Thursday 22 July 2010

ಇಂದು ನಿಮ್ಮ ಶರೀರವನ್ನು ಎಷ್ಟು `ಕೆಫಿನ್' ಸೇರಿತು?


`ಕೆಫಿನ್' ಜಗತ್ತಿನ ಅತಿ `ಜನಪ್ರಿಯ' ಔಷಧಿ. ಅದನ್ನು ತಲೆನೋವು ಮೊದಲಾದ ತೊಂದರೆಗಳಿಗೆ ಪರಿಹಾರವಾಗಿ ಮಾತ್ರೆಗಳಲ್ಲಿ ಬಳಸುತ್ತಾರೆ. ಔಷಧಿಗಳ ತಯಾರಿಕೆಯಲ್ಲಿ ಅಲ್ಪ ಪ್ರಮಾಣದಲ್ಲಿ ಬಳಸಲ್ಪಡುವ ಈ ವಸ್ತುವನ್ನು ನಾವು ಕಾಫಿ, ಟೀ, ಚಾಕೊಲೇಟ್ ಮುಂತಾದ ಆಹಾರಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಹೊಟ್ಟೆಗೆ ತೆಗೆದುಕೊಳ್ಳುತ್ತೇವೆ.

ಹೌದು ಕೆಫಿನ್ ಕಾಫಿ, ಟೀ, ಕೋಲಾ, ಕೋಕೊಗಳಲ್ಲೆಲ್ಲ ಇರುತ್ತದೆ. ಅದು ಸುಮಾರು 60 ಜಾತಿಯ ಸಸ್ಯಗಳಲ್ಲಿ ಕಂಡುಬರುತ್ತದೆ. ಈ ಸಸ್ಯಗಳಿಗೆ ಕೀಟಗಳು ಮುತ್ತದಂತೆ ನೈಸಗರ್ಿಕ ಕೀಟನಾಶಕದ ರೀತಿ ಕೆಫಿನ್ ಕೆಲಸಮಾಡುತ್ತದೆ!

ಶುದ್ಧ ಕೆಫಿನ್, ಕ್ಸಾಂಥೈನ್ ರಾಸಾಯನಿಕ ಸಮೂಹಕ್ಕೆ ಸೇರುವ ಪದಾರ್ಥ. ಅದಕ್ಕೆ ವಾಸನೆ ಇರುವುದಿಲ್ಲ. ಅದರ ರುಚಿ ಕಹಿ.

ವಿಷವನ್ನು ನಾವು ಆಡುಭಾಷೆಯಲ್ಲಿ ಸಾಮಾನ್ಯವಾಗಿ `ಕಹಿ' ಎಂದೇ ಹೇಳುತ್ತೇವೆ ಅಲ್ಲವೆ? ನಿಮಗೆ ಗೊತ್ತಿರಲಿ, ಹೆಚ್ಚು ಪ್ರಮಾಣದಲ್ಲಿ ಕೆಫಿನ್ ಸೇವಿಸುವುದೂ ಸಹ ವಿಷವನ್ನೇ ಸೇವಿಸಿದಂತೆ. ವಿಜ್ಞಾನಿಗಳ ಪ್ರಕಾರ, 10 ಗ್ರಾಂ ಕೆಫಿನ್ ಒಬ್ಬ ಮನುಷ್ಯನನ್ನು ಸಾಯಿಸಲು ಸಾಕು. ಅಂದರೆ 80-100 ಕಪ್ ಕಾಫಿಯಲ್ಲಿ ಒಬ್ಬ ಮನುಷ್ಯನನ್ನು ಕೊಲ್ಲುವಷ್ಟು ಕೆಫಿನ್ ಇರುತ್ತದೆ! ಆದರೆ ಒಂದೇ ಬಾರಿಗೆ ಅಷ್ಟು ಕಪ್ ಕಾಫಿ ಕುಡಿಯುವುದು ಸುಲಭವಲ್ಲ.

ಜನರು ಏಕೆ ಕೆಫಿನ್ ಸೇವಿಸುತ್ತ್ತಾರೆ? ಏಕೆಂದರೆ ಅದು ಅವರ ಕೇಂದ್ರ ನರಮಂಡಲವನ್ನು ಉದ್ರೇಕಿಸುತ್ತದೆ. ಅದರಿಂದ ಸಣ್ಣ ಪ್ರಮಾಣದ ಸುಸ್ತು, ಬೇಸರ ಮಾಯವಾಗುತ್ತವೆ. ಶರೀರ ಚುರುಕಾಗುತ್ತದೆ. ಚಟುವಟಿಕೆ ಹೆಚ್ಚುತ್ತದೆ. ಅಲ್ಲದೇ ಕೆಫಿನ್ ಒಂದು ಉತ್ತೇಜನಕಾರಿ ಪದಾರ್ಥ. ಹೀಗಾಗಿ ಅದನ್ನು ಪದೇಪದೇ ಸೇವಿಸಬೇಕೆಂಬ ಗೀಳು ಹೆಚ್ಚಾಗುತ್ತದೆ. ದೊಡ್ಡವರು ಸದಾ ಕಾಫಿ, ಟೀ ಬೇಕೇಬೇಕು ಎನ್ನುತ್ತಾರೆ. ಮಕ್ಕಳು `ಚಾಕೊಲೇಟ್ ಬೇಕೂ....' ಎಂದು ಸದಾ ಹಠಹಿಡಿಯುತ್ತವೆ. ಅವುಗಳನ್ನು ಮಾರುವವರಿಗೆ ಒಳ್ಳೆಯ ಲಾಭ ಬರುತ್ತದೆ.

ಕೆಫಿನ್ ಹೆಚ್ಚಾಗಿ ಶರೀರಕ್ಕ್ಕೆ ಸೇರುತ್ತಿದ್ದಂತೆ ನಿದ್ರಾಹೀನತೆ, ತಲೆನೋವು ಕಾಡಲಾರಂಭಿಸುತ್ತವೆ. ರಕ್ತದೊತ್ತಡ ಹೆಚ್ಚಾಗುತ್ತದೆ. ಕ್ರಮೇಣ ಹೃದಯ ಸಂಬಂಧಿ ಸಮಸ್ಯೆಗಳು ತಲೆದೋರುತ್ತವೆ. ಪದೇಪದೇ ಕೆಫಿನ್ ಸೇವಿಸುವವರು ಸಕಾಲದಲ್ಲಿ ಸೇವಿಸದಿದ್ದರೂ ತಲೆನೋವು, ನಿದ್ರಾಹೀನತೆ, ಮೈಕೈನೋವು ಕಾಡುತ್ತವೆ!

ಕೆಫಿನ್ ಅನೇಕ ಪೇಯ, ಆಹಾರ ಹಾಗೂ ಔಷಧಿಗಳಲ್ಲಿದೆ. 150 ಮಿ. ಲೀ. ಕಾಫಿಯಲ್ಲಿ 60-150 ಮಿ. ಗ್ರಾಂ.; ಅಷ್ಟೇ ಟೀಯಲ್ಲಿ 40-80 ಮಿ. ಗ್ರಾಂ.; 250 ಮಿ. ಲೀ. ಜೋಲ್ಟ್ ಕೋಲಾದಲ್ಲಿ 100 ಮಿ. ಗ್ರಾಂ.; ಅಷ್ಟೇ ಡಯಟ್ ಕೋಕಾ ಕೋಲಾದಲ್ಲಿ 45 ಮಿ .ಗ್ರಾಂ.; ಸಾಧಾರಣ ಕೋಕಾ ಕೋಲಾದಲ್ಲಿ 64 ಮಿ. ಗ್ರಾಂ.; ಪೆಪ್ಸಿ ಕೋಲಾದಲ್ಲಿ 43 ಮಿ. ಗ್ರಾಂ.; 50 ಗ್ರಾಂ ಚಾಕೊಲೇಟ್ ಬಾರ್ನಲ್ಲಿ 3-63 ಮಿ. ಗ್ರಾಂ.; ನೆಸ್ಲೆ ಕ್ರಂಚ್ ಬಾರ್ನಲ್ಲಿ 10 ಮಿ. ಗ್ರಾಂ.; ಮಿಲ್ಕ್ ಚಾಕೊಲೇಟ್ನಲ್ಲಿ 15 ಮಿ. ಗ್ರಾಂ.; ಕಿಟ್ಕ್ಯಾಟ್ ಬಾರ್ನಲ್ಲಿ 5 ಮಿ. ಗ್ರಾಂ. ಕೆಫಿನ್ ಇದೆ.

ಮೇಲಿನ ಪಟ್ಟಿ ಉಪಯೋಗಿಸಿ ಪ್ರತಿದಿನವೂ ನಿಮ್ಮ ಹೊಟ್ಟೆಯನ್ನು ಎಷ್ಟು ಪ್ರಮಾಣದ ಕೆಫಿನ್ ಸೇರುತ್ತದೆ ಎಂಬುದನ್ನು ಲೆಕ್ಕಹಾಕಬಹುದು.

ಸಾಧ್ಯವಾದಷ್ಟೂ ಕೆಫಿನ್ ಸೇವನೆ ಕಡಿಮೆ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ.

No comments:

Post a Comment