Thursday 6 January 2011

ಭಾರತದ ಅತ್ಯಂತ ದುಬಾರಿ ರೈಲು-ಪ್ರವಾಸ


ಪ್ರವಾಸ ಮಾಡುವುದು ಸಂತೋಷದ ಜೊತೆಗೆ ಶೈಕ್ಷಣಿಕ ಕ್ರಿಯೆಯೂ ಹೌದು. ಅದರಲ್ಲೂ ರೈಲು ಪ್ರವಾಸ ಬಹಳ ಚೆನ್ನಾಗಿರುತ್ತದೆ. ನಿಮ್ಮ ದೇಶವನ್ನು ನೀವು ಚೆನ್ನಾಗಿ ನೋಡಬೇಕಾದರೆ ವಿಮಾನಕ್ಕಿಂತಲೂ ರೈಲು ಸಂಚಾರ ಅನಿವಾರ್ಯ.

`ದೇಶ ಸುತ್ತು, ಕೋಶ ಓದು' ಎಂಬ ಗಾದೆ ತುಂಬ ಅರ್ಥಪೂರ್ಣ. ಆದರೆ ಗೊತ್ತುಗುರಿ ಇಲ್ಲದೇ ಸುತ್ತುವುದು ಪ್ರವಾಸ ಎನಿಸುವುದಿಲ್ಲ. ಅಲೆದಾಟ ಎನಿಸುತ್ತದೆ.

ನಾನು ಭಾರತದ ಬಹುತೇಕ ಭಾಗಗಳಲ್ಲಿ ರೈಲು ಪ್ರವಾಸ ಮಾಡಿದ್ದೇನೆ, ಮಾಡುತ್ತಿದ್ದೇನೆ. ದೇಶ ನೋಡುವುದು, ದೇಶದ ಜನರನ್ನು ನೋಡುವುದು ರೈಲಿನಲ್ಲಿ ಮಾತ್ರ ಸಾಧ್ಯ. ಹೀಗಾಗಿ ಭಾರತೀಯ ರೈಲ್ವೆಯ ಎಲ್ಲ ದಜರ್ೆಗಳಲ್ಲೂ ಪ್ರಯಾಣ ಮಾಡಿದ್ದೇನೆ. ಅವಶ್ಯವಿದ್ದಾಗ (ಕೆಲಸವಿದ್ದಾಗ) ಮಾತ್ರ ವಿಮಾನ ಪ್ರಯಾಣ ಮಾಡುವದು ನನ್ನ ಅಭ್ಯಾಸ. ಉಳಿದಂತೆ ದೇಶ ಸುತ್ತಲು ರೈಲನ್ನೇ ಬಳಸುತ್ತೇನೆ. ಆದರೂ ಒಂದು ಬಗೆಯ ವಿಶೇಷ ರೈಲು ಪ್ರವಾಸವನ್ನು ಇನ್ನೂ ಮಾಡಲಾಗಿಲ್ಲ.

ಅದೇ ಪಂಚತಾರಾ ರೈಲು ಪ್ರವಾಸ. ಅದರಲ್ಲಿ `ಪ್ರವಾಸ'ಕ್ಕಿಂತಲೂ `ವಾಸ'ಕ್ಕೇ ಹೆಚ್ಚಿನ ಆದ್ಯತೆ. ಅಂದರೆ, ರೈಲುಗಾಡಿಯ ಒಳಗಿನ ವಾಸವೇ ಅದರ ವೈಶಿಷ್ಟ್ಯ. ನಾಲ್ಕು ದಿನಗಳಲ್ಲಿ ಮಾಡಬಹುದಾದ ಪ್ರವಾಸವನ್ನು ಎಂಟು ದಿನಗಳಲ್ಲಿ ಮಾಡಿಸಿ, ರೈಲು ಗಾಡಿಯ ಒಳಗೆ ಪಂಚತಾರಾ ಹೊಟೇಲಿನ ವೈಭವವನ್ನು ಒದಗಿಸಿ ವಿಶಿಷ್ಟ `ಅನುಭವ' ನೀಡುವುದು (ಹಾಗೂ ಹಣ ಪಡೆಯುವುದು) ಈ ಬಗೆಯ ಪ್ರವಾಸಗಳ ಉದ್ದೇಶ. ಇದು ತಪ್ಪಲ್ಲ. `ಜಗತ್ತಿನ ಅತ್ಯಂತ ವೈಭವೋಪೇತ ಪ್ರವಾಸದ ಅನುಭವ ಬೇಕು' ಎನ್ನುವವರಿಗಾಗಿ ಇದನ್ನು ಕಲ್ಪಿಸಲಾಗಿದೆ. ಮೂಲತಃ ಇವುಗಳನ್ನು ವಿದೇಶಿ ಶ್ರೀಮಂತರಿಗಾಗಿ ಕಲ್ಪಿಸಲಾಗಿತ್ತು. ಅಮೆರಿಕನ್ ಡಾಲರ್ಗಳಲ್ಲಿ ಮಾತ್ರ ಹಣವನ್ನು ಸ್ವೀಕರಿಸಲಾಗುತ್ತಿತ್ತು. ಈಗ ಬಾರತೀಯರಿಗೂ ಅವಕಾಶ ನೀಡಲಾಗುತ್ತಿದೆ. ಭಾರತೀಯ ರೂಪಾಯಿಯನ್ನೂ ಸ್ವೀಕರಿಸಲಾಗುತ್ತದೆ.

ಯಾವುದು ಈ ಪಂಚತಾರಾ ರೈಲು ಪ್ರವಾಸ?

ಭಾರತೀಯ ರೈಲ್ವೆ ಈ ಬಗೆಯ ಪ್ರವಾಸಗಳಿಗಾಗಿ ವಿಶೇಷ ರೈಲುಗಳನ್ನು ಹೊಂದಿದೆ. ಪ್ಯಾಲೆಸ್ ಆನ್ ವೀಲ್ಸ್, ದಿ ಗೋಲ್ಡನ್ ಚಾರಿಯಟ್, ಡೆಕ್ಕನ್ ಒಡಿಸ್ಸಿ, ರಾಯಲ್ ರಾಜಸ್ತಾನ್ ಆನ್ ವೀಲ್ಸ್, ದಿ ಇಂಡಿಯನ್ ಮಹಾರಾಜ, ಸ್ಪ್ಲೆಂಡರ್ ಆಫ್ ದಿ ಸೌತ್, ಮಹಾರಾಜಾಸ್ ಎಕ್ಸ್ ಪ್ರೆಸ್ - ಇವೆಲ್ಲ ಅಂತಹ ರೈಲುಗಳ ಹೆಸರುಗಳು.

ಜಗತ್ತಿನ ಇತರ ದೇಶಗಳಲ್ಲೂ ಈ ಬಗೆಯ ವೈಭವೋಪೇತ ಪ್ರವಸಿ-ಟ್ರೇನುಗಳಿವೆ. ಉದಾಹರಣೆಗೆ, ಯೂರೋಪಿನ ಓರಿಯಂಟ್ ಎಕ್ಸ್ ಪ್ರೆಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಇತಿಹಾಸವನ್ನೇ ನಿಮರ್ಿಸಿತ್ತು. ಅಗಾಥಾ ಕ್ರಿಸ್ಟಿ `ಮರ್ಡರ್ ಇನ್ ದಿ ಓರಿಯಂಟ್ ಎಕ್ಸ್ ಪ್ರೆಸ್' ಎಂಬ ಪತ್ತೇದಾರಿ ಕಾದಂಬರಿಯನ್ನು ಬರೆದಿದ್ದು ಈ ಟ್ರೇನಿನ ಜನಪ್ರಿಯತೆಯನ್ನು ತೋರಿಸುತ್ತದೆ.

ಮಹಾರಾಜಾಸ್ ಎಕ್ಸ್ ಪ್ರೆಸ್ ಭಾರತದ ಅತ್ಯಂತ ದುಬಾರಿ, ಲಕ್ಸುರಿ ಪ್ರವಾಸಿ-ರೈಲುಗಾಡಿ. ಅದನ್ನು ಭಾರತೀಯ ರೈಲ್ವೆ 2010ರಲ್ಲಿ ಆರಂಭಿಸಿದೆ. ಅಂತಾರಾಷ್ಟ್ರೀಯ ಪ್ರವಾಸಿ ಕಂಪೆನಿಯೊಂದರ ಸಹಯೋಗದಲ್ಲಿ ಅದನ್ನು ನಡೆಸಲಾಗುತ್ತಿದೆ.

ಈ ಟ್ರೇನಿನಲ್ಲಿ ಪ್ರಯಾಣಿಸಲು ಕನಿಷ್ಠ ದರ ಎಷ್ಟು ಗೊತ್ತೆ? ಒಂದು ದಿನಕ್ಕೆ, ಒಬ್ಬರಿಗೆ 800 ಅಮೆರಿಕನ್ ಡಾಲರ್ (ಸುಮಾರು 40,000 ರೂಪಾಯಿ)! ಎಂಟು ದಿನಗಳ ಒಂದು ಪ್ರವಾಸಿ ಪ್ಯಾಕೇಜನ್ನು ನೀವು ಖರೀದಿಸಿದರೆ ಮೂರೂಕಾಲು ಲಕ್ಷ ರೂಪಾಯಿಗಳನ್ನು ನೀಡಬೇಕು! ನೆನಪಿಡಿ, ಇದು ಕನಿಷ್ಠ ದರ ಮಾತ್ರ.

ಈ ದೊಡ್ಡ ಟ್ರೇನಿನಲ್ಲಿ ಪ್ರಯಾಣಿಸಲು ಒಟ್ಟು 88 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರತಿಯೊಬ್ಬರಿಗೂ ಹೆಚ್ಚು ಸ್ಥಳವನ್ನು ಒದಗಿಸುವುದೇ ಇದಕ್ಕೆ ಕಾರಣ.

ದೆಹಲಿ, ಆಗ್ರಾ, ಗ್ವಾಲಿಯರ್, ವಾರಾಣಸಿ ಮತ್ತು ಮುಂಬೈ, ರಾಜಸ್ತಾನ - ಹೀಗೆ ಹಲವು ಮಾರ್ಗಗಳಲ್ಲಿ ಮಹಾರಾಜಾಸ್ ಎಕ್ಸ್ ಪ್ರೆಸ್ ಸಂಚರಿಸುತ್ತದೆ. 6 ದಿನಗಳಿಂದ 8 ದಿನಗಳ ವರೆಗೆರ ವಿವಿಧ ಪ್ರವಾಸಿ ಪ್ಯಾಕೇಜುಗಳನ್ನು ಮಾರಲಾಗುತ್ತದೆ.

ಇಬ್ಬರಿಗೆ ಒಟ್ಟಾಗಿ (ಟ್ವಿನ್ ಶೇರಿಂಗ್) ಟಿಕೆಟ್ ಬುಕ್ ಮಾಡಿಸಬೇಕು. ಹಾಗೆ ಮಾಡಿಸಿದಾಗ ಕನಿಷ್ಠ ದರ ದಿನಕ್ಕೆ 800 ಡಾಲರ್ ಒಬ್ಬರಿಗೆ (ಇಬ್ಬರಿಗೆ 1600 ಡಾಲರ್ - 80,000 ರೂಪಾಯಿ). ಒಂದು ದಿನಕ್ಕೆ ಬುಕ್ ಮಾಡಿಸುವ ಹಾಗಿಲ್ಲ. ಇಡೀ ಪ್ಯಾಕೇಜನ್ನು ತೆಗೆದುಕೊಳ್ಳಬೇಕು. ಒಬ್ಬರಿಗೇ ಬುಕ್ ಮಾಡಿಸಿದರೂ ಇಬ್ಬರಿಗಾಗುವಷ್ಟು ಹಣ ನೀಡಬೇಕು. 5-1`2 ವರ್ಷದ ಮಕ್ಕಳೀಗೆ ಅರ್ಧ ಬೆಲೆ. ತಂದೆತಾಯಿಗಳ ಜೊತೆಗೆ ಬರುವ 5 ವರ್ಷದ ಕೆಳಗಿನ ಮಗುವಿಗೆ ಉಚಿತ. ಇಬ್ಬರು ಮಕ್ಕಳು ಬಂದರೆ ಒಂದಕ್ಕೆ ಅರ್ಧ ಬೆಲೆ. ಇನ್ನೊಂದಕ್ಕೆ ಪೂರ್ಣ ಬೆಲೆ.

800 ಡಾಲರ್ ದಜರ್ೆಯನ್ನು `ಟೀಲಕ್ಸ್ ಕ್ಯಾಬಿನ್' ಎನ್ನುತ್ತಾರೆ. 900 ಡಾಲರ್ ದಜರ್ೆಯೂ ಇದೆ. ಅದನ್ನು `ಜ್ಯೂನಿಯರ್ ಸ್ಯೂಟ್' ಎನ್ನುತ್ತಾರೆ. `ಸ್ಯೂಟ್' ಬೇಕಾದರೆ ಒಂದು ದಿನಕ್ಕೆ, ಒಬ್ಬರಿಗೆ (ಟ್ವಿನಬ್ ಶೇರಿಂಗ್ ದರದನ್ವಯ) 1400 ಡಾಲರ್.

ಈ ಪೈಕಿ ಅತ್ಯಂತ ದುಬಾರಿ ದಜರ್ೆಯ ಹೆಸರು `ಪ್ರೆಸಿಡೆಂಶಿಯಲ್ ಸ್ಯೂಟ್', ಅದರ ಬೆಲೆ: ಒಂದು ದಿನಕ್ಕೆ, ಒಬ್ಬರಿಗೆ 2500 ಡಾಲರ್. ಇದು ಜಗತ್ತಿನ ಅತಿ ವಿಶಾಲ ಟ್ರೇನ್ ಸ್ಯೂಟ್. ಇದರ ವಿಸ್ತೀರ್ಣ 445 ಚದರ ಅಡಿ. ಒಂದು ಇಡೀ ಬೋಗಿಯನ್ನೇ ನಿಮಗೆ ನೀಡಲಾಗುತ್ತದೆ.

`ಪೆಸಿಡೆಂಶಿಯಲ್ ಸ್ಯೂಟ್'ನಲ್ಲಿ ಇಬ್ಬರಿಗೆ 8 ದಿನಗಳ ಪ್ರವಾಸದ ಪ್ಯಾಕೇಜ್ ಬುಕ್ ಮಾಡಿಸಲು ಕೊಡಬೇಕಾದ ಹಣ 40,000 ಡಾಲರ್. ತೆರಿಗೆ ಎಲ್ಲ ಸೇರಿ 41,028 ಡಾಲರ್. ಅಂದರೆ, ಸುಮಾರು 20,00,000 (ಇಪ್ಪತ್ತು ಲಕ್ಷ) ರೂಪಾಯಿಗಳು!!

ನೀವು ದೆಹಲಿ-ಆಗ್ರಾ-ಕಾಶಿ ಪ್ರವಾಸಕ್ಕೆ 20 ಲಕ್ಷ ರೂಪಾಯಿ (ಊಟ-ತಿಂಡಿ-ಪಾನೀಯ ಎಲ್ಲ ಸೇರಿ) ಸುರಿಯಬೇಕು!

ಇದು ವೈಭವಕ್ಕಾಗಿ ನೀಡುವ ಹಣ. ಯಾವ ವೈಭವ ಈ ಟ್ರೇನಿನಲ್ಲಿ ಸಿಗುತ್ತದೆ?

ಮೊದಲಿಗೆ, ಈ ಟ್ರೇನು ಚಲಿಸುವಾಗ ಒಳಗಿನ ಪ್ರವಾಸಿಗಳಿಗೆ ಕುಲುಕುವ ಅನುಭವ ಆಗುವುದಿಲ್ಲ. ಟ್ರೇನಿನಲ್ಲಿ 14 ಪ್ರಯಾಣಿಕ ಕ್ಯಾಬಿನ್ಗಳಿವೆ. ಈ ಪೈಕಿ 5 ಡೀಲಕ್ಸ್ 6 ಜ್ಯೂನಿಯರ್ ಸ್ಯೂಟ್, 2 ಸ್ಯೂಟ್ ಹಾಗೂ 1 ಪ್ರೆಸಿಡೆನ್ಶಿಯಲ್ ಸ್ಯೂಟ್. ಪ್ರತಿ ಕ್ಯಾಬಿನ್ನೂ ಏರ್-ಕಂಡಿಷನ್ಡ್ (ಹವಾನಿಯಂತ್ರಿತ). ಪ್ರತಿಯೊಂದರ ಒಳಗೂ ಮೆತ್ತನೆ ಹಾಸಿರುವ ಡಬಲ್ ಬೆಡ್ ಸೈಜಿನ ಮಂಚ (ಅಥವಾ ಟ್ವಿನ್ ಕಾಟ್) ಇರುತ್ತದೆ. ಟೆಲಿಫೋನ್ ಇರುತ್ತದೆ. ಅದರಿಂದ ಜಗತ್ತಿನ ಯಾವ ಮೂಲೆಗಾದರೂ ನೇರವಾಗಿ ಡಯಲ್ ಮಾಡಬಹುದು. ದೊಡ್ಡ ಎಲ್ಸಿಡಿ ಟಿವಿ ಹಾಗೂ ಡಿವಿಡಿ ಪ್ಲೇಯರ್ಗಳು (ಒಂದೊಂದು ಕ್ಯಾಬಿನ್ಗೂ ಪ್ರತ್ಯೇಕ) ಇರುತ್ತವೆ. ಇಂಟರ್ನೆಟ್ ಸಂಪರ್ಕ ಇದೆ.ಹಣ, ಒಡವೆ ಇಟ್ಟುಕೊಳ್ಳಲು ಎಲೆಕ್ಟ್ರಾನಿಕ್ ತಿಜೋರಿ ಇದೆ. ಬೇಕಾದಾಗ ಡಾಕ್ಟರ್ ಲಭ್ಯವಿರುತ್ತಾರೆ. ಇವೆಲ್ಲ ಪಂಚತಾರಾ ದಜರ್ೆಯಲ್ಲಿರುತ್ತವೆ. ಸ್ಯೂಟ್ನಲ್ಲಿ ಬೆಡ್ರೂಮ್ ಜೊತೆಗೆ ಪ್ರತ್ಯೇಕ ಬಾತ್ರೂಮ್, ಸಿಟ್ಟಿಂಗ್ ಹಾಲ್ (ಲಿವಿಂಗ್ ರೂಮ್) ಇರುತ್ತವೆ. ದೊಡ್ಡ ಸೋಫಾ ಸೆಟ್ಗಳು, ಸೆಂಟರ್ ಟೇಬಲ್ಗಳು ಇರುತ್ತವೆ.

ಟ್ರೇನಿನ ಒಳಗೆ ಎರಡು ದೊಡ್ಡ ಪಂಚತಾರಾ ಮಟ್ಟದ ರೆಸ್ಟುರಾಗಳಿವೆ (ರಂಗ್ ಮಹಲ್, ಮಯೂರ್ ಮಹಲ್). ನೆಲಕ್ಕೆಲ್ಲಾ ಕಾಪರ್ೆಟ್ ಹಾಸಲಾಗಿರುತ್ತದೆ. ಕಿಟಕಿಗೆ ಒಳ್ಳೆಯ ಗುಣಮಟ್ಟದ ಕರ್ಟನ್ಗಳು ಇರುತ್ತವೆ. ಮಧ್ಯಪಾನಿಗಳಿಗಾಗಿ ಬಾರ್ ಹಾಗೂ ಲೌಂಜ್ ಇವೆ.

ಇಷ್ಟೆಲ್ಲ ಇದ್ದಮೇಲೆ ರೈಲಿನಿಂದ ಕೆಳಗೆ ಇಳಿಯಲು ಮನಸ್ಸು ಬರದೇ ಒಳಗೇ ಉಳಿಯುವ ಸೋಮಾರಿತನವೂ ಬಂದುಬಿಡಬಹುದು! ಆದರೂ ಪ್ರವಸಿಗಳನ್ನು ಇಳಿಸಿ ಎಸಿ ಬಸ್ ಹಗೂ ಕಾರುಗಳ ಮೂಲಕ ಊರು ಸುತ್ತಿಸಿ ತೋರಿಸುವ ವ್ಯವಸ್ಥೆ ಇದೆ. ಪ್ರವಾಸಿ ತಾಣಗಳಲ್ಲಿ ಗೈಡ್ ವ್ಯವಸ್ಥೆಯೂ ಇದೆ. ಸುತ್ತಿದ್ದು ಆದ ನಂತರ ಮತ್ತೆ ಕರೆತಂದು ರೈಲಿನೊಳಗೆ ಬಿಡುತ್ತಾರೆ.

ಮುಂದಿನ ಊರಿಗೆ ರೈಲುಗಾಡಿ ಹೊರಡುತ್ತದೆ!

(c) G. ANIL KUMAR 2010.

No comments:

Post a Comment