Monday 1 November 2010

ಬಾರ್ಬಿಯಾಟವಯ್ಯಾ ಇದು ಬಾರ್ಬಿಯಾಟವಯ್ಯಾ ...


ಜಗತ್ತಿನ ಎಲ್ಲ ಮಕ್ಕಳೂ ಒಂದೇ ರೀತಿಯ ಬೊಂಬೆಗಳನ್ನು ಕೊಳ್ಳುತ್ತಿದ್ದಾರೆ. ನಿಮ್ಮ ಊರಿನ ಅಕ್ಕಪಕ್ಕ ತಯಾರಿಸುವ ಬೊಂಬೆಗಳು ನಿಮ್ಮೂರಿನ ಅಂಗಡಿಗಳಲ್ಲೇ ಸಿಗುತ್ತಿಲ್ಲ. ಎಲ್ಲೆಲ್ಲೂ ಬಾರ್ಬಿ .. ಬಾರ್ಬಿ ..ಬಾರ್ಬಿ!

ಏಕೆ ಹೀಗೆ? ಏಕೆಂದರೆ ಬಾರ್ಬಿ  `ಫ್ಯಾಷನ್' ಬೊಂಬೆ! ಮಕ್ಕಳಿಗೂ ಫ್ಯಾಷನ್ ಹುಚ್ಚು!

ಇಂದು ಬಾರ್ಬಿ ಪ್ರಪಂಚದ ಅತ್ಯಂತ ಪ್ರಸಿದ್ಧ ಫ್ಯಾಷನ್ ಬೊಂಬೆ. ಪ್ರಪಂಚದಲ್ಲೇ ಅತಿ ಹೆಚ್ಚು ಮಾರಾಟವಾಗುವ ಹೆಣ್ಣು ಬೊಂಬೆ. ವಿವಿಧ ದೇಶಗಳ ಹುಡುಗಿಯರ ಚರ್ಮದ ಬಣ್ಣ, ಎತ್ತರ ಹಾಗೂ ಆಯಾ ದೇಶಗಳ ವಿವಿಧ ವಸ್ತ್ರ, ಅಲಂಕಾರಗಳಲ್ಲಿ ಕಂಗೊಳಿಸುವ ಸುಂದರ ಬಾರ್ಬಿ ಬೊಂಬೆಗಳು ಸಿಗುತ್ತವೆ. ಅವುಗಳಿಗೆ ಹಾಕಲು ವಿವಿಧ ವಸ್ತ್ರಗಳೂ ಅಲಂಕಾರ ಸಾಮಗ್ರಿಗಳೂ ಸಿಗುತ್ತವೆ. ಹೆಣ್ಣು ಮಕ್ಕಳ ಅಚ್ಚುಮೆಚ್ಚಿನ ಆಟದ ಬೊಂಬೆ ಇದು.

ನಿಮಗೆ ಗೊತ್ತೆ? ಪಶ್ಚಿಮದ ದೇಶಗಳಲ್ಲಿ ಬಾರ್ಬಿ ಬೊಂಬೆಗಳನ್ನು ಕೊಂಡು ಸಂಗ್ರಹಿಸುವ ಹುಚ್ಚು ಮಕ್ಕಳಿಗಿಂತಲೂ ದೊಡ್ಡ ಮಹಿಳೆಯರಲ್ಲೇ ತೀವ್ರವಾಗಿದೆ. ಈ ಟ್ರೆಂಡ್ ಹುಟ್ಟುಹಾಕಿದ ಬಾರ್ಬಿ ತಯಾರಕ ಕಂಪೆನಿಯಾದ ಮ್ಯಾಟೆಲ್ ಇನ್ಕಾರ್ಪೋರೇಷನ್ ಚೆನ್ನಾಗಿ ಲಾಭ ಗಳಿಸಿ ಖುಷಿ ಪಡುತ್ತಿದೆ!

ಜಗತ್ತಿನಲ್ಲಿ ಸುಮಾರು ಒಂದು ಲಕ್ಷ ಜನರು ಬಾರ್ಬಿ ಬೊಂಬೆಗಳನ್ನು ಅತಿಯಾಗಿ ಸಂಗ್ರಹಿಸಿದ್ದಾರಂತೆ! ಅವರ ಮನೆಗಳು ಬಾರ್ಬಿ ಮ್ಯೂಸಿಯಂ ರೀತಿ ಇರಬಹುದು! ಈ 1 ಲಕ್ಷ ಜನರ ಪೈಕಿ ಶೇ. 90ರಷ್ಟು (90,000 ಮಂದಿ) ಮಂದಿ ಹೆಂಗಸರು. ಅವರು ಮಕ್ಕಳಲ್ಲ! ಈ ಹೆಂಗಸರ ಸರಾಸರಿ ವಯಸ್ಸು 40 ವರ್ಷ! ಇವರ ಪೈಕಿ ಶೇ. 45ರಷ್ಟು, ಅಂದರೆ ಸುಮಾರು 39,000 ಹೆಂಗಸರು ಬಾರ್ಬಿ ಕೊಳ್ಳಲು ಪ್ರತಿವರ್ಷ 1000 ಡಾಲರ್ (ಸುಮಾರು 50,000 ರೂಪಾಯಿ) ಖರ್ಚು ಮಾಡುತ್ತಿದ್ದಾರೆ ಎಂದು ಮ್ಯಾಟೆಲ್ ಕಂಪೆನಿ ಅಂದಾಜು ಮಾಡಿದೆ.

ನಿಮ್ಮ ಕೈಯಲ್ಲಿರುವ ಮುದ್ದಾದ ಬಾರ್ಬಿಗೆ ಈಗ 48 ವರ್ಷ! ಅಂದರೆ ಅದರ ತಯಾರಿಕೆ ಶುರುವಾದದ್ದು 1959ರಲ್ಲಿ. ರೂಥ್ ಹ್ಯಾಂಡ್ಲರ್ (1916-2002) ಎನ್ನುವ ಅಮೆರಿಕನ್ ವ್ಯಾಪಾರಸ್ಥ ಮಹಿಳೆ ಅದರ ಸೃಷ್ಟಿಕರ್ತೆ. ಆಕೆಯ ಮಗಳ ಹೆಸರು ಬಾರ್ಬರಾ. ರೂಥ್ ತನ್ನ ಮಗಳ ಹೆಸರನ್ನೇ ತಾನು ತಯಾರಿಸಿದ ಬೊಂಬೆಗೆ ಇಟ್ಟಿರುವುದು!

ಬಾರ್ಬಿ ಬೊಂಬೆಯ ಸೃಷ್ಟಿಕರ್ತೆ ರೂಥ್ ಎಂದರೂ ಬಾರ್ಬಿಯ ವಿನ್ಯಾಸವನ್ನು ಆಕೆ ರೂಪಿಸಲಿಲ್ಲ. ಇನ್ನೊಂದು ಪ್ರಸಿದ್ಧ ಜರ್ಮನ್ ಬೊಂಬೆ ಇತ್ತು. `ಬೈಲ್ಡ್ ಲಿಲ್ಲಿ' ಎಂದು ಅದರ ಹೆಸರು ಅದರ ವಿನ್ಯಾಸವನ್ನೇ ಬಾರ್ಬಿ ತಯಾರಕರು ಅನುಕರಿಸಿದರು.


ಬಾರ್ಬಿ ಮಕ್ಕಳ ಪ್ರತಿಕೃತಿ ಅಲ್ಲ. ತರುಣಿಯರ ಶರೀರ ರಚನೆ ಹೊಂದಿರುವ ಬೊಂಬೆ ಅದು. ಈ ರೀತಿಯ ಫ್ಯಾಷನ್ ಬೊಂಬೆ ತಯಾರಿಸುವ ಟ್ರೆಂಡ್ ಸರಿಯಲ್ಲ ಎಂಬ ಟೀಕೆಗಳೂ ಇವೆ.

1956ರಲ್ಲಿ ತನ್ನ ಮಕ್ಕಳಾದ ಬಾರ್ಬರಾ ಹಾಗೂ ಕೆನೆತ್ರನ್ನು ಕರೆದುಕೊಂಡು ರೂಥ್ ಹ್ಯಾಂಡ್ಲರ್ ಸ್ವಿಟ್ಜರ್ಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದಳು. ಅಲ್ಲಿ ಬೈಲ್ಡ್ ಲಿಲ್ಲಿ ಬೊಂಬೆಗಳನ್ನು ನೋಡಿದಳು. ಮೂರು ಬೊಂಬೆಗಳನ್ನು ಕೊಂಡಳು. ಅಮೆರಿಕಕ್ಕೆ ಮರಳಿದ ನಂತರ ಲಿಲ್ಲಿಯ ವಿನ್ಯಾಸವನ್ನು ಸ್ವಲ್ಪ ಬದಲಿಸಿ ಹೊಸ ಬೊಂಬೆಗಳನ್ನು ತಯಾರಿಸಿದಳು. ಅದಕ್ಕೆ `ಬಾರ್ಬಿ' ಎಂದು ತನ್ನ ಮಗಳ ಹೆಸರನ್ನೇ ಇಟ್ಟಳು. 1959ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಬೊಂಬೆಗಳ ಮೇಳದಲ್ಲಿ ಬಾರ್ಬಿಯನ್ನು ಪ್ರದರ್ಶಿಸಿದಳು. ಕೊನೆಗೆ 1964ರಲ್ಲಿ ಬೈಲ್ಡ್ ಲಿಲ್ಲಿ ಕಂಪೆನಿಯನ್ನೇ ಮ್ಯಾಟೆಲ್ ಕಂಪೆನಿ ಕೊಂಡುಕೊಂಡಿತು. ಲಿಲ್ಲಿ ಬೊಂಬೆಗಳ ಉತ್ಪಾದನೆ ನಿಲ್ಲಿಸಿತು. ಬಾರ್ಬಿ ಉತ್ಪಾದನೆಯನ್ನು ಬೆಳೆಸಿತು.

 ಮೂಲತಃ ಲಿಲ್ಲಿ ಬೊಂಬೆ ಸಹ ಮಕ್ಕಳಿಗಾಗಿ ತಯಾರಿಸಲಾಗುತ್ತಿದ್ದ ಬೊಂಬೆ ಅಲ್ಲ. ಪಶ್ಚಿಮದ ದೇಶಗಳಲ್ಲಿ ತರುಣಿಯರಿಗೇ ಬೊಂಬೆ ಇಟ್ಟುಕೊಳ್ಳುವ ಗೀಳು ಜಾಸ್ತಿ! ಆದರೂ ಲಿಲ್ಲಿಯನ್ನು ಮಕ್ಕಳು ಬಹಳ ಇಷ್ಟಪಟ್ಟರು. ಈಗ ಬಾರ್ಬಿಯನ್ನೂ ಇಷ್ಟಪಡುತ್ತಿದ್ದಾರೆ.

ಬಾರ್ಬಿ ವಿನ್ಯಾಸ ಒರಿಜಿನಲ್ ಅಲ್ಲ; ಅನುಕರಣೆ ಮಾಡಿದ್ದು. ಹಾಗೂ ಈ ಬೊಂಬೆ ಮೂಲಕ ಪ್ರಚಾರ ಮಾಡುತ್ತಿರುವ ಜೀವನಶೈಲಿ ಸರಿಯಲ್ಲ; ಮಕ್ಕಳು ತಪ್ಪು ಮಾರ್ಗದರ್ಶನ ಪಡೆಯುತ್ತವೆ ಎಂಬ ಆಪಾದನೆಗಳು ಮ್ಯಾಟೆಲ್ ಕಂಪೆನಿ ಮೇಲಿದೆ. ಅನೇಕ ಕೋರ್ಟ್ ಕೇಸುಗಳನ್ನೂ ಕಂಪೆನಿ ಎದುರಿಸಿದೆ.

ಆದರೆ ಬಾರ್ಬಿ ಟ್ರೆಂಡ್ ಮುಂದುವರಿದಿದೆ (ಈಚಿನ ವರ್ಷಗಳಲ್ಲಿ `ಬ್ರ್ಯಾಟ್ಜ್' ಎಂಬ ಹೊಸ ಬೊಂಬೆಗಳು ಬಾರ್ಬಿಗೆ ಸ್ಪಧರ್ೆ ನೀಡುತ್ತಿವೆ. ಎಂಜಿಎ ಎಂಟರ್ಟೈನ್ಮೆಂಟ್ ಎಂಬ ಕಂಪೆನಿ ತಯಾರಿಸುತ್ತಿರುವ ಬ್ರ್ಯಾಟ್ಜ್ ಬೊಂಬೆಗಳೂ ಸಹ ಚೆನ್ನಾಗಿ ಮಾರಾಟವಾಗುತ್ತಿವೆ).

No comments:

Post a Comment