Monday 1 November 2010

ಕೃಷ್ಣದೇವರಾಯನ ಕಾಲದಲ್ಲಿ ಕನ್ನಡಕ ಇತ್ತು!

ಕನ್ನಡಕ ಹಾಕಿಕೊಳ್ಳುವುದು, ಜೇಬಿನಲ್ಲಿ ಗರಿಗರಿ ನೋಟುಗಳನ್ನು ಇಟ್ಟುಕೊಂಡು ತಿಂಡಿ ತಿನ್ನಲು ರೆಸ್ಟುರಾಗೆ ಹೋಗುವುದು ಇವೆಲ್ಲ ನಮಗೆ ಈಚೆಗೆ ಸಿಕ್ಕಿರುವ ಅನುಕೂಲತೆಗಳು, ಇವೆಲ್ಲ ಆಧುನಿಕ ನಾಗರಿಕತೆಯ ಕೊಡುಗೆಗಳು, ಅಲ್ಲವೆ?

   ಅಲ್ಲ!

ಅವು ಈಚಿನ ಸೌಲಭ್ಯಗಳು ಎಂಬುದು ಹೆಚ್ಚಿನ ಜನರ ಭಾವನೆ. ಆದರೆ ಅವೆಲ್ಲ ಪ್ರಾಚೀನ ಕಾಲದಿಂದಲೂ ಇವೆ!

   ನಾವು ಸಾಮಾನ್ಯವಾಗಿ ಎಷ್ಟೋ ಅನುಕೂಲತೆಗಳನ್ನು ಆಧುನಿಕ ಕಾಲದ ಕೊಡುಗೆ ಎಂದುಕೊಳುತ್ತೇವೆ. ಆದರೆ ಅವುಗಳ ಹಿಂದೆ ದೀರ್ಘ ಇತಿಹಾಸವೇ ಇರುತ್ತದೆ. ಅಂತಹ ಕೆಲವು ಸ್ವಾರಸ್ಯಗಳನ್ನು ನಿಮಗೆ ಹೇಳುತ್ತೇನೆ.

   ಉದಾಹರಣೆಗೆ ಪ್ಲ್ಯಾಸ್ಟಿಕ್ ಸರ್ಜರಿ. ಅದು ಈ ಕಾಲದ ವಿಶೇಷವಲ್ಲ. 2500 ವರ್ಷಗಳ ಹಿಂದೆಯೇ ಪ್ರಾಚೀನ ಭಾರತದ ಮಹಾನ್ ವೈದ್ಯ ಸುಶ್ರುತ ಪ್ಲ್ಯಾಸ್ಟಿಕ್ ಸರ್ಜರಿ ನಡೆಸುತ್ತಿದ್ದ! ಕಿವಿ, ಮೂಗು ಕೋಯ್ದುಹೋದವರಿಗೆ ಪುನಃ ಅವುಗಳನ್ನು ಜೋಡಿಸುತ್ತಿದ್ದ! ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಪೊರೆ ತೆಗೆಯುತ್ತಿದ್ದ!

    ಈಗ ರೆಸ್ಟುರಾ ವಿಷಯ ನೋಡೋಣ. ನೂರಾರು ವರ್ಷಗಳ ಹಿಂದೆ ಹೊಟೇಲ್ಗಳು ಎಲ್ಲಿದ್ದವು ಎನ್ನಬಹುದು ನೀವು. ಈಗ ನಮಗೆ ತಿಳಿದಿರುವ ಹಾಗೆ ಪ್ರಪಂಚದ ಮೊದಲ ರೆಸ್ಟುರಾ ಆರಂಭವಾಗಿದ್ದು ಚೀನಾದ ಕಾಯ್ಫೆಂಗ್ನಲ್ಲಿ. ಅದೂ ಕ್ರಿ.ಶ. 1153ರಲ್ಲಿ! `ಮಾ ಯೂ ಚಿಂಗ್ಸ್ ಚಿಕನ್ ಬಕೆಟ್ ಹೌಸ್' ಎನ್ನುವ ಹೆಸರಿನಲ್ಲಿ ಅದು ಈಗಲೂ ಕಾರ್ಯ ನಿರ್ವಹಿಸುತ್ತಿದೆ!!

   ಸರಿ, ಗರಿಗರಿ ಕಾಗದದ ನೋಟು ಯಾವಾಗ ಬಂತು?

   ಹಣದ ಪರಿಕಲ್ಪನೆ ಮನುಷ್ಯನ ನಾಗರಿಕತೆಯಷ್ಟೇ ಹಳೆಯದು. ಚಿನ್ನವನ್ನು ಹಣದ (ಕರೆನ್ಸಿ) ರೀತಿ ವ್ಯವಹಾರಕ್ಕೆ ಬಳಸುವ ಬಗ್ಗೆ ವೇದಗಳಲ್ಲಿ ಉಲ್ಲೇಖವಿದೆ. ಹಸುಗಳನ್ನು ಕೊಟ್ಟು ಪದಾರ್ಥ ಕೊಳ್ಳುವ ಪದ್ಧತಿ ಬಗ್ಗೆಯೂ ಉಲ್ಲೇಖಗಳಿವೆ. ಲೋಹದ ಚೂರುಗಳನ್ನು ನಾಣ್ಯದ ರೀತಿ ಬಳಸುವ ರೂಢಿ ಕ್ರಿ.ಪೂ 5000ದಲ್ಲಿಯೇ ಇತ್ತು. ಕ್ರಿ.ಪೂ 700ರ ಕಾಲದ ಲಿಡಿಯನ್ ನಾಣ್ಯಗಳು ಸಿಕ್ಕಿವೆ. ಭಾರತದಲ್ಲಿ ಮಹಾಜನಪದರು ಹೊರಡಿಸಿದ ನಾಣ್ಯಗಳು (ಕ್ರಿ.ಪೂ 600ರ ಕಾಲದವು) ಸಿಕ್ಕಿವೆ. ಅವುಗಳನ್ನು `ಪಣ'ಗಳು, `ಕಾರ್ಷಪಣ'ಗಳು ಎನ್ನಲಾಗುತ್ತಿತ್ತು. ಆದರೆ ಗರಿಗರಿ ನೋಟಿನ ಕಥೆ ಏನು? ಕಾಗದದ ಕರೆನ್ಸಿಯ ಮೂಲವೂ ಸಹ ಚೀನಾ. ಸಾವಿರ ವರ್ಷಗಳಿಗೂ ಹಿಂದೆಯೇ ಅಲ್ಲಿ (ಈಗಿನ ಚೀನಾ ಗಡಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಡಿ) ಕಾಗದದ ಹಣದ ನೋಟುಗಳು ಬಳಕೆಯಲ್ಲಿದ್ದವು. ಕ್ರಿ.ಶ 960ರಲ್ಲಿ ಕಾಗದದ ಹಣ ಚೆನ್ನಾಗಿ ಬಳಕೆಗೆ ಬಂದಿದ್ದ ಬಗ್ಗೆ ದಾಖಲೆ ಲಭ್ಯವಿದೆ.

   ಸರಿ, ಕನ್ನಡಕದ ಜಾತಕ ಏನು? ನಮ್ಮ ಕೃಷ್ಣದೇವರಾಯನ ಕಾಲದಲ್ಲಿ ಕನ್ನಡಕ ಇತ್ತೆ? ಹೋಯ್ಸಳರ ಕಾಲದಲ್ಲಿ ಇತ್ತೆ?

   ಇತ್ತು! ಆದರೆ ಇಲ್ಲಲ್ಲ. 9ನೇ ಶತಮಾನದಲ್ಲಿ ಸ್ಪೇನ್ನಲ್ಲಿ ಗಾಜಿನಿಂದ ತಯಾರಿಸಿದ ಓದುವ ಕಲ್ಲುಗಳಿದ್ದವು! ಅವುಗಳನ್ನು ತಯಾರಿಸಿ ಮಾರಲಾಗುತ್ತಿತ್ತು. ಜನರು ಈ `ರೀಡಿಂಗ್ ಗ್ಲಾಸ್'ಗಳನ್ನು ಕೊಳ್ಳುತ್ತಿದ್ದರು. ಚೀನಾದಲ್ಲಿ 13ನೇ ಶತಮಾನದಲ್ಲಿ ಕನ್ನಡಕಗಳು ಬಳಸಲ್ಪಡುತ್ತಿದ್ದವು.

   1289ರ ಒಂದು ಇಟಾಲಿಯನ್ ಗ್ರಂಥದಲ್ಲಿ ಕನ್ನಡಕದ ಬಗ್ಗೆ ವಿವರಣೆ ಇದೆ. ಪೀಸಾ ಅಥವಾ ವೆನಿಸ್ನಲ್ಲಿ 1285-89ರ ಸುಮಾರಿನಲ್ಲಿ ಕನ್ನಡಕ ತಯಾರಿಕೆ ಆರಂಭವಾಯಿತು ಎನ್ನುತ್ತಾರೆ ತಜ್ಞರು. ಇಲ್ಲಿ ಕೊಟ್ಟಿರುವ ಕನ್ನಡಕ ಧರಿಸಿರುವ ಮಹಿಳೆಯ ಚಿತ್ರ ಕ್ರಿ. ಶ. 1352ಕ್ಕೆ ಸೇರಿದ್ದು!

   ಹಾಗಾದರೆ ಗಾಜೂ ಸಹ ಹಳೆಯದೇ ಇರಬೇಕು.

   ಹೌದು. ನೈಸಗರ್ಿಕವಾಗಿ ತಯಾರಾದ ಗಾಜು (ಓಬ್ಸಿಡಿಯನ್) ಶಿಲಾಯುಗದ ಜನರಿಗೇ ಗೊತ್ತಿತ್ತು. ಕ್ರಿ. ಪೂ. 3000ದಲ್ಲಿ ಫೀನೀಶಿಯನ್ನರು ಗಾಜು ತಯಾರಿಸುತ್ತಿದ್ದರು ಎನ್ನಲಾಗಿದೆ. ಮೆಸಪೊಟೇಮಿಯಾ (ಈಗಿನ ಇರಾಕ್) ಪ್ರದೇಶದಲ್ಲಿ ಕ್ರಿ. ಪೂ. 2500ರಷ್ಟು ಹಿಂದಿ ಗಾಜಿನ ಸಾಮಗ್ರಿಗಳು ಸಿಕ್ಕಿವೆ. ಪ್ರಾಚೀನ ಭಾರತದ ಗಾಜಿನ ಮಣಿಗಳು ಸಹ ಸಿಕ್ಕಿವೆ.

No comments:

Post a Comment