Wednesday 26 January 2011

ಬೈಸಿಕಲ್ ಎಂಬ ಮಿರಾಕಲ್!


ಮನುಷ್ಯ ಸೃಷ್ಟಿಸಿದ ಅದ್ಭುತ ವಾಹನ ಬೈಸಿಕಲ್ (ಸೈಕಲ್ ಅನ್ನೋಣ). ಎಲ್ಲರೂ ಕೊಳ್ಳಬಹುದಾದ ಈ ವಾಹನವನ್ನು ಯಾರು ಬೇಕಾದರೂ ಯಾವ ಪರಿಸರದಲ್ಲಾದರೂ ಚಲಾಯಿಸಬಹುದು. ಚೀನಾ, ನೆದರ್ಲ್ಯಾಂಡ್ಸ್ ಗಳಲ್ಲಿ ಸೈಕಲ್ ಪ್ರಮುಖ ವಾಹನಗಳಲ್ಲೊಂದು.

ಸೈಕಲ್ ಹೊಡೆಯುವುದು ದೇಹಕ್ಕೆ ವ್ಯಾಯಾಮ, ಮನಸ್ಸಿಗೆ ಉಲ್ಲಾಸ ನೀಡುವ ಕ್ರಿಯೆ. ಸೈಕಲ್ ಕುರಿತ ಕೆಲವು ಕುತೂಹಲಕಾರಿ ಸಂಗತಿಗಳು ನಿಮಗೆ ಗೊತ್ತೆ?

19ನೇ ಶತಮಾನದ ಯೂರೋಪಿನಲ್ಲಿ ಸೈಕಲ್ ಜನನವಾಯಿತು. ಜರ್ಮನ್ ಬೇರೊನ್ ಕಾರ್ಲ್ ವಾನ್ ಡ್ರಾಯಿಸ್ 1818ರಲ್ಲಿ ಪ್ಯಾರಿಸ್ಸಿನಲ್ಲಿ ಅದನ್ನು ಮೊದಲಬಾರಿಗೆ ಸಾರ್ವಜನಿಕವಾಗಿ ಪ್ರದರ್ಶಿಸಿದ. ಅದಕ್ಕೆ ಪೆಡಲುಗಳೇ ಇರಲಿಲ್ಲ! ಮರದ ಸೀಟಿನ ಕುಳಿತು ಕಾಲನ್ನು ನೆಲಕ್ಕೆ ಒತ್ತಿ ತಳ್ಳಬೇಕಾಗಿತ್ತು! 500 ವರ್ಷಗಳ ಹಿಂದೆಯೇ ಪ್ರಸಿದ್ಧ ವಿಜ್ಞಾನಿ-ಕಲಾವಿದ ಲಿಯೋನಾರ್ಡೋ ಡ ವಿಂಚಿ ಸೈಕಲ್ ಹೇಗಿರಬೇಕೆಂಬ ಸ್ಕೆಚ್ ಹಾಕಿಟ್ಟಿದ್ದಾನೆ ಎನ್ನಲಾಗುತ್ತದೆ. ಈ ಕುರಿತು ವಾದವಿವಾದಗಳಿವೆ.

ಈಗ ಎಷ್ಟು ಸೈಕಲ್ಗಳಿವೆ? 80 ರಿಂದ 100 ಕೋಟಿ ಸೈಕಲ್ಗಳಿವೆ ಎಂದು ಅಂದಾಜಿಸಲಾಗಿದೆ. ಪ್ರಪಂಚದಲ್ಲಿ ಕಾರುಗಳಿಗಿಂತಲೂ ಎರಡು ಪಟ್ಟು ಸೈಕಲ್ಲುಗಳು ಮಾರಾಟವಾಗಿವೆ.

ಡಿಡಿ ಸೆಂಫ್ಟ್ ಎನ್ನುವವನು ಸುಮಾರು 100 ರೀತಿಯ ವಿಚಿತ್ರ ಸೈಕಲ್ಲುಗಳನ್ನು ತಯಾರಿಸಿ ದಾಖಲೆ ಮಾಡಿದ್ದಾನೆ. ಅವನು ತಯಾರಿಸಿದ 7.8 ಮೀಟರ್ ಉದ್ದ, 3.7 ಮೀಟರ್ ಎತ್ತರದ ಸೈಕಲ್ ಅತಿ ದೊಡ್ಡದೆಂಬ ದಾಖಲೆ ನಿರ್ಮಿಸಿದೆ. ಅತಿ ಎತ್ತರದ ಯೂನಿಸೈಕಲ್ (ಒಂದೇ ಚಕ್ರದ ಸೈಕಲ್) ಸವಾರಿ ಮಾಡಿದವ ಅಮೆರಿಕದ ಸೆಮ್ ಅಬ್ರಹ್ಯಾಂ. ಅವನ ಯೂನಿಸೈಕಲ್ 114.8 ಅಡಿ ಎತ್ತರ ಇತ್ತು. ಅದನ್ನು ಆತ 28 ಅಡಿ ಚಲಾಯಿಸಿದ! 18 ಅಡಿ, 2.5 ಇಂಚು ಎತ್ತರದ ಬೈಸಿಕಲ್ ಚಲಾಯಿಸಿ ಟೆರ್ರಿ ಗೋರ್ಟಜೆನ್ ಎನ್ನುವ ಪಾದ್ರಿ ಗಿನ್ನೆಸ್ ದಾಖಲೆ ಮಾಡಿದ್ದಾನೆ. ಪೋಲೆಂಡಿನ ಬಿಗ್ನ್ಯೂ ರೋಜಾನೆಕ್ ಎನ್ನುವವ 1998ರಲ್ಲಿ 13 ಮೀ.ಮೀ (1.3 ಸೆಂ.ಮೀ) ಎತ್ತರದ ಸೈಕಲ್ ತಯಾರಿಸಿದ್ದ. ಅದರ ಚಕ್ರದ ವ್ಯಾಸ (ಡಯಾಮೀಟರ್) ಕೇವಲ 11 ಮೀ.ಮೀ!

ಅತಿ ಕಷ್ಟದ ಹಾಗೂ ಪ್ರತಿಷ್ಠಿತ ಸೈಕಲ್ ರೇಸ್ ಎಂದರೆ `ಟೂರ್ ಡಿ ಪ್ರಾನ್ಸ್'. ಪ್ರತಿ ವರ್ಷ ಅದರ ಮಾರ್ಗ ಬದಲಾಗುತ್ತಿರುತ್ತದೆ. ಬೆಟ್ಟಗುಡ್ಡ ಹಾದುಹೋಗುವ ಈ ಮಾರ್ಗ ಕೆಲವೊಮ್ಮೆ ಪ್ರಾನ್ಸ್ ದಟಿ ಅಕ್ಕಪಕ್ಕದ ದೇಶಗಳಿಗೂ ವ್ಯಾಪಿಸುತ್ತದೆ!

ಸೈಕಲ್ ಎಷ್ಟು ವೇಗ ಸಾಧಿಸಬಹುದು? 1995ರಲ್ಲಿ ಫ್ರೆಡ್ ರಾಂಪೆಲ್ಬರ್ಗ್ ಗಂಟೆಗೆ 268 ಕಿ.ಮೀ ವೇಗದಲ್ಲಿ ಸೈಕಲ್ ಚಲಾಯಿಸಿ ದಾಖಲೆ ಮಾಡಿದ್ದಾನೆ. ಎದುರು ಗಾಳಿ ಹೊಡೆಯದಿರಲಿ ಎಂದು ಆತ ಬೇರೆ ದೊಡ್ಡ ವಾಹನವೊಂದರ ಹಿಂದೆ ಮರೆಯಾಗಿ ಸೈಕಲ್ ಹೊಡೆದುಕೊಂಡು ಹೋಗಿ ಈ ವೇಗ ಸಾಧಿಸಿದ!

Tuesday 25 January 2011

ಗಣರಾಜ್ಯೋತ್ಸವ! ಭಾರತೀಯ ಪ್ರಜಾಪ್ರಭುತ್ವದ ಹಬ್ಬ!

ಸ್ವಾತಂತ್ರ್ಯೋತ್ಸವ (ಆಗಸ್ಟ್ 15) ಹಾಗೂ ಗಣರಾಜ್ಯೋತ್ಸವ (ಜನವರಿ 26) ನಮ್ಮ ರಾಷ್ಟ್ರೀಯ ಹಬ್ಬಗಳು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಹೆಮ್ಮೆಯ ದಿನಗಳು.

ಭಾರತ ಜಗತ್ತಿನ ಹಳೆಯ ರಾಷ್ಟ್ರಗಳಲ್ಲಿ ಒಂದು. ಇದು `ರಾಷ್ಟ್ರ' ಎಂಬ ಕಲ್ಪನೆ ಋಗ್ವೇದದಲ್ಲಿಯೇ ಇದೆ. ಹಾಗೆಯೇ ಇದು `ಗಣರಾಜ್ಯ' ಎಂಬ ಕಲ್ಪನೆ ವೈದಿಕ ಹಾಗೂ ಬೌದ್ಧ ಸಾಹಿತ್ಯದಲ್ಲಿ ಸಿಗುತ್ತದೆ.

1947ರ ಆಗಸ್ಟ್ 15 ರಂದು ಬ್ರಿಟಿಷ್ ಆಳ್ವಿಕೆಯಿಂದ ಸ್ವತಂತ್ರರಾದ ನಂತರ ನಾವು ಆಧುನಿಕ ಸಂಸದೀಯ ಪ್ರಜಾತಂತ್ರವನ್ನು ಅಳವಡಿಸಿಕೊಂಡೆವು. 1950ರ ಜನವರಿ 26 ರಂದು ನಮ್ಮ ಹೊಸ ಸಂವಿಧಾನ ಜಾರಿಗೆ ಬಂದಿತು. ಅಂದಿನಿಂದ ಆಧುನಿಕ ಅರ್ಥದಲ್ಲಿ ಭಾರತ `ಗಣರಾಜ್ಯ'ವಾಯಿತು. ನೂರಾರು ವರ್ಷಗಳ ನಂತರ ಭಾರತೀಯರೆಲ್ಲರೂ ಶಾಸನಾತ್ಮಕವಾಗಿ ಮತ್ತೆ ಒಂದೇ ಸಕರ್ಾರದ ಅಡಿಯಲ್ಲಿ ಇರುವಂತಾಯಿತು. ಅಂದಿನಿಂದ ನಾವು ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವ (ರಿಪಬ್ಲಿಕ್ ಡೇ) ಆಚರಿಸುತ್ತೇವೆ.

ಈ ಆಚರಣೆಯ ಅಂಗವಾಗಿ ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಭಾರಿ ಮಿಲಿಟರಿ ಪೆರೇಡ್ (ಕವಾಯತು) ಹಾಗೂ ಸಾಂಸ್ಕೃತಿಕ ಮೆರವಣಿಗೆಗಳು ನಡೆಯುತ್ತವೆ. ಯಾರಾದರೂ ವಿದೇಶಿ ಸಕರ್ಾರದ ಮುಖ್ಯಸ್ಥರನ್ನು ಆಮಂತ್ರಿಸಿ ಅವರ ಸಮ್ಮುಖದಲ್ಲಿ ದೇಶದ ಮಿಲಿಟರಿ ಹಾಗೂ ಸಾಂಸ್ಕೃತಿಕ ಶಕ್ತಿಯ ಪ್ರದರ್ಶನ ಮಾಡಲಾಗುತ್ತದೆ.

ದೇಶದ ರಾಷ್ಟ್ರಪತಿಯ ನಿವಾಸವಾದ `ರಾಷ್ಟ್ರಪತಿ ಭವನ'ದ ಬಳಿ ಇರುವ ರೈಸಿನಾ ಹಿಲ್ನಿಂದ ಆರಂಭವಾಗುವ ಮೆರವಣಿಗೆ ರಾಜಪಥ್ ಉದ್ದಕ್ಕೂ ತೆರಳಿ ಇಂಡಿಯಾ ಗೇಟ್ (ಹುತಾತ್ಮ ಸೈನಿಕರ ಸ್ಮಾರಕ) ದಾಟಿ ಹಳೆಯ ದೆಹಲಿಯಲ್ಲಿರುವ ಐತಿಹಾಸಿಕ ಕೆಂಪು ಕೋಟೆಯನ್ನು ತಲುಪುತ್ತದೆ.

ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಗಳ ವಿವಿಧ ವೀಭಾಗಗಳ ಯೋಧರು ತಮ್ಮ ಸಮವಸ್ತ್ರ ಹಾಗೂ ಅಧಿಕೃತ ಪದಕಗಳನ್ನು ಧರಿಸಿ ಕವಾಯತಿನಲ್ಲಿ ಭಾಗವಹಿಸುತ್ತಾರೆ. ದೇಶದ ಮಹಾದಂಡನಾಯಕರಾಗಿರುವ ರಾಷ್ಟ್ರಪತಿಗಳಿಗೆ ಗೌರವವಂದನೆ (ಸೆಲ್ಯೂಟ್) ಅಪರ್ಿಸುತ್ತಾರೆ. ಛೀಫ್ ಗೆಸ್ಟ್ ಆಗಿರುವ ವಿದೇಶಿ ಮುಖ್ಯಸ್ಥರು ರಾಷ್ಟ್ರಪತಿಗಳ ಜೊತೆ ಮೆರವಣಿಗೆ ವೀಕ್ಷಿಸುತ್ತಾರೆ.

ಮೆರವಣಿಗೆಯಲ್ಲಿ ಸಾಂಪ್ರದಾಯಿಕ ನೃತ್ಯ ತಂಡಗಳು, ಜಾನಪದ ತಂಡಗಳು, ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಸ್ತಬ್ದ ಚಿತ್ರಗಳು ಭಾಗವಹಿಸುತ್ತವೆ. ತಮ್ಮ ಸಮಯಸ್ಫೂತರ್ಿ ಹಾಗೂ ಸಾಹಸ ಮನೋಭಾವಗಳಿಂದ ಸಮಾಜಕ್ಕೆ ಒಳ್ಳೆಯದಾಗುವ ಕೆಲಸಗಳನ್ನು ಮಾಡಿ `ರಾಷ್ಟ್ರೀಯ ಶೌರ್ಯ ಪ್ರಶಸ್ತಿ' ಪಡೆದ ಮಕ್ಕಳನ್ನು ಆನೆಯ ಮೇಲಿನ ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ!

ನವದೆಹಲಿಯಂತೆಯೇ ವಿವಿಧ ರಾಜ್ಯಗಳ ರಾಜಧಾನಿಗಳಲ್ಲೂ ಮೆರವಣಿಗೆ, ಪೊಲೀಸರ ಕವಾಯತು ನಡೆಯುತ್ತದೆ. ಆಯಾ ರಾಜ್ಯಗಳ ರಾಜ್ಯಗಳ ರಾಜ್ಯಪಾಲರುಗಳು ಗೌರವವಂದನೆ ಸ್ವೀಕರಿಸುತ್ತಾರೆ.

Wednesday 19 January 2011

ಜೂಲಿಯನ್ ಅಸ್ಸೆಂಜ್ ಹಾಗೂ ವಿಕಿಲೀಕ್ಸ್

ಸರಕಾರಗಳ ಆಡಳಿತ ವ್ಯವಸ್ಥೆಗೆ (ಹಾಗೂ ಪ್ರಜಾತಂತ್ರ ವ್ಯವಸ್ಥೆಗೆ) ಹೊಸ ಸ್ವರೂಪ ನೀಡುವ ಕ್ರಾಂತಿಯೊಂದು ಆರಂಭವಾಗಿದೆ. ಅದನ್ನು ಆರಂಭಿಸಿರುವ ವ್ಯಕ್ತಿಯ ಹೆಸರು ಜೂಲಿಯನ್ ಅಸ್ಸೆಂಜ್.

ಒಂದು ವೆಬ್ ಸೈಟ್ ಮೂಲಕ ಅವರು ಜಗತ್ತನ್ನೇ ಅಲ್ಲಾಡಿಸುತ್ತಿದ್ದಾರೆ. ಅವರ ಈ ವೆಬ್ ಸೇವೆಯ ಹೆಸರು `ವಿಕಿಲೀಕ್ಸ್'.

ಸರಕಾರಗಳು ಜನರಿಂದ ಮುಚ್ಚಿಟ್ಟಿರುವ ರಹಸ್ಯ ದಾಖಲೆಗಳನ್ನು ಹೇಗೋ ಸಂಪಾದಿಸಿ ಅವುಗಳನ್ನು ಇಂಟರ್ನೆಟ್ಟಿನಲ್ಲಿ ಇಡೀ ಜಗತ್ತಿಗೇ ತಿಳಿಯುವಂತೆ ಪ್ರಕಟಿಸುವುದು ವಿಕಿಲೀಕ್ಸ್ನ ಉದ್ದೇಶ. ಈಗಾಗಲೇ ಅಸ್ಸೆಂಜ್ ಸಾವಿರಾರು ದಾಖಲೆಗಳನ್ನು ಪ್ರಕಟಿಸಿದ್ದಾರೆ. ಅದರ ಪರಿಣಾಮವಾಗಿ ವಿವಿಧ ಸರಕಾರಗಳ ದ್ವೇಷವನ್ನೂ ಕಟ್ಟಿಕೊಂಡಿದ್ದಾರೆ.

39 ವರ್ಷದ ಅಸ್ಸೆಂಜ್ ಹುಟ್ಟಿದ್ದು (1971) ಆಸ್ಟ್ರೇಲಿಯಾದಲ್ಲಿ. ಬದುಕಿನ ಒಂದು ಹಂತದಲ್ಲಿ ಅವರು ಕಂಪ್ಯೂಟರ್ ಹ್ಯಾಕಿಂಗ್ ಕಲಿತರು. ಅಪರಾಧಿ ಜಗತ್ತಿನ ಅಂಚಿಗೂ ಹೋಗಿ ಬಂದರು. ನಾನಾ ಹುದ್ದೆಗಳನ್ನು ಮಾಡಿದರು. ನಂತರ 2006ರಲ್ಲಿ ಅವರು ತಮ್ಮ ಗೆಳೆಯರ ಜೊತೆ ಸೇರಿ ವಿಕಿಲೀಕ್ಸ್ ಅನ್ನು ಸ್ಥಾಪಿಸಿದರು. ಅದರ ಪ್ರಧಾನ ಸಂಪಾದಕ ಹಾಗೂ ಮುಖ್ಯ ವಕ್ತಾರರಾದರು.

 ಈಗಾಗಲೇ `ಉತ್ತಮ ಪತ್ರಕರ್ತ' ಎಂಬಿತ್ಯಾದಿ ಪ್ರಶಸ್ತಿಗಳನ್ನು ಪಡೆದಿರುವ ಜೂಲಿಯನ್ ಅಸ್ಸೆಂಜ್ ಸರಕಾರಗಳ ಜೊತೆ ಕೆಲಸ ಮಾಡುವ ಅನೇಕ ಜನರ ಸಂಪರ್ಕಗಳನ್ನು ಹೊಂದಿದ್ದಾರೆ. ಅವರ ಮೂಲಕ ರಹಸ್ಯ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.

ಜೂಲಿಯನ್ ಅಸ್ಸೆಂಜ್ ಕೆಲಸ ಮಾಡುತ್ತಿರುವ ರೀತಿ ಸರಿಯೇ, ತಪ್ಪೇ ಎಂಬ ಚರ್ಚೆ ವಿಶ್ವಾದ್ಯಂತ ನಡೆದಿದೆ. ಸರಿ ಅಥವಾ ತಪ್ಪು ಎಂದು ವಾದಿಸುವ ಎರಡು ವಿಭಾಗಗಳಾಗಿ ಇಡೀ ವಿಶ್ವವೇ ಒಡೆದಿದೆ.

`ರಾಜಕಾರಣಿಗಳು ಅನಗತ್ಯ ಗೌಪ್ಯತೆ ಮಾಡಿ ನಿಜವಾದ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದ್ದಾರೆ. ಜನರನ್ನು ವಂಚಿಸುತ್ತಿದ್ದಾರೆ. ಜನರಿಗೆ ಎಲ್ಲ ಮಾಹಿತಿಯೂ ತಿಳಿಯಬೇಕು; ಅದನ್ನು ಅಸ್ಸೆಂಜ್ ಮಾಡುತ್ತಿದ್ದಾರೆ ಅಷ್ಟೇ. ಅವರಿಂದಾಗಿ ಮುಂದೆ ಪ್ರಜಾಪ್ರಭುತ್ವ ವ್ಯವಸ್ಥೆ ಹೊಸ, ಪಾರದರ್ಶಕ ಸ್ವರೂಪವನ್ನು ಪಡೆದುಕೊಳ್ಳುತ್ತದೆ' - ಇದು ಅವರ ಪರವಾದ ವಾದ.

`ಅಸ್ಸೆಂಜ್ ನಿಂದಾಗಿ ದೇಶಗಳ ಸುರಕ್ಷಾ ರಹಸ್ಯಗಳೆಲ್ಲ ಬಯಲಾಗುತ್ತವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಮಾತುಕತೆಗಳನ್ನು, ವ್ಯವಹಾರಗಳನ್ನು ಬಯಲಿನಲ್ಲಿ ನಡೆಸುವುದು ಅಸಾಧ್ಯ. ರಹಸ್ಯ ಮಾಹಿತಿ ಹೊರಬಿದ್ದರೆ ದೇಶದೇಶಗಳ ನಡುವಣ ಸಂಬಂಧಗಳು ಹಾಳಾಗುತ್ತವೆ. ಅಶಾಂತಿ ಉಂಟಾಗುತ್ತದೆ. ಅಸ್ಸೆಂಜ್ನ ಒಳ ಉದ್ದೇಶ ತಿಳಿಯದು. ಆತ ಹೊಸ ಸ್ವರೂಪದ ಭಯೋತ್ಪಾದಕ' - ಇದು ಅವರ ವಿರೋಧಿಗಳ ವಾದ.

ಈ ಎರಡು ವಾದಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಪೂರ್ಣವಾಗಿ ನಿರ್ಧರಿಸುವುದು ಕಷ್ಟ. ಪ್ರಜಾತಂತ್ರದಲ್ಲಿ ಸರಕಾರಗಳು ಹೆಚ್ಚಿನ ಗೌಪ್ಯತೆ ಇಟ್ಟುಕೊಳ್ಳದೇ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ವರ್ತಿಸಬೇಕು ಎಂಬುದು ಸರಿ. ಹಾಗೆಯೇ ಎಲ್ಲ ಮಾಹಿತಿಯೂ ಪಾರದರ್ಶಕವಾಗಿರುವಂತಿಲ್ಲ. ಕೆಲವೊಂದು ಸುರಕ್ಷಾ ಸಂಬಂಧಿ ವಿಷಯಗಳಂತೂ ರಹಸ್ಯವಾಗಿಯೇ ಇದ್ದರೆ ಒಳ್ಳೆಯದು. ಆದರೆ ರಹಸ್ಯ ಕಾಪಾಡುವ ನೆಪದಲ್ಲಿ ಜನರಿಂದ ಅನಗತ್ಯವಾಗಿ ಮಾಹಿತಿಯನ್ನು ಮುಚ್ಚಿಟ್ಟು ಅಪ್ರಾಮಾಣಿಕವಾಗಿ ನಡೆದುಕೊಳ್ಳುವ ಪ್ರವೃತ್ತಿ ಆಡಳಿತಗಾರರಲ್ಲಿ ಉಂಟಾದಾಗ ಏನು ಮಾಡುವುದು?

ಈ ವಿಷಯಗಳೆಲ್ಲ ಈಗ ಸಾರ್ವಜನಿಕವಾಗಿ ಚರ್ಚೆಯಾಗುತ್ತಿವೆ. ಇದಕ್ಕೆಲ್ಲ ಕಾರಣ ಜೂಲಿಯನ್ ಅಸ್ಸೆಂಜ್ ಹಾಗೂ ಅವರ ಗೆಳೆಯರು.

ಸ್ವತಃ ಅಸ್ಸೆಂಜ್ ಅಪ್ರಾಮಾಣಿಕರಾದರೆ ಏನು ಮಾಡುವುದು? ವಿಕಿಲೀಕ್ಸ್ ತರಹ ಕೆಲಸ ಮಾಡುವವರು ತಮಗೆ ಬೇಕಾದ ಕೆಲವು ದಾಖಲೆಗಳನ್ನು ಮಾತ್ರ ಪ್ರಕಟಿಸಿ ಉಳಿದಿದ್ದನ್ನು ತಾವೇ ಮುಚ್ಚಿಟ್ಟು ತಮ್ಮ ಮನ ಬಂದಂತೆ ಆಟ ಆಡಿದರೆ? ಅಥವಾ ಯಾರದೋ ಪರವಾಗಿ ಇನ್ಯಾರದೋ ವಿರುದ್ಧವಾಗಿ ಕೆಲಸ ಮಾಡಿದರೆ ಏನು ಮಾಡುವುದು? - ಈ ಪ್ರಶ್ನೆಗಳೂ ಬಹಳ ಮುಖ್ಯವಾಗುತ್ತವೆ. ಇಂತಹ ಸಾಧ್ಯತೆಗಳೂ ಇರಬಹುದು.

ಒಟ್ಟಿನಲ್ಲಿ ಜೂಲಿಯನ್ ಅಸ್ಸೆಂಜ್ ಈಗ ವಿಶ್ವದಲ್ಲಿ ಮನೆ ಮಾತಾಗಿದ್ದಾರೆ. ಜನಸಾಮಾನ್ಯರಾರೂ ಈವರೆಗೆ ಅವರನ್ನು ವಿರೋಧಿಸಿಲ್ಲ. ಆದರೆ ಅವರನ್ನು ಕಂಡು ಶಕ್ತಿಶಾಲಿ ದೇಶಗಳ ಸರಕಾರಗಳೆಲ್ಲ ನಡುಗುತ್ತಿವೆ. ಸರಕಾರಿ ಅಧಿಕಾರಿಗಳು, ರಾಜಕಾರಣಿಗಳು, ರಾಜತಾಂತ್ರಿಕರು ತಮ್ಮ ರಹಸ್ಯ ಪತ್ರ ವ್ಯವಹಾರಗಳು, ಮಾತುಕತೆಗಳು ನಿಜವಾಗಿಯೂ ರಹಸ್ಯವಾಗಿ ಉಳಿಯುತ್ತವೆಯೇ ಎಂಬ ಸಂಶಯದಿಂದಲೇ ಕೆಲಸ ಮಾಡುತ್ತಿದ್ದಾರೆ.

ಅಸ್ಸೆಂಜ್ ಅವರ ವಿಕಿಲೀಕ್ಸ್ ಮಾದರಿಯ ಹೊಸ ಕ್ರಾಂತಿ `ಹೊರಗೊಂದು ನೀತಿ, ಒಳಗೊಂದು ರೀತಿ' ಅನುಸರಿಸಿ ಜನರನ್ನು ವಂಚಿಸುವ ಆಡಳಿತಗಾರರಲ್ಲಿ ಭಯ ಉಂಟುಮಾಡಿದೆ.

Thursday 6 January 2011

ಭಾರತದ ಅತ್ಯಂತ ದುಬಾರಿ ರೈಲು-ಪ್ರವಾಸ


ಪ್ರವಾಸ ಮಾಡುವುದು ಸಂತೋಷದ ಜೊತೆಗೆ ಶೈಕ್ಷಣಿಕ ಕ್ರಿಯೆಯೂ ಹೌದು. ಅದರಲ್ಲೂ ರೈಲು ಪ್ರವಾಸ ಬಹಳ ಚೆನ್ನಾಗಿರುತ್ತದೆ. ನಿಮ್ಮ ದೇಶವನ್ನು ನೀವು ಚೆನ್ನಾಗಿ ನೋಡಬೇಕಾದರೆ ವಿಮಾನಕ್ಕಿಂತಲೂ ರೈಲು ಸಂಚಾರ ಅನಿವಾರ್ಯ.

`ದೇಶ ಸುತ್ತು, ಕೋಶ ಓದು' ಎಂಬ ಗಾದೆ ತುಂಬ ಅರ್ಥಪೂರ್ಣ. ಆದರೆ ಗೊತ್ತುಗುರಿ ಇಲ್ಲದೇ ಸುತ್ತುವುದು ಪ್ರವಾಸ ಎನಿಸುವುದಿಲ್ಲ. ಅಲೆದಾಟ ಎನಿಸುತ್ತದೆ.

ನಾನು ಭಾರತದ ಬಹುತೇಕ ಭಾಗಗಳಲ್ಲಿ ರೈಲು ಪ್ರವಾಸ ಮಾಡಿದ್ದೇನೆ, ಮಾಡುತ್ತಿದ್ದೇನೆ. ದೇಶ ನೋಡುವುದು, ದೇಶದ ಜನರನ್ನು ನೋಡುವುದು ರೈಲಿನಲ್ಲಿ ಮಾತ್ರ ಸಾಧ್ಯ. ಹೀಗಾಗಿ ಭಾರತೀಯ ರೈಲ್ವೆಯ ಎಲ್ಲ ದಜರ್ೆಗಳಲ್ಲೂ ಪ್ರಯಾಣ ಮಾಡಿದ್ದೇನೆ. ಅವಶ್ಯವಿದ್ದಾಗ (ಕೆಲಸವಿದ್ದಾಗ) ಮಾತ್ರ ವಿಮಾನ ಪ್ರಯಾಣ ಮಾಡುವದು ನನ್ನ ಅಭ್ಯಾಸ. ಉಳಿದಂತೆ ದೇಶ ಸುತ್ತಲು ರೈಲನ್ನೇ ಬಳಸುತ್ತೇನೆ. ಆದರೂ ಒಂದು ಬಗೆಯ ವಿಶೇಷ ರೈಲು ಪ್ರವಾಸವನ್ನು ಇನ್ನೂ ಮಾಡಲಾಗಿಲ್ಲ.

ಅದೇ ಪಂಚತಾರಾ ರೈಲು ಪ್ರವಾಸ. ಅದರಲ್ಲಿ `ಪ್ರವಾಸ'ಕ್ಕಿಂತಲೂ `ವಾಸ'ಕ್ಕೇ ಹೆಚ್ಚಿನ ಆದ್ಯತೆ. ಅಂದರೆ, ರೈಲುಗಾಡಿಯ ಒಳಗಿನ ವಾಸವೇ ಅದರ ವೈಶಿಷ್ಟ್ಯ. ನಾಲ್ಕು ದಿನಗಳಲ್ಲಿ ಮಾಡಬಹುದಾದ ಪ್ರವಾಸವನ್ನು ಎಂಟು ದಿನಗಳಲ್ಲಿ ಮಾಡಿಸಿ, ರೈಲು ಗಾಡಿಯ ಒಳಗೆ ಪಂಚತಾರಾ ಹೊಟೇಲಿನ ವೈಭವವನ್ನು ಒದಗಿಸಿ ವಿಶಿಷ್ಟ `ಅನುಭವ' ನೀಡುವುದು (ಹಾಗೂ ಹಣ ಪಡೆಯುವುದು) ಈ ಬಗೆಯ ಪ್ರವಾಸಗಳ ಉದ್ದೇಶ. ಇದು ತಪ್ಪಲ್ಲ. `ಜಗತ್ತಿನ ಅತ್ಯಂತ ವೈಭವೋಪೇತ ಪ್ರವಾಸದ ಅನುಭವ ಬೇಕು' ಎನ್ನುವವರಿಗಾಗಿ ಇದನ್ನು ಕಲ್ಪಿಸಲಾಗಿದೆ. ಮೂಲತಃ ಇವುಗಳನ್ನು ವಿದೇಶಿ ಶ್ರೀಮಂತರಿಗಾಗಿ ಕಲ್ಪಿಸಲಾಗಿತ್ತು. ಅಮೆರಿಕನ್ ಡಾಲರ್ಗಳಲ್ಲಿ ಮಾತ್ರ ಹಣವನ್ನು ಸ್ವೀಕರಿಸಲಾಗುತ್ತಿತ್ತು. ಈಗ ಬಾರತೀಯರಿಗೂ ಅವಕಾಶ ನೀಡಲಾಗುತ್ತಿದೆ. ಭಾರತೀಯ ರೂಪಾಯಿಯನ್ನೂ ಸ್ವೀಕರಿಸಲಾಗುತ್ತದೆ.

ಯಾವುದು ಈ ಪಂಚತಾರಾ ರೈಲು ಪ್ರವಾಸ?

ಭಾರತೀಯ ರೈಲ್ವೆ ಈ ಬಗೆಯ ಪ್ರವಾಸಗಳಿಗಾಗಿ ವಿಶೇಷ ರೈಲುಗಳನ್ನು ಹೊಂದಿದೆ. ಪ್ಯಾಲೆಸ್ ಆನ್ ವೀಲ್ಸ್, ದಿ ಗೋಲ್ಡನ್ ಚಾರಿಯಟ್, ಡೆಕ್ಕನ್ ಒಡಿಸ್ಸಿ, ರಾಯಲ್ ರಾಜಸ್ತಾನ್ ಆನ್ ವೀಲ್ಸ್, ದಿ ಇಂಡಿಯನ್ ಮಹಾರಾಜ, ಸ್ಪ್ಲೆಂಡರ್ ಆಫ್ ದಿ ಸೌತ್, ಮಹಾರಾಜಾಸ್ ಎಕ್ಸ್ ಪ್ರೆಸ್ - ಇವೆಲ್ಲ ಅಂತಹ ರೈಲುಗಳ ಹೆಸರುಗಳು.

ಜಗತ್ತಿನ ಇತರ ದೇಶಗಳಲ್ಲೂ ಈ ಬಗೆಯ ವೈಭವೋಪೇತ ಪ್ರವಸಿ-ಟ್ರೇನುಗಳಿವೆ. ಉದಾಹರಣೆಗೆ, ಯೂರೋಪಿನ ಓರಿಯಂಟ್ ಎಕ್ಸ್ ಪ್ರೆಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಇತಿಹಾಸವನ್ನೇ ನಿಮರ್ಿಸಿತ್ತು. ಅಗಾಥಾ ಕ್ರಿಸ್ಟಿ `ಮರ್ಡರ್ ಇನ್ ದಿ ಓರಿಯಂಟ್ ಎಕ್ಸ್ ಪ್ರೆಸ್' ಎಂಬ ಪತ್ತೇದಾರಿ ಕಾದಂಬರಿಯನ್ನು ಬರೆದಿದ್ದು ಈ ಟ್ರೇನಿನ ಜನಪ್ರಿಯತೆಯನ್ನು ತೋರಿಸುತ್ತದೆ.

ಮಹಾರಾಜಾಸ್ ಎಕ್ಸ್ ಪ್ರೆಸ್ ಭಾರತದ ಅತ್ಯಂತ ದುಬಾರಿ, ಲಕ್ಸುರಿ ಪ್ರವಾಸಿ-ರೈಲುಗಾಡಿ. ಅದನ್ನು ಭಾರತೀಯ ರೈಲ್ವೆ 2010ರಲ್ಲಿ ಆರಂಭಿಸಿದೆ. ಅಂತಾರಾಷ್ಟ್ರೀಯ ಪ್ರವಾಸಿ ಕಂಪೆನಿಯೊಂದರ ಸಹಯೋಗದಲ್ಲಿ ಅದನ್ನು ನಡೆಸಲಾಗುತ್ತಿದೆ.

ಈ ಟ್ರೇನಿನಲ್ಲಿ ಪ್ರಯಾಣಿಸಲು ಕನಿಷ್ಠ ದರ ಎಷ್ಟು ಗೊತ್ತೆ? ಒಂದು ದಿನಕ್ಕೆ, ಒಬ್ಬರಿಗೆ 800 ಅಮೆರಿಕನ್ ಡಾಲರ್ (ಸುಮಾರು 40,000 ರೂಪಾಯಿ)! ಎಂಟು ದಿನಗಳ ಒಂದು ಪ್ರವಾಸಿ ಪ್ಯಾಕೇಜನ್ನು ನೀವು ಖರೀದಿಸಿದರೆ ಮೂರೂಕಾಲು ಲಕ್ಷ ರೂಪಾಯಿಗಳನ್ನು ನೀಡಬೇಕು! ನೆನಪಿಡಿ, ಇದು ಕನಿಷ್ಠ ದರ ಮಾತ್ರ.

ಈ ದೊಡ್ಡ ಟ್ರೇನಿನಲ್ಲಿ ಪ್ರಯಾಣಿಸಲು ಒಟ್ಟು 88 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರತಿಯೊಬ್ಬರಿಗೂ ಹೆಚ್ಚು ಸ್ಥಳವನ್ನು ಒದಗಿಸುವುದೇ ಇದಕ್ಕೆ ಕಾರಣ.

ದೆಹಲಿ, ಆಗ್ರಾ, ಗ್ವಾಲಿಯರ್, ವಾರಾಣಸಿ ಮತ್ತು ಮುಂಬೈ, ರಾಜಸ್ತಾನ - ಹೀಗೆ ಹಲವು ಮಾರ್ಗಗಳಲ್ಲಿ ಮಹಾರಾಜಾಸ್ ಎಕ್ಸ್ ಪ್ರೆಸ್ ಸಂಚರಿಸುತ್ತದೆ. 6 ದಿನಗಳಿಂದ 8 ದಿನಗಳ ವರೆಗೆರ ವಿವಿಧ ಪ್ರವಾಸಿ ಪ್ಯಾಕೇಜುಗಳನ್ನು ಮಾರಲಾಗುತ್ತದೆ.

ಇಬ್ಬರಿಗೆ ಒಟ್ಟಾಗಿ (ಟ್ವಿನ್ ಶೇರಿಂಗ್) ಟಿಕೆಟ್ ಬುಕ್ ಮಾಡಿಸಬೇಕು. ಹಾಗೆ ಮಾಡಿಸಿದಾಗ ಕನಿಷ್ಠ ದರ ದಿನಕ್ಕೆ 800 ಡಾಲರ್ ಒಬ್ಬರಿಗೆ (ಇಬ್ಬರಿಗೆ 1600 ಡಾಲರ್ - 80,000 ರೂಪಾಯಿ). ಒಂದು ದಿನಕ್ಕೆ ಬುಕ್ ಮಾಡಿಸುವ ಹಾಗಿಲ್ಲ. ಇಡೀ ಪ್ಯಾಕೇಜನ್ನು ತೆಗೆದುಕೊಳ್ಳಬೇಕು. ಒಬ್ಬರಿಗೇ ಬುಕ್ ಮಾಡಿಸಿದರೂ ಇಬ್ಬರಿಗಾಗುವಷ್ಟು ಹಣ ನೀಡಬೇಕು. 5-1`2 ವರ್ಷದ ಮಕ್ಕಳೀಗೆ ಅರ್ಧ ಬೆಲೆ. ತಂದೆತಾಯಿಗಳ ಜೊತೆಗೆ ಬರುವ 5 ವರ್ಷದ ಕೆಳಗಿನ ಮಗುವಿಗೆ ಉಚಿತ. ಇಬ್ಬರು ಮಕ್ಕಳು ಬಂದರೆ ಒಂದಕ್ಕೆ ಅರ್ಧ ಬೆಲೆ. ಇನ್ನೊಂದಕ್ಕೆ ಪೂರ್ಣ ಬೆಲೆ.

800 ಡಾಲರ್ ದಜರ್ೆಯನ್ನು `ಟೀಲಕ್ಸ್ ಕ್ಯಾಬಿನ್' ಎನ್ನುತ್ತಾರೆ. 900 ಡಾಲರ್ ದಜರ್ೆಯೂ ಇದೆ. ಅದನ್ನು `ಜ್ಯೂನಿಯರ್ ಸ್ಯೂಟ್' ಎನ್ನುತ್ತಾರೆ. `ಸ್ಯೂಟ್' ಬೇಕಾದರೆ ಒಂದು ದಿನಕ್ಕೆ, ಒಬ್ಬರಿಗೆ (ಟ್ವಿನಬ್ ಶೇರಿಂಗ್ ದರದನ್ವಯ) 1400 ಡಾಲರ್.

ಈ ಪೈಕಿ ಅತ್ಯಂತ ದುಬಾರಿ ದಜರ್ೆಯ ಹೆಸರು `ಪ್ರೆಸಿಡೆಂಶಿಯಲ್ ಸ್ಯೂಟ್', ಅದರ ಬೆಲೆ: ಒಂದು ದಿನಕ್ಕೆ, ಒಬ್ಬರಿಗೆ 2500 ಡಾಲರ್. ಇದು ಜಗತ್ತಿನ ಅತಿ ವಿಶಾಲ ಟ್ರೇನ್ ಸ್ಯೂಟ್. ಇದರ ವಿಸ್ತೀರ್ಣ 445 ಚದರ ಅಡಿ. ಒಂದು ಇಡೀ ಬೋಗಿಯನ್ನೇ ನಿಮಗೆ ನೀಡಲಾಗುತ್ತದೆ.

`ಪೆಸಿಡೆಂಶಿಯಲ್ ಸ್ಯೂಟ್'ನಲ್ಲಿ ಇಬ್ಬರಿಗೆ 8 ದಿನಗಳ ಪ್ರವಾಸದ ಪ್ಯಾಕೇಜ್ ಬುಕ್ ಮಾಡಿಸಲು ಕೊಡಬೇಕಾದ ಹಣ 40,000 ಡಾಲರ್. ತೆರಿಗೆ ಎಲ್ಲ ಸೇರಿ 41,028 ಡಾಲರ್. ಅಂದರೆ, ಸುಮಾರು 20,00,000 (ಇಪ್ಪತ್ತು ಲಕ್ಷ) ರೂಪಾಯಿಗಳು!!

ನೀವು ದೆಹಲಿ-ಆಗ್ರಾ-ಕಾಶಿ ಪ್ರವಾಸಕ್ಕೆ 20 ಲಕ್ಷ ರೂಪಾಯಿ (ಊಟ-ತಿಂಡಿ-ಪಾನೀಯ ಎಲ್ಲ ಸೇರಿ) ಸುರಿಯಬೇಕು!

ಇದು ವೈಭವಕ್ಕಾಗಿ ನೀಡುವ ಹಣ. ಯಾವ ವೈಭವ ಈ ಟ್ರೇನಿನಲ್ಲಿ ಸಿಗುತ್ತದೆ?

ಮೊದಲಿಗೆ, ಈ ಟ್ರೇನು ಚಲಿಸುವಾಗ ಒಳಗಿನ ಪ್ರವಾಸಿಗಳಿಗೆ ಕುಲುಕುವ ಅನುಭವ ಆಗುವುದಿಲ್ಲ. ಟ್ರೇನಿನಲ್ಲಿ 14 ಪ್ರಯಾಣಿಕ ಕ್ಯಾಬಿನ್ಗಳಿವೆ. ಈ ಪೈಕಿ 5 ಡೀಲಕ್ಸ್ 6 ಜ್ಯೂನಿಯರ್ ಸ್ಯೂಟ್, 2 ಸ್ಯೂಟ್ ಹಾಗೂ 1 ಪ್ರೆಸಿಡೆನ್ಶಿಯಲ್ ಸ್ಯೂಟ್. ಪ್ರತಿ ಕ್ಯಾಬಿನ್ನೂ ಏರ್-ಕಂಡಿಷನ್ಡ್ (ಹವಾನಿಯಂತ್ರಿತ). ಪ್ರತಿಯೊಂದರ ಒಳಗೂ ಮೆತ್ತನೆ ಹಾಸಿರುವ ಡಬಲ್ ಬೆಡ್ ಸೈಜಿನ ಮಂಚ (ಅಥವಾ ಟ್ವಿನ್ ಕಾಟ್) ಇರುತ್ತದೆ. ಟೆಲಿಫೋನ್ ಇರುತ್ತದೆ. ಅದರಿಂದ ಜಗತ್ತಿನ ಯಾವ ಮೂಲೆಗಾದರೂ ನೇರವಾಗಿ ಡಯಲ್ ಮಾಡಬಹುದು. ದೊಡ್ಡ ಎಲ್ಸಿಡಿ ಟಿವಿ ಹಾಗೂ ಡಿವಿಡಿ ಪ್ಲೇಯರ್ಗಳು (ಒಂದೊಂದು ಕ್ಯಾಬಿನ್ಗೂ ಪ್ರತ್ಯೇಕ) ಇರುತ್ತವೆ. ಇಂಟರ್ನೆಟ್ ಸಂಪರ್ಕ ಇದೆ.ಹಣ, ಒಡವೆ ಇಟ್ಟುಕೊಳ್ಳಲು ಎಲೆಕ್ಟ್ರಾನಿಕ್ ತಿಜೋರಿ ಇದೆ. ಬೇಕಾದಾಗ ಡಾಕ್ಟರ್ ಲಭ್ಯವಿರುತ್ತಾರೆ. ಇವೆಲ್ಲ ಪಂಚತಾರಾ ದಜರ್ೆಯಲ್ಲಿರುತ್ತವೆ. ಸ್ಯೂಟ್ನಲ್ಲಿ ಬೆಡ್ರೂಮ್ ಜೊತೆಗೆ ಪ್ರತ್ಯೇಕ ಬಾತ್ರೂಮ್, ಸಿಟ್ಟಿಂಗ್ ಹಾಲ್ (ಲಿವಿಂಗ್ ರೂಮ್) ಇರುತ್ತವೆ. ದೊಡ್ಡ ಸೋಫಾ ಸೆಟ್ಗಳು, ಸೆಂಟರ್ ಟೇಬಲ್ಗಳು ಇರುತ್ತವೆ.

ಟ್ರೇನಿನ ಒಳಗೆ ಎರಡು ದೊಡ್ಡ ಪಂಚತಾರಾ ಮಟ್ಟದ ರೆಸ್ಟುರಾಗಳಿವೆ (ರಂಗ್ ಮಹಲ್, ಮಯೂರ್ ಮಹಲ್). ನೆಲಕ್ಕೆಲ್ಲಾ ಕಾಪರ್ೆಟ್ ಹಾಸಲಾಗಿರುತ್ತದೆ. ಕಿಟಕಿಗೆ ಒಳ್ಳೆಯ ಗುಣಮಟ್ಟದ ಕರ್ಟನ್ಗಳು ಇರುತ್ತವೆ. ಮಧ್ಯಪಾನಿಗಳಿಗಾಗಿ ಬಾರ್ ಹಾಗೂ ಲೌಂಜ್ ಇವೆ.

ಇಷ್ಟೆಲ್ಲ ಇದ್ದಮೇಲೆ ರೈಲಿನಿಂದ ಕೆಳಗೆ ಇಳಿಯಲು ಮನಸ್ಸು ಬರದೇ ಒಳಗೇ ಉಳಿಯುವ ಸೋಮಾರಿತನವೂ ಬಂದುಬಿಡಬಹುದು! ಆದರೂ ಪ್ರವಸಿಗಳನ್ನು ಇಳಿಸಿ ಎಸಿ ಬಸ್ ಹಗೂ ಕಾರುಗಳ ಮೂಲಕ ಊರು ಸುತ್ತಿಸಿ ತೋರಿಸುವ ವ್ಯವಸ್ಥೆ ಇದೆ. ಪ್ರವಾಸಿ ತಾಣಗಳಲ್ಲಿ ಗೈಡ್ ವ್ಯವಸ್ಥೆಯೂ ಇದೆ. ಸುತ್ತಿದ್ದು ಆದ ನಂತರ ಮತ್ತೆ ಕರೆತಂದು ರೈಲಿನೊಳಗೆ ಬಿಡುತ್ತಾರೆ.

ಮುಂದಿನ ಊರಿಗೆ ರೈಲುಗಾಡಿ ಹೊರಡುತ್ತದೆ!

(c) G. ANIL KUMAR 2010.