Monday 1 November 2010

ನಾಯಿಗೆ ನಿಜವಾಗಿಯೂ ಎಷ್ಟು ಬುದ್ಧಿ ಇದೆ?

ತಮ್ಮ ನಾಯಿಗೆ ಮನುಷ್ಯರಷ್ಟೇ ಬುದ್ಧಿ ಇದೆ ಎಂದು ಅತಿಯಾದ ನಾಯಿ-ಪ್ರೀತಿ ಇಟ್ಟುಕೊಂಡಿರುವವರು ವಾದಿಸುವುದು ಸಾಮಾನ್ಯ. ಆದರೆ ನಾಯಿಗೆ ನಿಜವಾಗಿಯೂ ಎಷ್ಟು ಬುದ್ಧಿ ಇದೆ? ನಾಯಿಗಳ ಬುದ್ಧಿಶಕ್ತಿಯನ್ನು ವೈಜ್ಞಾನಿಕವಾಗಿ ಅಳೆಯುವ ಕೆಲಸ ಆಗಿದೆಯೆ?

ಈಚೆಗೆ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ವಿಯೆನ್ನಾ ವಿಶ್ವವಿದ್ಯಾಲಯದ ಸಂಶೋಧಕರು ನಾಯಿಗಳ ಬುದ್ಧಿಶಕ್ತಿ ಕುರಿತು ನಡೆಸಿದ ಅಧ್ಯಯನದ ಪ್ರಕಾರ, ನಾಯಿಗಳಿಗೆ ಸಾಮಾನ್ಯವಾಗಿ 14 ತಿಂಗಳ ಮಾನವ ಶಿಶುಗಳಷ್ಟು ಬುದ್ಧಿ ಇರುತ್ತದೆ ಎಂಬ ಅಂಶ ತಿಳಿದುಬಂದಿದೆ!

`ಗಿನ್ನೆಸ್' ಎಂಬ ಹೆಣ್ಣುನಾಯಿಗೆ ತರಬೇತಿ ನೀಡಿ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. ಅದರೊಟ್ಟಿಗೆ ಇತರ ಕೆಲವು ಬೇರೆ ಬೇರೆ ಜಾತಿ ನಾಯಿಗಳನ್ನೂ ಸೇರಿಸಿಕೊಳ್ಳಲಾಗಿತ್ತು.

ಯಾವುದೇ ವಸ್ತುವನ್ನಾದರೂ ನಾಯಿಗಳು  ಸಾಮಾನ್ಯವಾಗಿ ತಮ್ಮ ಮೂತಿಯಿಂದ ತಳ್ಳುವುದು ಸಹಜ ಕ್ರಿಯೆ. ಮೂತಿಯಿಂದ ತಳ್ಳುವ ಬದಲು ಗಿನ್ನೆಸ್ ತನ್ನ ಕಾಲುಗುರುಗಳಿಂದ ವಸ್ತುವೊಂದನ್ನು ತಳ್ಳುವಂತೆ ಸಂಶೋಧಕರು ಮಾಡಿದರು. ಅದನ್ನು ನಾಯಿಗಳ ಗುಂಪೊಂದು ವೀಕ್ಷಿಸುವಂತೆ ಅವಕಾಶ ಕಲ್ಪಿಸಲಾಗಿತ್ತು.

ಗಿನ್ನೆಸ್ ನಡವಳಿಕೆ ನೋಡದ ನಾಯಿಗಳ ಇನ್ನೊಂದು ಗುಂಪು ತಮ್ಮ ಸರದಿ ಬಂದಾಗ ವಸ್ತುವನ್ನು ಸಹಜವಾಗಿ ಮೂತಿಯಿಂದಲೇ ತಳ್ಳಿದವು. ಆದರೆ ಗಿನ್ನೆಸ್ ವಿಧಾನಕ್ಕೆ ಸಾಕ್ಷಿಗಳಾಗಿದ್ದ ನಾಯಿಗಳು ಮಾತ್ರ ತುಂಬಾ ಶ್ರಮಪಟ್ಟು ತಾವೂ ಕಾಲುಗುರುಗಳಿಂದಲೇ ವಸ್ತುವನ್ನು ತಳ್ಳಿದವು!

ಯಾವುದನ್ನು ಅನುಕರಣೆ ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ವಿವೇಚನಾ ಶಕ್ತಿ ನಾಯಿಗಳಿಗೆ ಇರುವುದಿಲ್ಲ ಎಂಬ ಅಂಶ ಈ ಪ್ರಯೋಗದಿಂದ ತಿಳಿಯಿತು.

ಈ ಸಂಶೋಧಕರು ನಾಯಿಗಳ ಬೌದ್ಧಿಕಮಟ್ಟ 14 ತಿಂಗಳ ಮಾನವ ಶಿಶುಗಳ ಬೌದ್ಧಿಕಮಟ್ಟಕ್ಕೆ ಸಮವಾಗಿರುತ್ತದೆ ಎಂದಿದ್ದಾರೆ.

ಆದರೆ ಇದನ್ನು ಎಲ್ಲ ಸಂಶೋಧಕರೂ ಒಪ್ಪುವುದಿಲ್ಲ. 14 ತಿಂಗಳ ಮಕ್ಕಳ ಬುದ್ಧಿ ಇನ್ನೂ ಚುರುಕಾಗಿರುತ್ತದೆ ಎಂದು ಪ್ರತ್ಯೇಕ ಪರೀಕ್ಷೆಯೊಂದು ತೋರಿಸಿಕೊಟ್ಟಿದೆ.

ಈ ಪರೀಕ್ಷೆಯನ್ನು ಹೀಗೆ ನಡೆಸಲಾಯಿತು: ಟ್ರೇ ಹಿಡಿದುಕೊಂಡಿದ್ದ ತಾಯಿಯೊಬ್ಬಳು ತನ್ನ ತಲೆಯಿಂದ ಸ್ವಿಚ್ ಹಾಕಿದಳು. ಅದನ್ನು ಆಕೆಯ 14 ತಿಂಗಳ ಮಕ್ಕಳಿಗೆ ತೋರಿಸಲಾಯಿತು. ತಮ್ಮ ಸರದಿ ಬಂದಾಗ ಈ ಶಿಶುಗಳು ತಮ್ಮ ಕೈಗಳಿಂದಲೇ ಸ್ವಿಚ್ ಹಾಕಿದವೇ ಹೊರತು ತಲೆಯಿಂದಲ್ಲ! ತಮ್ಮ ತಾಯಿಯ ಕೈಗಳಲ್ಲಿ ಏನೋ ವಸ್ತುವಿತ್ತು. ಹೀಗಾಗಿ ಆಕೆ ಕೈಗಳಿಂದ ಸ್ವಿಚ್ ಹಾಕುವುದು ಸಾಧ್ಯವಾಗಲಿಲ್ಲ ಎಂಬುದನ್ನು ಅವು ಗ್ರಹಿಸಿದ್ದವು! ನಾಯಿಗಳಂತೆ ಸುಮ್ಮನೆ ಅನುಕರಣೆ ಮಾಡಲಿಲ್ಲ.

ಅಂದರೆ ನಾಯಿಗಳಿಗೆ 14 ತಿಂಗಳ ಶಿಶುಗಳಷ್ಟೂ ವಿವೇಚನಾಶಕ್ತಿ ಇಲ್ಲ!

No comments:

Post a Comment