Wednesday 8 September 2010

ವಿಶ್ವದ ದೊಡ್ಡ ಸಸ್ತನಿಗಳು


1) ಭೂಮಿಯ ದೈತ್ಯ, ನೀಲಿ ತಿಮಿಂಗಿಲ

ಭೂಮಿಯ ಅತಿ ದೊಡ್ಡ ಪ್ರಾಣಿ ಸಮುದ್ರದಲ್ಲಿದೆ. ಅದೇ ನೀಲಿ ತಿಮಿಂಗಿಲ. ಅದು 33 ಮೀಟರ್ (110 ಅಡಿ) ಉದ್ದ 181 ಮೆಟ್ರಿಕ್ ಟನ್ (1,80,000 ಕೆ.ಜಿ.!) ತೂಕವಿರುವ ಬೃಹತ್ ಸಸ್ತನಿ. ಅಂದರೆ 8-10 ಅಂತಸ್ತಿನ ಭಾರಿ ಕಟ್ಟಡದಷ್ಟು ಗಾತ್ರ!
ನೀಲಿ ತಿಮಿಂಗಿಲದ ತಲೆ ಎಷ್ಟು ದೊಡ್ಡದೆಂದರೆ ಅದರ ನಾಲಿಗೆಯ ಮೇಲೆ 50 ಜನರು ನಿಂತುಕೊಳ್ಳಬಹುದು! ಅದರ ಹೃದಯ ಒಂದು ಚಿಕ್ಕ ಕಾರ್ನಷ್ಟು ಗಾತ್ರವಿರುತ್ತದೆ. ನೀಲಿ ತಿಮಿಂಗಿಲದ ಮರಿಯೇ ಒಂದು ದೊಡ್ಡ ಆನೆಯಷ್ಟು ತೂಕವಿದ್ದು 25 ಅಡಿ ಉದ್ದವಿರುತ್ತದೆ. ಅದು ತಾನು ಹುಟ್ಟಿದ ಪ್ರಥಮ 7 ತಿಂಗಳಲ್ಲಿ ಪ್ರತಿದಿನವೂ 400 ಲೀಟರ್ ಹಾಲು ಕುಡಿಯುತ್ತದೆ! ಈ ಜೀವಿ 50-80 ವರ್ಷ ಬದುಕಬಲ್ಲುದು. ಆದರೆ ಕ್ರೂರಿ ಮನುಷ್ಯನ ಬೇಟೆಯಿಂದಾಗಿ ನೀಲಿ ತಿಮಿಂಗಿಲದ ಸಂತತಿ ಕಡಿಮೆಯಾಗಿ ಈಗ ಬರೀ 10,000ಕ್ಕೆ ಇಳಿದಿದೆ.

2) ಬೃಹತ್ ಕಾಯದ ಬೃಹತ್ಕಾಯೋಸಾರಸ್

ನೀಲಿ ತಿಮಿಂಗಿಲ ಈಗ ಬದುಕಿರುವ ಎಲ್ಲ ಪ್ರಾಣಿಗಿಂತಲೂ ಬೃಹತ್ ಕಾಯದ ಪ್ರಾಣಿ. ಈ ಭೂಮಿಯ ಇತಿಹಾಸದಲ್ಲೂ ಅದೇ ಬೃಹತ್ ಪ್ರಾಣಿ ಎನ್ನಲಾಗುತ್ತದೆ. ಈಗ ತಿಳಿದಿರುವ ಅನೇಕ ಜಾತಿಯ ಡೈನೋಸಾರ್ಗಳೂ ನೀಲಿ ತಿಮಿಂಗಿಲಕ್ಕಿಂತ ಚಿಕ್ಕ ಗಾತ್ರದವು.
ಆದರೆ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯಲ್ಲಿ ಬೃಹತ್ ಡೈನೋಸಾರ್ನ ಫನೀಕೃತತ ಪಳೆಯುಳಿಕೆ (ಫಾಸಿಲ್) ಸಿಕ್ಕಿದ್ದು ಈ ಜಾತಿಯ ಡೈನೋಸಾರ್ಗಳಿಗೆ `ಬೃಹತ್ ಕಾಯೋಸಾರಸ್' ಎನ್ನಲಾಗಿದೆ.
ಅದರ ಬಗ್ಗೆ ಖಚಿತ ಸಂಶೋಧನೆ ಇನ್ನೂ ಬಾಕಿಯಿದೆ. ಅದೇ ವಿಶ್ವದ ಅತಿ ಬೃಹತ್ ಪ್ರಾಣಿ ಎಂದೂ ಕೆಲವರು ಹೇಳುತ್ತಾರೆ. ಅದು ಸಾಮಾನ್ಯವಾಗಿ ಸುಮಾರು 40 ಮೀಟರ್ (130 ಅಡಿ) ಉದ್ದವಿದ್ದು 14 ಮೀಟರ್ (46 ಅಡಿ) ಎತ್ತರವಿತ್ತು ಎನ್ನಲಾಗಿದೆ. ಅದು 220 ಟನ್ ತೂಕವಿರುತ್ತಿತ್ತು ಎಂದು ಕೆಲವು ತಜ್ಞರ ಅನಿಸಿಕೆ. ಈ ಕುರಿತು ಹೆಚ್ಚಿನ ಅಧ್ಯಯನ ಇನ್ನೂ ನಡೆಯಬೇಕಿದೆ.


3) ದೊಡ್ಡ ಪ್ರಾಣಿ ಆಫ್ರಿಕಾ ಆನೆ



ನೆಲದ ಮೇಲೆ ನಡೆಯುವ ಪ್ರಾಣಿಗಳ ಪೈಕಿ ದೊಡ್ಡ ಪ್ರಾಣಿ ಎಂದರೆ ಆನೆ. ಅದರಲ್ಲೂ ಆಫ್ರಿಕಾದ `ಸವಾನಾ' ಆನೆ ಜಗತ್ತಿನ ಇತರ ಎಲ್ಲ ಪ್ರದೇಶಗಳ ಆನೆಗಳ ಪೈಕಿ ಅತಿ ದೊಡ್ಡದು. ಚೆನ್ನಾಗಿ ಬೆಳೆದ ಸವಾನಾ ಗಂಡು ಆನೆ 7500 ಕೆ.ಜಿ. ತೂಕವಿರುತ್ತದೆ. ಅಂದರೆ 75 ಕೆ.ಜಿ. ತೂಕವಿರುವ 100 ಜನರ ಒಟ್ಟು ತೂಕಕ್ಕೆ ಸಮ! ಆನೆಗಳು ದಿನಕ್ಕೆ 300 ಕೆಜಿಯಷ್ಟು ಆಹಾರ (ಎಲೆ, ಹಣ್ಣು ಇತ್ಯಾದಿ) ಸೇವಿಸುತ್ತವೆ.

4) ಎತ್ತರದ ಪ್ರಾಣಿ - ಜಿರಾಫೆ!!

ಜಗತ್ತಿನ ಅತಿ ಎತ್ತರದ ಸಸ್ತನಿ (ಮ್ಯಾಮಲ್) ಎಂದರೆ ಜಿರಾಫೆ (`ಜಿ-ರಾಫ್' ಶಬ್ದ ಕನ್ನಡದಲ್ಲಿ `ಜಿರಾಫೆ' ಆಗಿದೆ).
ಗಂಡು ಜಿರಾಫೆ ಸುಮಾರು 5.5 ಮೀಟರ್ ಎತ್ತರ ಬೆಳೆಯುತ್ತದೆ. ಅಂದರೆ ಮೂರು ನಾಲ್ಕು ಜನರು ಒಬ್ಬರ ಮೇಲೊಬ್ಬರು ನಿಂತುಕೊಂಡರೆ ಆಗುವ ಎತ್ತರದಷ್ಟು! ಆಫ್ರಿಕಾದ ಸಹಾರಾ ಮರುಭೂಮಿಯ ದಕ್ಷಿಣಕ್ಕೆ ಜಿರಾಫೆಗಳು ವಾಸಿಸುತ್ತವೆ.

5) ಕ್ಯಾಪಿಬಾರಾ -ಹಂದಿಗಾತ್ರದ ಹೆಗ್ಗಣ!

ಮೂಷಿಕಗಳ (ಇಲಿ-ಹೆಗ್ಗಣ) ಪೈಕಿ `ಕ್ಯಾಪಿಬಾರಾ' ಅತಿ ದೊಡ್ಡದು. ಇದು 1.3 ಮೀಟರ್ ಉದ್ದವಿರುವ ಭಾರಿ ಹೆಗ್ಗಣ! ದಕ್ಷಿಣ ಅಮೆರಿಕದ ಹಳ್ಳ-ಕೊಳ್ಳ, ಸರೋವರ ಹಾಗೂ ನದಿಗಳ ಸುತ್ತಮುತ್ತ ವಾಸಿಸುತ್ತದೆ.

No comments:

Post a Comment