ತಟ್ಟೆಗಳು ನಿಜವೋ ಸುಳ್ಳೋ ಗೊತ್ತಿಲ್ಲ. ಈ ಬಗ್ಗೆ ಯಾವುದನ್ನೂ ಖಚಿತವಾಗಿ ಸಾಬೀತು ಮಾಡಲಾಗಿಲ್ಲ. ಅದನ್ನು ನೋಡಿರುವುದಾಗಿ ಹೇಳುವ ಜನರಂತೂ ತಮ್ಮ ಮಾತು ನಿಜ ಎಂದು ವಾದಿಸುತ್ತಾರೆ.

 

ಎಲ್ಲರನ್ನೂ ಸಲಹುವ ಗೋವು

ಹಸುಗಳ ಉಪಯೋಗ ಬಹಳ. ಅದು ದೇಶದ ಆಥರ್ಿಕ ಶಕ್ತಿಯ ಆಧಾರ. ಕುಟುಂಬದ ಬಂಧು. ಹಾಲುಕೊಟ್ಟು ಸಲಹುವ ತಾಯಿ. `ನೀನ್ಯಾರಿಗಾದೆಯೋ ಎಲೆ ಮಾನವ, ಹರಿ ಹರಿ ಗೋವು ನಾನು' - ಈ ಗೀತೆ ಕೇಳಿಲ್ಲವೆ? ವೇದ, ಪುರಾಣಗಳು ಗೋವನ್ನು ಕೊಂಡಾಡಿವೆ. ಶ್ರೀಕೃಷ್ಣ ಗೋವುಗಳನ್ನು ಕಾಪಾಡಿ ಸಲಹುವ ಗೋವಿಂದ, ಗೋಪಾಲ ಎನಿಸಿದ್ದರೆ, ಶಿವನ ವಾಹನವೇ ಗೋವು.

ಭಾರತೀಯ ಪರಂಪರೆಯಲ್ಲಿ ಗೋವುಗಳನ್ನು ಕೊಲ್ಲುವುದು ಮಹಾಪಾಪ. ಗೋವನ್ನು ಭಾರತೀಯ ಸಮಾಜ ಪೂಜಿಸುತ್ತದೆ. ಇಲ್ಲಿ ಗೋಪೂಜೆಗಾಗಿಯೇ ಮೀಸಲಾದ ಹಬ್ಬಗಳಿವೆ.

ಗೋವು ಎಲ್ಲ ಮನುಷ್ಯರ ಎರಡನೇ ತಾಯಿ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ಗೋರಕ್ಷಣೆ ಎಲ್ಲರ ಕರ್ತವ್ಯ ಎಂದು ಅವರು ಸಾರಿದ್ದಾರೆ. ಸಕರ್ಾರ ಗೋಹತ್ಯೆಯನ್ನು ನಿಷೇಧಿಸಬೇಕು ಎಂದು ನಮ್ಮ ಸಂವಿಧಾನವೂ ಸಹ ನಿದರ್ೇಶಿಸಿದೆ.

ಹಿಂದೆ ಭಾರತದ ಎಲ್ಲ ಗ್ರಾಮೀಣ ಮನೆಗಳಲ್ಲೂ ಗೋವುಗಳಿದ್ದವು. ಹಸುಗಳು ಹಾಲು ನೀಡುತ್ತಿದ್ದರೆ ಎತ್ತುಗಳು ಕೃಷಿ ಹಾಗೂ ಸರಕುಸಾಗಣೆಗಳಿಗೆ ಬಳಸಲ್ಪಡುತ್ತಿದ್ದವು. ಹರಪ್ಪ ಪಳೆಯುಳಿಕೆಗಳಲ್ಲಿ ಗೋ-ಸಾಕಣೆ ಮಾಡುತ್ತಿದ್ದ ಚಿತ್ರಗಳೂ ದೊರಕಿವೆ.

ಗೋವು ಒಂದು ಕಾಲದಲ್ಲಿ ಶ್ರೀಮಂತಿಕೆಯ ಸೂಚಕವಾಗಿತ್ತು. ಅತಿಹೆಚ್ಚು ಗೋವುಗಳನ್ನು ಹೊಂದಿರುವವರು ಅತಿದೊಡ್ಡ ಶ್ರೀಮಂತರು ಎನಿಸುತ್ತಿದ್ದರು. ಜಗತ್ತಿನಲ್ಲಿ ಈಗ 130 ಕೋಟಿ ಗೋವುಗಳಿವೆ ಎಂದು ಅಂದಾಜಿಸಲಾಗಿದೆ. ಅತಿ ಹೆಚ್ಚು ಗೋವುಗಳಿರುವ ದೇಶ ಭಾರತ. ನಮ್ಮ ದೇಶದಲ್ಲಿ ಸುಮಾರು 40 ಕೋಟಿ ಗೋವುಗಳಿವೆ. ಅನಂತರದ ಸ್ಥಾನ ಬ್ರೆಜಿಲ್ ಹಾಗೂ ಚೀನಾಗಳದು. ಆ ದೇಶಗಳು ತಲಾ 15 ಕೋಟಿ ಹೊಂದಿವೆ. ಅಮೆರಿಕದಲ್ಲಿ 10 ಕೋಟಿ, ಆಫ್ರಿಕಾದಲ್ಲಿ 20 ಕೋಟಿ ಯೂರೋಪಿನಲ್ಲಿ 13 ಕೋಟಿ ಗೋವುಗಳು ಇವೆ.

ಜಗತ್ತಿನಲ್ಲೀಗ ಸುಮಾರು 800 ಗೋವಿನ `ತಳಿ'ಗಳನ್ನು (ಬೇರೆಬೇರೆ ಶಾರೀರಿಕ ರೂಪಲಕ್ಷಣ) ಹೆಸರಿಸಲಾಗಿದೆ. ಭಾರತವೇ ವಿವಿಧ ಪ್ರಮುಖ, ಪ್ರಸಿದ್ಧ ಗೋತಳಿಗಳ ತವರು. ಭಾರತ ಮೂಲದ ಗೋತಳಿಗಳನ್ನು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕ, ಮತ್ತು ಅಮೆರಿಕಗಳಲ್ಲಿ ಸಾಕಲಾಗುತ್ತಿದೆ.

ಧಾಮರ್ಿಕ ಶುದ್ಧೀಕರಣಕ್ಕೆ ಬಳಸುವ ಅತಿಮುಖ್ಯ ಪದಾರ್ಥವಾದ `ಪಂಚಗವ್ಯ'ದಲ್ಲಿ ಹಾಲು, ಮೊಸರು, ತುಪ್ಪ, ಗಂಜಲ (ಗೋಮೂತ್ರ) ಹಾಗೂ ಸಗಣಿ ಈ ಐದು ಗೋ-ಉತ್ಪನ್ನಗಳಿರುತ್ತವೆ.
  
ಹಸುವಿನ ಹಾಲು ಪೌಷ್ಟಿಕವಾದದ್ದು. ಪೂಜೆಯಲ್ಲಿ ಬಳಸುವ ಪವಿತ್ರ ಪದಾರ್ಥ. ಶಾಸ್ತ್ರಗಳ ಪ್ರಕಾರ ಸಾತ್ವಿಕ (ಆತ್ಮಕ್ಕೆ ಹಿತವಾದ ಪರಿಶುದ್ಧ ಗುಣವುಳ್ಳ) ಆಹಾರ. ಹಾಲಿನಿಂದ ಉತ್ಪಾದಿಸುವ ಮೊಸರು, ಬೆಣ್ಣೆ, ತುಪ್ಪಗಳೂ ಸಹ ಸಾತ್ವಿಕ-ಪೌಷ್ಟಿಕ ಪದಾರ್ಥಗಳೇ. ತುಪ್ಪವಿಲ್ಲದೇ ಹೋಮ ಮಾಡುವುದು ಸಾಧ್ಯವಿಲ್ಲ. ಹಸುವಿನ ಕ್ಷೀರೋತ್ಪನ್ನಗಳು ಭಾರತೀಯ ಪರಂಪರೆಯಲ್ಲಿ ಅಷ್ಟು ಹಾಸುಹೊಕ್ಕಾಗಿವೆ. ಈಚೆಗೆ ಕೆಲವು ಅತಿನಿಷ್ಠ ಸಸ್ಯಾಹಾರಿಗಳು (ವೇಗನ್ಗಳು) ಕ್ಷೀರೋತ್ಪನ್ನಗಳನ್ನು ಬಳಸುವುದಿಲ್ಲ. `ಹಸುವಿನ ಹಾಲು ಅದರ ಕರುವಿಗಾಗಿ ಸೃಷ್ಟಿಯಾಗುತ್ತದೆ. ಅದನ್ನು ಬಳಸುವ ಹಕ್ಕು ಮನುಷ್ಯರಿಗಿಲ್ಲ' ಎನ್ನುವವರೂ ಇದ್ದಾರೆ.

ಗೋಮೂತ್ರದಲ್ಲಿ ಔಷಧೀಯ ಗುಣಗಳಿವೆ ಎಂಬ ಅಂಶವನ್ನು ಆಧುನಿಕ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಗೋವಿನ ಸಗಣಿಯೂ `ಛೀ, ಥೂ' ಎನ್ನುವ ಪದಾರ್ಥವಲ್ಲ. ಅದು ಕೃಷಿಯಲ್ಲಿ ಒಳ್ಳೆಯ ಗೊಬ್ಬರ, ಮನೆಗಳಲ್ಲಿ ಒಳ್ಳೆಯ ನಂಜುನಿವಾರಕ (ಇನ್ಫೆಕ್ಷನ್ ತಡೆಯುವ) ಪದಾರ್ಥ. ಮಾಲಿನ್ಯ (ಪೊಲ್ಯೂಷನ್) ತಡೆಯುವ ಶಕ್ತಿ ಸಹ ಅದಕ್ಕಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹಳ್ಳಿಗಳಲ್ಲಿ ಹಾಗೂ ನಗರಗಳ ಸಂಪ್ರದಾಯಸ್ಥರ ಮನೆಗಳಲ್ಲಿ ಈಗಲೂ ಸಗಣಿ ನೀರನ್ನು ಮನೆ ಮುಂದಿನ ಅಂಗಳದ ನೆಲಕ್ಕೆ ಹಾಕುತ್ತಾರೆ. ಹಳ್ಳಿಗಳಲ್ಲಿ ಅನೇಕರು ಸಗಣಿಯಿಂದ ನೆಲ ಹಾಗೂ ಗೋಡೆಯನ್ನು ಸಾರಿಸುತ್ತಾರೆ. ಸಗಣಿಯನ್ನು ರೊಟ್ಟಿಯಂತೆ ತಟ್ಟಿ ಒಣಗಿಸಿದ `ಬೆರಣಿ' ಸೌದೆಗಿಂತಲೂ ಒಳ್ಳೆಯ ಇಂಧನ.

ಅನೇಕ ದೇಶಗಳಲ್ಲಿ ಸಗಣಿಯನ್ನು ಗೊಬ್ಬರ ಹಾಗೂ ಇಂಧನಗಳ ರೂಪದಲ್ಲಿ ಬಳಸುತ್ತಾರೆ. `ಗೋಬರ್ ಗ್ಯಾಸ್' ಘಟಕಗಳು ಸಗಣಿಯಿಂದ ಅಡುಗೆ ಗ್ಯಾಸ್ ತಯಾರಿಸುತ್ತವೆ. ಸಗಣಿಯಲ್ಲಿರುವ `ಬಯೋಗ್ಯಾಸ್'ನಿಂದ ವಿದ್ಯುತ್ ಸಹ ಉತ್ಪಾದಿಸಬಹುದು! ನಿಮಗೆ ಗೊತ್ತೆ? ಭಾರತೀಯ ರೈಲ್ವೆ ಇಲಾಖೆ, ತನ್ನ ಉಗಿ-ಎಂಜಿನ್ಗಳ (ಸ್ಟೀಮ್ ಲೋಕೋಮೋಟಿವ್) ಸ್ಮೋಕ್ಬಾಕ್ಸ್ಗಳನ್ನು ಮುಚ್ಚಲು ಸಗಣಿಯನ್ನು ಬಳಸುತ್ತದೆ!

ಜಾಗತಿಕ ತಾಪ (ಗ್ಲೋಬಲ್ ವಾಮರ್ಿಂಗ್) ಹೆಚ್ಚಲು ಗೋವುಗಳ ತೇಗಿನಿಂದ ಹೊರಬರುವ ಗ್ಯಾಸ್ ಸಹ ಕಾರಣ ಎಂಬ ಮಾತಿದೆ. ಗೋವುಗಳು ಪ್ರತಿವರ್ಷ 10 ಕೋಟಿ ಟನ್ ಹೈಡ್ರೋಕಾರ್ಬನ್ ಹೊರಬಿಡುತ್ತವೆ ಎಂದು ಅಂದಾಜಿಸಲಾಗಿದೆ. 10 ಗೋವುಗಳು ಹೊರಬಿಡುವ ಎಲ್ಲ ಗ್ಯಾಸ್ ಅನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವಾದರೆ, ಅದರಿಂದ ಇಡೀ ವರ್ಷ ನಿಮ್ಮ ಮನೆಯಲ್ಲಿ ಅಡುಗೆ ಮಾಡಬಹುದು!

ಗೋವುಗಳು ಸಾಧಾರಣವಾಗಿ 20 ವರ್ಷ ಬದುಕುತ್ತವೆ. ಆದರೆ 7 ವರ್ಷಗಳಿಗಿಂತ ಹೆಚ್ಚು ಬದುಕಲು ಪರಿಸ್ಥಿತಿ ಬಿಡುವುದಿಲ್ಲ. ಗೋಮಾಂಸ ತಿನ್ನುವವರಿಗಾಗಿ ಕಟುಕರು ಗೋವುಗಳನ್ನು ಕೊಂದುಬಿಡುತ್ತಾರೆ. `ಬಿಗ್ ಬಥರ್ಾ' ಎಂಬ ಹಸುವಿನ ಹೆಸರಿನಲ್ಲಿ ದೀಘರ್ಾಯುಷ್ಯದ ದಾಖಲೆ ಇದೆ. 1993ರಲ್ಲಿ ಅದು 48 ವರ್ಷ ಮುಗಿಸಿತ್ತು. ಅತಿ ಹೆಚ್ಚು, ಅಂದರೆ 39, ಕರುಗಳನ್ನು ಹಾಕಿದ ದಾಖಲೆಯೂ ಅದರದೇ.


 

ಜೀವರಕ್ಷಕ ಸೂರ್ಯ

ಕೆಂಪಗೆ ದೊಡ್ಡದಾಗಿ ಕಾಣುವ ಸೂರ್ಯನನ್ನು ನೋಡಿದಾಗ ನಮ್ಮ `ಮೂಡ್' ಉತ್ಸಾಹಭರಿತವಾಗುತ್ತದೆ! ನಮಗೆ ಕಾಣುತ್ತಿರುವ ಹಾಗೆ, ಈ ವಿಶ್ವದಲ್ಲಿ ಸೂರ್ಯನಷ್ಟು ಪಕಾಶಮಾನವಾದ ವಸ್ತು ಇನ್ಯಾವುದೂ ಇಲ್ಲ. ಹೀಗಾಗಿ ಸೂರ್ಯನ ಬಗ್ಗೆ ನಮಗೆ ಬಹಳ ಕುತೂಹಲ.

1. ಸೂರ್ಯ ಒಂದು ನಕ್ಷತ್ರ. ಭೂಮಿಯಲ್ಲಿರುವ ಎಲ್ಲ ಜೀವರಾಶಿಗಳಿಗೆ ಸೂರ್ಯನ ಶಕ್ತಿಯೇ ಆಧಾರ. ಸೂರ್ಯ ನಮಗೆ ಶಾಖ, ಶಕ್ತಿ, ಆರೋಗ್ಯ ನೀಡುತ್ತಾನೆ. ಈ ಭೂಮಿಯಲ್ಲಿ ಜೀವಿಗಳು ಇರುವುದೇ ಸೂರ್ಯನಿಂದ ಜೀವಶಕ್ತಿಯನ್ನು ಪಡೆದುಕೊಂಡು.

2. ವಿವಿಧ ತಾಪಮಾನಗಳು, ಬೇಸಿಗೆ, ಮಳೆ, ಚಳಿಗಾಲಗಳು, ವಿವಿಧ ಬೆಳೆಗಳು, ನಾವು ತಿನ್ನುವ ಅನ್ನ, ಆಹಾರ, ನಿದ್ರೆ - ಎಲ್ಲಕ್ಕೂ ಸೌರಶಕ್ತಿ (ಹಾಗೂ ಭೂಮಿಯ ಪರಿಭ್ರಮಣೆ) ಕಾರಣ. ನೆನಪಿರಲಿ! ನಮ್ಮ ಭೂಮಿ ಸೂರ್ಯನ ಸುತ್ತ ಸುತ್ತುತ್ತಿದೆ! ಸೂರ್ಯ ಇಲ್ಲದಿದ್ದರೆ ಭೂಮಿ ತಣ್ಣಗೆ ಕೊರೆಯುವ ವಸ್ತುವಾಗಿರುತ್ತಿತ್ತು. ಇಲ್ಲಿ ಯಾವುದೇ ಜೀವಿಗಳು ಇರುತ್ತಿರಲಿಲ್ಲ. ಭೂಮಿ `ಸುಂಯ್' ಎಂದು ಬ್ರಹ್ಮಾಂಡದಲ್ಲಿ ಎಲ್ಲೆಲ್ಲೋ ಗಿರಕಿ ಹೊಡೆಯುತ್ತಿತ್ತು!

3. ಸ್ವಯಂ ಪ್ರಭೆ ಇರುವ (ತನಗೆ ತಾನೇ ಬೆಳಗುತ್ತಿರುವ) ಆಕಾಶಕಾಯಗಳೇ ನಕ್ಷತ್ರಗಳು. ಈ ಬ್ರಹ್ಮಾಂಡದಲ್ಲಿ (ಯೂನಿವಸರ್್) ಸೂರ್ಯನಿಗಿಂತಲೂ ದೊಡ್ಡ ಹಾಗೂ ಪ್ರಕಾಶಮಾನವಾದ ನಕ್ಷತ್ರಗಳಿವೆ. ಆದರೆ ಅವು ಬಹಳ ಬಹಳ ದೂರ ಇರುವುದರಿಂದ ಸೂರ್ಯನಷ್ಟು ಪ್ರಕಾಶಮಾನವಾಗಿ ಕಾಣುವುದಿಲ್ಲ. ನಿಮ್ಮ ಪಕ್ಕದಲ್ಲೇ ಇರುವ ಚಿಕ್ಕ ಟಾಚರ್್ಲೈಟ್ ಬಹಳ ದೂರದಲ್ಲಿ ಬರುತ್ತಿರುವ ವಾಹನದ ಹೆಡ್ಲೈಟ್ಗಿಂತಲೂ ಪ್ರಕಾಶಮಾನವಾಗಿ ಇರುವಂತೆ ಕಣುವುದಿಲ್ಲವೆ? ಇದೂ ಹಾಗೇ. ಸೂರ್ಯ ಭೂಮಿಗೆ ಅತ್ಯಂತ ಸಮೀಪ ಇರುವ ನಕ್ಷತ್ರ.

4. ಸೂರ್ಯನೇನೂ ಸಣ್ಣವನಲ್ಲ. ಭೂಮಿಗಿಂತಲೂ 109 ಪಟ್ಟು ದೊಡ್ಡ ಗಾತ್ರ ಅವನದು! ಭೂಮಿಯ ತ್ರಿಜ್ಯ (ರೇಡಿಯಸ್) 6,376 ಕಿ.ಮೀ ಆದರೆ ಸೂರ್ಯನ ತ್ರಿಜ್ಯ 6,96,000 ಕಿ.ಮೀ.

5. ನೀವು ಸೂರ್ಯನನ್ನು ಮುಟ್ಟುವಂತಿಲ್ಲ! ಅವನು ಸುಟ್ಟುಬಿಡುತ್ತಾನೆ. ಸೂರ್ಯ ಭೂಮಿಗೆ ಹತ್ತಿರದಲ್ಲಿದ್ದಾನೆ ನಿಜ. ಆದರೆ ಇಲ್ಲಿನ ಜೀವಿಗಳನ್ನು ಸುಟ್ಟುಹಾಕದಿರುವಷ್ಟು, ಅಂದರೆ ಸುಮಾರು 15 ಕೋಟಿ ಕಿ.ಮೀ. ದೂರದಲ್ಲಿದ್ದಾನೆ! ಎಲ್ಲರೂ ಸೇಫ್!

6. ಸೂರ್ಯನ ಹತ್ತಿರ ಹೊದಂತೆ ಬಿಸಿ ಜಾಸ್ತಿಯಾಗುತ್ತಾ ಹೋಗುತ್ತದೆ. ಸೂರ್ಯನ ಬಳಿಗೆ ನೀವೊಂದು ರಾಕೆಟ್ ಕಳುಹಿಸಿದರೆ ಅದು ಅವನನ್ನು ಮುಟ್ಟುವ ಮೊದಲೇ ಕರಗಿಹೋಗುತ್ತದೆ! ಸೂರ್ಯನ ಶಾಖ ಎಷ್ಟು? ಅವನ ಮೇಲ್ಮೈ ತಾಪಮಾನ 5700 ಡಿಗ್ರಿ ಸೆಲ್ಸಿಯಸ್! ಭೂಮಿಯಲ್ಲಿ ಸುಮಾರು 20-30 ಡಿಗ್ರಿ ಇರುತ್ತದೆ ಅಷ್ಟೆ.

7. ಸೂರ್ಯನ ವಯಸ್ಸೆಷ್ಟು ಊಹಿಸಬಲ್ಲಿರಾ? ಹೆಚ್ಚೇನಿಲ್ಲ, 450 ಕೋಟಿ ವರ್ಷಗಳು!! ಭೂಮಿ ತನ್ನ ಅಕ್ಷದ ಮೇಲೆ 24 ಗಂಟೆಗಳಿಗೆ ಒಂದು ಸುತ್ತು ಸುತ್ತುತ್ತದೆ. ಸೂರ್ಯ ಸುಮಾರು 26 ದಿನಗಳಿಗೊಮ್ಮೆ (ಭೂಮಿಯ ದಿನಗಳು) ಸುತ್ತುತ್ತಾನೆ.

8. ಭೂಮಿ ಘನವಸ್ತು (ಸಾಲಿಡ್) ಎಂಬುದು ನಮಗೆ ಗೊತ್ತು. ಭೂಮಿ ವಿವಿಧ ಪದರಗಳಿಂದ (ಲೇಯರ್ಸ್) ಮಾಡಲ್ಪಟ್ಟಿದೆ. ಆದರೆ ಸೂರ್ಯ ಭೂಮಿಯಂತೆ ಸಾಲಿಡ್ ಅಲ್ಲ. ಸೂರ್ಯನ ಶಾಖ ತಡೆದುಕೊಳ್ಳುವ ಶಕ್ತಿ ನಿಮಗೆ ಇದ್ದರೂ ನೀವು ಸೂರ್ಯನ ಮೇಲೆ ನಿಂತುಕೊಳ್ಳುವುದು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ನೆಲವೇ ಇಲ್ಲ! ವಾಸ್ತವವಾಗಿ ಸೂರ್ಯ ಬಿಸಿ ಗಾಳಿಗಳ ಉಂಡೆ. ಜ್ವಾಲೆಗಳನ್ನು ಉಗುಳುತ್ತಿರುವ ಬೆಂಕಿಯ ಚೆಂಡು!! ಆದರೆ ಅವನಿಗೂ ಪದರಗಳಿವೆ.

9. ಒಂದು ವಿಸ್ಮಯ ಸಂಗತಿ ಗೊತ್ತೆ? ಸೂರ್ಯನ ಮೇಲ್ಮೈ ಬಹಳ ಬಿಸಿ. ಆದರೆ ಅವನ ವಾತವರಣ ಇನ್ನೂ ಬಿಸಿ. ಭೂಮಿಯ ವಾತಾವರಣದಲ್ಲಿ 30 ಡಿಗ್ರಿ ಇದ್ದರೆ ಭೂಮಿಯನ್ನು ಕರೆದುಕೊಂಡು ಒಳಗೆ ಕೇಂದ್ರಭಾಗಕ್ಕೆ ಹೋದರೆ ಅಲ್ಲಿ ಬಹಳ ಬಿಸಿ! ಭುಮಿಯ ಒಳಹೊಕ್ಕಷ್ಟೂ ಬಿಸಿ ಜಾಸ್ತಿ. ಸೂರ್ಯ ಭೂಮಿಗೆ ತದ್ವಿರುದ್ಧ. ಅವನಿಂದ ನೀವು ದೂರಬಂದಷ್ಟೂ ಬಿಸಿ ಜಾಸ್ತಿಯಾಗುತ್ತದೆ. ಸೂರ್ಯನ ವಾತಾವರಣ ಅವನ ಮೇಲ್ಮೈಗಿಂತಲೂ ಶಾಖ. ಅದು ಲಕ್ಷಾಂತರ ಡಿಗ್ರಿ ಶಾಖವನ್ನು ಹೊಂದಿದೆ. ಇದೇಕೆ ಹೀಗೆ? ವಿಜ್ಞಾನಿಗಳಿಗೂ ಸರಿಯಾದ ಕಾರಣ ಗೊತ್ತಿಲ್ಲ!

ಎಚ್ಚರಿಕೆ: ಸೂರ್ಯನ ಬಗ್ಗೆ ಎಷ್ಟೂ ಕುತೂಹಲ ಇದ್ದರೂ ಸೂರ್ಯನತ್ತ ನೇರವಾಗಿ ನೋಡಬೇಡಿ. ಬೈನಾಕ್ಯುಲರ್ಸ್, ಟೆಲಿಸ್ಕೋಪ್ ಹಾಕಿಕೊಂಡಂತೂ ನೋಡಲೇಬೇಡಿ. ಸೂರ್ಯನ ಶಾಖಕ್ಕೆ ನಿಮ್ಮ ಕಣ್ಣು ಸುಟ್ಟುಹೋಗುತ್ತದೆ. ನೀವು ಕುರುಡರಾಗಲೂಬಹುದು.

7-7-7 ರ 7 ಹೊಸ ಅದ್ಭುತಗಳು!

07-07-2007ರಂದು ಪೋಚರ್ುಗಲ್ನ ಲಿಸ್ಬನ್ನಲ್ಲಿ ಏಳು ಮಾನವನಿಮರ್ಿತ ಅದ್ಭುತ ಸ್ಮಾರಕಗಳನ್ನು ಘೊಷಿಸಲಾಗಿದೆ.

ಈ ಕುರಿತ ಮತದಾನಕ್ಕಾಗಿ 21 ಸ್ಮಾರಕಗಳು ಸ್ಪಧರ್ಿಸಿದ್ದವು. ಉಚಿತ ಹಾಗೂ ಶುಲ್ಕ ಕೊಡುವ ಮತಗಳನ್ನು ಹಾಕುವ ಮೂಲಕ ಜನರು 7 ಸ್ಮಾರಕಗಳನ್ನು ಆರಿಸಿದರು. ನಿರೀಕ್ಷೆಯಂತೆ ಉಳಿದ 14 ಸ್ಮಾರಕಗಳಿರುವ ದೇಶಗಳಿಗೆ ನಿರಾಶೆಯಾಯಿತು. ಆದರೆ ಇದೇನೂ 7 ಅದ್ಭುತಗಳ ಅಧಿಕೃತ ಪಟ್ಟಿ ಅಲ್ಲ. `ನ್ಯೂ ಓಪನ್ ವಲ್ಡರ್್ ಕಾಪರ್ೋರೇಷನ್' ಎಂಬ ಖಾಸಗಿ ಕಂಪೆನಿ ನಡೆಸಿದ ಕಸರತ್ತು ಇದು.

`ವಿಶ್ವ ಪರಂಪರೆ ಸ್ಮಾರಕ'ಗಳನ್ನು ಘೋಷಿಸುವ ವಿಶ್ವಸಂಸ್ಥೆಯ `ಯುನೆಸ್ಕೋ' ಈ ಕಸರತ್ತಿಗೂ ತನಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಶುದ್ಧ ಗುಣಾತ್ಮಕ ಆಯ್ಕೆ ಖಂಡಿತ ಅಲ್ಲ. ಅದು ಎಲ್ಲರಿಗೂ ಗೊತ್ತು. ಹಾಗಿದ್ದರೆ ಕಾಂಬೋಡಿಯಾದ ಆಂಕೋರ್ ವಾಟ್ ಖಂಡಿತ ಆಯ್ಕೆಯಾಗುತ್ತಿತ್ತು. ಕೇವಲ ಸಂಖ್ಯಾಬಲದ ಮೇಲೆ ನಡೆದ ಆಯ್ಕೆ ಇದು. ಹೀಗಾಗಿ ಹೆಚ್ಚು ಮತಗಳಿಸಿದ ಕೆಲವು ಸ್ಮಾರಕಗಳು `ಗೆದ್ದಿವೆ'. ಹಲವು `ಸೋತಿವೆ'.

ಭಾರತದ ತಾಜ್ ಮಹಲ್ ಗೆದ್ದಿದೆ. ಅದು ಅದ್ಭುತ ವಾಸ್ತು ಎಂಬುದರಲ್ಲಿ ಅನುಮಾನವೇ ಇಲ್ಲ. ತಾಜ್ ಅನ್ನು ಗೆಲ್ಲಿಸಲು ಭಾರತೀಯರು ಭಾರಿ ಪ್ರಚಾರ ಆಂದೋಲನವನ್ನೇ ಕೈಗೊಂಡಿದ್ದರು. ಬ್ರೆಜಿಲ್ನ `ಕ್ರೈಸ್ಟ್ ರಿಡೀಮರ್' ಸಹ ವಿಜಯಗಳಿಸಿದೆ. ಯೇಸು ಕ್ರಿಸ್ತನ ಈ ಪ್ರತಿಮೆಯನ್ನು `ಗೆಲ್ಲಿಸಲು' `ಕ್ರಿಸ್ತನಿಗೆ ನಿಮ್ಮ ಮತ' ಎಂಬ ಭಾರಿ ಪ್ರಚಾರ ಕೈಗೊಳ್ಳಲಾಗಿತ್ತು. ಈ ಆಂದೋಲನಕ್ಕೆ ಖಾಸಗಿ ಕಂಪೆನಿಗಳ ಬೆಂಬಲವೂ ಇತ್ತು. ಈ ಪ್ರತಿಮೆಗಿಂತ ಮೂರು ಪಟ್ಟು ಹೆಚ್ಚು ಎತ್ತರದ, ದೊಡ್ಡದಾದ `ಸ್ಟ್ಯಾಚ್ಯೂ ಆಫ್ ಲಿಬಟರ್ಿ' (ಅಮೆರಿಕ) ಸೋಲುಂಡಿದೆ! ಇದೇ ಸಂಖ್ಯಾಬಲದ ಮಹಿಮೆ!

ಪ್ರವಾಸೋದ್ಯಮ ಆದಾಯ ಹೆಚ್ಚಿಸಿಕೊಳ್ಳಲು ಇದು ನೆರವಾಗುತ್ತದೆ. ಈಗ `ಗೆದ್ದ' ದೇಶಗಳ ಪ್ರವಾಸೋದ್ಯಮ ವರಮಾನ ಅಧಿಕವಾಗಲಿದೆ!

ವಿಜಯಿಗಳಾಗಿರುವ ಹೊಸ 7 ಅದ್ಭುತಗಳು ಇವು:

1. ಚಿಚೆನ್ ಇಟ್ಜಾ, ಮೆಕ್ಸಿಕೋ: ಇದು ಪುರಾತತ್ವ ಸ್ಥಳ. ಮಾಯಾ ನಾಗರಿಕತೆಗೆ ಸೇರಿದ  1800 ವರ್ಷಕ್ಕೂ ಹಳೆಯದಾದ ನಗರ. ಈಗಿನ ಮೆಕ್ಸಿಕೋದ ಉತ್ತರಭಾಗದ ಯುಕಾಟನ್ ಪರ್ಯಯ ದ್ವೀಪದಲ್ಲಿದೆ.

2. ಕ್ರೈಸ್ಟ್ ರಿಡೀಮರ್, ಬ್ರೆಜಿಲ್: 38 ಮೀಟರ್ (105 ಅಡಿ) ಎತ್ತರದ ಯೇಸು ಕ್ರಿಸ್ತನ ಪ್ರತಿಮೆ ಇದು. ರಿಯೋ ಡಿ ಜನೈರೋ ನಗರದ 700 ಮೀಟರ್ ಎತ್ತರದ ಕಾವರ್ೋಕೆಡೋ ಶಿಕರದ ತುದಿಯಲ್ಲಿ ಇದನ್ನು ನಿಮರ್ಿಸಲಾಗಿದೆ. ಭಾರತದ ಕನ್ಯಾಕುಮಾರಿ ಸಮುದ್ರದಲ್ಲಿರುವ ತಿರುವಳ್ಳುವರ್ ಪ್ರತಿಮೆ 133 ಅಡಿ ಎತ್ತರವಿದೆ.

3. ಗ್ರೇಟ್ ವಾಲ್ ಆಫ್ ಚೈನಾ: ಚೀನಾದ ಮಹಾಗೋಡೆ ಅದ್ಭುತವಾದ ನಿಮರ್ಾಣ. ಕ್ರಿ.ಪೂ 5ನೇ ಶತಮಾನದಿಂದ ಕ್ರಿ.ಶ 16ನೇ ಶತಮಾನದವರೆಗೆ ಅದನ್ನು ನಿಮರ್ಿಸಲಾಗಿದೆ. ಶತ್ರುಗಳಿಂದ ಚೀನಾದ ಉತ್ತರ ಗಡಿರಕ್ಷಣೆ ಅದರ ನಿಮರ್ಾಣದ ಉದ್ದೇಶ. ಅದು 6400 ಕಿ.ಮೀ ಉದ್ದವಿದೆ!!

4. ಮಾಚು ಪಿಚು, ಪೆರು: ಇನ್ಕಾ ನಾಗರಿಕತೆಯ ಪಳೆಯುಳಿಕೆ ಇದು. 15ನೇ ಶತಮನಾದ ಇದು 1911ರವರೆಗೂ ಹೊರಗಿನವರಿಗೆ ತಿಳಿದಿರಲಿಲ್ಲ. ಇದು ಪೆರು ದೇಶದ ಉರುಂಬಾ ಕಣಿವೆಯಲ್ಲಿದೆ.

5. ಪೆಟ್ರಾ, ಜೋಡರ್ಾನ್: ಪುರಾತತ್ವ ಸ್ಥಳ. ಈಗಿನ ಜೋಡರ್ಾನ್ ಭೂಭಾಗದ ಪ್ರಾಚೀನ ಸಾಂಸ್ಕೃತಿಕ ಪರಂಪರೆಯ ಪಳೆಯುಳಿಕೆ ಇದು.

6. ರೋಮನ್ ಕಲೋಸಿಯಂ, ಇಟಲಿ: ಪ್ರಾಚೀನ ರೋಮ್ ನಗರದ ಬೃಹತ್ ಆ್ಯಂಪಿಥಿಯೇಟರ್ ಇದು. ಇದರಲ್ಲಿ 50,000 ಜನರು ಕೂತು ಕುಸ್ತಿ-ಕಾಳಗಗಳನ್ನು ವೀಕ್ಷಿಸುತ್ತಿದ್ದರು. ಕ್ರಿ.ಶ 80ರಲ್ಲಿ ಇದನ್ನು ನಿಮರ್ಿಸಲಾಯಿತು.

7. ತಾಜ್ ಮಹಲ್, ಭಾರತ: ಆಗ್ರ್ರಾದಲ್ಲಿ ಮುಘಲ್ ದೊರೆ ಷಹಜಹಾನ್ ತನ್ನ ಮಡದಿ ಮುಮ್ತಾಜಳಿಗಾಗಿ 1632-1648ರ ಅವಧಿಯಲ್ಲಿ ಕಟ್ಟಿಸಿದ `ಪ್ರೇಮ ಸ್ಮಾರಕ' ಇದು ಎನ್ನಲಾಗುತ್ತದೆ. ಈ ಅದ್ಭುತ ಕಟ್ಟಡದ ವಾಸ್ತುಶಿಲ್ಪಿ, ವಿನ್ಯಾಸಗಾರರು ಯಾರು ಎಂಬ ಚಚರ್ೆ ತಜ್ಞರ ನಡುವೆ ಇನ್ನೂ ನಡೆಯುತ್ತಲೇ ಇದೆ. ಆದರೆ ತಾಜ್ ಬಹು ಸುಂದರ ಎನ್ನುವುದರಲ್ಲಿ ಯಾರದೂ ತಕರಾರಿಲ್ಲ.


 

ಹಡಗು ಪ್ರವಾಸದ ಮೋಜು

ಹಡಗು ಪ್ರಯಾಣ ಈಗ ಪ್ರವಾಸಿಗರಿಗೆ ಅನಿವಾರ್ಯವೇನಲ್ಲ. ವಿಮಾನದಲ್ಲಿ ವೇಗವಾಗಿ ಸಂಚರಿಸಬಹುದು. ಆದರೂ ಈಗ ಹಡಗು ಪ್ರವಾಸ (ಕ್ರೂಯ್ಸಿಂಗ್) ತುಂಬಾ ಜನಪ್ರಿಯವಾಗುತ್ತಿದೆ. ಇದಕ್ಕೆ ಕಾರಣ ಮೋಜು, ಮಜಾ, ವೈಭವ! ಹಡಗಿನಲ್ಲಿ ಅನೇಕ ದಿನಗಳ ಕಾಲ ಸಿಗುವ ಮನೋರಂಜನೆ ಕೆಲವೇ ಗಂಟೆಗಳ ವಿಮಾನಪ್ರಯಾಣದಲ್ಲಿ ಸಿಗುವುದಿಲ್ಲ. ಹೀಗಾಗಿ ಲಕ್ಷಾಂತರ ಜನರು ಹಡಗು ಪ್ರವಾಸೋದ್ಯಮದಿಂದ ಆಕಷರ್ಿತರಾಗುತ್ತಿದ್ದಾರೆ.

ಅನೇಕ ದೊಡ್ಡ ಹಡಗುಗಳು ತಯಾರಾಗುತ್ತಿವೆ. ಆದರೆ ನಾವು ಈಗಿನ ವಿಷಯ ನೋಡೋಣ. ಸದ್ಯಕ್ಕೆ ಜಗತ್ತಿನ ಅತಿದೊಡ್ಡ ಹಡಗು ಪ್ರಯಾಣಿಕರ ಹಡಗಲ್ಲ. ಪೆಟ್ರೋಲಿಯಂ ಸಾಗಿಸುವ ಹಡಗು ಅದು. ಇಂತಹ ಹಡಗುಗಳನ್ನು `ಸೂಪರ್ಟ್ಯಾಂಕರ್ಸ್' ಎನ್ನುತ್ತಾರೆ. ಅತ್ಯಂತ ದೊಡ್ಡ ಸೂಪರ್ಟ್ಯಾಂಕರ್ ಎಂದರೆ ನಾವರ್ೆ ದೇಶದ `ನಾಕ್ ನೆವಿಸ್'. ಅದನ್ನು ಹಿಂದೆ `ಜಾಹರ್ ವೈಕಿಂಗ್' ಎನ್ನುತ್ತಿದ್ದರು. ಅದು ಸುಮಾರು ಅರ್ಧ ಕಿಲೋಮೀಟರ್ (458 ಮೀ, ಅಂದರೆ 1504 ಅಡಿ) ಉದ್ದವಿದೆ!! ಎತ್ತರ 69 ಮೀಟರ್ (229 ಅಡಿ). ಆದರೆ ಈಗ ಈ ಹಡಗನ್ನು ಸಂಚಾರಕ್ಕೆ ಬಳಸುತ್ತಿಲ್ಲ.

ದೇಶದಿಂದ ದೇಶಕ್ಕೆ ಸಾಮಾನು ಸಾಗಿಸುವ ಹಡಗನ್ನು `ಕಂಟೈನರ್ ಶಿಪ್' ಎನ್ನುತ್ತಾರೆ. ಕಂಟೈನರ್ ಅಂದರೆ ಗೊತ್ತಲ್ಲವೆ? ಸಾಮಾನು ತುಂಬುವ ಬಾಕ್ಸ್. ದೊಡ್ಡ ಟ್ರಕ್ ಗಾತ್ರದ ಬಾಕ್ಸ್ಗಳಲ್ಲಿ ಸಾಮಾನುಗಳನ್ನು ತುಂಬಿಸಿ ಈ ಹಡಗುಗಳಲ್ಲಿ ಇಡುತ್ತಾರೆ. ಇಂತಹ ಸಾವಿರಾರು ಉಕ್ಕಿನ ಬಾಕ್ಸ್ಗಳನ್ನು ಕಂಟೈನರ್ ಶಿಪ್ ಇಟ್ಟುಕೊಳ್ಳಬಲ್ಲುದು. ಜಗತ್ತಿನಲ್ಲೇ ಅತಿದೊಡ್ಡ ಕಂಟೈನರ್ ಶಿಪ್ ಎಂದರೆ `ಎಮ್ಮಾ ಮಸ್ಕರ್್'. ಅದರ ಉದ್ದ 397 ಮೀಟರ್. ಈಗಲೂ ಸಂಚಾರ ಮಾಡುತ್ತಿರುವ ಜಗತ್ತಿನ ಅತಿ ಉದ್ದದ ಹಡಗು ಎಂದರೆ ಇದೇ. ಈ ಹಡಗು ಇತರ ಸಾಮಾನು ಸಾಗಣೆ ಹಡಗುಗಳಿಗಿಂತಲೂ 1400 ಹೆಚ್ಚು ಕಂಟೈನರ್ಗಳನ್ನು ಸಾಗಿಸುತ್ತದೆ.

ಈಗ ಪ್ರಯಾಣಿಕರ ಹಡಗಿಗೆ ಬರೋಣ. `ಫ್ರೀಡಮ್ ಕ್ಲಾಸ್' ಹಡಗುಗಳು ಅತಿ ವೈಭವದ ಸೇವೆಯ ಯೋಜನೆ ಹೊಂದಿವೆ. `ರಾಯಲ್ ಕ್ಯಾರಿಬಿಯನ್ ಇಂಟರ್ನ್ಯಾಷನಲ್' ಕಂಪೆನಿಯ ಮೂರು ಹಡಗುಗಳುಅತಿ ದೊಡ್ಡ ಪ್ರಯಾಣಿಕರ ಹಡಗುಗಳು ಎನಿಸಿವೆ.

`ಫ್ರೀಡಂ ಆಫ್ ದಿ ಸೀಸ್' ದೊಡ್ಡ ಪ್ರಯಾಣಿಕರ ಹಡಗು. ಇದರಲ್ಲಿ 4300 ಪ್ರಯಾಣಿಕರಿಗೆ ಸ್ಥಳವಿದೆ. 15 ಪ್ಯಾಸೆಂಜರ್ ಡೆಕ್ (ಅಂತಸ್ತು) ಇವೆ. 1300 ಸಿಬ್ಬಂದಿ ಇರುತ್ತಾರೆ. ಈ ಹಡಗಿನ ಉದ್ದ 338.77 ಮೀಟರ್ (1,111.5 ಅಡಿ). ಎತ್ತರ 63.7 ಮೀಟರ್. ಇದರ ವೇಗ 21.6 ನಾಟ್ಗಳು (ಗಂಟೆಗೆ 40 ಕಿ.ಮೀ).

ಈ ಹಡಗಿನಲ್ಲಿ ಮೂರು ಈಜು ತಾಣಗಳಿವೆ. ಒಂದು ವಾಟರ್ ಪಾಕರ್್. ಇನ್ನೊಂದು ದೊಡ್ಡವರಿಗಾಗಿಯೇ ಮೀಸಲಾದ ಪೂಲ್. ಮತ್ತೊಂದು ಎಲ್ಲರೂ ಈಜಬಹುದಾದ ಪ್ರಧಾನ ಪೂಲ್. ಕಾಫಿ ಶಾಪ್, ಪಿಜ್ಜಾ ಸೆಂಟರ್, ಐಸ್ಕ್ರೀಂ ಶಾಪ್, ಬಾರ್, ಪಬ್ ಇವೆ. ಅಲ್ಲದೇ ಶಾಪಿಂಗ್ ಮಾಡಲು ಅನೇಕ ತೆರಿಗೆ ರಹಿತ ಅಂಗಡಿಗಳಿವೆ. 13ನೇ ಡೆಕ್ನಲ್ಲಿ ಆಟದ ವಲಯವಿದೆ. ರಾಕ್ ಕ್ಲೈಂಬಿಂಗ್ ವಾಲ್ ಸಹ ಇದೆ. ತೇಲಾಡಲು (ಸಫರ್ಿಂಗ್) ಫ್ಲೋರೈಡರ್ ಇದೆ. ಚಿಕ್ಕ ಗಾಲ್ಫ್ ಕೋಸರ್್ ಇದೆ. ಪೂರ್ಣ ಅಳತೆಯ ಬ್ಯಾಸ್ಕೆಟ್ಬಾಲ್ ಕೋಟರ್್ ಇದೆ. ಐಸ್ ಸ್ಕೇಟಿಂಗ್ ರಿಂಗ್ ಇದೆ. ಕ್ಯಾಸಿನೋ (ಜೂಜುಕಟ್ಟೆ) ಇದೆ. ಎಲ್ಲ ರೂಮುಗಳಲ್ಲೂ ಫ್ಲ್ಯಾಟ್ ಪ್ಯಾನೆಲ್ ಟಿವಿಗಳಿವೆ. ವೈಫೈ ಇಂಟರ್ನೆಟ್ ಸೌಲಭ್ಯವಿದೆ. ಸೆಲ್ ಫೋನ್ ಸಂಪರ್ಕ ವ್ಯವಸ್ಥೆ ಇದೆ. ಊಟ, ತಿಂಡಿ, ನಿದ್ರೆಗಳಿಗಂತೂ ಕೊರತೆಯೇ ಇಲ್ಲ!

ಯುದ್ಧ ವಿಮಾನಗಳನ್ನೂ ತನ್ನ ಮೇಲಿಟ್ಟುಕೊಂಡು ತೇಲುವ ನೌಕಾಪಡೆಯ ಸಮರ ಹಡಗುಗಳನ್ನು `ಏರ್ಕ್ರ್ಯಾಫ್ಟ್ ಕ್ಯಾರಿಯರ್ಸ್' ಎನ್ನುತ್ತಾರೆ. ಅವುಗಳಳ್ಲಿ ವೈಮಾನಿಕ ನೆಲೆ ಇರುತ್ತದೆ. ಕ್ಷಿಪಣಿಗಳಿರುತ್ತವೆ. ಅಣ್ವಸ್ತ್ರಗಳೂ ಇರಬಹುದು!

ಅಮೆರಿದ `ಯುಎಸ್ಎಸ್ ಎಂಟರ್ಪ್ರೈಸ್' ಜಗತ್ತಿನ ಮೊದಲ ಅಣ್ವಸ್ತ್ರ ಹೊಂದಿರುವ ಏರ್ಕ್ರ್ಯಾಫ್ಟ್ ಕ್ಯಾರಿಯರ್. ಅದರ ಉದ್ದ 342.3 ಮೀಟರ್ (1,123 ಅಡಿ). ಜಗತ್ತಿನ ಅತಿ ಉದ್ದದ ನೌಕಾಪಡೆ ಹಡಗು ಇದು. ಇದರಲ್ಲಿ ಎರಡು ಪರಮಣು ರಿಯಾಕ್ಟರ್ಗಳಿವೆ! ಅಮೆರಿಕದ `ನಿಮಿಟ್ಸ್' ಯುಎಸ್ಎಸ್ ಎಂಟರ್ಪ್ರೈಸ್ಗಿಂತಲೂ ಅತಿ ಭಾರವಾಗಿರುವ ಅಣ್ವಸ್ತ್ರ ಹಡಗು.


 

`ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್' ಎಂಬ ಅದ್ಭುತ!

ಭೂಮಿಯ ವಾತಾವರಣ ದಾಟಿ, ಗುರುತ್ವಾಕರ್ಷಣೆಯ ಗಡಿ ದಾಟಿ ಇನ್ನೂ ಆಚೆ ಇರುವ ಬಾಹ್ಯಾಕಾಶದಲ್ಲಿ (ಔಟರ್ಸ್ಪೇಸ್) ಶಾಶ್ವತವಾಗಿ ವಾಸಮಾಡಿಕೊಂಡಿದ್ದರೆ! ಮನುಷ್ಯನ ಈ ಕನಸನ್ನು ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ (ಅಂತಾರಾಷ್ಟ್ರೀಯ ಬಾಹ್ಯಾಕಾಶ ನೆಲೆ) ನನಸು ಮಾಡಿದೆ

ಈ ಭೂಮಿ, ಸೂರ್ಯ, ನಕ್ಷತ್ರಗಳು ಇವೆಲ್ಲಾ ಇರುವುದೂ ಬಾಹ್ಯಾಕಾಶದಲ್ಲೇ. ಆದರೆ ಭೂಮಿಯ ಗುರುತ್ವಾಕರ್ಷಣ ಶಕ್ತಿ ಹಾಗೂ ವಾತಾವರಣ ನಮ್ಮನ್ನು ಭೂಮಿಯಲ್ಲೇ ಬಂಧಿಸಿಟ್ಟಿವೆ. ಬೆಚ್ಚಗೆ ಸುಖವಾಗಿ ಇಟ್ಟಿವೆ! ನಮಗೆ ಬಾಹ್ಯಾಕಾಶ ಹೇಗಿರುತ್ತದೆ ಎಂಬ ಕಲ್ಪನೆ, ಅನುಭವ ಇಲ್ಲಿ ಸಿಗುವುದಿಲ್ಲ.

ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ (ಐಎಸ್ಎಸ್) ನಿಮಗೆ ಬಾಹ್ಯಾಕಾಶದ `ರುಚಿ' ತೋರಿಸುತ್ತದೆ. ಭಾರತ ಮೂಲದ ಸುನೀತಾ ವಿಲಿಯಮ್ಸ್ ಆರು ತಿಂಗಳು ಅಲ್ಲಿದ್ದು ಈಗತಾನೆ ವಾಪಸ್ಸು ಬಂದರು. ಈವರೆಗೆ ಹಲವಾರು ಗಗನಯಾತ್ರಿಗಳು ಅಲ್ಲಿಗೆ ಹೋಗಿಬಂದಿದ್ದಾರೆ. ಸದಾ ಅಲ್ಲಿ ಮೂರು ಸಿಬ್ಬಂದಿ ಇರುತ್ತಾರೆ. ಈವೆರೆಗೆ ಐದು ಶ್ರೀಮಂತ `ಬಾಹ್ಯಾಕಾಶ ಪ್ರವಾಸಿಗಳು' ಅಲ್ಲಿಗೆ ಹೋಗಿ ಕೆಲವು ದಿನಗಳ ಮಟ್ಟಿಗೆ ಇದ್ದು ಬಂದಿದ್ದಾರೆ.

ಏನಿದು ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್?

ಐಎಸ್ಎಸ್ ಬಾಹ್ಯಾಕಾಶದಲ್ಲಿ ಮನುಷ್ಯ ನಿಮರ್ಿಸುತ್ತಿರುವ ಹೊಸ ಮನೆ. ಈ ಹಿಂದೆ ಇಂತಹ ಅನೇಕ ಮನೆಗಳನ್ನು ನಿಮರ್ಿಸುವ ಪ್ರಯತ್ನ ನಡೆದಿತ್ತು. ಇದು ಇತ್ತೀಚಿನದು ಹಾಗೂ ಎಲ್ಲಕ್ಕಿಂತಲೂ ದೊಡ್ಡದು. ಅಲ್ಲಿ ಅಡುಗೆಮನೆ ಇದೆ. ಮಲಗಲು ಸ್ಲೀಪಿಂಗ್ ಬ್ಯಾಗ್ ಇರುವ ಕ್ಯಾಬಿನ್ಗಳಿವೆ. ಟಾಯ್ಲೆಟ್ಗಳಿವೆ. ವಾಷ್ ಬೇಸಿನ್ಗಳಿವೆ. ಸ್ನಾನಮಾಡಲು ಶವರ್ ಸಹ ಇದೆ! ಗಗನಯಾತ್ರಿ ತಜ್ಞರು ಕೆಲಸಮಾಡುವ ಸ್ಥಳ (ಅವರ ಆಫಿಸ್-ಲ್ಯಾಬ್) ಇದೆ. ಸೂರ್ಯನ ಶಾಖದಿಂದ ಅಲ್ಲಿ ವಿದ್ಯುತ್ ಶಕ್ತಿ ತಯಾರಿಸಿ ಬಳಸಲಾಗುತ್ತದೆ. ಅದಕ್ಕಾಗಿ ದೊಡ್ಡ ಸೋಲಾರ್ ಪ್ಯಾನೆಲ್ಗಳಿರುತ್ತವೆ.

ಬಾಹ್ಯಾಕಾಶದಲ್ಲಿ ಗಾಳಿ ಇಲ್ಲ, ನೀರಿಲ್ಲ, ಐಎಸ್ಎಸ್ ಒಳಗೆ ಸೂಕ್ತ ಪರಿಸರ ಹಾಗೂ ಜೀವರಕ್ಷಕ ವ್ಯವಸ್ಥೆಗಳನ್ನು ಕೃತಕವಾಗಿ ಸೃಷ್ಟಿಸಲಾಗಿದೆ. ಆದರೆ ಅಲ್ಲಿ ಭೂಮಿಯಷ್ಟು ಗುರುತ್ವಾಕರ್ಷಣೆ ಇಲ್ಲ. ಭೂಮಿಯ ಅನುಭವ ಅಲ್ಲಿ ನಿಮಗೆ ಸಿಗುವುದಿಲ್ಲ. ಅಲ್ಲಿ ನೀವು ತೇಲಾಡಿದಂತೆಯೇ `ನಡೆಯಬೇಕು'. ತೇಲಿಕೊಂಡೇ ಮಲಗಬೇಕು. ನಿದ್ರೆ ಬಂದಮೇಲೆ ಬೆಲೂನ್ ತರಹ ಹಾರಿಕೊಂಡುಹೋಗಿ ಗೋಡೆಗಳಿಗೆ ಬಡಿಯದಿರಲಿ ಎಂದು ಸ್ಲೀಪಿಂಗ್ ಬ್ಯಾಗ್ ಒಳಗೆ ತೂರಿಕೊಂಡು, ಬ್ಯಾಗಿಗೆ ತಮ್ಮನ್ನು ಕಟ್ಟಿಕೊಂಡು ಗಗನಯಾತ್ರಿಗಳು ಮಲಗುತ್ತಾರೆ.

ನಿದ್ರೆ ಬರದಿದ್ದರೆ? - ಎಂದು ಕೇಳಬೇಡಿ. ಹೇಗೋ ಅಡ್ಜಸ್ಟ್ ಮಾಡಿಕೊಳ್ಳಬೇಕು. ಇಷ್ಟಕ್ಕೂ ಬಾಹ್ಯಾಕಾಶ ವಾಸ ಅಜ್ಜಿಮನೆಯಷ್ಟು ಸುಖವಾಗಿರುತ್ತದೆ ಎಂದು ನಿಮಗೆ ಹೇಳಿದವರಾರು!? ಅಲ್ಲಿಗೆ ಹೋಗುವ ಗಗನಯಾತ್ರಿಗಳೆಲ್ಲ ಸಾಮಾನ್ಯವಾಗಿ ಯಾವುದಾದರೂ ವಿಷಯದ ತಜ್ಞರು. ಅವರು ಅಲ್ಲಿಗೆ ಯಾವುದೋ ಪ್ರಯೋಗಗಳನ್ನು ನಡೆಸುವ ಉದ್ದೇಶದಿಂದ ಹೋಗುತ್ತಾರೆ. ಪ್ರವಾಸಿಗಳು ಆದಷ್ಟು ಬೇಗ ವಾಪಸ್ಸು ಬಂದುಬಿಡುತ್ತಾರೆ.

ಐಎಸ್ಎಸ್ ಅಮೆರಿಕ, ರಷ್ಯಾ, ಜಪಾನ್,  ಮತ್ತು  ಕೆನಡಾದ ಬಾಹ್ಯಾಕಾಶ ಏಜೆನ್ಸಿಗಳು ಹಾಗೂ 11 ಯೂರೋಪಿನ ದೇಶಗಳ ಸದಸ್ಯತ್ವ ಇರುವ ಬಾಹ್ಯಾಕಾಶ ಏಜೆನ್ಸಿ ಒಟ್ಟಾಗಿ ಸೇರಿ ಜಂಟಿಯಾಗಿ ನಿಮರ್ಿಸುತ್ತಿರುವ ಬಾಹ್ಯಾಕಾಶ ನೆಲೆ. ಬ್ರೆಜಿಲ್, ಇಟಲಿಗಳೂ ಈ ಯೋಜನೆಯಲ್ಲಿ ಸೇರಿವೆ. ಅದು ಇನ್ನೂ ಪೂತರ್ಿ ನಿಮರ್ಾಣವಾಗಿಲ್ಲ. 2010ರ ಹೊತ್ತಿಗೆ ಪೂರ್ಣವಾಗುತ್ತದೆ. ಅದನ್ನು ಕಟ್ಟಲು ಬೇಕಾದ ಎಲ್ಲ ಸಾಮಗ್ರಿಗಳನ್ನೂ ಭೂಮಿಯಿಂದಲೇ ತೆಗೆದುಕೊಂಡು ಹೋಗಬೇಕು. ಗಗನಯಾತ್ರಿಗಳು `ಸ್ಪೇಸ್ ವಾಕ್' ಮಾಡಿ ನಿಮರ್ಾಣಕಾರ್ಯದಲ್ಲಿ ತೊಡಗಬೇಕು. ಇದಕ್ಕೆಲ್ಲ ಒಟ್ಟು 13000 ಕೋಟಿ ಅಮೆರಿಕನ್ ಡಾಲರ್ಗಳಷ್ಟು ಹಣ ಖಚರ್ಾಗುತ್ತದೆ ಎಂಬ ಅಂದಾಜಿದೆ.

ಐಎಸ್ಎಸ್ ಭೂಮಿಯಿಂದ 319.6 ಮತ್ತು 346.9 ಕಿ.ಮೀ ಅಂತರದಲ್ಲಿರುವ ಕಕ್ಷೆಯಲ್ಲಿದ್ದು, ಗಂಟೆಗೆ 27,744 ಕಿ.ಮೀ ಗಳಷ್ಟು ಭಾರಿ ವೇಗದಲ್ಲಿ ಭೂಮಿಯ ಸುತ್ತ ಸುತ್ತುತ್ತಿದೆ. ದಿನಕ್ಕೆ 15 ಬಾರಿ ಭೂಮಿಯ ಸುತ್ತ ತಿರುಗುತ್ತದೆ. ಪೂತರ್ಿ ಕಟ್ಟಿದ ನಂತರ ಅದರಲ್ಲಿ 7 ಜನರು ಶಾಶ್ವತವಾಗಿ ವಾಸಿಸಬಹುದು. ತಾತ್ಕಾಲಿಕ ವಾಸಕ್ಕೆ ಇನ್ನೂ ಹಲವರು ಬಂದುಹೋಗಬಹುದು (ನೆಂಟರ ತರಹ!).

ಅಲ್ಲಿ ಈಗ 3 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ದೀರ್ಘಕಾಲ ಬಾಹ್ಯಾಕಾಶದಲ್ಲಿ ಯಾರೂ ವಾಸಮಾಡುವುದು ಸಾಧ್ಯವಿಲ್ಲ. ಆರೋಗ್ಯ ಹಾಳಾಗಿ ಜೀವಕ್ಕೂ ಅಪಾಯ ತಲೆದೋರುತ್ತದೆ. ಹೀಗಾಗಿ ಪ್ರತಿ ಆರು ತಿಂಗಳಿಗೆ ಸಿಬ್ಬಂದಿ ಬದಲಾಗುತ್ತಿರುತ್ತಾರೆ. ಭೂಮಿಯಿಂದ ಹೊಸಬರು ಹೋಗುತ್ತಾರೆ. ಹಳಬರು ವಾಪಸ್ ಬಂದುಬಿಡುತ್ತಾರೆ.

Friday 18 March 2011

ಹೊಟ್ಟೆಯೊಳಗೆ ತುತ್ತಿನ ಪಯಣ

ಬಾಯಿಯೊಳಗೆ ನಾವು ಆಹಾರ ಹಾಕಿಕೊಂಡು ಅಗಿಯುತ್ತೇವೆ. ನಂತರ ರುಚಿಯನ್ನು ಸವಿಯುತ್ತೇವೆ. ನಂತರ ಏನು ಮಾಡುತ್ತೇವೆ?

ಹೌದು, ನುಂಗುತ್ತೇವೆ. ಅನಂತರ ನಾವು ತಿಂದ ಆಹಾರ ಏನಾಗುತ್ತದೆ?

ಇದು ಬಹಳ ಕುತೂಹಲಕಾರಿ ವಿಷಯ!


ನಾವು ಆಹಾರವನ್ನು ಸೇವಿಸಿ, ಅದನ್ನು ಜೀಣರ್ಿಸಿಕೊಂಡು, ಅದರ ಪೌಷ್ಟಿಕಾಂಶ, ಶಕ್ತಿಯನ್ನು ಪಡೆದುಕೊಂಡು, ತ್ಯಾಜ್ಯವನ್ನು ಹೊರಹಾಕುವ ಮಲವಿಸರ್ಜನೆಯವರೆಗೆ - ನಾವು ತಿನ್ನುವ ಆಹಾರ ಎಷ್ಟು ದೂರ ಪ್ರಯಣ ಮಾಡಿರುತ್ತದೆ ಗೊತ್ತೆ? ಅದು ತನ್ನ ಪ್ರಯಣದ ಅವಧಿಯಲ್ಲಿ ಎಷ್ಟು ರೀತಿಯ `ಅನುಭವ'ಗಳಿಗೆ ತುತ್ತಾಗುತ್ತದೆ ಗೊತ್ತೆ?

ಆಹಾರವನ್ನು ಬಾಯಿಯೊಳಗಿಟ್ಟುಕೊಂಡು ಅಗಿಯುವುದು, ಮತ್ತು ನುಂಗುವುದರಿಂದ ಶುರುವಾಗುವ ಇದು ಏನಿಲ್ಲವೆಂದರೂ 18-30 ಗಂಟೆಗಳ ಅವಧಿಯ ಪ್ರಯಾಣ! ಬಾಯಿಯಿಂದ ಆರಂಭವಾಗುವ ಶರೀರದ ಆಹಾರ ಪಚನ ವ್ಯವಸ್ಥೆ ಒಂದು ದೊಡ್ಡ ಸುರಂಗದ ಹಾಗೆ. ಶರೀರದ ಒಳಗೆ ವ್ಯಾಪಿಸಿರುವ ಅದರ ಒಟ್ಟು ಉದ್ದ ಸುಮಾರು 9 ಮೀಟರ್ಗಳು!!

ಘಮಘಮ ಆಹಾರ ನಿಮ್ಮ ಬಾಯೊಳಗೆ ಪ್ರವೇಶಿಸಲು ಆರಂಭಿಸಿದ ತಕ್ಷಣ ಏನಾಗುತ್ತದೆ? ತಕ್ಷಣ ನಿಮ್ಮ ನಾಲಿಗೆ ಅದರ `ರುಚಿ' ಆಸ್ವಾದಿಸಿಬಿಡುತ್ತದೆ! ನೀವು ಅದನ್ನು ಅಗಿಯಲು ಆರಂಭಿಸುತ್ತೀರಿ. ಪಾಪ, ಆಹಾರ ನಿಮ್ಮ ಚೂಪಾದ ಹಲ್ಲುಗಳಿಗೆ ಸಿಕ್ಕಿ ಸಣ್ಣ ಚೂರುಗಳಾಗಿ ಒಡೆದು, ಹರಿದು, ನಜ್ಜುಗುಜ್ಜಾಗುತ್ತದೆ! ಜೊತೆಗೆ ನಿಮ್ಮ ಬಾಯಿ ಉತ್ಪಾದಿಸುವ ಲಾಲಾ ರಸದ ಸ್ನಾನವೂ ಆಗುತ್ತದೆ! ಆಹಾರದ ರುಚಿ ನಾಲಿಗೆಗೆ ಎಷ್ಟು ಹೆಚ್ಚು ಇಷ್ಟವಾಗುತ್ತದೋ ಅಷ್ಟೂ ಲಾಲಾರಸ ಹೆಚ್ಚು ಉತ್ಪತ್ತಿಯಾಗುತ್ತದೆ. ನೆನಪಿರಲಿ, ಲಾಲಾರಸ ಜೀರ್ಣಕ್ರಿಯೆಯ ಮೊದಲ ಮುಖ್ಯ ಪದಾರ್ಥ. ಅದರ ನೆರವಿದ್ದರೆ ಮುಂದಿನ ಕೆಲಸ ಸುಗಮ.

ಆಮೇಲೆ ಏನು ನಡೆಯುತ್ತದೆ? ಲಾಲಾರಸದ ಸ್ನಾನ ಮಾಡಿದ ಆಹಾರವನ್ನು ನೀವು ಗುಳುಂ ಎಂದು ನುಂಗಿಬಿಡುತ್ತೀರಿ. ಲಾಲಾರಸ ಆಹಾರವನ್ನು ನುಂಗಲು ಹಿತವಾಗುವಂತೆಚ ಮೆತ್ತಗೆ ಮಾಡಿರುತ್ತದೆ. ಹೀಗಾಗಿ ನಿಮಗೆ ಕಷ್ಟವೇನೂ ಆಗುವುದಿಲ್ಲ.

ಅಲ್ಲಿಂದ ನಿಮ್ಮ ಆಹಾರ ಅನ್ನನಾಳಕ್ಕೆ ಹೋಗುತ್ತದೆ. ಅಲ್ಲಿ ಅದಕ್ಕೆ ಗುಹೆಯನ್ನು ಹೊಕ್ಕ ಅನುಭವ! ಈ ಅನ್ನನಾಳ ಸಾಮಾನ್ಯವಾದುದಲ್ಲ. ಉಬ್ಬುತಗ್ಗುಗಳಿಂದ ಕೂಡಿರುವ ಅದರ ಮಾಂಸಖಂಡಗಳು ಹಿಗ್ಗುತ್ತಾ, ಕುಗ್ಗುತ್ತಾ ಆಹಾರವನ್ನು ನಿಧಾನವಾಗಿ, ಎಚ್ಚರಿಕೆಯಿಂದ, ಚೂರುಚೂರೇ ಹೊಟ್ಟೆಯೊಳಗೆ ತಳ್ಳುತ್ತವೆ. ಈ ಹಂತದಲದ್ಲೂ ರಸ ಆಹಾರದ ಪ್ರಯಾಣವನ್ನು ಸರಾಗವಾಗಿ, ನೋವಿಲ್ಲದೇ ನಡೆಯುವಂತೆ (ನಿಮಗೆ ನೋವಾಗದಂತೆ) ಮಾಡುತ್ತದೆ. ಇವೆಲ್ಲ ಹೀಗಿಲ್ಲದಿದ್ದರೆ ನೀವು ನುಂಗಿದ ಆಹಾರ `ದಪ್' ಎಂದು ಹೊಟ್ಟೆಯೊಳಗೆ ನೇರವಾಗಿ ಹೋಗಿ ಬಿದ್ದು ನಿಮಗೆ ಎಷ್ಟು ನೋವಾಗುತ್ತಿತ್ತು ಅಲ್ಲವೆ!!?

ಈ ಹೊಟ್ಟೆಯೋ (ಅಥವಾ ಜಠರ ಎನ್ನಿ), ಅದೊಂದು ಮಾಂಸಖಂಡಗಳಿಂದ ಮಾಡಿರುವ ಒಂದು ದೊಡ್ಡ ಬ್ಯಾಗು! ಆಹಾರ ತುಂಬಿದಂತೆಲ್ಲ ಅದು ಬೆಲೂನಿನ ಹಾಗೆ ಉಬ್ಬುತ್ತದೆ. ಆದರೆ ಅದು ಬರೀ ಆಹಾರ ತುಂಬಿಕಮಡು ಸುಮ್ಮನೆ ಕುಳಿತಿರುವ ಮೂಟೆಯಲ್ಲ. ಅದರಲ್ಲಿ ಆಹಾರವನ್ನು ಅರಗಿಸುವ ಅನೇಕ ರೀತಿಯ ಆಮ್ಲಗಳು, ರಸಗಳು ಉತ್ಪತ್ತಿಯಾಗುತ್ತವೆ. ಅವುಗಳನ್ನು ಎನ್ಜೈಮ್ಗಳು ಎನ್ನುತ್ತಾರೆ. ಈ ಎನ್ಜೈಮ್ಗಳು ನೀವು ತಿಂದ ಆಹಾರದ ಮೇಲೆ ದಾಳಿ ಆರಂಭಿಸುತ್ತವೆ. ಮೊದಲೇ ನಿಮ್ಮ ಹಲ್ಲುಗಳಿಗೆ ಸುಇಕ್ಕಿ ನಜ್ಜುಗುಜ್ಜಾಗಿದ್ದ ಆಹಾರ ಅನಂತರ ಅನ್ನನಾಳವೆಂ ಗುಹೆ ಹೊಕ್ಕು ಉಸಿರುಗಟ್ಟಿ ಹೊಟ್ಟೆಯೆಂಬ ಚೀಳಕ್ಕೆ ಬಿದ್ದಿರುತ್ತದೆ. ಇಲ್ಲಿ ಎನ್ಜೈಮ್ಗಳ ಸ್ನಾನವೆಂದರೆ ಹುಡುಗಾಟವೆ? ಆಹಾರದ ಸ್ವರೂಪವೇ ಈ ಹಂತದಲ್ಲಿ ಬದಲಾಗುತ್ತದೆ. ಹೊಟ್ಟೆಯ ಆಮ್ಲಗಳು ಬಹಳ ಪ್ರಬಲ. ಅವುಗಳಿಗೆ ಸಿಕ್ಕಮೇಲೆ ಆಹಾರ ಶರಣಾಗಲೇಬೇಕು!

ಹೊಟ್ಟೆಯಲ್ಲಿ ಆಹಾರವನ್ನು ತಿರುಗಿಸಿ, ಮುರುಗಿಸಿ ಹಾಕುವ ಮಾಂಸಖಂಡಗಳಿವೆ. ಈ ಮಂಸಖಂಡಗಳ ಹಾಗೂ ಎನ್ಜೈಮ್ಗಳ ದಾಳಿಗೆ ಹೆದರಿದ ಆಹಾರ ತನ್ನೊಳಗಿರುವ ಪೌಷ್ಟಿಕಾಂಶ ಹಾಗೂ ಶಕ್ತಿಯನ್ನು ಕಪ್ಪಕಾಣಿಕೆಯಾಗಿ ಒಪ್ಪಿಸಲೇ ಬೇಕು! ಅದಕ್ಕೆ ಬೇರೆ ದಾರಿಯೇ ಇಲ್ಲ! ಜಠರ ಒಂದಿಷ್ಟು ಪೌಷ್ಟಿಕಾಂಶವನ್ನು ಹೀರಿಕೊಳ್ಳುತ್ತದೆ. ಇಷ್ಟು ಹೊತ್ತಿಗೆ ಆಹಾರ ದ್ರವರೂಪ ತಾಳಿರುತ್ತದೆ. ಅದನ್ನು ಇಂಗ್ಲಿಷ್ನಲ್ಲಿ `ಕಿಮೆ' ಎನ್ನುತ್ತಾರೆ.

ಆಹಾರದ ಅವಸ್ಥೆ ಇಷ್ಟಕ್ಕೇ ಮುಗಿಯಲಿಲ್ಲ. ಈಗ ಕಿಮೆ ಎಂಬ ದ್ರವವಾಗಿ ಮಾರ್ಪಟ್ಟಿರುವ ಆಹಾರವನ್ನು ಸಣ್ಣ ಕರುಳಿನನೊಳಗೆ ಜಠರ ತೊಟ್ಟಿಕ್ಕಿಸುತ್ತದೆ. ಅಲ್ಲಿ ಇನ್ನಷ್ಟು ಎನ್ಜೈಮ್ಗಳು ಅದನ್ನು ಸಂತೋಷದಿಂದ ಸ್ವಾಗತಿಸುತ್ತವೆ!

ಸಣ್ಣ ಕರುಳು ಸುಮಾರು 4 ಸೆಂಟಿಮೀಟರ್ ಅಗಲವಿರುತ್ತದೆ. ಆದರೆ ಅದರ ಉದ್ದ 25 ಅಡಿಗೂ ಹೆಚ್ಚು! ನಲ್ಲಿಗೆ ಸಿಕ್ಕಿಸುವ ಪೈಪಿನಂತೆ ಸುತ್ತಿಕೊಂಡು, ಮುದುರಿಕೊಂಡು ಶರೀರದೊಳಗೆ ಕೂತಿರುತ್ತದೆ. ಆಹಾರಕ್ಕೆ ಇದರೊಳಗೂ ಗುಹೆಯ ಅನುಭವ! ಅರೆ ಹೊರಬರುವುದು ಹೇಗಹೇ ಎಂಬ ಚಡಪಡಿಕೆ. ಇಲ್ಲಿರುವ ಎನ್ಜೈಮ್ಗಳು ಆಹಾರದ ಅಳಿದುಳಿದ ಎಲ್ಲ ಸತ್ವವನ್ನೂ ಹೀರಿಬಿಡುತ್ತವೆ. ಸತ್ವಹೀನವಾದ ಕಿಮೆಯನ್ನು `ನೀನು ತೆಗೆದುಕೊ' ಎಂದು ಹೇಳಿ ದೊಡ್ಡ ಕರುಳೀಗೆ ಕಳುಹಿಸಿಬಿಡುತ್ತವೆ!

ದೊಡ್ಡ ಕರುಳು ಅಗಲವಾಗಿರುತ್ತದೆ. ಸುಮಾರು 6 ಸೆಂ.ಮೀ ಅಗಲ. ಆದರೆ ಅದು ಹೆಚ್ಚು ಉದ್ದವಿರುವುದಿಲ್ಲ. ಸುಮಾರು 1.5 (5 ಅಡಿ) ಮೀಟರ್ ಉದ್ದವಿರುತ್ತದೆ. ಇಲ್ಲಿ ಆಹಾರಕ್ಕೆ ಏನು ಗತಿ ಕಾದಿರುತ್ತದೆ? ಹ್ಞಾಂ.. ತಡೆಯಿರಿ, ಇಲ್ಲಿ ಅದಕ್ಕೆ ಬೇರೆ ನಾಮಕರಣ ಮಾಡೋಣ. ಏಕೆಂದರೆ ಎಲ್ಲ ಸತ್ವವನ್ನೂ ನಿಮ್ಮ ಶರೀರಕ್ಕೆ ಒಪ್ಪಿಸಿದ ನಂತರ ಅದನ್ನೂ ಈಗಲೂ `ಆಹಾರ' ಎನ್ನಲಾದೀತೆ? ಈಗ ಕಿಮೆಯಲ್ಲಿ ಏನಿರುತ್ತದೆ? ಶರೀರ ಅರಗಿಸಿಕೊಳ್ಳಲಾರದ ನೀರು, ಬ್ಯಾಕ್ಟೀರಿಯಾ, ನಾರು, ಸತ್ತ ಕೋಶಗಳು -ಇತ್ಯಾದಿ. ಇವೆಲ್ಲ ದೊಡ್ಡ ಕರುಳಿನ ಮುಂದೆ ಒಳಗೆ ಸಾಗುತ್ತವೆ. ದೊಡ್ಡ ಕರುಳು ನೀರಿನಂಶವನ್ನೆಲ್ಲ ಹೀರಿಕೊಂಡು, ಪೌಷ್ಟಿಕಾಂಶವನ್ನೂ ಹೀರಿಕೊಂಡು ಉಳಿದ ಬೇಡದ ಅಂಶಗಳನ್ನು ಒಟ್ಟುಮಾಡಿ ಹೊರಕ್ಕೆ ದೂಡಲು ಸಿದ್ಧತೆ ನಡೆಸುತ್ತದೆ.

ಈಗ ಬೇಕಾದರೆ `ಆಹಾರ'ಕ್ಕೆ `ಮಲ' ಎಂದು ಹೊಸ ನಾಮಕರಣ ಮಾಡಬಹುದು! ಮಲವಿರ್ಸನೆಯಿಂದ ಶರೀರಕ್ಕೆ ಬೇಡವಾದ ವಸ್ತುಗಳು ಹೊರಬಂದು ಶರೀರ ಶುದ್ಧವಾಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.

ಪಿತ್ತಜನಕಾಂಗ ಹಾಗೂ ಮೇದೋಜೀರಕ ಅಂಗಗಳೂ ಸಹ ಪಚನ ವ್ಯವಸ್ಥೆಯ ಭಾಗಗಳೇ. ಆಹಾರದಿಂದ ಪಡೆದುಕೊಂಡ ಪೌಷ್ಟಿಕಾಂಶಗಳನ್ನು ವಿಂಗಡಿಸಿ, ಕೆಲವನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಕೆಲಸವನ್ನು ಪಿತ್ತಜನಕಾಂಗ ಮಾಡುತ್ತದೆ. ಅದರ ಸಂಗ್ರಹದಲ್ಲಿರುವ ಪೌಷ್ಟಿಕಾಂಶಗಳನ್ನು ಶರೀರದ ಅಗತ್ಯಕ್ಕೆ ಅನುಗುಣವಾಗಿ ಬೇಕಾದಾಗ, ಬೇಕಾದ ಪ್ರಮಾಣದಲ್ಲಿ ಶರೀರಕ್ಕೆ ಸರಬರಾಜು ಮಾಡುತ್ತದೆ. ಸಣ್ಣ ಕರುಳಿನಲ್ಲಿರುವ ಆಹಾರವನ್ನು ಅರಗಿಸಲು ಬೇಕಾಗುವ ಕೆಲವು ಜೀರ್ಣರಸಗಳನ್ನು ಉತ್ಪಾದಿಸಿ ಸಣ್ಣಕರುಳಿಗೆ ನೀಡುವ ಕೆಲಸವನ್ನು ಮೇಧೋಜೀರಾಕಾಂಗ ಮಾಡುತ್ತದೆ.

ಆಹಾರದ ಈ ದೀರ್ಘ ಪ್ರಯಾಣದಲ್ಲಿ ಎಷ್ಟೊಂದು ಪಚನಾಂಗಗಳು ಒಂದಕ್ಕೊಂದು ಹೊಂದಿಕೊಂಡು, ಒಗ್ಗಟ್ಟಿನಿಂದ ಹೇಗೆ ದುಡಿಯುತ್ತವೆ ನೋಡಿದಿರಾ? ಜೀರ್ಣಕ್ರಿಯೆ ಒಂದು ದೊಡ್ಡ ಕಾಖರ್ಾನೆಯಿದ್ದಂತೆ. ಅಲ್ಲಿ ಹಲವು ಯಂತ್ರಗಳು, ಹಲವು ವಿಭಾಗಗಳು ಹೊಂದಿಕೊಂಡು ಕೆಲಸ ಮಾಡುತ್ತವೆ.
 

Monday 21 February 2011

ಪಿ-ಬುಕ್ ಎದುರು ಇ-ಬುಕ್ ಮೇಲುಗೈ!

ಭವಿಷ್ಯದಲ್ಲಿ ಕಾಗದದ ಪುಸ್ತಕಗಳು ಕ್ರಮೇಣ ಮರೆಯಾಗಲಿವೆ!

ಈಗ ಮೊಬೈಲ್ ಫೋನುಗಳಲ್ಲೂ ಸಾವಿರಾರು ಹಾಡುಗಳನ್ನು ಸಂಗ್ರಹಿಸಿ ಇಟ್ಟುಕೊಂಡು ಕೇಳಬಹುದು. ಹಳೆಯ ಗ್ರಾಮೋಫೋನ್ ಅನ್ನು ಯಾರಾದರೂ ಕೇಳುತ್ತಾರಾ?

ಹಾಗೆಯೇ, ಇದು ಇ-ಬುಕ್ ಕಾಲ. ಎಲೆಕ್ಟ್ರಾನಿಕ್ ರೂಪದ ಪುಸ್ತಕಗಳು ಈಗ ಹೆಚ್ಚು ಜನಪ್ರಿಯವಾಗುತ್ತಿವೆ. ಒಂದು ಪುಟ್ಟ ಇ-ಬುಕ್ ರೀಡರ್ ಸಾಧನದಲ್ಲಿ ಸಾವಿರಾರು ಇ-ಪುಸ್ತಕಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬಹುದು. ನೀವು ಹೋದ ಕಡೆಯೆಲ್ಲ ನಿಮ್ಮ ಜೇಬಿನಲ್ಲಿ, ಅಥವಾ, ಚೀಲದಲ್ಲಿ ಒಂದು ಇಡೀ ಲೈಬ್ರರಿಯನ್ನೇ ತೆಗೆದುಕೊಂಡು ಹೋಗಬಹುದು! ಶಾಲಾ ಪಠ್ಯಪುಸ್ತಕಗಳನ್ನೂ ಇ-ಪುಸ್ತಕದ ರೂಪದಲ್ಲಿ ನೀಡಲು ಹಲವು ದೇಶಗಳಲ್ಲಿ ಚಿಂತನೆ ನಡೆಯುತ್ತಿದೆ. ಇದೀಗ ಇ-ಪುಸ್ತಕದ ಮಾರಾಟ ಕಾಗದದ ಪುಸ್ತಕಗಳಿಗಿಂತಲೂ ಹೆಚ್ಚಾಗಿರುವ ಸುದ್ದಿ ಬಂದಿದೆ!

ಇಂಟರ್ನೆಟ್ ಮೂಲಕ ಪುಸ್ತಕಗಳನ್ನು ಮಾರುವ ಜಗತ್ತಿನ ಅತಿ ದೊಡ್ಡ ಸಂಸ್ಥೆ ಎಂದರೆ, ಅಮೆರಿಕದ `ಅಮೇಜಾನ್ ಡಾಟ್ ಕಾಮ್'. ಈ ಸಂಸ್ಥೆ ಇ-ಬುಕ್ಗಳನ್ನೂ ಮಾರುತ್ತದೆ. ತನ್ನದೇ ಆದ ಇ-ಬುಕ್ ರೀಡರ್ಗಳನ್ನೂ ತಯಾರಿಸಿದೆ. ಅದರ ಜನಪ್ರಿಯ ರೀಡರ್ ಸಾಧನದ ಹೆಸರು `ಕಿಂಡಲ್'.

ಅಮೇಜಾನ್ ಕಿಂಡಲ್ ಮಾರಾಟ ಈಗ ತೀವ್ರವಾಗಿದೆ (ಇತರ ಕಂಪೆನಿಗಳ ಈ-ಬುಕ್ ರೀಡರ್ಗಳ ಮಾರಾಟವೂ ಹೆಚ್ಚಾಗುತ್ತಿದೆ). ಇದೀಗ ಮೊದಲಬಾರಿಗೆ ಕಿಂಡಲ್ ಇ-ಬುಕ್ಗಳ ಮಾರಾಟ ಕಾಗದದ ಪುಸ್ತಕಗಳ ಮಾರಾಟವನ್ನೂ ಮೀರಿಸಿದೆ.

ಜುಲೈ 2010ರಲ್ಲಿ ಕಿಂಡಲ್ ಬುಕ್ಗಳು ಪೇಪರ್ ಬುಕ್ಗಳನ್ನು ಹಿಂದಕ್ಕೆ ಹಾಕಿದವು. ಇದೀಗ ಅಮೇಜಾನ್ 1000 ಕೋಟಿ ಡಾಲರ್ಗಳಷ್ಟು ಮೌಲ್ಯದ ಇ-ಬುಕ್ ವ್ಯಾಪಾರ ಪೂರೈಸಿದೆ. ಸುಮಾರು 9 ಲಕ್ಷ ಕಿಂಡಲ್ ಇ-ಬುಕ್ಗಳ ಶೀಷರ್ಿಕೆಗಳನ್ನು (ಒಂದೊಂದು ಶೀಷರ್ಿಕೆಯ ಅನೇಕ ಪ್ರತಿಗಳು ಮಾರಾಟವಾಗುತ್ತವೆ) ಮಾರಿದೆ.

ವಿಶ್ವದ ಇತಿಹಾಸದಲ್ಲಿ ಇದು ದಾಖಲಿಸಬೇಕಾದ ಬೆಳಗಣಿಗೆ. ಎಲೆಕ್ಟ್ರಾನಿಕ್-ಕಂಪ್ಯೂಟರ್ ತಂತ್ರಜ್ಞಾನದಿಂದಾಗಿ ಜಗತ್ತಿನ ಭವಿಷ್ಯ ಹೇಗಿರುತ್ತದೆ ಎಂಬುದರ ಸೂಚನೆ ಇದು.

Wednesday 9 February 2011

ಇರುವೆಗಳ ವಿಸ್ಮಯ ಲೋಕ!

ಇರುವೆ ಎಷ್ಟು ಚಿಕ್ಕದು, ಅಲ್ಲವೆ? `ಅಯ್ಯೋ! ಇರುವೇನಾ? ಅದ್ಯಾವ ಮಹಾ?!' ಎನ್ನುವುದು ಸಾಮಾನ್ಯ. ಆದರೆ ಅದರ ಗಾತ್ರಕ್ಕೆ ಹೋಲಿಸಿದರೆ ಇರುವೆ ಶಕ್ತಿ ಅಗಾಧವಾದದ್ದು.

ಇರುವೆಯಿಂದ ಕಚ್ಚಿಸಿಕೊಂಡು `ಹ್ಹಾ' ಎನ್ನದವರಾರು? ವಿಸ್ಮಯದಿಂದ ಇರುವೆ ಸಾಲನ್ನು, ಇರುವೆ ಗೂಡನ್ನು ನೋಡುತ್ತ್ತಾ ನಿಲ್ಲದವರಾರು? ಎಲ್ಲ ವಯಸ್ಸಿನವರಿಗೂ ಇರುವೆಯನ್ನು ಕಂಡರೆ ಪ್ರೀತಿ! ನಮ್ಮ ನಡುವೆ ಇದ್ದರೂ ಅವುಗಳದೇ ಒಂದು ವಿಶಿಷ್ಟ ಜಗತ್ತು!

ಅಂದಹಾಗೆ, ಈ ಜಗತ್ತಿನಲ್ಲಿ ಎಷ್ಟು ಇರುವೆಗಳಿವೆ? ಕಾಡಿನಲ್ಲಿ ಹುಲಿ, ಆನೆಗಳನ್ನು ಎಣಿಕೆ ಮಾಡಿದ ಹಾಗೆ ಇರುವೆಗಳನ್ನು ಯಾರೂ ಎಣಿಸಲಾರರು! ನಾಲ್ಕು ಜನ ವಾಸವಾಗಿರುವ ಮನೆಯ ಸುತ್ತಮುತ್ತ ನೂರಾರು ಕೋಟಿ ಇರುವೆಗಳಿರುತ್ತವೆ. ಇನ್ನು ಇಡೀ ಭೂಮಿಯ ತುಂಬಾ ಎಷ್ಟು ಇರುವೆಗಳಿವೆ ಎಂಬುದನ್ನು ಅಂದಾಜು ಮಾಡುವುದೂ ಕಷ್ಟ.

ಎಲ್ಲ ಇರುವೆಗಳೂ ಒಂದೇ ಜಾತಿಯವಲ್ಲ. ಅವುಗಳಲ್ಲಿ ಸುಮಾರು 12,000 ವಿವಿಧ ಜಾತಿಗಳಿವೆ ಎಂದು ಅಂದಾಜು ಮಾಡಲಾಗಿದೆ. ಸುಮಾರು 9000 ಜಾತಿಗಳನ್ನು ಗುರುತಿಸಲಾಗಿದೆ. ಈ ವಿಜ್ಞಾನಿಗಳೂ ಪರವಾಗಿಲ್ಲ ನೋಡಿ! ಇಷ್ಟೊಂದು ಬಗೆಬಗೆ ಇರುವೆಗಳನ್ನು ಗುರುತಿಸುವ ಕೆಲಸವೇನು ಸಾಮಾನ್ಯವೆ?

ಪ್ರತಿ ದೇಶ, ಪ್ರದೇಶಗಳಲ್ಲೂ ನಾನಾ ಜಾತಿ `ಸ್ವದೇಶಿ' ಇರುವೆಗಳಿವೆ. ಆದರೆ ಸ್ವದೇಶಿ ಇರುವೆಗಳು ಇಲ್ಲದ ಕೆಲವು ಜಾಗಗಳೂ ಇವೆ! ಅಂಟಾಕರ್್ಟಿಕಾ ಗ್ರೀನ್ಲ್ಯಾಂಡ್, ಐಸ್ಲ್ಯಾಂಡ್, ಹಾಗೂ ಪಾಲಿನೇಷಿಯಾ, ಹವಾಯ್ ದ್ವೀಪಗಳ ಭಾಗಗಳಲ್ಲಿ ಸ್ವದೇಶಿ ಇರುವೆಗಳಿಲ್ಲ. ಬಿಳಿ ಗೆದ್ದಲು ಹುಳು ಇರುವೆಯಂತಹುದೇ ಆದರೂ ಪಕ್ಕಾ ಇರುವೆಯಲ್ಲ.

ಇರುವೆಗಳು ಬೀದಿ ನಾಯಿಯಂತೆ ಒಂಟಿಯಾಗಿ ವಾಸಿಸಲಾರವು. ಒಂಟಿಯಾಗಿ ಮಲಗಲಾರವು. ಒಂಟಿಯಾಗಿ ತಿನ್ನಲಾರವು. ಅವುಗಳದು ದೊಡ್ಡ ಕುಟುಂಬ. ಒಂದೇ ಗೂಡಿನಲ್ಲಿರುವ ಒಂದು ಕುಟುಂಬದಲ್ಲಿ ಏನಿಲ್ಲವೆಂದರೂ 10,000 ಇರುವೆಗಳು ಇರುತ್ತವೆ! ಸಾಮಾನ್ಯವಾಗಿ ದೊಡ್ಡ ಗೂಡುಗಳಲ್ಲಿ ಲಕ್ಷಾಂತರ ಇರುವೆಗಳಿರುತ್ತವೆ. ಅವುಗಳ ಪೈಕಿ ಒಂದು ದೊಡ್ಡ ತಾಯಿ ಇರುವೆ ಇರುತ್ತದೆ. ಉಳಿದವು ಅಕ್ಕ, ತಂಗಿ, ಅಣ್ಣ, ತಮ್ಮ ಇರುವೆಗಳು! ಇವೆಲ್ಲ ಆಹಾರವನ್ನು ಹಂಚಿಕೊಂಡು ತಿನ್ನುತ್ತವೆ.

`ರಾಣಿ' (ದೊಡ್ಡ ಗಾತ್ರದ ಹೆಣ್ಣು ಇರುವೆ), `ಕೆಲಸಗಾರ' (ಇದೂ ಹೆಣ್ಣು) ಹಾಗೂ ಗಂಡು ಎಂದು ಮೂರು ರೀತಿ ಇರುವೆಗಳಿವೆ. ರಾಣಿ ಇರುವೆ 30 ವರ್ಷದವರೆಗೂ ಬದುಕುತ್ತದೆ! ಕೆಲಸಗಾತರ್ಿ ಇರುವೆಗಳು 1-3 ವರ್ಷ ಬದುಕುತ್ತವೆ. ಆದರೆ ಗಂಡು ಇರುವೆಗಳು ಕೆಲವು ವಾರಗಳು ಮಾತ್ರ ಜೀವಿಸುತ್ತವೆ.

ಆಫ್ರಿಕಾದ `ಡೋರಿಲಸ್' ಜಾತಿಯ ಹೆಣ್ಣು ಇರುವೆ ಜಗತ್ತಿನ ಅತಿ ದಪ್ಪ ಇರುವೆ. ಅದರ ಉದ್ದ ಸುಮಾರು 4 ಸೆಂಟಿ ಮೀಟರ್ಗಳು!

ಅತಿ ಚಿಕ್ಕ ಇರುವೆಗಳನ್ನು ನೀವು ಕಣ್ಣು ಕಿರಿದಾಗಿಸಿ ಹುಡುಕಿದರೂ ನೋಡುವುದು ಕಷ್ಟ. ಕೆಲವು ಜಾತಿ ಚಿಕ್ಕ ಇರುವೆಗಳು ಚಲಿಸದೇ ಒಂದು ಕಡೆ ನಿಂತಿದ್ದರೆ ಗೊತ್ತೇ ಆಗುವುದಿಲ್ಲ. ಇಂತಹ 1 ಲಕ್ಷ ಇರುವೆಗಳ ಒಟ್ಟು ತೂಕ 1 ಗ್ರಾಂ ಸಹ ಆಗುವುದಿಲ್ಲ.

ಆದರೆ ಅವಕ್ಕೆ ಎಷ್ಟು ಬುದ್ಧಿ ಇದೆ ನೋಡಿ. ಅವು ಎಂತಹ ಅದ್ಭುತವಾದ ಗೂಡುಗಳನ್ನು ಕೊರೆಯುತ್ತವೆ ಗೊತ್ತೆ? ಈ ಗೂಡುಗಳಲ್ಲಿ ಬೇರೆ ಬೇರೆ ರೂಮ್ಗಳಿರುತ್ತವೆ! ಬೇರೆಬೇರೆ ಚೇಂಬರ್ಗಳಿರುತ್ತವೆ. ಸಂತಾನೋತ್ಪತ್ತಿ ವಿಭಾಗ, ಆಹಾರ ಶೇಖರಣೆ ವಿಭಾಗ, ಕಸಕಡ್ಡಿ ತುಂಬುವ ವಿಭಾಗ, ತಾಯಿ ಇರುವೆಗಳಿರಲು ಪ್ರತ್ಯೇಕ ಕೋಣೆಗಳು -ಹೀಗೆ. `ಮೇಸರ್ ಆಸಿಕ್ಯುಲೇಟಸ್' ಎನ್ನುವ ಜಾತಿಗೆ ಸೇಋಇದ ಇರುವೆಗಳು 4 ಮೀಟರ್ ಆಳದ ಗೂಡುಗಳನ್ನು ಕೊರೆಯುತ್ತವಂತೆ!

ಪ್ರತಿ ದಿನ ಒಂದು ಸಾಮಾನ್ಯ ಇರುವೆ ಗೂಡಿಗೆ ಬೇಕಾಗುವ ಆಹಾರ ಎಷ್ಟು?

ಇರುವೆಗಳಿಗೆ ಸಿಹಿ ಎಂದರೆ ಬಹಳ ಇಷ್ಟ. ಹೀಗಾಗಿ ಎಲ್ಲೆಲ್ಲಿಂದಲೋ ಕೇಜಿಗಟ್ಟಲೆ ಸಿಹಿ ತಂದು ತುಂಬಿಕೊಳ್ಳುತ್ತವೆ. ಕೀಟಗಳನ್ನೂ ಅವು ಇಷ್ಟಪಟ್ಟು ತಿನ್ನುತ್ತವೆ. ದೊಡ್ಡ ಜಿರಲೆಯನ್ನು ಇರುವೆಗಳು ಕಚ್ಚಿಕೊಂಡು ಹೋಗುವುದನ್ನು ನೋಡಿದ್ದೀರಾ? ಒಂದು ಚಿಕ್ಕ ಗೂಡಿನಲ್ಲಿರುವ ಇರುವೆಗಳು ಪ್ರತಿದಿನವೂ ಸುಮಾರು 2,400 ಕೀಟಗಳನ್ನು ಗೂಡಿಗೆ ತಂದು ತಿನ್ನುತ್ತವೆ!

ಫೈರ್ ಆ್ಯಂಟ್ಸ್ ಅಥವಾ ಕೆಂಪು ಇರುವೆಗಳು ಎಲ್ಲರ ಮೇಲೂ ದಾಳಿ ಮಾಡಿ ಕಚ್ಚಿ ನೋಯಿಸುತ್ತವೆ. ಅವುಗಳಲ್ಲಿ ವಿಷವಿದ್ದರೂ ಅದು ಅತ್ಯಲ್ಪ ಪ್ರಮಾಣವಾದ್ದರಿಂದ ನಮಗೇನೂ ಆಗುವುದಿಲ್ಲ. ಆದರೆ ಲಕ್ಷಾಂತರ ಇರುವೆಗಳು ಯಾರನ್ನಾದರೂ ಕಚ್ಚಿದರೆ ಕಷ್ಟ. ಒಂದು ಬಗೆಯ ಕಿಲ್ಲರ್ ಆ್ಯಂಟ್ಸ್ (ಹಂತಕ ಇರುವೆಗಳು) ಆಫ್ರಿಕಾದ ಕಾಡುಪ್ರದೇಶದಲ್ಲಿವೆ. ಅವು ಕೋಟಿಗಟ್ಟಲೆ ಸಂಖ್ಯೆಯಲ್ಲಿ ಗುಂಪಾಗಿ ದಾಳಿಯಿಡುತ್ತವೆ. ಹಳ್ಳಿಗಳಿಗೆ ನುಗ್ಗಿ ಗೋವುಗಳನ್ನು ಹಾಗೂ ಇತರೆ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತವೆ. ಅವು ಬಂತೆಂದರೆ ಜನರೆಲ್ಲ ಗಾಬರಿಯಿಂದ `ಅಯ್ಯೋ! ಇರುವೆಗಳು ಬಂದವು, ಓಡಿ!' ಎಂದು ಚೀರಿಕೊಂಡು ಓಡುತ್ತಾರೆ!

ಫ್ಯಾಂಟಮ್ - 75 ವರ್ಷ!

ಕಳೆದ 75 ವರ್ಷಗಳಿಂದ ಜಗತ್ತಿನ ಕೋಟ್ಯಂತರ ಮಕ್ಕಳನ್ನು. (ಮತ್ತು ಹಿರಿಯರನ್ನೂ ಸಹ) ರಂಜಿಸುತ್ತಿರುವ ಸೂಪರ್ ಕಾಮಿಕ್ ಹೀರೋ ಎಂದರೆ `ಫ್ಯಾಂಟಮ್'. ಈ ಅದ್ಭುತ ಪಾತ್ರದ ಬಗ್ಗೆ ಒಂದಿಷ್ಟು ಕುತೂಹಲಕಾರಿ ಮಾಹಿತಿ....

ಫ್ಯಾಂಟಮ್ ಅಮೆರಿಕದ ಸಾಹಸಮಯ ಕಾಮಿಕ್ ಪಾತ್ರ. ಅದರ ಸೃಷ್ಟಿಕರ್ತನ ಹೆಸರು ಲೀ ಫಾಕ್. ಫ್ಯಾಂಟಮ್ ಕಾಮಿಕ್ಸ್ಗಳು ಜಗತ್ತಿನಾದ್ಯಂತ ಬಹಳ ಜನಪ್ರಿಯ. ಫ್ಯಾಂಟಮ್ ಸಾಹಸಗಳ ಅನಿಮೇಷನ್ ಟಿವಿ ಧಾರಾವಾಹಿ ಬಂದಿದೆ. ವೀಡಿಯೊ ಗೇಮ್ಗಳು ಜನಪ್ರಿಯವಾಗಿವೆ. ಚಲನಚಿತ್ರವನ್ನೂ ನಿಮರ್ಿಸಲಾಗಿದೆ.

ಫ್ಯಾಂಟಮ್ ಕಾಮಿಕ್ ಪಟ್ಟಿ 1936ರ ಫೆಬ್ರವರಿ 17ರಿಂದ  ದಿನಪತ್ರಿಕೆಗಳಲ್ಲಿ ಬರಲು ಶುರುವಾಯಿತು. 1939ರ ಮೇ ತಿಂಗಳಿನಿಂದ ಭಾನುವಾರದ ಪತ್ರಿಕೆಗಳಲ್ಲಿ ತಪ್ಪದೇ ಪ್ರಕಟವಾಗತೊಡಗಿತು. ಈ ಅಭ್ಯಾಸ ಈಗಲೂ ಮುಂದುವರಿದಿದೆ. ಅಂದಿನಿಂದ ಇಂದಿನವರೆಗೆ ನೂರಾರು ಕೋಟಿ ಜನರು ಫ್ಯಾಂಟಮ್ ಕಥೆಗಳನ್ನು ಓದಿ ಆನಂದಿಸಿದ್ದಾರೆ.

ಫ್ಯಾಂಟಮ್ ಎಂಬ ಪಾತ್ರ ಸೃಷ್ಟಿಸಿ, ಫ್ಯಾಂಟಮನ ಸಾಹಸಮಯ ಕಥೆಗಳನ್ನು ಬರೆದು, ಅದಕ್ಕೆ ಕಾಮಿಕ್ ಚಿತ್ರಗಳನ್ನೂ ಬರೆದು, ಇತರ ಅನೇಕ ಕಲಾವಿದರಿಂದ ಬರೆಸಿ ಪ್ರಚುರ ಮಾಡಿದಾತನ ಹೆಸರು ಲಿಯಾನ್ ಹ್ಯಾರಿಸನ್ ಗ್ರಾಸ್. ಅವನ ಜನಪ್ರಿಯ ಹೆಸರು ಲೀ ಫಾಕ್.

ಆತ ಹುಟ್ಟಿದ್ದು 1911ರಲ್ಲಿ. ಫ್ಯಾಂಟಮ್ಗಿಂತಲೂ ಮೊದಲು ಆತ `ಮಾಂಡ್ರೇಕ್ ದಿ ಮ್ಯಾಜೀಸಿಯನ್' ಎಂಬ ಕಾಮಿಕ್ ಪಾತ್ರ ಸೃಷ್ಟಿಸಿದ್ದ. ಮಾಂಡ್ರೇಕ್ ಯಶಸ್ಸು ಫ್ಯಾಂಟಮ್ ಸೃಷ್ಟಿಗೆ ಕಾರಣವಾಯಿತು. ಈ ಎರಡು ಪಾತ್ರಗಳು ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಪ್ರತಿದಿನವೂ ಏನಿಲ್ಲವೆಂದರೂ 10 ಕೋಟಿ ಓದುಗರನ್ನು ಪಡೆದಿದ್ದವು!! ಲೀ ಫಾಕ್ ಫ್ಯಾಂಟಮ್ ಬಗ್ಗೆ ಕಾದಂಬರಿಯನ್ನೂ ಬರೆದಿದ್ದಾನೆ. ಇತರ ಕೆಲವು ನಾಟಕಗಳನ್ನೂ ಬರೆದಿದ್ದಾನೆ. ರಂಗದ ಮೇಲೆ ನಾಟಕಗಳನ್ನು ನಿದರ್ೇಶಿಸಿದ್ದಾನೆ.

ಲೀ ಫಾಕ್ ಸತ್ತಿದ್ದು 1999ರಲ್ಲಿ. ಅನಂತರ ಟೋನಿ ಡಿಪಾಲ್ ಎಂಬ ಲೇಖಕ ಹಾಗೂ ಪಾಲ್ ರ್ಯಾನ್ ಎಂಬ ಚಿತ್ರಕಲಾವಿದ ಫ್ಯಾಂಟಮ್ ಕಥಾಸರಣಿ ಮುಂದುವರಿಸಿದ್ದಾರೆ.

`ಫ್ಯಾಂಟಮ್' ಎಂದರೆ ಗಾಳಿಯಲ್ಲಿ ತೇಲುವ ಭೂತ ಎಂದರ್ಥ. ಅವನು `ನಡೆದಾಡುವ ಭೂತ' ಎಂದೇ ಪ್ರಸಿದ್ಧ. ಜಗತ್ತನ್ನು ದುಷ್ಟರಿಂದ ರಕ್ಷಿಸುವುದು ಅವನ ಕೆಲಸ. ಹೀಗಾಗಿ ಅವನಿಗೆ ಅನೇಕ ಶತ್ರುಗಳು. ಅವರೊಡನೆ ನಿರಂತರ ಹೋರಾಟ ಮಾಡುತ್ತಲೇ ಇರುವುದು ಫ್ಯಾಂಟಮ್ ಕಥೆಯ ಸಾರ.

`ಬಂಗಾಲಾ' ಎಂಬುದು ಆಪ್ರಿಕಾದ ಒಂದು ಕಾಲ್ಪನಿಕ ದೇಶ. ಕಥೆಗಾಗಿ ಲೀ ಫಾಕ್ ಮಾಡಿಕೊಂಡಿರುವ ಕಲ್ಪನೆ ಅದು. ಮೊದಮೊದಲು ಲೀ ಫಾಕ್ ಆಫ್ರಿಕಾಕ್ಕೆ ಬದಲಾಗಿ ಫ್ಯಾಂಟಮ್ ಏಷ್ಯಾದಲ್ಲಿರುವುದಾಗಿ ಕಥೆ ಬರೆದಿದ್ದ. ಬಂಗಾಲಾ ಭಾರತದ ಬಂಗಾಳಿ ಪ್ರದೇಶವಾಗಿತ್ತು! 1960ರ ದಶಕದಲ್ಲಿ ಈ ಸ್ಥಳವನ್ನು ಆಫ್ರಿಕಾಕ್ಕೆ ಸ್ಥಳಾಂತರಿಸಿದ!

ಅಲ್ಲಿನ ದಟ್ಟವಾದ ಕಾಡೊಂದರ ಮಧ್ಯೆ ಮನುಷ್ಯನ ತಲೆಬುರುಡೆ ಆಕಾರದ ಗುಹೆ. ದೊಡ್ಡ ತಲೆಬುರುಡೆ ಬಾಯಿ ತೆರೆದುಕೊಂಡಿರುತ್ತದೆ. ಅದೇ ಗುಹೆಯ ದ್ವಾರ. ಅದೇ ಫ್ಯಾಂಟಮ್ ಮನೆ. ಅವನು ಕಾಡಿನ ಜನರ ಮಿತ್ರ. ಅವರೆಲ್ಲರೂ ಅವನನ್ನು `ನಡೆದಾಡುವ ಭೂತ' ಎನ್ನುತ್ತಾರೆ. `ಸಾವೇ ಇಲ್ಲದವನು' ಎನ್ನುತ್ತಾರೆ.

ಆದರೆ ಫ್ಯಾಂಟಮ್ ಎಲ್ಲರಂತೆ ಒಬ್ಬ ಮನುಷ್ಯ. ಆದರೆ ಭಾರೀ ಶೂರ, ಚುರುಕು ಬುದ್ಧಿಯವನು, ಧೈರ್ಯಶಾಲಿ. ಇತರ ಕಾಮಿಕ್ ಹೀರೋಗಳಂತೆ (ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್) ಫ್ಯಾಂಟಮನಿಗೆ ವಿಶೆಷ ಅತಿಮಾನುಷ ಶಕ್ತಿಗಳು ಇಲ್ಲ. ಅವನು ದೈಹಿಕ ಶಕ್ತಿ, ಬುದ್ಧಿಬಲದಿಂದಲೇ ಶತ್ರುಗಳನ್ನು ಎದುರಿಸುತ್ತಾನೆ.

ಫ್ಯಾಂಟಮ್ ಎನ್ನುವವನು ಒಬ್ಬನಲ್ಲ. ಅದೊಂದು ಪರಂಪರೆ. ಮೊದಲ ಫ್ಯಾಂಟಮ್ ಹೆಸರು ಕ್ರಿಸ್ಟೋಫರ್ ವಾಕರ್. ಅವನು 1516ರಲ್ಲಿ ಹುಟ್ಟಿದವನು. ಪ್ರತಿ ಫ್ಯಾಂಟಮ್ ಸಾಯುವಾಗಲೂ ಅವನ ಮಗ ಮುಂದಿನ ಫ್ಯಾಂಟಮ್ ಆಗಿ ನಿಯುಕ್ತಬಾಗುತ್ತಾನೆ. ತಲೆಬುರುಡೆ ಹಿಡಿದು ಜಗತ್ತನ್ನು ರಕ್ಷಿಸುವ ಪ್ರಮಾಣವಚನ ತೆಗದುಕೊಳ್ಳುತ್ತಾನೆ.

ಈಗಿನ ಫ್ಯಾಂಟಮ್ (ಇವೆಲ್ಲ ಕೇವಲ ಕಲ್ಪನೆ ಎಂಬುದನ್ನು ಮರೆಯಬೇಡಿ) 21ನೆಯವನು. ಅವನ ಹೆಸರು ಕಿಟ್ ವಾಕರ್. ಅವನನ್ನು ನಿಜರೂಪದಲ್ಲಿ ಕಂಡಿರುವವರು ಕಡಿಮೆ. ಅವನು ಯಾವಾಗಲೂ ಭೂತದಂತೆ ಮುಸುಕು ಧರಿಸಿಯೇ ಹೊರಗೆ ಬರುವುದು!

ಪ್ರತಿ ಫ್ಯಾಂಮ್ನ ಮಗನ ಹೆಸರೂ ಕಿಟ್ ಎಂದೇ ಇರುತ್ತದೆ. ಪ್ರತಿ ಕಿಟ್ ಮುಂದಿನ ಫ್ಯಾಂಟಮ್ ಆಗುತ್ತಾನೆ. ಫ್ಯಾಂಟಮ್ ಬಳಿ ಎರಡು ಉಂಗುರಗಳಿರುತ್ತವೆ. ಒಂದರಲ್ಲಿ ರಕ್ಷಣೆಯ ಗುರುತು ಇರುತ್ತದೆ. ಇನ್ನೊಂದರ ಮೇಲೆ ತಲೆ ಬುರುಡೆ ಗುರುತು ಇರುತ್ತದೆ. ಅವನ ಕೈಲಿ ಏಟು ತಿನ್ನುವ ದುಷ್ಟರ ಮೇಲೆ ಈ ಉಂಗುರುದ ತಲೆಬುರುಡೆ ಗುರುತು ಮೂಡುತ್ತದೆ. ಅಲ್ಲದೇ ಫ್ಯಾಂಟಮ್ ಬಳಿ ಎರಡು .45 ಪಿಸ್ತೂಲುಗಳಿರುತ್ತವೆ. ಅವನ ಬಳಿ ಒಂದು ಬಿಳಿ ಕುದುರೆ `ಹೀರೋ', ಹಾಗೂ `ಡೆವಿಲ್' ಎಂಬ ನಾಯಿ ಇರುತ್ತದೆ. ಅವು ಅವನ ಕೆಲಸಗಳಲ್ಲಿ ಸಹಕರಿಸುತ್ತವೆ. 21ನೇ ಫ್ಯಾಂಟಮನ ಪತ್ನಿ ಡಯಾನಾ ಪಾಮರ್. ಅವರಿಹೆ ಕಿಟ್ ಹಾಗೂ ಹೆಲೋಯಿಸ್ ಎಂಬ ಅವಳಿ ಮಕ್ಕಳು (ಗಂಡು, ಹೆಣ್ಣು).

1996ರಲ್ಲಿ ಫ್ಯಾಂಟಮ್ ಚಲನಚಿತ್ರ ಬಿಡುಗಡೆಯಾಗಿದೆ. `ಫ್ಯಾಂಟಮ್ 2040' ಹಾಗೂ `ಡಿಫೆಂಡರ್ ಆಫ್ ದಿ ಅಥರ್್' ಶೀಷರ್ಿಕೆಯ ಟಿವಿ ಅನಿಮೇಷನ್ ಸರಣಿಗಳಿವೆ. ಅದೇ ಹೆಸರಿನ ವೀಡಿಯೋ ಗೇಮ್ಗಳಿವೆ. ಸ್ವೀಡಿಷ್ ಝೂ ನಲ್ಲಿ `ಫ್ಯಾಂಟಮ್ಲ್ಯಾಂಡ್' ಎಂ ಅಮ್ಯೂಸ್ಮೆಂಟ್ ಪಾಕರ್್ ಇದೆ! ಅಲ್ಲಿ ಬಂಗಾಲಾ ಕಾಡಿನ ಪರಿಸರ ಸೃಷ್ಟಿಸಲಾಗಿದೆ. ಫ್ಯಾಂಟಮ್ ಹಾಗೂ ಅವನ ಕುಟುಂಬದ ವೇಷಧಾರಿಗಳಿದ್ದಾರೆ!!
 

Wednesday 26 January 2011

ಬೈಸಿಕಲ್ ಎಂಬ ಮಿರಾಕಲ್!


ಮನುಷ್ಯ ಸೃಷ್ಟಿಸಿದ ಅದ್ಭುತ ವಾಹನ ಬೈಸಿಕಲ್ (ಸೈಕಲ್ ಅನ್ನೋಣ). ಎಲ್ಲರೂ ಕೊಳ್ಳಬಹುದಾದ ಈ ವಾಹನವನ್ನು ಯಾರು ಬೇಕಾದರೂ ಯಾವ ಪರಿಸರದಲ್ಲಾದರೂ ಚಲಾಯಿಸಬಹುದು. ಚೀನಾ, ನೆದರ್ಲ್ಯಾಂಡ್ಸ್ ಗಳಲ್ಲಿ ಸೈಕಲ್ ಪ್ರಮುಖ ವಾಹನಗಳಲ್ಲೊಂದು.

ಸೈಕಲ್ ಹೊಡೆಯುವುದು ದೇಹಕ್ಕೆ ವ್ಯಾಯಾಮ, ಮನಸ್ಸಿಗೆ ಉಲ್ಲಾಸ ನೀಡುವ ಕ್ರಿಯೆ. ಸೈಕಲ್ ಕುರಿತ ಕೆಲವು ಕುತೂಹಲಕಾರಿ ಸಂಗತಿಗಳು ನಿಮಗೆ ಗೊತ್ತೆ?

19ನೇ ಶತಮಾನದ ಯೂರೋಪಿನಲ್ಲಿ ಸೈಕಲ್ ಜನನವಾಯಿತು. ಜರ್ಮನ್ ಬೇರೊನ್ ಕಾರ್ಲ್ ವಾನ್ ಡ್ರಾಯಿಸ್ 1818ರಲ್ಲಿ ಪ್ಯಾರಿಸ್ಸಿನಲ್ಲಿ ಅದನ್ನು ಮೊದಲಬಾರಿಗೆ ಸಾರ್ವಜನಿಕವಾಗಿ ಪ್ರದರ್ಶಿಸಿದ. ಅದಕ್ಕೆ ಪೆಡಲುಗಳೇ ಇರಲಿಲ್ಲ! ಮರದ ಸೀಟಿನ ಕುಳಿತು ಕಾಲನ್ನು ನೆಲಕ್ಕೆ ಒತ್ತಿ ತಳ್ಳಬೇಕಾಗಿತ್ತು! 500 ವರ್ಷಗಳ ಹಿಂದೆಯೇ ಪ್ರಸಿದ್ಧ ವಿಜ್ಞಾನಿ-ಕಲಾವಿದ ಲಿಯೋನಾರ್ಡೋ ಡ ವಿಂಚಿ ಸೈಕಲ್ ಹೇಗಿರಬೇಕೆಂಬ ಸ್ಕೆಚ್ ಹಾಕಿಟ್ಟಿದ್ದಾನೆ ಎನ್ನಲಾಗುತ್ತದೆ. ಈ ಕುರಿತು ವಾದವಿವಾದಗಳಿವೆ.

ಈಗ ಎಷ್ಟು ಸೈಕಲ್ಗಳಿವೆ? 80 ರಿಂದ 100 ಕೋಟಿ ಸೈಕಲ್ಗಳಿವೆ ಎಂದು ಅಂದಾಜಿಸಲಾಗಿದೆ. ಪ್ರಪಂಚದಲ್ಲಿ ಕಾರುಗಳಿಗಿಂತಲೂ ಎರಡು ಪಟ್ಟು ಸೈಕಲ್ಲುಗಳು ಮಾರಾಟವಾಗಿವೆ.

ಡಿಡಿ ಸೆಂಫ್ಟ್ ಎನ್ನುವವನು ಸುಮಾರು 100 ರೀತಿಯ ವಿಚಿತ್ರ ಸೈಕಲ್ಲುಗಳನ್ನು ತಯಾರಿಸಿ ದಾಖಲೆ ಮಾಡಿದ್ದಾನೆ. ಅವನು ತಯಾರಿಸಿದ 7.8 ಮೀಟರ್ ಉದ್ದ, 3.7 ಮೀಟರ್ ಎತ್ತರದ ಸೈಕಲ್ ಅತಿ ದೊಡ್ಡದೆಂಬ ದಾಖಲೆ ನಿರ್ಮಿಸಿದೆ. ಅತಿ ಎತ್ತರದ ಯೂನಿಸೈಕಲ್ (ಒಂದೇ ಚಕ್ರದ ಸೈಕಲ್) ಸವಾರಿ ಮಾಡಿದವ ಅಮೆರಿಕದ ಸೆಮ್ ಅಬ್ರಹ್ಯಾಂ. ಅವನ ಯೂನಿಸೈಕಲ್ 114.8 ಅಡಿ ಎತ್ತರ ಇತ್ತು. ಅದನ್ನು ಆತ 28 ಅಡಿ ಚಲಾಯಿಸಿದ! 18 ಅಡಿ, 2.5 ಇಂಚು ಎತ್ತರದ ಬೈಸಿಕಲ್ ಚಲಾಯಿಸಿ ಟೆರ್ರಿ ಗೋರ್ಟಜೆನ್ ಎನ್ನುವ ಪಾದ್ರಿ ಗಿನ್ನೆಸ್ ದಾಖಲೆ ಮಾಡಿದ್ದಾನೆ. ಪೋಲೆಂಡಿನ ಬಿಗ್ನ್ಯೂ ರೋಜಾನೆಕ್ ಎನ್ನುವವ 1998ರಲ್ಲಿ 13 ಮೀ.ಮೀ (1.3 ಸೆಂ.ಮೀ) ಎತ್ತರದ ಸೈಕಲ್ ತಯಾರಿಸಿದ್ದ. ಅದರ ಚಕ್ರದ ವ್ಯಾಸ (ಡಯಾಮೀಟರ್) ಕೇವಲ 11 ಮೀ.ಮೀ!

ಅತಿ ಕಷ್ಟದ ಹಾಗೂ ಪ್ರತಿಷ್ಠಿತ ಸೈಕಲ್ ರೇಸ್ ಎಂದರೆ `ಟೂರ್ ಡಿ ಪ್ರಾನ್ಸ್'. ಪ್ರತಿ ವರ್ಷ ಅದರ ಮಾರ್ಗ ಬದಲಾಗುತ್ತಿರುತ್ತದೆ. ಬೆಟ್ಟಗುಡ್ಡ ಹಾದುಹೋಗುವ ಈ ಮಾರ್ಗ ಕೆಲವೊಮ್ಮೆ ಪ್ರಾನ್ಸ್ ದಟಿ ಅಕ್ಕಪಕ್ಕದ ದೇಶಗಳಿಗೂ ವ್ಯಾಪಿಸುತ್ತದೆ!

ಸೈಕಲ್ ಎಷ್ಟು ವೇಗ ಸಾಧಿಸಬಹುದು? 1995ರಲ್ಲಿ ಫ್ರೆಡ್ ರಾಂಪೆಲ್ಬರ್ಗ್ ಗಂಟೆಗೆ 268 ಕಿ.ಮೀ ವೇಗದಲ್ಲಿ ಸೈಕಲ್ ಚಲಾಯಿಸಿ ದಾಖಲೆ ಮಾಡಿದ್ದಾನೆ. ಎದುರು ಗಾಳಿ ಹೊಡೆಯದಿರಲಿ ಎಂದು ಆತ ಬೇರೆ ದೊಡ್ಡ ವಾಹನವೊಂದರ ಹಿಂದೆ ಮರೆಯಾಗಿ ಸೈಕಲ್ ಹೊಡೆದುಕೊಂಡು ಹೋಗಿ ಈ ವೇಗ ಸಾಧಿಸಿದ!

Tuesday 25 January 2011

ಗಣರಾಜ್ಯೋತ್ಸವ! ಭಾರತೀಯ ಪ್ರಜಾಪ್ರಭುತ್ವದ ಹಬ್ಬ!

ಸ್ವಾತಂತ್ರ್ಯೋತ್ಸವ (ಆಗಸ್ಟ್ 15) ಹಾಗೂ ಗಣರಾಜ್ಯೋತ್ಸವ (ಜನವರಿ 26) ನಮ್ಮ ರಾಷ್ಟ್ರೀಯ ಹಬ್ಬಗಳು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಹೆಮ್ಮೆಯ ದಿನಗಳು.

ಭಾರತ ಜಗತ್ತಿನ ಹಳೆಯ ರಾಷ್ಟ್ರಗಳಲ್ಲಿ ಒಂದು. ಇದು `ರಾಷ್ಟ್ರ' ಎಂಬ ಕಲ್ಪನೆ ಋಗ್ವೇದದಲ್ಲಿಯೇ ಇದೆ. ಹಾಗೆಯೇ ಇದು `ಗಣರಾಜ್ಯ' ಎಂಬ ಕಲ್ಪನೆ ವೈದಿಕ ಹಾಗೂ ಬೌದ್ಧ ಸಾಹಿತ್ಯದಲ್ಲಿ ಸಿಗುತ್ತದೆ.

1947ರ ಆಗಸ್ಟ್ 15 ರಂದು ಬ್ರಿಟಿಷ್ ಆಳ್ವಿಕೆಯಿಂದ ಸ್ವತಂತ್ರರಾದ ನಂತರ ನಾವು ಆಧುನಿಕ ಸಂಸದೀಯ ಪ್ರಜಾತಂತ್ರವನ್ನು ಅಳವಡಿಸಿಕೊಂಡೆವು. 1950ರ ಜನವರಿ 26 ರಂದು ನಮ್ಮ ಹೊಸ ಸಂವಿಧಾನ ಜಾರಿಗೆ ಬಂದಿತು. ಅಂದಿನಿಂದ ಆಧುನಿಕ ಅರ್ಥದಲ್ಲಿ ಭಾರತ `ಗಣರಾಜ್ಯ'ವಾಯಿತು. ನೂರಾರು ವರ್ಷಗಳ ನಂತರ ಭಾರತೀಯರೆಲ್ಲರೂ ಶಾಸನಾತ್ಮಕವಾಗಿ ಮತ್ತೆ ಒಂದೇ ಸಕರ್ಾರದ ಅಡಿಯಲ್ಲಿ ಇರುವಂತಾಯಿತು. ಅಂದಿನಿಂದ ನಾವು ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವ (ರಿಪಬ್ಲಿಕ್ ಡೇ) ಆಚರಿಸುತ್ತೇವೆ.

ಈ ಆಚರಣೆಯ ಅಂಗವಾಗಿ ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಭಾರಿ ಮಿಲಿಟರಿ ಪೆರೇಡ್ (ಕವಾಯತು) ಹಾಗೂ ಸಾಂಸ್ಕೃತಿಕ ಮೆರವಣಿಗೆಗಳು ನಡೆಯುತ್ತವೆ. ಯಾರಾದರೂ ವಿದೇಶಿ ಸಕರ್ಾರದ ಮುಖ್ಯಸ್ಥರನ್ನು ಆಮಂತ್ರಿಸಿ ಅವರ ಸಮ್ಮುಖದಲ್ಲಿ ದೇಶದ ಮಿಲಿಟರಿ ಹಾಗೂ ಸಾಂಸ್ಕೃತಿಕ ಶಕ್ತಿಯ ಪ್ರದರ್ಶನ ಮಾಡಲಾಗುತ್ತದೆ.

ದೇಶದ ರಾಷ್ಟ್ರಪತಿಯ ನಿವಾಸವಾದ `ರಾಷ್ಟ್ರಪತಿ ಭವನ'ದ ಬಳಿ ಇರುವ ರೈಸಿನಾ ಹಿಲ್ನಿಂದ ಆರಂಭವಾಗುವ ಮೆರವಣಿಗೆ ರಾಜಪಥ್ ಉದ್ದಕ್ಕೂ ತೆರಳಿ ಇಂಡಿಯಾ ಗೇಟ್ (ಹುತಾತ್ಮ ಸೈನಿಕರ ಸ್ಮಾರಕ) ದಾಟಿ ಹಳೆಯ ದೆಹಲಿಯಲ್ಲಿರುವ ಐತಿಹಾಸಿಕ ಕೆಂಪು ಕೋಟೆಯನ್ನು ತಲುಪುತ್ತದೆ.

ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಗಳ ವಿವಿಧ ವೀಭಾಗಗಳ ಯೋಧರು ತಮ್ಮ ಸಮವಸ್ತ್ರ ಹಾಗೂ ಅಧಿಕೃತ ಪದಕಗಳನ್ನು ಧರಿಸಿ ಕವಾಯತಿನಲ್ಲಿ ಭಾಗವಹಿಸುತ್ತಾರೆ. ದೇಶದ ಮಹಾದಂಡನಾಯಕರಾಗಿರುವ ರಾಷ್ಟ್ರಪತಿಗಳಿಗೆ ಗೌರವವಂದನೆ (ಸೆಲ್ಯೂಟ್) ಅಪರ್ಿಸುತ್ತಾರೆ. ಛೀಫ್ ಗೆಸ್ಟ್ ಆಗಿರುವ ವಿದೇಶಿ ಮುಖ್ಯಸ್ಥರು ರಾಷ್ಟ್ರಪತಿಗಳ ಜೊತೆ ಮೆರವಣಿಗೆ ವೀಕ್ಷಿಸುತ್ತಾರೆ.

ಮೆರವಣಿಗೆಯಲ್ಲಿ ಸಾಂಪ್ರದಾಯಿಕ ನೃತ್ಯ ತಂಡಗಳು, ಜಾನಪದ ತಂಡಗಳು, ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಸ್ತಬ್ದ ಚಿತ್ರಗಳು ಭಾಗವಹಿಸುತ್ತವೆ. ತಮ್ಮ ಸಮಯಸ್ಫೂತರ್ಿ ಹಾಗೂ ಸಾಹಸ ಮನೋಭಾವಗಳಿಂದ ಸಮಾಜಕ್ಕೆ ಒಳ್ಳೆಯದಾಗುವ ಕೆಲಸಗಳನ್ನು ಮಾಡಿ `ರಾಷ್ಟ್ರೀಯ ಶೌರ್ಯ ಪ್ರಶಸ್ತಿ' ಪಡೆದ ಮಕ್ಕಳನ್ನು ಆನೆಯ ಮೇಲಿನ ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ!

ನವದೆಹಲಿಯಂತೆಯೇ ವಿವಿಧ ರಾಜ್ಯಗಳ ರಾಜಧಾನಿಗಳಲ್ಲೂ ಮೆರವಣಿಗೆ, ಪೊಲೀಸರ ಕವಾಯತು ನಡೆಯುತ್ತದೆ. ಆಯಾ ರಾಜ್ಯಗಳ ರಾಜ್ಯಗಳ ರಾಜ್ಯಪಾಲರುಗಳು ಗೌರವವಂದನೆ ಸ್ವೀಕರಿಸುತ್ತಾರೆ.

Wednesday 19 January 2011

ಜೂಲಿಯನ್ ಅಸ್ಸೆಂಜ್ ಹಾಗೂ ವಿಕಿಲೀಕ್ಸ್

ಸರಕಾರಗಳ ಆಡಳಿತ ವ್ಯವಸ್ಥೆಗೆ (ಹಾಗೂ ಪ್ರಜಾತಂತ್ರ ವ್ಯವಸ್ಥೆಗೆ) ಹೊಸ ಸ್ವರೂಪ ನೀಡುವ ಕ್ರಾಂತಿಯೊಂದು ಆರಂಭವಾಗಿದೆ. ಅದನ್ನು ಆರಂಭಿಸಿರುವ ವ್ಯಕ್ತಿಯ ಹೆಸರು ಜೂಲಿಯನ್ ಅಸ್ಸೆಂಜ್.

ಒಂದು ವೆಬ್ ಸೈಟ್ ಮೂಲಕ ಅವರು ಜಗತ್ತನ್ನೇ ಅಲ್ಲಾಡಿಸುತ್ತಿದ್ದಾರೆ. ಅವರ ಈ ವೆಬ್ ಸೇವೆಯ ಹೆಸರು `ವಿಕಿಲೀಕ್ಸ್'.

ಸರಕಾರಗಳು ಜನರಿಂದ ಮುಚ್ಚಿಟ್ಟಿರುವ ರಹಸ್ಯ ದಾಖಲೆಗಳನ್ನು ಹೇಗೋ ಸಂಪಾದಿಸಿ ಅವುಗಳನ್ನು ಇಂಟರ್ನೆಟ್ಟಿನಲ್ಲಿ ಇಡೀ ಜಗತ್ತಿಗೇ ತಿಳಿಯುವಂತೆ ಪ್ರಕಟಿಸುವುದು ವಿಕಿಲೀಕ್ಸ್ನ ಉದ್ದೇಶ. ಈಗಾಗಲೇ ಅಸ್ಸೆಂಜ್ ಸಾವಿರಾರು ದಾಖಲೆಗಳನ್ನು ಪ್ರಕಟಿಸಿದ್ದಾರೆ. ಅದರ ಪರಿಣಾಮವಾಗಿ ವಿವಿಧ ಸರಕಾರಗಳ ದ್ವೇಷವನ್ನೂ ಕಟ್ಟಿಕೊಂಡಿದ್ದಾರೆ.

39 ವರ್ಷದ ಅಸ್ಸೆಂಜ್ ಹುಟ್ಟಿದ್ದು (1971) ಆಸ್ಟ್ರೇಲಿಯಾದಲ್ಲಿ. ಬದುಕಿನ ಒಂದು ಹಂತದಲ್ಲಿ ಅವರು ಕಂಪ್ಯೂಟರ್ ಹ್ಯಾಕಿಂಗ್ ಕಲಿತರು. ಅಪರಾಧಿ ಜಗತ್ತಿನ ಅಂಚಿಗೂ ಹೋಗಿ ಬಂದರು. ನಾನಾ ಹುದ್ದೆಗಳನ್ನು ಮಾಡಿದರು. ನಂತರ 2006ರಲ್ಲಿ ಅವರು ತಮ್ಮ ಗೆಳೆಯರ ಜೊತೆ ಸೇರಿ ವಿಕಿಲೀಕ್ಸ್ ಅನ್ನು ಸ್ಥಾಪಿಸಿದರು. ಅದರ ಪ್ರಧಾನ ಸಂಪಾದಕ ಹಾಗೂ ಮುಖ್ಯ ವಕ್ತಾರರಾದರು.

 ಈಗಾಗಲೇ `ಉತ್ತಮ ಪತ್ರಕರ್ತ' ಎಂಬಿತ್ಯಾದಿ ಪ್ರಶಸ್ತಿಗಳನ್ನು ಪಡೆದಿರುವ ಜೂಲಿಯನ್ ಅಸ್ಸೆಂಜ್ ಸರಕಾರಗಳ ಜೊತೆ ಕೆಲಸ ಮಾಡುವ ಅನೇಕ ಜನರ ಸಂಪರ್ಕಗಳನ್ನು ಹೊಂದಿದ್ದಾರೆ. ಅವರ ಮೂಲಕ ರಹಸ್ಯ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.

ಜೂಲಿಯನ್ ಅಸ್ಸೆಂಜ್ ಕೆಲಸ ಮಾಡುತ್ತಿರುವ ರೀತಿ ಸರಿಯೇ, ತಪ್ಪೇ ಎಂಬ ಚರ್ಚೆ ವಿಶ್ವಾದ್ಯಂತ ನಡೆದಿದೆ. ಸರಿ ಅಥವಾ ತಪ್ಪು ಎಂದು ವಾದಿಸುವ ಎರಡು ವಿಭಾಗಗಳಾಗಿ ಇಡೀ ವಿಶ್ವವೇ ಒಡೆದಿದೆ.

`ರಾಜಕಾರಣಿಗಳು ಅನಗತ್ಯ ಗೌಪ್ಯತೆ ಮಾಡಿ ನಿಜವಾದ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದ್ದಾರೆ. ಜನರನ್ನು ವಂಚಿಸುತ್ತಿದ್ದಾರೆ. ಜನರಿಗೆ ಎಲ್ಲ ಮಾಹಿತಿಯೂ ತಿಳಿಯಬೇಕು; ಅದನ್ನು ಅಸ್ಸೆಂಜ್ ಮಾಡುತ್ತಿದ್ದಾರೆ ಅಷ್ಟೇ. ಅವರಿಂದಾಗಿ ಮುಂದೆ ಪ್ರಜಾಪ್ರಭುತ್ವ ವ್ಯವಸ್ಥೆ ಹೊಸ, ಪಾರದರ್ಶಕ ಸ್ವರೂಪವನ್ನು ಪಡೆದುಕೊಳ್ಳುತ್ತದೆ' - ಇದು ಅವರ ಪರವಾದ ವಾದ.

`ಅಸ್ಸೆಂಜ್ ನಿಂದಾಗಿ ದೇಶಗಳ ಸುರಕ್ಷಾ ರಹಸ್ಯಗಳೆಲ್ಲ ಬಯಲಾಗುತ್ತವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಮಾತುಕತೆಗಳನ್ನು, ವ್ಯವಹಾರಗಳನ್ನು ಬಯಲಿನಲ್ಲಿ ನಡೆಸುವುದು ಅಸಾಧ್ಯ. ರಹಸ್ಯ ಮಾಹಿತಿ ಹೊರಬಿದ್ದರೆ ದೇಶದೇಶಗಳ ನಡುವಣ ಸಂಬಂಧಗಳು ಹಾಳಾಗುತ್ತವೆ. ಅಶಾಂತಿ ಉಂಟಾಗುತ್ತದೆ. ಅಸ್ಸೆಂಜ್ನ ಒಳ ಉದ್ದೇಶ ತಿಳಿಯದು. ಆತ ಹೊಸ ಸ್ವರೂಪದ ಭಯೋತ್ಪಾದಕ' - ಇದು ಅವರ ವಿರೋಧಿಗಳ ವಾದ.

ಈ ಎರಡು ವಾದಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಪೂರ್ಣವಾಗಿ ನಿರ್ಧರಿಸುವುದು ಕಷ್ಟ. ಪ್ರಜಾತಂತ್ರದಲ್ಲಿ ಸರಕಾರಗಳು ಹೆಚ್ಚಿನ ಗೌಪ್ಯತೆ ಇಟ್ಟುಕೊಳ್ಳದೇ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ವರ್ತಿಸಬೇಕು ಎಂಬುದು ಸರಿ. ಹಾಗೆಯೇ ಎಲ್ಲ ಮಾಹಿತಿಯೂ ಪಾರದರ್ಶಕವಾಗಿರುವಂತಿಲ್ಲ. ಕೆಲವೊಂದು ಸುರಕ್ಷಾ ಸಂಬಂಧಿ ವಿಷಯಗಳಂತೂ ರಹಸ್ಯವಾಗಿಯೇ ಇದ್ದರೆ ಒಳ್ಳೆಯದು. ಆದರೆ ರಹಸ್ಯ ಕಾಪಾಡುವ ನೆಪದಲ್ಲಿ ಜನರಿಂದ ಅನಗತ್ಯವಾಗಿ ಮಾಹಿತಿಯನ್ನು ಮುಚ್ಚಿಟ್ಟು ಅಪ್ರಾಮಾಣಿಕವಾಗಿ ನಡೆದುಕೊಳ್ಳುವ ಪ್ರವೃತ್ತಿ ಆಡಳಿತಗಾರರಲ್ಲಿ ಉಂಟಾದಾಗ ಏನು ಮಾಡುವುದು?

ಈ ವಿಷಯಗಳೆಲ್ಲ ಈಗ ಸಾರ್ವಜನಿಕವಾಗಿ ಚರ್ಚೆಯಾಗುತ್ತಿವೆ. ಇದಕ್ಕೆಲ್ಲ ಕಾರಣ ಜೂಲಿಯನ್ ಅಸ್ಸೆಂಜ್ ಹಾಗೂ ಅವರ ಗೆಳೆಯರು.

ಸ್ವತಃ ಅಸ್ಸೆಂಜ್ ಅಪ್ರಾಮಾಣಿಕರಾದರೆ ಏನು ಮಾಡುವುದು? ವಿಕಿಲೀಕ್ಸ್ ತರಹ ಕೆಲಸ ಮಾಡುವವರು ತಮಗೆ ಬೇಕಾದ ಕೆಲವು ದಾಖಲೆಗಳನ್ನು ಮಾತ್ರ ಪ್ರಕಟಿಸಿ ಉಳಿದಿದ್ದನ್ನು ತಾವೇ ಮುಚ್ಚಿಟ್ಟು ತಮ್ಮ ಮನ ಬಂದಂತೆ ಆಟ ಆಡಿದರೆ? ಅಥವಾ ಯಾರದೋ ಪರವಾಗಿ ಇನ್ಯಾರದೋ ವಿರುದ್ಧವಾಗಿ ಕೆಲಸ ಮಾಡಿದರೆ ಏನು ಮಾಡುವುದು? - ಈ ಪ್ರಶ್ನೆಗಳೂ ಬಹಳ ಮುಖ್ಯವಾಗುತ್ತವೆ. ಇಂತಹ ಸಾಧ್ಯತೆಗಳೂ ಇರಬಹುದು.

ಒಟ್ಟಿನಲ್ಲಿ ಜೂಲಿಯನ್ ಅಸ್ಸೆಂಜ್ ಈಗ ವಿಶ್ವದಲ್ಲಿ ಮನೆ ಮಾತಾಗಿದ್ದಾರೆ. ಜನಸಾಮಾನ್ಯರಾರೂ ಈವರೆಗೆ ಅವರನ್ನು ವಿರೋಧಿಸಿಲ್ಲ. ಆದರೆ ಅವರನ್ನು ಕಂಡು ಶಕ್ತಿಶಾಲಿ ದೇಶಗಳ ಸರಕಾರಗಳೆಲ್ಲ ನಡುಗುತ್ತಿವೆ. ಸರಕಾರಿ ಅಧಿಕಾರಿಗಳು, ರಾಜಕಾರಣಿಗಳು, ರಾಜತಾಂತ್ರಿಕರು ತಮ್ಮ ರಹಸ್ಯ ಪತ್ರ ವ್ಯವಹಾರಗಳು, ಮಾತುಕತೆಗಳು ನಿಜವಾಗಿಯೂ ರಹಸ್ಯವಾಗಿ ಉಳಿಯುತ್ತವೆಯೇ ಎಂಬ ಸಂಶಯದಿಂದಲೇ ಕೆಲಸ ಮಾಡುತ್ತಿದ್ದಾರೆ.

ಅಸ್ಸೆಂಜ್ ಅವರ ವಿಕಿಲೀಕ್ಸ್ ಮಾದರಿಯ ಹೊಸ ಕ್ರಾಂತಿ `ಹೊರಗೊಂದು ನೀತಿ, ಒಳಗೊಂದು ರೀತಿ' ಅನುಸರಿಸಿ ಜನರನ್ನು ವಂಚಿಸುವ ಆಡಳಿತಗಾರರಲ್ಲಿ ಭಯ ಉಂಟುಮಾಡಿದೆ.

Thursday 6 January 2011

ಭಾರತದ ಅತ್ಯಂತ ದುಬಾರಿ ರೈಲು-ಪ್ರವಾಸ


ಪ್ರವಾಸ ಮಾಡುವುದು ಸಂತೋಷದ ಜೊತೆಗೆ ಶೈಕ್ಷಣಿಕ ಕ್ರಿಯೆಯೂ ಹೌದು. ಅದರಲ್ಲೂ ರೈಲು ಪ್ರವಾಸ ಬಹಳ ಚೆನ್ನಾಗಿರುತ್ತದೆ. ನಿಮ್ಮ ದೇಶವನ್ನು ನೀವು ಚೆನ್ನಾಗಿ ನೋಡಬೇಕಾದರೆ ವಿಮಾನಕ್ಕಿಂತಲೂ ರೈಲು ಸಂಚಾರ ಅನಿವಾರ್ಯ.

`ದೇಶ ಸುತ್ತು, ಕೋಶ ಓದು' ಎಂಬ ಗಾದೆ ತುಂಬ ಅರ್ಥಪೂರ್ಣ. ಆದರೆ ಗೊತ್ತುಗುರಿ ಇಲ್ಲದೇ ಸುತ್ತುವುದು ಪ್ರವಾಸ ಎನಿಸುವುದಿಲ್ಲ. ಅಲೆದಾಟ ಎನಿಸುತ್ತದೆ.

ನಾನು ಭಾರತದ ಬಹುತೇಕ ಭಾಗಗಳಲ್ಲಿ ರೈಲು ಪ್ರವಾಸ ಮಾಡಿದ್ದೇನೆ, ಮಾಡುತ್ತಿದ್ದೇನೆ. ದೇಶ ನೋಡುವುದು, ದೇಶದ ಜನರನ್ನು ನೋಡುವುದು ರೈಲಿನಲ್ಲಿ ಮಾತ್ರ ಸಾಧ್ಯ. ಹೀಗಾಗಿ ಭಾರತೀಯ ರೈಲ್ವೆಯ ಎಲ್ಲ ದಜರ್ೆಗಳಲ್ಲೂ ಪ್ರಯಾಣ ಮಾಡಿದ್ದೇನೆ. ಅವಶ್ಯವಿದ್ದಾಗ (ಕೆಲಸವಿದ್ದಾಗ) ಮಾತ್ರ ವಿಮಾನ ಪ್ರಯಾಣ ಮಾಡುವದು ನನ್ನ ಅಭ್ಯಾಸ. ಉಳಿದಂತೆ ದೇಶ ಸುತ್ತಲು ರೈಲನ್ನೇ ಬಳಸುತ್ತೇನೆ. ಆದರೂ ಒಂದು ಬಗೆಯ ವಿಶೇಷ ರೈಲು ಪ್ರವಾಸವನ್ನು ಇನ್ನೂ ಮಾಡಲಾಗಿಲ್ಲ.

ಅದೇ ಪಂಚತಾರಾ ರೈಲು ಪ್ರವಾಸ. ಅದರಲ್ಲಿ `ಪ್ರವಾಸ'ಕ್ಕಿಂತಲೂ `ವಾಸ'ಕ್ಕೇ ಹೆಚ್ಚಿನ ಆದ್ಯತೆ. ಅಂದರೆ, ರೈಲುಗಾಡಿಯ ಒಳಗಿನ ವಾಸವೇ ಅದರ ವೈಶಿಷ್ಟ್ಯ. ನಾಲ್ಕು ದಿನಗಳಲ್ಲಿ ಮಾಡಬಹುದಾದ ಪ್ರವಾಸವನ್ನು ಎಂಟು ದಿನಗಳಲ್ಲಿ ಮಾಡಿಸಿ, ರೈಲು ಗಾಡಿಯ ಒಳಗೆ ಪಂಚತಾರಾ ಹೊಟೇಲಿನ ವೈಭವವನ್ನು ಒದಗಿಸಿ ವಿಶಿಷ್ಟ `ಅನುಭವ' ನೀಡುವುದು (ಹಾಗೂ ಹಣ ಪಡೆಯುವುದು) ಈ ಬಗೆಯ ಪ್ರವಾಸಗಳ ಉದ್ದೇಶ. ಇದು ತಪ್ಪಲ್ಲ. `ಜಗತ್ತಿನ ಅತ್ಯಂತ ವೈಭವೋಪೇತ ಪ್ರವಾಸದ ಅನುಭವ ಬೇಕು' ಎನ್ನುವವರಿಗಾಗಿ ಇದನ್ನು ಕಲ್ಪಿಸಲಾಗಿದೆ. ಮೂಲತಃ ಇವುಗಳನ್ನು ವಿದೇಶಿ ಶ್ರೀಮಂತರಿಗಾಗಿ ಕಲ್ಪಿಸಲಾಗಿತ್ತು. ಅಮೆರಿಕನ್ ಡಾಲರ್ಗಳಲ್ಲಿ ಮಾತ್ರ ಹಣವನ್ನು ಸ್ವೀಕರಿಸಲಾಗುತ್ತಿತ್ತು. ಈಗ ಬಾರತೀಯರಿಗೂ ಅವಕಾಶ ನೀಡಲಾಗುತ್ತಿದೆ. ಭಾರತೀಯ ರೂಪಾಯಿಯನ್ನೂ ಸ್ವೀಕರಿಸಲಾಗುತ್ತದೆ.

ಯಾವುದು ಈ ಪಂಚತಾರಾ ರೈಲು ಪ್ರವಾಸ?

ಭಾರತೀಯ ರೈಲ್ವೆ ಈ ಬಗೆಯ ಪ್ರವಾಸಗಳಿಗಾಗಿ ವಿಶೇಷ ರೈಲುಗಳನ್ನು ಹೊಂದಿದೆ. ಪ್ಯಾಲೆಸ್ ಆನ್ ವೀಲ್ಸ್, ದಿ ಗೋಲ್ಡನ್ ಚಾರಿಯಟ್, ಡೆಕ್ಕನ್ ಒಡಿಸ್ಸಿ, ರಾಯಲ್ ರಾಜಸ್ತಾನ್ ಆನ್ ವೀಲ್ಸ್, ದಿ ಇಂಡಿಯನ್ ಮಹಾರಾಜ, ಸ್ಪ್ಲೆಂಡರ್ ಆಫ್ ದಿ ಸೌತ್, ಮಹಾರಾಜಾಸ್ ಎಕ್ಸ್ ಪ್ರೆಸ್ - ಇವೆಲ್ಲ ಅಂತಹ ರೈಲುಗಳ ಹೆಸರುಗಳು.

ಜಗತ್ತಿನ ಇತರ ದೇಶಗಳಲ್ಲೂ ಈ ಬಗೆಯ ವೈಭವೋಪೇತ ಪ್ರವಸಿ-ಟ್ರೇನುಗಳಿವೆ. ಉದಾಹರಣೆಗೆ, ಯೂರೋಪಿನ ಓರಿಯಂಟ್ ಎಕ್ಸ್ ಪ್ರೆಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಇತಿಹಾಸವನ್ನೇ ನಿಮರ್ಿಸಿತ್ತು. ಅಗಾಥಾ ಕ್ರಿಸ್ಟಿ `ಮರ್ಡರ್ ಇನ್ ದಿ ಓರಿಯಂಟ್ ಎಕ್ಸ್ ಪ್ರೆಸ್' ಎಂಬ ಪತ್ತೇದಾರಿ ಕಾದಂಬರಿಯನ್ನು ಬರೆದಿದ್ದು ಈ ಟ್ರೇನಿನ ಜನಪ್ರಿಯತೆಯನ್ನು ತೋರಿಸುತ್ತದೆ.

ಮಹಾರಾಜಾಸ್ ಎಕ್ಸ್ ಪ್ರೆಸ್ ಭಾರತದ ಅತ್ಯಂತ ದುಬಾರಿ, ಲಕ್ಸುರಿ ಪ್ರವಾಸಿ-ರೈಲುಗಾಡಿ. ಅದನ್ನು ಭಾರತೀಯ ರೈಲ್ವೆ 2010ರಲ್ಲಿ ಆರಂಭಿಸಿದೆ. ಅಂತಾರಾಷ್ಟ್ರೀಯ ಪ್ರವಾಸಿ ಕಂಪೆನಿಯೊಂದರ ಸಹಯೋಗದಲ್ಲಿ ಅದನ್ನು ನಡೆಸಲಾಗುತ್ತಿದೆ.

ಈ ಟ್ರೇನಿನಲ್ಲಿ ಪ್ರಯಾಣಿಸಲು ಕನಿಷ್ಠ ದರ ಎಷ್ಟು ಗೊತ್ತೆ? ಒಂದು ದಿನಕ್ಕೆ, ಒಬ್ಬರಿಗೆ 800 ಅಮೆರಿಕನ್ ಡಾಲರ್ (ಸುಮಾರು 40,000 ರೂಪಾಯಿ)! ಎಂಟು ದಿನಗಳ ಒಂದು ಪ್ರವಾಸಿ ಪ್ಯಾಕೇಜನ್ನು ನೀವು ಖರೀದಿಸಿದರೆ ಮೂರೂಕಾಲು ಲಕ್ಷ ರೂಪಾಯಿಗಳನ್ನು ನೀಡಬೇಕು! ನೆನಪಿಡಿ, ಇದು ಕನಿಷ್ಠ ದರ ಮಾತ್ರ.

ಈ ದೊಡ್ಡ ಟ್ರೇನಿನಲ್ಲಿ ಪ್ರಯಾಣಿಸಲು ಒಟ್ಟು 88 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರತಿಯೊಬ್ಬರಿಗೂ ಹೆಚ್ಚು ಸ್ಥಳವನ್ನು ಒದಗಿಸುವುದೇ ಇದಕ್ಕೆ ಕಾರಣ.

ದೆಹಲಿ, ಆಗ್ರಾ, ಗ್ವಾಲಿಯರ್, ವಾರಾಣಸಿ ಮತ್ತು ಮುಂಬೈ, ರಾಜಸ್ತಾನ - ಹೀಗೆ ಹಲವು ಮಾರ್ಗಗಳಲ್ಲಿ ಮಹಾರಾಜಾಸ್ ಎಕ್ಸ್ ಪ್ರೆಸ್ ಸಂಚರಿಸುತ್ತದೆ. 6 ದಿನಗಳಿಂದ 8 ದಿನಗಳ ವರೆಗೆರ ವಿವಿಧ ಪ್ರವಾಸಿ ಪ್ಯಾಕೇಜುಗಳನ್ನು ಮಾರಲಾಗುತ್ತದೆ.

ಇಬ್ಬರಿಗೆ ಒಟ್ಟಾಗಿ (ಟ್ವಿನ್ ಶೇರಿಂಗ್) ಟಿಕೆಟ್ ಬುಕ್ ಮಾಡಿಸಬೇಕು. ಹಾಗೆ ಮಾಡಿಸಿದಾಗ ಕನಿಷ್ಠ ದರ ದಿನಕ್ಕೆ 800 ಡಾಲರ್ ಒಬ್ಬರಿಗೆ (ಇಬ್ಬರಿಗೆ 1600 ಡಾಲರ್ - 80,000 ರೂಪಾಯಿ). ಒಂದು ದಿನಕ್ಕೆ ಬುಕ್ ಮಾಡಿಸುವ ಹಾಗಿಲ್ಲ. ಇಡೀ ಪ್ಯಾಕೇಜನ್ನು ತೆಗೆದುಕೊಳ್ಳಬೇಕು. ಒಬ್ಬರಿಗೇ ಬುಕ್ ಮಾಡಿಸಿದರೂ ಇಬ್ಬರಿಗಾಗುವಷ್ಟು ಹಣ ನೀಡಬೇಕು. 5-1`2 ವರ್ಷದ ಮಕ್ಕಳೀಗೆ ಅರ್ಧ ಬೆಲೆ. ತಂದೆತಾಯಿಗಳ ಜೊತೆಗೆ ಬರುವ 5 ವರ್ಷದ ಕೆಳಗಿನ ಮಗುವಿಗೆ ಉಚಿತ. ಇಬ್ಬರು ಮಕ್ಕಳು ಬಂದರೆ ಒಂದಕ್ಕೆ ಅರ್ಧ ಬೆಲೆ. ಇನ್ನೊಂದಕ್ಕೆ ಪೂರ್ಣ ಬೆಲೆ.

800 ಡಾಲರ್ ದಜರ್ೆಯನ್ನು `ಟೀಲಕ್ಸ್ ಕ್ಯಾಬಿನ್' ಎನ್ನುತ್ತಾರೆ. 900 ಡಾಲರ್ ದಜರ್ೆಯೂ ಇದೆ. ಅದನ್ನು `ಜ್ಯೂನಿಯರ್ ಸ್ಯೂಟ್' ಎನ್ನುತ್ತಾರೆ. `ಸ್ಯೂಟ್' ಬೇಕಾದರೆ ಒಂದು ದಿನಕ್ಕೆ, ಒಬ್ಬರಿಗೆ (ಟ್ವಿನಬ್ ಶೇರಿಂಗ್ ದರದನ್ವಯ) 1400 ಡಾಲರ್.

ಈ ಪೈಕಿ ಅತ್ಯಂತ ದುಬಾರಿ ದಜರ್ೆಯ ಹೆಸರು `ಪ್ರೆಸಿಡೆಂಶಿಯಲ್ ಸ್ಯೂಟ್', ಅದರ ಬೆಲೆ: ಒಂದು ದಿನಕ್ಕೆ, ಒಬ್ಬರಿಗೆ 2500 ಡಾಲರ್. ಇದು ಜಗತ್ತಿನ ಅತಿ ವಿಶಾಲ ಟ್ರೇನ್ ಸ್ಯೂಟ್. ಇದರ ವಿಸ್ತೀರ್ಣ 445 ಚದರ ಅಡಿ. ಒಂದು ಇಡೀ ಬೋಗಿಯನ್ನೇ ನಿಮಗೆ ನೀಡಲಾಗುತ್ತದೆ.

`ಪೆಸಿಡೆಂಶಿಯಲ್ ಸ್ಯೂಟ್'ನಲ್ಲಿ ಇಬ್ಬರಿಗೆ 8 ದಿನಗಳ ಪ್ರವಾಸದ ಪ್ಯಾಕೇಜ್ ಬುಕ್ ಮಾಡಿಸಲು ಕೊಡಬೇಕಾದ ಹಣ 40,000 ಡಾಲರ್. ತೆರಿಗೆ ಎಲ್ಲ ಸೇರಿ 41,028 ಡಾಲರ್. ಅಂದರೆ, ಸುಮಾರು 20,00,000 (ಇಪ್ಪತ್ತು ಲಕ್ಷ) ರೂಪಾಯಿಗಳು!!

ನೀವು ದೆಹಲಿ-ಆಗ್ರಾ-ಕಾಶಿ ಪ್ರವಾಸಕ್ಕೆ 20 ಲಕ್ಷ ರೂಪಾಯಿ (ಊಟ-ತಿಂಡಿ-ಪಾನೀಯ ಎಲ್ಲ ಸೇರಿ) ಸುರಿಯಬೇಕು!

ಇದು ವೈಭವಕ್ಕಾಗಿ ನೀಡುವ ಹಣ. ಯಾವ ವೈಭವ ಈ ಟ್ರೇನಿನಲ್ಲಿ ಸಿಗುತ್ತದೆ?

ಮೊದಲಿಗೆ, ಈ ಟ್ರೇನು ಚಲಿಸುವಾಗ ಒಳಗಿನ ಪ್ರವಾಸಿಗಳಿಗೆ ಕುಲುಕುವ ಅನುಭವ ಆಗುವುದಿಲ್ಲ. ಟ್ರೇನಿನಲ್ಲಿ 14 ಪ್ರಯಾಣಿಕ ಕ್ಯಾಬಿನ್ಗಳಿವೆ. ಈ ಪೈಕಿ 5 ಡೀಲಕ್ಸ್ 6 ಜ್ಯೂನಿಯರ್ ಸ್ಯೂಟ್, 2 ಸ್ಯೂಟ್ ಹಾಗೂ 1 ಪ್ರೆಸಿಡೆನ್ಶಿಯಲ್ ಸ್ಯೂಟ್. ಪ್ರತಿ ಕ್ಯಾಬಿನ್ನೂ ಏರ್-ಕಂಡಿಷನ್ಡ್ (ಹವಾನಿಯಂತ್ರಿತ). ಪ್ರತಿಯೊಂದರ ಒಳಗೂ ಮೆತ್ತನೆ ಹಾಸಿರುವ ಡಬಲ್ ಬೆಡ್ ಸೈಜಿನ ಮಂಚ (ಅಥವಾ ಟ್ವಿನ್ ಕಾಟ್) ಇರುತ್ತದೆ. ಟೆಲಿಫೋನ್ ಇರುತ್ತದೆ. ಅದರಿಂದ ಜಗತ್ತಿನ ಯಾವ ಮೂಲೆಗಾದರೂ ನೇರವಾಗಿ ಡಯಲ್ ಮಾಡಬಹುದು. ದೊಡ್ಡ ಎಲ್ಸಿಡಿ ಟಿವಿ ಹಾಗೂ ಡಿವಿಡಿ ಪ್ಲೇಯರ್ಗಳು (ಒಂದೊಂದು ಕ್ಯಾಬಿನ್ಗೂ ಪ್ರತ್ಯೇಕ) ಇರುತ್ತವೆ. ಇಂಟರ್ನೆಟ್ ಸಂಪರ್ಕ ಇದೆ.ಹಣ, ಒಡವೆ ಇಟ್ಟುಕೊಳ್ಳಲು ಎಲೆಕ್ಟ್ರಾನಿಕ್ ತಿಜೋರಿ ಇದೆ. ಬೇಕಾದಾಗ ಡಾಕ್ಟರ್ ಲಭ್ಯವಿರುತ್ತಾರೆ. ಇವೆಲ್ಲ ಪಂಚತಾರಾ ದಜರ್ೆಯಲ್ಲಿರುತ್ತವೆ. ಸ್ಯೂಟ್ನಲ್ಲಿ ಬೆಡ್ರೂಮ್ ಜೊತೆಗೆ ಪ್ರತ್ಯೇಕ ಬಾತ್ರೂಮ್, ಸಿಟ್ಟಿಂಗ್ ಹಾಲ್ (ಲಿವಿಂಗ್ ರೂಮ್) ಇರುತ್ತವೆ. ದೊಡ್ಡ ಸೋಫಾ ಸೆಟ್ಗಳು, ಸೆಂಟರ್ ಟೇಬಲ್ಗಳು ಇರುತ್ತವೆ.

ಟ್ರೇನಿನ ಒಳಗೆ ಎರಡು ದೊಡ್ಡ ಪಂಚತಾರಾ ಮಟ್ಟದ ರೆಸ್ಟುರಾಗಳಿವೆ (ರಂಗ್ ಮಹಲ್, ಮಯೂರ್ ಮಹಲ್). ನೆಲಕ್ಕೆಲ್ಲಾ ಕಾಪರ್ೆಟ್ ಹಾಸಲಾಗಿರುತ್ತದೆ. ಕಿಟಕಿಗೆ ಒಳ್ಳೆಯ ಗುಣಮಟ್ಟದ ಕರ್ಟನ್ಗಳು ಇರುತ್ತವೆ. ಮಧ್ಯಪಾನಿಗಳಿಗಾಗಿ ಬಾರ್ ಹಾಗೂ ಲೌಂಜ್ ಇವೆ.

ಇಷ್ಟೆಲ್ಲ ಇದ್ದಮೇಲೆ ರೈಲಿನಿಂದ ಕೆಳಗೆ ಇಳಿಯಲು ಮನಸ್ಸು ಬರದೇ ಒಳಗೇ ಉಳಿಯುವ ಸೋಮಾರಿತನವೂ ಬಂದುಬಿಡಬಹುದು! ಆದರೂ ಪ್ರವಸಿಗಳನ್ನು ಇಳಿಸಿ ಎಸಿ ಬಸ್ ಹಗೂ ಕಾರುಗಳ ಮೂಲಕ ಊರು ಸುತ್ತಿಸಿ ತೋರಿಸುವ ವ್ಯವಸ್ಥೆ ಇದೆ. ಪ್ರವಾಸಿ ತಾಣಗಳಲ್ಲಿ ಗೈಡ್ ವ್ಯವಸ್ಥೆಯೂ ಇದೆ. ಸುತ್ತಿದ್ದು ಆದ ನಂತರ ಮತ್ತೆ ಕರೆತಂದು ರೈಲಿನೊಳಗೆ ಬಿಡುತ್ತಾರೆ.

ಮುಂದಿನ ಊರಿಗೆ ರೈಲುಗಾಡಿ ಹೊರಡುತ್ತದೆ!

(c) G. ANIL KUMAR 2010.