Wednesday 9 February 2011

ಇರುವೆಗಳ ವಿಸ್ಮಯ ಲೋಕ!

ಇರುವೆ ಎಷ್ಟು ಚಿಕ್ಕದು, ಅಲ್ಲವೆ? `ಅಯ್ಯೋ! ಇರುವೇನಾ? ಅದ್ಯಾವ ಮಹಾ?!' ಎನ್ನುವುದು ಸಾಮಾನ್ಯ. ಆದರೆ ಅದರ ಗಾತ್ರಕ್ಕೆ ಹೋಲಿಸಿದರೆ ಇರುವೆ ಶಕ್ತಿ ಅಗಾಧವಾದದ್ದು.

ಇರುವೆಯಿಂದ ಕಚ್ಚಿಸಿಕೊಂಡು `ಹ್ಹಾ' ಎನ್ನದವರಾರು? ವಿಸ್ಮಯದಿಂದ ಇರುವೆ ಸಾಲನ್ನು, ಇರುವೆ ಗೂಡನ್ನು ನೋಡುತ್ತ್ತಾ ನಿಲ್ಲದವರಾರು? ಎಲ್ಲ ವಯಸ್ಸಿನವರಿಗೂ ಇರುವೆಯನ್ನು ಕಂಡರೆ ಪ್ರೀತಿ! ನಮ್ಮ ನಡುವೆ ಇದ್ದರೂ ಅವುಗಳದೇ ಒಂದು ವಿಶಿಷ್ಟ ಜಗತ್ತು!

ಅಂದಹಾಗೆ, ಈ ಜಗತ್ತಿನಲ್ಲಿ ಎಷ್ಟು ಇರುವೆಗಳಿವೆ? ಕಾಡಿನಲ್ಲಿ ಹುಲಿ, ಆನೆಗಳನ್ನು ಎಣಿಕೆ ಮಾಡಿದ ಹಾಗೆ ಇರುವೆಗಳನ್ನು ಯಾರೂ ಎಣಿಸಲಾರರು! ನಾಲ್ಕು ಜನ ವಾಸವಾಗಿರುವ ಮನೆಯ ಸುತ್ತಮುತ್ತ ನೂರಾರು ಕೋಟಿ ಇರುವೆಗಳಿರುತ್ತವೆ. ಇನ್ನು ಇಡೀ ಭೂಮಿಯ ತುಂಬಾ ಎಷ್ಟು ಇರುವೆಗಳಿವೆ ಎಂಬುದನ್ನು ಅಂದಾಜು ಮಾಡುವುದೂ ಕಷ್ಟ.

ಎಲ್ಲ ಇರುವೆಗಳೂ ಒಂದೇ ಜಾತಿಯವಲ್ಲ. ಅವುಗಳಲ್ಲಿ ಸುಮಾರು 12,000 ವಿವಿಧ ಜಾತಿಗಳಿವೆ ಎಂದು ಅಂದಾಜು ಮಾಡಲಾಗಿದೆ. ಸುಮಾರು 9000 ಜಾತಿಗಳನ್ನು ಗುರುತಿಸಲಾಗಿದೆ. ಈ ವಿಜ್ಞಾನಿಗಳೂ ಪರವಾಗಿಲ್ಲ ನೋಡಿ! ಇಷ್ಟೊಂದು ಬಗೆಬಗೆ ಇರುವೆಗಳನ್ನು ಗುರುತಿಸುವ ಕೆಲಸವೇನು ಸಾಮಾನ್ಯವೆ?

ಪ್ರತಿ ದೇಶ, ಪ್ರದೇಶಗಳಲ್ಲೂ ನಾನಾ ಜಾತಿ `ಸ್ವದೇಶಿ' ಇರುವೆಗಳಿವೆ. ಆದರೆ ಸ್ವದೇಶಿ ಇರುವೆಗಳು ಇಲ್ಲದ ಕೆಲವು ಜಾಗಗಳೂ ಇವೆ! ಅಂಟಾಕರ್್ಟಿಕಾ ಗ್ರೀನ್ಲ್ಯಾಂಡ್, ಐಸ್ಲ್ಯಾಂಡ್, ಹಾಗೂ ಪಾಲಿನೇಷಿಯಾ, ಹವಾಯ್ ದ್ವೀಪಗಳ ಭಾಗಗಳಲ್ಲಿ ಸ್ವದೇಶಿ ಇರುವೆಗಳಿಲ್ಲ. ಬಿಳಿ ಗೆದ್ದಲು ಹುಳು ಇರುವೆಯಂತಹುದೇ ಆದರೂ ಪಕ್ಕಾ ಇರುವೆಯಲ್ಲ.

ಇರುವೆಗಳು ಬೀದಿ ನಾಯಿಯಂತೆ ಒಂಟಿಯಾಗಿ ವಾಸಿಸಲಾರವು. ಒಂಟಿಯಾಗಿ ಮಲಗಲಾರವು. ಒಂಟಿಯಾಗಿ ತಿನ್ನಲಾರವು. ಅವುಗಳದು ದೊಡ್ಡ ಕುಟುಂಬ. ಒಂದೇ ಗೂಡಿನಲ್ಲಿರುವ ಒಂದು ಕುಟುಂಬದಲ್ಲಿ ಏನಿಲ್ಲವೆಂದರೂ 10,000 ಇರುವೆಗಳು ಇರುತ್ತವೆ! ಸಾಮಾನ್ಯವಾಗಿ ದೊಡ್ಡ ಗೂಡುಗಳಲ್ಲಿ ಲಕ್ಷಾಂತರ ಇರುವೆಗಳಿರುತ್ತವೆ. ಅವುಗಳ ಪೈಕಿ ಒಂದು ದೊಡ್ಡ ತಾಯಿ ಇರುವೆ ಇರುತ್ತದೆ. ಉಳಿದವು ಅಕ್ಕ, ತಂಗಿ, ಅಣ್ಣ, ತಮ್ಮ ಇರುವೆಗಳು! ಇವೆಲ್ಲ ಆಹಾರವನ್ನು ಹಂಚಿಕೊಂಡು ತಿನ್ನುತ್ತವೆ.

`ರಾಣಿ' (ದೊಡ್ಡ ಗಾತ್ರದ ಹೆಣ್ಣು ಇರುವೆ), `ಕೆಲಸಗಾರ' (ಇದೂ ಹೆಣ್ಣು) ಹಾಗೂ ಗಂಡು ಎಂದು ಮೂರು ರೀತಿ ಇರುವೆಗಳಿವೆ. ರಾಣಿ ಇರುವೆ 30 ವರ್ಷದವರೆಗೂ ಬದುಕುತ್ತದೆ! ಕೆಲಸಗಾತರ್ಿ ಇರುವೆಗಳು 1-3 ವರ್ಷ ಬದುಕುತ್ತವೆ. ಆದರೆ ಗಂಡು ಇರುವೆಗಳು ಕೆಲವು ವಾರಗಳು ಮಾತ್ರ ಜೀವಿಸುತ್ತವೆ.

ಆಫ್ರಿಕಾದ `ಡೋರಿಲಸ್' ಜಾತಿಯ ಹೆಣ್ಣು ಇರುವೆ ಜಗತ್ತಿನ ಅತಿ ದಪ್ಪ ಇರುವೆ. ಅದರ ಉದ್ದ ಸುಮಾರು 4 ಸೆಂಟಿ ಮೀಟರ್ಗಳು!

ಅತಿ ಚಿಕ್ಕ ಇರುವೆಗಳನ್ನು ನೀವು ಕಣ್ಣು ಕಿರಿದಾಗಿಸಿ ಹುಡುಕಿದರೂ ನೋಡುವುದು ಕಷ್ಟ. ಕೆಲವು ಜಾತಿ ಚಿಕ್ಕ ಇರುವೆಗಳು ಚಲಿಸದೇ ಒಂದು ಕಡೆ ನಿಂತಿದ್ದರೆ ಗೊತ್ತೇ ಆಗುವುದಿಲ್ಲ. ಇಂತಹ 1 ಲಕ್ಷ ಇರುವೆಗಳ ಒಟ್ಟು ತೂಕ 1 ಗ್ರಾಂ ಸಹ ಆಗುವುದಿಲ್ಲ.

ಆದರೆ ಅವಕ್ಕೆ ಎಷ್ಟು ಬುದ್ಧಿ ಇದೆ ನೋಡಿ. ಅವು ಎಂತಹ ಅದ್ಭುತವಾದ ಗೂಡುಗಳನ್ನು ಕೊರೆಯುತ್ತವೆ ಗೊತ್ತೆ? ಈ ಗೂಡುಗಳಲ್ಲಿ ಬೇರೆ ಬೇರೆ ರೂಮ್ಗಳಿರುತ್ತವೆ! ಬೇರೆಬೇರೆ ಚೇಂಬರ್ಗಳಿರುತ್ತವೆ. ಸಂತಾನೋತ್ಪತ್ತಿ ವಿಭಾಗ, ಆಹಾರ ಶೇಖರಣೆ ವಿಭಾಗ, ಕಸಕಡ್ಡಿ ತುಂಬುವ ವಿಭಾಗ, ತಾಯಿ ಇರುವೆಗಳಿರಲು ಪ್ರತ್ಯೇಕ ಕೋಣೆಗಳು -ಹೀಗೆ. `ಮೇಸರ್ ಆಸಿಕ್ಯುಲೇಟಸ್' ಎನ್ನುವ ಜಾತಿಗೆ ಸೇಋಇದ ಇರುವೆಗಳು 4 ಮೀಟರ್ ಆಳದ ಗೂಡುಗಳನ್ನು ಕೊರೆಯುತ್ತವಂತೆ!

ಪ್ರತಿ ದಿನ ಒಂದು ಸಾಮಾನ್ಯ ಇರುವೆ ಗೂಡಿಗೆ ಬೇಕಾಗುವ ಆಹಾರ ಎಷ್ಟು?

ಇರುವೆಗಳಿಗೆ ಸಿಹಿ ಎಂದರೆ ಬಹಳ ಇಷ್ಟ. ಹೀಗಾಗಿ ಎಲ್ಲೆಲ್ಲಿಂದಲೋ ಕೇಜಿಗಟ್ಟಲೆ ಸಿಹಿ ತಂದು ತುಂಬಿಕೊಳ್ಳುತ್ತವೆ. ಕೀಟಗಳನ್ನೂ ಅವು ಇಷ್ಟಪಟ್ಟು ತಿನ್ನುತ್ತವೆ. ದೊಡ್ಡ ಜಿರಲೆಯನ್ನು ಇರುವೆಗಳು ಕಚ್ಚಿಕೊಂಡು ಹೋಗುವುದನ್ನು ನೋಡಿದ್ದೀರಾ? ಒಂದು ಚಿಕ್ಕ ಗೂಡಿನಲ್ಲಿರುವ ಇರುವೆಗಳು ಪ್ರತಿದಿನವೂ ಸುಮಾರು 2,400 ಕೀಟಗಳನ್ನು ಗೂಡಿಗೆ ತಂದು ತಿನ್ನುತ್ತವೆ!

ಫೈರ್ ಆ್ಯಂಟ್ಸ್ ಅಥವಾ ಕೆಂಪು ಇರುವೆಗಳು ಎಲ್ಲರ ಮೇಲೂ ದಾಳಿ ಮಾಡಿ ಕಚ್ಚಿ ನೋಯಿಸುತ್ತವೆ. ಅವುಗಳಲ್ಲಿ ವಿಷವಿದ್ದರೂ ಅದು ಅತ್ಯಲ್ಪ ಪ್ರಮಾಣವಾದ್ದರಿಂದ ನಮಗೇನೂ ಆಗುವುದಿಲ್ಲ. ಆದರೆ ಲಕ್ಷಾಂತರ ಇರುವೆಗಳು ಯಾರನ್ನಾದರೂ ಕಚ್ಚಿದರೆ ಕಷ್ಟ. ಒಂದು ಬಗೆಯ ಕಿಲ್ಲರ್ ಆ್ಯಂಟ್ಸ್ (ಹಂತಕ ಇರುವೆಗಳು) ಆಫ್ರಿಕಾದ ಕಾಡುಪ್ರದೇಶದಲ್ಲಿವೆ. ಅವು ಕೋಟಿಗಟ್ಟಲೆ ಸಂಖ್ಯೆಯಲ್ಲಿ ಗುಂಪಾಗಿ ದಾಳಿಯಿಡುತ್ತವೆ. ಹಳ್ಳಿಗಳಿಗೆ ನುಗ್ಗಿ ಗೋವುಗಳನ್ನು ಹಾಗೂ ಇತರೆ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತವೆ. ಅವು ಬಂತೆಂದರೆ ಜನರೆಲ್ಲ ಗಾಬರಿಯಿಂದ `ಅಯ್ಯೋ! ಇರುವೆಗಳು ಬಂದವು, ಓಡಿ!' ಎಂದು ಚೀರಿಕೊಂಡು ಓಡುತ್ತಾರೆ!

No comments:

Post a Comment